ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜನಿಗೆ ವಾಚ್ ಅಚ್ಚುಮೆಚ್ಚು!

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಅಜ್ಜ, ಅಜ್ಜ... ಇಲ್ಲಿ ಯಾರೋ ವಾಚ್ ರಿಪೇರಿ ಮಾಡ್ತಾರಂತಲ್ಲ. ಅವ್ರ ಎಲ್ಲಿದ್ದಾರೆ ಹೇಳ್ತಿಯಾ?' ಎಂದು ಯಾರಾದ್ರೂ ಕೇಳಿದ್ರೆ,
`ನಾನೇ ಕಣ್ಲಾ ವಾಚ್ ರಿಪೇರಿ ಮಾಡೋದು. ಏನಾಗಿದೆ ನಿನ್ ವಾಚ್‌ಗೆ ಅಂತ ಹೇಳು ಸಾಕು. ಜಟ್‌ಪಟ್ ಅಂತ ಮಾಡಿ ಕೊಡ್ತೀನಿ' ಎಂದು ಬೊಚ್ಚು ಬಾಯಲ್ಲಿ ಅಜ್ಜ ಹೇಳಿದ್ರೆ `ಅಜ್ಜಾ... ನೀನಾ....' ಎಂದು ಬಂದೋರು ರಾಗ ಎಳೆಯೋದು ಗ್ಯಾರಂಟಿ!

ಯಾಕೆಂದ್ರೆ ಈ ಅಜ್ಜನಿಗೆ 70 ವರ್ಷ.  ಒಂದು ಕಾಲು ಊನ ಬೇರೆ. ಇದೂ ಸಾಲದು ಎಂಬುದಕ್ಕೆ ಕನ್ನಡಕವನ್ನೂ ಈ ಅಜ್ಜ ಧರಿಸಿಲ್ಲ. ಇಂಥ ಅಜ್ಜನಿಗೆ ವಾಚ್ ಏನಾದ್ರೂ ಕೊಟ್ರೆ ಅದರ ಗತಿ? ಎಂದುಕೊಳ್ಳೋ ನಿಮ್ಮ ಮನದಾಳ ಅರಿವ ಈ ಅಜ್ಜ, `ಅಯ್ಯ್ ತಮ್ಮ ತಲಿ ಯ್ಯಾಕ ಕೆಡಿಸ್ಕೋತಿ. ವಾಚ್ ಕೊಟ್ಟು ಹೋಗು. ಸಂಜೀಕ ಬಾ. ಮಾಡಿ ಇಟ್ಟಿರ‌್ತೀನಿ. ಆಮೇಲೆ ನೋಡಿ ದುಡ್ ಕೊಡುವಂತಿ. ಹೆದರಬೇಡೋ ಮಗಾ...' ಎನ್ನೋ ಪ್ರೀತಿ ವಿಶ್ವಾಸದ ಮಾತು.

ಈ ಅಜ್ಜನ ಹೆಸರು ಗಂಗಪ್ಪ ಮಹಾರುದ್ರಪ್ಪ ಯರಲಗಟ್ಟಿ. ಹುಟ್ಟಿದ್ದು ಲಕ್ಷ್ಮೇಶ್ವರ. ಜೀವನ ರೂಪುಗೊಂಡಿದ್ದು ಧಾರವಾಡದ ಶ್ರೀನಗರ ವೃತ್ತದಲ್ಲಿನ ಗಣೇಶ ವಾಚ್ ಅಂಗಡಿಯಲ್ಲಿ. 12ನೇ ವಯಸ್ಸಿನಿಂದಲೂ ಇದೇ ಕಾಯಕ. ದುಡಿಯುವ ಮಕ್ಕಳಿದ್ದರೂ ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಇವರಿಗೆ ವಾಚುಗಳೇ ಸಂಗಾತಿಯಾಗಿವೆ.

ಅಜ್ಜ ಹೇಳೋದೇನು?
`ನನಗೆ ಚಿಕ್ಕ ವಯಸ್ಸಿನಿಂದಲೇ ವಾಚುಗಳೆಂದರೆ ವ್ಯಾಮೋಹ ಜಾಸ್ತಿ. ವಾಚುಗಳನ್ನ ಕಂಡರೆ ಸಾಕು ಅವುಗಳನ್ನ ಬಿಚ್ಚಿ ಜೋಡಿಸುತ್ತಿದ್ದೆ. ಈ ಹವ್ಯಾಸದಿಂದಲೇ 12 ವರ್ಷದವನಿದ್ದಾಗಲೇ ನಮ್ಮ ಊರಲ್ಲಿ ವಾಚ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಜೊತೆಗೆ ವಿದ್ಯಾಭ್ಯಾಸವನ್ನೂ ಮಾಡಿದೆ.

ಹೇಗೋ ಎಸ್ಸೆಸ್ಸೆಲ್ಸಿವರೆಗೂ ಚೆನ್ನಾಗಿ ಓದಿದೆ. ಆದರೆ ಮುಂದೆ ಓದಲು ಇಷ್ಟವಿರಲಿಲ್ಲ. ಮನೆಯಲ್ಲಿ ನಮ್ಮ ತಂದೆ ಓದು ಎಂದು ಹೇಳುತ್ತಿದ್ದರು ಸಹ ನನ್ನ ಗಮನ ವಾಚಿನ ಕಡೆಗೇ ಹೋಯಿತು. ಅಪ್ಪಂಗೆ ಇದು ಇಷ್ಟ ಇರಲಿಲ್ಲ. ಅದಕ್ಕಾಗಿ ನಮ್ಮ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಾಯ್ತು.

`ಈ ನಡುವೆ ನನಗೆ ಮದುವೆ ಆಯಿತು. ಮೂರು ಗಂಡು, ಒಂದು ಹೆಣ್ಣು ಮಕ್ಕಳು. ಗಂಡು ಮಕ್ಕಳಿಗೂ ವಾಚಿನ ಬಗ್ಗೆ ಆಸಕ್ತಿ ಹುಟ್ಟಿ ರಿಪೇರಿ ಕಲಿತರು. ನಾವೇಕೆ ಒಂದು ದೊಡ್ಡ ಅಂಗಡಿ ಮಾಡಬಾರದು ಎಂದು ಮನಸ್ಸಿನಲ್ಲಿ ಯೋಚನೆ ಹೊಳೆದ ಕೂಡಲೇ ಧಾರವಾಡದ ಶ್ರಿನಗರದಲ್ಲಿ ನನ್ನ ಮಗ ಅಂಗಡಿ ತೆರೆದ. ಈಗ ನಮ್ಮ ಅಂಗಡಿ ಶಿವಾಲಯದ ಎದುರು ಸ್ಥಳಾಂತರವಾಗಿದೆ. ನಾನು ಅಲ್ಲಿಯೇ ವಾಚ್ ರಿಪೇರಿ ಮಾಡುತ್ತೇನೆ.

ನನ್ನ ಪತ್ನಿ ಕಳೆದ ವರ್ಷ ತೀರಿಕೊಂಡಳು. ನನ್ನ ಕಣ್ಣುಗಳು ಎಷ್ಟು ನಿಚ್ಚಳವಾಗಿವೆ ಎಂದರೆ ವಾಚಿನಲ್ಲಿರುವ ಸಣ್ಣ ಸಣ್ಣ ಬಿಂದುಗಳನ್ನೂ ಗುರುತಿಸಬಲ್ಲೆ. ಈ ಕೆಲಸದಲ್ಲೇ ನನ್ನ ಜೀವ ಅಡಗಿದೆ. ಸಾಯೋವರೆಗೂ ಈ ಕಾಯಕವನ್ನು ಕೈ ಬಿಡುವುದಿಲ್ಲ. ಇದೂ ಸಹ ನನ್ನ ಕೈ ಬಿಟ್ಟಿಲ್ಲ. ನನಗೆ ಒಂದು ಕಾಲು ಊನವಾಗಿದ್ದರು ಸಹ ನಾನು ನಡೆದುಕೊಂಡೇ ಓಡಾಡುತ್ತೇನೆ. ಮಕ್ಕಳ ಮದುವೆ ಮಾಡಿದ್ದೇನೆ. ಎಲ್ಲರೂ ಚೆನ್ನಾಗಿದ್ದಾರೆ. ನಾನು ಮನೆಯಲ್ಲಿ ಹಾಯಾಗಿ ಕಾಲಕಳೆಯಬಹುದಿತ್ತು. ಆದರೆ ನನಗೆ ಸ್ವಾವಲಂಬಿ ಬದುಕು ರೂಢಿಯಾಗಿಬಿಟ್ಟಿದೆ' ಎನ್ನೋದು ಅಜ್ಜನ ಮಾತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT