ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾತರ ಕಥನಗಳ ಕಾಲು ಹಾದಿಯಲ್ಲಿ...

Last Updated 4 ಮೇ 2013, 20:09 IST
ಅಕ್ಷರ ಗಾತ್ರ

ಇತಿಹಾಸದ ದೊಡ್ಡ ದುರಂತಗಳಿಗೆ ಕಾರಣವನ್ನು ಹುಡುಕುವುದಾದರೆ ಅದು ರಾಜ ಮಹಾರಾಜರುಗಳು ನಿರಂತರವಾಗಿ ನೆಲಸಾಧಿಸಿದ್ದರ ಪರಾಕ್ರಮದಲ್ಲಿಯೇ ಅಡಗಿದೆ ಎನ್ನಿಸುತ್ತದೆ. ನಾಡು ಗೆದ್ದವರೆಲ್ಲ ತಮ್ಮನ್ನು ಶಿಲಾಶಾಸನಗಳಲ್ಲಿ ಸಂಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದುಂಟು. ಆದರೆ ಈ ದೈಹಿಕ ಸಾಧನೆಯ ಮಹಾಪುರುಷರನ್ನು ಜನಪದ ಜಗತ್ತು ಅಥವಾ ಗ್ರಾಮೀಣ ಭಾಗದ ಜನ ಅಂತರಂಗಕ್ಕೆ ತೆಗೆದುಕೊಂಡಿಲ್ಲ. ಆಳಿದ ಮಹಾಸ್ವಾಮಿಗಳನ್ನು ನೆನೆದಂತಿಲ್ಲ. ತಮ್ಮ ಬದುಕಿನ ಸಮಸ್ಯೆಗಳನ್ನು ಹಾಡಿಕೊಂಡ ಜನಪದರಿಗೆ ತಮ್ಮನ್ನಾಳುವ ಚಕ್ರವರ್ತಿಗಳು ಆದರ್ಶಪುರುಷರಾಗಿ ಕಂಡಂತಿಲ್ಲ. ಇಷ್ಟಾಗಿ ಕರ್ನಾಟಕದ ಐತಿಹಾಸಿಕ ಪ್ರದೇಶಗಳಲ್ಲಿ ಓಡಾಡಿದರೆ, ಆಯಾ ಪ್ರದೇಶದ ಅಕ್ಷರಸ್ಧ ಜನ ತಂತಮ್ಮ ಪಾಳೆಯಗಾರನನ್ನೋ, ರಾಜನನ್ನೋ ಹೊಗಳಿ, ಹಾಡಿ ರೋಚಕವೆನಿಸುವ ಐತಿಹಾಸಿಕ ಪಠ್ಯ ಇಲ್ಲವೇ ಕಥೆ, ಕಾದಂಬರಿ ರಚಿಸಿ ಅವರ ವೈಭವವನ್ನು ಇನ್ನಿತರ ಭಾಗದವರಿಗೆ ಪ್ರಚುರಪಡಿಸಿರುವುದುಂಟು. ಯಾರ‌್ಯಾರು ಅವನ ಎದುರು ಹೋರಾಡಿದರೋ ಅವರೆಲ್ಲ ಆ ಭಾಗದ ಜನರ ದೃಷ್ಟಿಯಲ್ಲಿ ಖಳನಾಯಕರೇ.

ಮೈಸೂರು ಭಾಗದ ಹೈದರ್, ಟೀಪು ಇಲ್ಲಿ  ಸ್ವಾತಂತ್ರ್ಯ ಹೋರಾಟಗಾರರಾದರೆ, ಚಿತ್ರದುರ್ಗದ ಕಡೆಯ ಜನಕ್ಕೆ ಅವರು ತಮ್ಮ ಪಾಳೆಯಗಾರನನ್ನು ಸೆರೆಹಿಡಿದ ಪ್ರತಿ ನಾಯಕರು. ಈ ಕ್ರಮದಲ್ಲಿ ಯಾವ ರಾಜ ವೀರ, ಧೀರ, ಪರಾಕ್ರಮಿ, ಯಾವನು ಹೇಡಿ, ಯಾರು ದುಷ್ಟ, ಯಾರು ಪ್ರಜಾಪೀಡಕ, ಯಾರ ಕಾಲದಲ್ಲಿ ನಾಡು ಸುಭಿಕ್ಷ, ಮತ್ಯಾರ ಆಡಳಿತದಲ್ಲಿ ದುರ್ಭಿಕ್ಷ ಎಂದೆಲ್ಲ ಇತಿಹಾಸಕಾರರು ಚರ್ಚೆ ಮಾಡಿರುವುದುಂಟು. ಈ ಬಗೆಯ ಚರ್ಚೆಗಳಿಗೆ ಹಲಕೆಲವು ಪ್ರಮಾಣ, ಸಾಕ್ಷ್ಯಾಧಾರಗಳೂ ದೊರಕುವುದಿದೆ.

ಒಂದೇ ನಾಡೊಳಗೆ ಒಬ್ಬರನ್ನೊಬ್ಬರು ಶತ್ರುಗಳನ್ನಾಗಿ ಎಣಿಸಿ ಹೋರಾಡಿ ಅಮಾಯಕ ಯುವಸೈನಿಕರನ್ನು ರಕ್ತದಲ್ಲಿ ಮುಳುಗಿಸಿರುವುದಲ್ಲದೆ, ಧರ್ಮಗಳೂ ಕೂಡ ಈ ಬಗೆಯ ಹೋಮಕ್ಕೆ ಕಾರಣವಾಗದೇ ಇಲ್ಲದಿಲ್ಲ. ದೇವಾಲಯದಲ್ಲಿ ಒಂದು ಧರ್ಮದ ವಿಗ್ರಹಗಳು ಒಡೆಯಲ್ಪಟ್ಟು ಇನ್ನೊಂದು ಧರ್ಮದ ದೈವಗಳು ಅದೇ ಸ್ಥಳವನ್ನು ಆಕ್ರಮಿಸಿಕೊಂಡದ್ದುಂಟು. ಒಮಮ್ಮೆ ಎರಡು ಧರ್ಮದವರು ಆಗಾಗ್ಗೆ ಹೊಡೆದಾಡಿದ್ದರಿಂದ ಅಲ್ಲಲ್ಲಿ ಆಯಾ ಧರ್ಮದ ದೇವತೆಗಳು ದೇಹವೆರಡಾಗಿ ಮುಖವೊಂದಾಗಿ ನಿರ್ಮಾಣವಾದದ್ದುಂಟು. ರಾಜ್ಯವಿಸ್ತಾರ ಇಲ್ಲವೇ ಧರ್ಮೋದ್ಧಾರ, ಮತಪ್ರಚಾರಗಳ ಮೇಲಾಟದಲ್ಲಿ ಮನುಷ್ಯನಾಶದ ಬೀಜವನ್ನೇ ಕಾಲಾನುಕಾಲದಿಂದ ಬಿತ್ತಿ ಬೆಳೆದದ್ದಾಗಿದೆ. ಪವಿತ್ರವೆನಿಸಬಹುದಾದ ಧರ್ಮ, ದೈವದ ಹೆಸರಿನ ಸುತ್ತ `ತೋರಿ ಉಂಬ ಲಾಭ'ಕ್ಕಾಗಿ ಸುತ್ತಿಕೊಂಡದ್ದು ಅಸಂಖ್ಯಾತ ಅಂಧಶ್ರದ್ಧೆ, ಆಚರಣೆಗಳೇ!

ಮೇಲಿನ ಮಾತಿನ ಹಿನ್ನೆಲೆಯಲ್ಲಿಯೇ ಪಂಪನು ತಾನು ದಂಡನಾಯಕನಾಗಿದ್ದೆನೆಂಬ ಹೆಮ್ಮೆಯ ಮಾತನ್ನಾಡಿದ್ದರೂ ಇನ್ನೊಂದು ದಿಕ್ಕಿನಲ್ಲಿ `ಹೇಯಂ ಸಾಮ್ರೋಜ್ಯಂ, ಉಪಾದೇಯಂ ಪ್ರವ್ರಜ್ಯಂ' ಎಂದಿದ್ದಾನೆ. `ಆನೆ, ಕುದುರೆ, ಭಂಡಾರ ಎಲ್ಲಾ ಲೊಳಲೊಟ್ಟೆ;' `ಹೆಣ್ಣು, ಮಣ್ಣು, ಹೊನ್ನಿಂಗೆ ಸತ್ತುದು ಕೋಟಿ' ಎಂದು ಸಂತರು ಹೇಳಿಯೂ ಆಗಿದೆ. ವಿನಾಶದ ಯುದ್ಧದಲ್ಲಿ ಗಂಡಂದಿರನ್ನು ಕಳೆದುಕೊಂಡು ಹೆಂಗಸರು ಬೆಂಕಿ, ನೀರು ಪಾಲಾದರೆ, ಅವರನ್ನು ಇತಿಹಾಸಕಾರರು, ಮಹಾಸತಿಯರೆಂದು ಗೌರವಿಸಿದರೆ, ಬೆಂಕಿಗೆ ಬೀಳದೆ ಜೀವ ಉಳಿಸಿಕೊಂಡು ಬದುಕಲು ಹವಣಿಸಿದ ಹೆಣ್ಣುಮಕ್ಕಳ ಕಥೆಗಳನ್ನು ಜನಪದರು ಇನ್ನೊಂದು ಕ್ರಮದಲ್ಲಿ ಹೇಳುತ್ತಾರೆ. ಅಷ್ಟೇ ಅಲ್ಲ ತಮ್ಮ ನಡುವೆ ಯಾವ್ಯಾವುದೋ ಕಾಲದಲ್ಲಿ ಆಗಿ ಹೋದ ಸಂತರನ್ನು ನಿರಂತರ ನೆನೆಯುತ್ತ ಅವರ ಸಮಾಧಿಗಳನ್ನು ಇಂದಿಗೂ ಶ್ರದ್ಧಾ ಕೇಂದ್ರಗಳನ್ನಾಗಿ ಮಾಡಿಕೊಂಡಿರುತ್ತಾರೆ.

ಅಂತೂ ಈವರೆಗೆ ಗತ ಇತಿಹಾಸವನ್ನು ಪಠ್ಯ ವಿಷಯವನ್ನಾಗಿಯೋ, ಸೃಜನಶೀಲ ಬರಹವನ್ನಾಗಿಯೋ ಕಥೆ, ಕಾದಂಬರಿಗಳ ಮೂಲಕ ಅಭಿಮಾನಪೂರ್ವಕವಾಗಿಯೇ ನೋಡಲಾಗಿದೆ. ಜನಸಾಮಾನ್ಯರು ಮಾತ್ರ ಯುದ್ಧ ವಿಜಯಗಳನ್ನು ನಕಾರಾತ್ಮಕವಾಗಿಯೇ ನೋಡಿರುವುದು ಹೆಚ್ಚು. ಈ ಹೊತ್ತಿಗೂ ಕೂಡ ಪ್ರಜಾಪ್ರಭುತ್ವದ ಬುನಾದಿಯ ಮೇಲೆ ನಿಂತಿರುವ ಆಡಳಿತವು ಗತ ಇತಿಹಾಸದ ಇನ್ನೊಂದು ವಂಚನೆಯ ರೂಪವೇ ಹೊರತು ತತ್ಸಂಬಂಧದ ಅಧಿಕಾರಶಾಹಿ ಪ್ರವೃತ್ತಿ, ಅಡಾವುಡಿಗಳು ನಿಂತಿಲ್ಲವೆಂತಲೇ ಭಾವಿಸಬೇಕಾಗಿದೆ. ಹದಿನೈದನೆಯ ಶತಮಾನದಲ್ಲಿ ಕುಮಾರವ್ಯಾಸನು ತನ್ನ ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಹೇಳಿರುವ `ಅರಸು ರಾಕ್ಷಸ, ಮಂತ್ರಿಯೆಂಬವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು, ಉರಿವುರಿವುತಿದೆ ದೇಶ' ಎಂದಿರುವುದು ಈ ಹೊತ್ತಿಗೂ ಅನ್ವಯವಾಗುವಂತಿದೆ. ಮೇಲೆ ಹೇಳಿದ ಎಲ್ಲಾ ಕಾರಣಗಳಿಂದಾಗಿಯೋ ಏನೋ ನಮ್ಮ ಪ್ರಾಚೀನ ಮಹಾ ಕಾವ್ಯ ಪಠ್ಯಗಳಾದ ವ್ಯಾಸ ವಾಲ್ಮೀಕಿಕೃತ ರಾಮಾಯಣ, ಮಹಾಭಾರತಗಳು ಬೇಟೆಯಂಥ ಹಿಂಸಾಸಂಗತಿಯಿಂದ ಆರಂಭವಾಗಿ ಅರಮನೆಯಲ್ಲಿ ಹುಟ್ಟುವ ಹಲವು ಸಮಸ್ಯೆಗಳಿಂದ ಮುಂದುವರೆದು ಕೊನೆಗೆ ಯುದ್ಧರಂಗದ ರಕ್ತಪಾತದಲ್ಲಿ ಮುಕ್ತಾಯವಾಗುತ್ತವೆ.
  ***
ಕರ್ನಾಟಕದ ಮಧ್ಯಭಾಗವೆನಿಸುವ ಚಿತ್ರದುರ್ಗ ಪ್ರದೇಶದಲ್ಲಿ ನಾನು ಉದ್ಯೋಗನಿಮಿತ್ತ ಇರುತ್ತ ಓಡಾಡುವಲ್ಲಿ ಅನುಭವಕ್ಕೆ ಬಂದ ಜನಪದರ ಮೌಖಿಕ ವಿವರಗಳು; ಯಥಾವಿಧಿಯಾಗಿ ನಾವು ತರಗತಿಗಳಲ್ಲಿ ಓದುವ, ಬೋಧಿಸುವ ಪಠ್ಯ ವಿವರಗಳಿಗಿಂತ ಬೇರೆಯೇ ಆಗಿದ್ದವು. ಅವೆಲ್ಲವೂ ಯುದ್ಧವನ್ನು ಪರಾಕ್ರಮ ಇಲ್ಲವೇ ಘನಂದಾರಿ ವಿಜಯದ ಸಂಕೇತ ಎಂದು ಭಾವಿಸುವುದಕ್ಕಿಂತ ತಮ್ಮೆಲ್ಲರ ಬದುಕಿನ ಪಡಿಪಾಟಲು ಮತ್ತು ಸಾವು ನೋವು ತಂದ ಸಂಗತಿಯಾಗಿ ವಿವರಿಸಿದ್ದೇ  ಹೆಚ್ಚಾಗಿತ್ತು. ಆದರೆ ಸ್ವಲ್ಪ ಅನುಕೂಲವಿದ್ದ ಮಧ್ಯಮ ವರ್ಗದವರು, ಅಕ್ಷರ ಬಲ್ಲವರು ಆ ಭಾಗದ ಇತಿಹಾಸವನ್ನು ರೋಚಕವಾಗಿ ನೆನೆಯುತ್ತಿದ್ದರು. ಅವರ ಮೇಲಿನ ದಂತಕಥೆಗಳು ನಾಡಿನಾದ್ಯಂತ ಇರುವಂತೆ ಆನೆಯನ್ನೊ, ಹುಲಿಯನ್ನೊ, ಸಿಂಹವನ್ನೊ ಬರಿಗೈಯ್ಯಲ್ಲಿ ಕೊಂದದ್ದರ ಕಾಲ್ಪನಿಕ, ಆದರೆ ನಂಬಿಯೇ ತೀರಬೇಕೆಂಬ ಹಠದಿಂದ ಆರಂಭವಾಗುತ್ತಿದ್ದವು. ಅದಲ್ಲದೆ ಯಾವ್ಯಾವ ಯುದ್ಧದಲ್ಲಿ ಆ ರಾಜನು ಶತ್ರುಗಳನ್ನು ಕೊಂದು ಅವರ ತಲೆಬುರುಡೆಯನ್ನು ಗುಡ್ಡೆಹಾಕಿಸಿ ಅದರ ಮೇಲೆ ವಿರಾಜಮಾನನಾಗಿ `ರಕ್ತ ಪಟ್ಟಾಭಿಷೇಕ' ಮಾಡಿಸಿಕೊಂಡ ಎಂಬುದರ ಸಾಹಸಗಾಥೆಗಳೂ ಕೇಳಿಬರುತ್ತಿದ್ದವು. ಗ್ರಾಮಗಳ ನಡುವೆ ಓಡಾಡಿದಂತೆಲ್ಲ ರಣರಂಗದಲ್ಲಿ ಸತ್ತ ಸೈನಿಕರ, ಪಾಳೆಯಗಾರರ, ಮಾಂಡಲಿಕರ, ದಂಡನಾಯಕರ ಪತ್ನಿಯರು, ಉಪಪತ್ನಿಯರು, ಬಂಗಾರಸ್ತ್ರೀಯರು, ದಿಕ್ಕೆಟ್ಟು ಓಡಿದ ಸಂಗತಿಗಳು ಚಿಂತಾಜನಕ ರೀತಿಯಲ್ಲಿ ಕೇಳಿಬರುತ್ತಿದ್ದವು.

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸೈನ್ಯ ಸಾಗುವಾಗ ಹಾದಿ ಮಧ್ಯದ ಸಣ್ಣಪುಟ್ಟ ಹಳ್ಳಿಗಳು ಸೂರೆಹೋಗಿ ಬೇಚರಾಕ್ ಗ್ರಾಮಗಳಾಗಿ ಪಾಳು ಬಿದ್ದುದನ್ನು ಯಾರಾದರೂ ನೋಡಬಹುದಾಗಿದ್ದಿತು. ಈ ಬಗೆಯ ಬೇಚರಾಕ್ ಗ್ರಾಮಗಳು ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲೇ ಇದ್ದುದು ಹೆಚ್ಚು. ಯಾಕೆಂದರೆ ಬಲಾಢ್ಯ ರಾಜ್ಯ ಸಾಮ್ರೋಜ್ಯಗಳು ಬಂದದ್ದು ಉತ್ತರ ಕರ್ನಾಟಕದಲ್ಲೇ ತಾನೇ! ಸಾಮ್ರೋಜ್ಯಶಾಹಿಯು ಸಣ್ಣಪುಟ್ಟ ಹಟ್ಟಿಗಿಟ್ಟಿಗಳನ್ನು ಲೆಕ್ಕಕ್ಕೆ ಇಡುವುದಿಲ್ಲವಲ್ಲ!

ನಮ್ಮ ಸಾಂಪ್ರದಾಯಿಕ ಇತಿಹಾಸವು ಸೈನ್ಯವನ್ನು ಕಟ್ಟುತ್ತ, ಯುವ ಸಮೂಹಗಳ ರುಂಡಗಳ ಚಂಡನ್ನು ಹಾರಿಸುತ್ತ ಅವರ ಹೆಂಡತಿಯರು ಬೆಂಕಿಗೂ, ನೀರಿಗೂ ಬಿದ್ದುದನ್ನು ರೋಚಕವಾಗಿ ಹೇಳುತ್ತ, ಇನ್ನಷ್ಟು ಯುವ ಸಮೂಹ ಮತ್ತೆ ವೀರಸ್ವರ್ಗದತ್ತ ಹೊರಡಲನುವಾಗುವಂತೆ ಮಂತ್ರಪಠಿಸಿದರೆ, ಈ ದೇಶಕ್ಕೆ ಬಂದ ಪ್ರವಾಸಿಗಳು ಸಂಪೂರ್ಣ ಇನ್ನೊಂದು ದಿಕ್ಕಿನ ವಿವರಗಳನ್ನೇ ನೀಡುತ್ತಾರೆ. ಅವೆಲ್ಲ ಬಹುಪಾಲು ಜನಪದರ ಪಡಿಪಾಟಲಿನ ಮೌಖಿಕ ಕಥನಗಳಿಗೆ ಹತ್ತಿರವಾಗಿರುತ್ತವೆ. ಇದಕ್ಕೆ ಇಂಬಾಗಿ ಕರ್ನಾಟಕದ ಯಾವುದೇ ಕೆರೆಕಟ್ಟೆ ಹೊಂಡದ ಬಳಿ ನಿಂತರೂ ಆ ಸುತ್ತಿನ ಜನಪದರು ಹೇಳುವುದೆಂದರೆ, ಅರ್ಧರಾತ್ರಿಯ ಹೊತ್ತು ಅದೇ ಹೊಂಡದೊಳಗಿಂದ ಹೆಣ್ಣುಮಕ್ಕಳ ಅಳುವ ಗೋಳಿನ ದನಿ ಕೇಳಿಸುತ್ತದಂತೆ. ಅಕ್ಕತಂಗಿಯರು, ರಾಣಿಯರು, ಅವರ ಸಖಿಯರೆನ್ನದೆ ಅವರೆಲ್ಲ ಪರಸ್ಪರ ಕೊರಳಿಗೆ ಕೊರಳು ತಬ್ಬಿಕೊಂಡು ರೋದಿಸುವರಂತೆ!

ಯಾವುದೋ ಒಂದು ಗುಡಿಸಲಲ್ಲಿ ಹಿರಿಯರ ಹಬ್ಬದಂದು ದೇವರಿಗಿಟ್ಟ ಎಡೆಯ ನಡುವೆ ಇರಿಸುವ ಕಠಾರಿಯೊಂದರ ಹಿಂದೆ ಇರುವ ಕಥೆಯೂ ಬೆಚ್ಚಿಬೀಳಿಸುವಂಥದ್ದು! ರಾಜನ ಮೆರವಣಿಗೆ ಹೋಗುವಾಗ ಎಲ್ಲ ಹೆಣ್ಣುಮಕ್ಕಳಂತೆ ಅವಳೂ ಮುಗ್ಧಮುಖದಲ್ಲಿ `ಆನೆಯ ಮೇಲೆ ಹೋಹ' ಆ ರಾಜನನ್ನು ನೋಡಿದ್ದು ತಪ್ಪೇ? ಅಲ್ಲಿಂದ ಆರಂಭವಾಯಿತು ರಾಜನಿಗೆ ಅವಳ ಮೇಲೆ ಮೋಹ. ಅವನ ಸೇವಕರು ತಂದ ಮದುವೆಯ ಮಾತುಕತೆಗೆ ಮನೆಯವರೂ ಒಪ್ಪಲಿಲ್ಲ. ಆ ಹೆಣ್ಣುಮಗಳೂ ಬೆಚ್ಚಿಬೆದರಿ ತಲೆ ಅಲ್ಲಾಡಿಸಿಬಿಟ್ಟಳು. ಅವಳು ಇದ್ದರೆ ತಾನೇ ರಾಜನ ಕೊಲೆಯ ಬೆದರಿಕೆ ಎಂದು ಮನೆಯವರು ಆ ಹೆಣ್ಣಮಗಳನ್ನು ದೂರದ ಗುಡ್ಡದೆಡೆ ಕರೆದುಕೊಂಡು ಹೋಗಿ ಕೊಂದು ಊರುಬಿಟ್ಟು ಗುಳೆಹೊರಟರು. ಈಗಲೂ ಆ ಹೆಣ್ಣುಮಗಳು ತನ್ನನ್ನು ಕೊಂದ ಗುಡ್ಡದ ಜಾಗದಲ್ಲಿ ವರ್ಷಕ್ಕೊಮ್ಮೆ ಅರ್ಧರಾತ್ರಿಯ ವೇಳೆ ಬಂದು ಅತ್ತು, ರೋದಿಸುವಳಂತೆ!.

ಸಾಮ್ರೋಜ್ಯವನ್ನೂ, ಹೆಣ್ಣನ್ನೂ, ಪ್ರಾಣಿಗಳನ್ನೂ ಗೆಲ್ಲುವ ಸಾಹಸದಲ್ಲಿ ರಾಜ ಮಹಾರಾಜರ ಅರಮನೆಯ ಬಾಗಿಲುಗಳು ಶ್ರಿಸಾಮಾನ್ಯನಿಗೆ ತೆರೆಯಲೇ ಇಲ್ಲ. ಆಳಿಹೋದ ಮಹಾಸ್ವಾಮಿಗಳ ಬಗೆಗೆ ಅಷ್ಟು ಆಸಕ್ತಿ ಇಲ್ಲದಿದ್ದ ಕುವೆಂಪು ಅವರು ಗತಇತಿಹಾಸದ ವೈಭವವನ್ನು ಕುರಿತು ವ್ಯಂಗ್ಯವಾಗಿಯೇ `ಮುಗಿಯಿತು ಓರೋರ್ವರ ಗರ್ವದ ಕಾಲ' ಎಂದು ಶ್ರಿಸಾಮಾನ್ಯನನ್ನೇ ಈ ಹೊತ್ತಿನ ಪ್ರಭು ಎಂದಿದ್ದಾರೆ ನಿಜ. ಆದರೆ ಸ್ವಾತಂತ್ರ್ಯ ಬಂದ ನಂತರದ ಈ ಅರ್ಧ ಶತಮಾನದ ನಂತರದಲ್ಲಾದರೂ ಶ್ರಿಸಾಮಾನ್ಯನ ಬದುಕಿನ ಬಾಗಿಲು ಪೂರ್ಣ ತೆರೆದಿದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿ ಉಳಿದಿದೆ.
***
ನಿಲ್ದಾಣದಲ್ಲಿ ರೈಲು ಬಂದು ನಿಲ್ಲುತ್ತಿತ್ತು. ಹಿಂದಿನ ನಿಲ್ದಾಣದಲ್ಲಿ ಅವನು ಹತ್ತಿದ್ದನೆಂದು ಕಾಣುತ್ತದೆ. ಆದರೆ ಅವನಿಗೆ ಬೋಗಿಯ ಒಳನುಗ್ಗಲು ಸಾಧ್ಯವೇ ಆಗಿರಲಿಲ್ಲ. ಅದು ಜನರಲ್ ಕಂಪಾರ್ಟ್‌ಮೆಂಟ್ ಆಗಿದ್ದು ಒಳಗೆ ಅಸಾಧ್ಯ ಹೆಂಗಸರು, ಮಕ್ಕಳು, ಮುದುಕರು ತುಂಬಿದ್ದರು. ಮುಂದಿನ ಸ್ಟೇಷನ್‌ಗಳಲ್ಲಿ ಯಾರೂ ಹತ್ತಬಾರದೆಂದು ಗಂಟುಮೂಟೆಯನ್ನೆಲ್ಲ ಬಾಗಿಲಬಳಿಯೇ ಬೆಟ್ಟದಂತೆ ಒಟ್ಟಿಬಿಟ್ಟಿದ್ದರು. ಒಳಗೆ ಹತ್ತಲು ಪ್ರಯತ್ನಿಸಿದವರಿಗೆ ಬಾಗಿಲ ದಂಡೆಗೆ ಮೂಟೆ ಒಟ್ಟಿದೆ, ಅದು ಯಾರ‌್ಯಾರದೋ ಗೊತ್ತಿಲ್ಲ, ಹೇಳಿದರೆ ತೆಗೆಯುತ್ತಿಲ್ಲ ಎಂದು ಒಳಗಿಂದ ಸಬೂಬು ಹೇಳುತ್ತಿದ್ದರು. ಇವನು ಎಲ್ಲೋ ರೈಲು ಹೊರಡುವಲ್ಲಿ ಹತ್ತಿ ಬಾಗಿಲು ತೆರೆಸಲು ಪ್ರಯತ್ನಿಸುತ್ತಿರಲು ಗಾಡಿ ವೇಗ ಹೆಚ್ಚಿಸಿಕೊಂಡಿರಬೇಕು. ಒಳಗೆ ಬಾಗಿಲು ತೆರೆಯದೆ, ಇಳಿಯಲಾಗದೆ ಬಾಗಿಲಿಂದೀಚೆಯ ಸರಳು ಹಿಡಿದು ನಿಂತುಕೊಂಡೇ ಬಂದುಬಿಟ್ಟಿದ್ದ. ಅವನ ಎರಡೂ ಹೆಗಲ ಮೇಲೆ ಗಂಟು ಬೇರೆ ನೇತಾಡುತ್ತಿದ್ದವು.

ಮುಂದಿನ ನಿಲ್ದಾಣಕ್ಕೆ ರೈಲು ಬಂದದ್ದೇ ಸದ್ಯ ನೆಲ ಸಿಕ್ಕಿತಲ್ಲ ಎಂದು ಇಳಿದವನೇ ಕುಸಿದು ಕೂತುಬಿಟ್ಟ. ಅವನು ಬೆಂಗಳೂರು ಕಡೆಗೆ ಗುಳೆ ಹೊರಟಿದ್ದ. ರೈಲು ಹತ್ತಿ ಮೆಟ್ಟಿಲಲ್ಲೇ ನಿಂತು ತಾನು ಮಾಡಿದ ಅಪಾಯಕಾರಿ ಸಾಹಸದಿಂದ ಸುಧಾರಿಸಿಕೊಳ್ಳುವವನಂತೆ ಇನ್ನೂ ಏದುಸಿರು ಬಿಡುತ್ತಿದ್ದ. ಮತ್ತೆ ಹೊರಟರೈಲಿಗೆ ಅವನು ಹತ್ತವ ಮನಸ್ಸು ಮಾಡಲಿಲ್ಲ. ಬರುವ ರೈಲಿಗೆ ಕಾಯುತ್ತ ಕೂತ. ಈಗಾಗಲೇ ರಾತ್ರಿ ಹತ್ತು ಘಂಟೆ. ಇದರ ಹಿಂದೆ ಬರುವ ಗಾಡಿಯ ಜನರಲ್ ಬೋಗಿಯವರೂ ನಿದ್ದೆಯ ನೆಪಹೂಡಿ ಬಾಗಿಲೇ ತೆಗೆಯುವುದಿಲ್ಲವೆಂದ. ಎಲ್ಲಿ ಟಿಕೇಟು ವೇಸ್ಟಾಗುತ್ತದೋ ಎಂಬ ಆತಂಕದಿಂದಲ್ಲದೆ, ಬಾಗಿಲ ಬಳಿ ನಿಂತಿದ್ದರಿಂದ ಭರ‌್ರೋ ಎಂದು ಬೀಸುತ್ತಿದ್ದ ಗಾಳಿಗೆ ಟಿಕೇಟು, ಚಿಲ್ಲರೆ ನೋಟು ಹಾರಿಹೋಗಿಬಿಟ್ಟಿವೆಯೋ ಎಂದು ಜೇಬನ್ನೆಲ್ಲ ಮುಟ್ಟಿ ನೋಡಿಕೊಂಡ.
***
ಸರಿಸುಮಾರು ಮುವತ್ತು ವರ್ಷಗಳ ನನ್ನ ತಿರುಗಾಟವನ್ನೆಲ್ಲ ಪ್ರಬಂಧಗಳನ್ನಾಗಿಯೋ ಕಥೆಯಾಗಿಯೋ, ಕಾದಂಬರಿಯ ರೂಪದಲ್ಲೋ ಬರೆಯಬೇಕೆಂಬ ಆಸಕ್ತಿಯಂತೂ ಇದ್ದೇ ಇತ್ತು. ಎಲ್ಲರ ಅನುಭವದಂತೆ ಇರುವ ನನ್ನ ಲೋಕಸಂಗತಿಗಳೂ ಹೇಗೆ ಕಥನ ರೂಪ ಪಡೆದವೋ ಅವು ಎಷ್ಟು ಕಲಾತ್ಮಕವೋ ತಿಳಿಯದು. ಇಷ್ಟರ ಮೇಲೆ ಕಥಾ ಸೃಷ್ಟಿಯ ಪರಿಕ್ರಮವನ್ನು ಸ್ಪಷ್ಟವಾಗಿ ವಿವರಿಸಲಾಗದು. ಆದರೆ ಕಥನ ಮೂಲ ಸಂಗತಿ ಬೀಜರೂಪದಲ್ಲಿ ಮೊಳಕೆಯೊಡೆಯುವ ಸೂಚನೆಯಂತೂ ಇದ್ದೇ ಇರುತ್ತದೆ. ನದಿಯ ಹುಟ್ಟು ಮತ್ತು ಕಥನದ ಹುಟ್ಟು ಬಹುಮಟ್ಟಿಗೆ ದೃಗ್ಗೋಚರವೂ ಅಲ್ಲ, ಮನೋಗೋಚರವೂ ಅಲ್ಲ. ಆದರೆ ಅದರ ಸುಳಿವು ಮಾತ್ರ ಅರಿವಿಗೆ ಬಂದ ಮೇಲೆ ಅನುಭವಗಳ ಸಂಬಂಧ ಹೊಂದುತ್ತ ಅದೊಂದು ಕಥನರೂಪ ಪಡೆಯವುದೇನೋ ಎನಿಸುತ್ತದೆ. ಯಾವುದೋ ಸಂದರ್ಭದಲ್ಲಿ ಹುಟ್ಟಿದ ಬೀಜರೂಪಕ್ಕೂ ಆಮೇಲೆ ಬೆಳೆಯುವ ಕಥನಕ್ಕೂ ಸಂಬಂಧವಿಲ್ಲದಂತೆ ತೋರಿದರೂ ಆಮೇಲಾಮೇಲೆ ಒಂದು ವಿಚಿತ್ರ ಸಂಬಂಧ ಸನ್ನಿವೇಶ ಏರ್ಪಟ್ಟು ಅವು ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಕೇರಳದ ಸುಪ್ರಸಿದ್ಧ ಕಥೆಗಾರ್ತಿಯಾದ ಲಲಿತಾಂಬಿಕ ಅಂತರ್ಜನಂ ಅವರು ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿವಿಜೇತ `ಅಗ್ನಿಸಾಕ್ಷಿ' ಕಾದಂಬರಿಯಲ್ಲಿ ಕಥನದ ಹುಟ್ಟನ್ನು ಕುರಿತು ಒಂದೆರಡು ಸಂಗತಿಗಳನ್ನು ಹೇಳಿರುತ್ತಾರೆ. `ಜೀವನದ ಯಥಾವತ್ತಾದ ಆವಿಷ್ಕಾರ ಕಲೆಯಾಗದು. ಅದು ಹೃದಯದಲ್ಲಿ ಲಯನ ಹೊಂದಿ ಇನ್ನೊಂದು ಜನ್ಮ ತಳೆಯುವುದೇ ಕಲೆ. ಕಥಾ ಬೀಜದ ಜೊತೆಯಲ್ಲೇ ಅದನ್ನು ಸ್ವೀಕಾರ ಮಾಡಿ ಜೀವಕೊಟ್ಟು ಬೆಳೆಸಿ ಸಲಹುವ ಕಲ್ಪನೆಯ ರೂಪು ಕೂಡ ಸೃಷ್ಟಿಯಲ್ಲಿ ಪ್ರತಿಫಲಿಸುತ್ತದೆ...' ಎಂದಿದ್ದಾರೆ. ಕಥೆ ಹುಟ್ಟುವ ಮೂಲ ಸಂಗತಿಯನ್ನು ಲಲಿತಾಂಬಿಕ `ಬೀಜವಾಪ' ಎಂತಲೂ ಕರೆದಿರುತ್ತಾರೆ.

ಒಬ್ಬ ಲೇಖಕ ತನ್ನ ಬದುಕಿನಲ್ಲಿ ನೂರಾರು ಸಂಗತಿಗಳನ್ನು ಕೇಳಿ, ಕಂಡಿರುವುದಲ್ಲದೆ ಅನುಭವಿಸಿಯೂ ಇರುತ್ತಾನೆ. ಅವೆಲ್ಲವೂ ನಾನಾ ಬಗೆಯಲ್ಲಿ ಅವನ ಅಂತರಂಗದಲ್ಲಿ ತಳವೂರಿ ಕಾಡುತ್ತಲೇ ಇರುತ್ತವೆ. ಆ ಕಾಡುವಿಕೆಯ ನಡುವೆಯೇ ಒಂದು ಬಗೆಯ ಆಧ್ಯಾತ್ಮಿಕ ಭಾವವೂ ಸೇರಿಕೊಳ್ಳುತ್ತ ಒಟ್ಟು ಎಲ್ಲವನ್ನೂ ಹೊರಹಾಕುವುದರಲ್ಲಿ ಲೇಖಕ ಶ್ರಮಿಸುತ್ತ, ಸೋಲುತ್ತ, ಗೆಲ್ಲುತ್ತ ಇರುತ್ತಾನೆ. ಅಂತರಂಗದಲ್ಲಿ ಹುದುಗಿದ ಅನುಭವ ಪ್ರಪಂಚ ಹೇಳದೆ ಕೇಳದೆ ಮತ್ಯಾವುದೋ ರೂಪದಲ್ಲಿ ಪ್ರಕಟಗೊಂಡಾಗ ಬಿಡುಗಡೆಯ ನಿರಾಳವೂ ಉಂಟಾಗುತ್ತದೆ. ಈ ನಡುವೆ ಲೇಖಕ ಕಂಡದ್ದೆಲ್ಲ ಕಥನವಾಗಲು ಅರ್ಹವೆನಿಸುವುದಿಲ್ಲ. ಯಾರ ಗಮನಕ್ಕೂ ಬಾರದ ಸಾಮಾನ್ಯ ಸಂಗತಿ ಅತ್ಯುತ್ತಮ ಕಥನವಾಗಿ ರೂಪುಗೊಳ್ಳಬಹುದು. ಹಾಗೆ ರೂಪುಗೊಂಡ ಕಥೆಯೂ ಕೂಡ ಕಥೆಗಾರ ಹೇಳಬಹುದಾದ ನೂರಾರು ಅನುಭವಗಳಲ್ಲಿ ಒಂದಂಶ ಮಾತ್ರ ಎಂತಲೂ ಅನ್ನಿಸುತ್ತದೆ. ಪ್ರತಿಯೊಬ್ಬ ಲೇಖಕನ ಜೀವನದಲ್ಲಿ ಆತನ ಅನುಭವಕ್ಕೆ ಬರುವ ಸಂಗತಿಗಳು ಅಸಂಖ್ಯಾತ. ಅವೆಲ್ಲ ಕಥೆಯಾಗಲು ಅರ್ಹವೆನ್ನಿಸಿದರೂ, ಅರ್ಹವಲ್ಲದವೇ ಹೆಚ್ಚು.'ಕೈಲಾಸ ಕಾಣುವವನು ಕುಂಟನೇ ಹೊರತು, ದೇಹಬಲವುಳ್ಳವನಲ್ಲ' ಎಂಬ ಕಥೆಯನ್ನು ಜನಪದರು ಹೇಳುವಂತೆ, ನಾವು ಅಷ್ಟಾಗಿ ಗಮನಿಸದ ಸಂಗತಿಯೇ ಬಹುಮುಖ್ಯ ಕಥನವಾಗಿ ಹೊರ ಹೊಮ್ಮಬಹುದು.
***
ಈಗಾಗಲೇ ಹಿಂದೆ ವಿವರಿಸಿರುವ ಕ್ರಮದಲ್ಲಾದ ಅಸಂಖ್ಯಾತ ಭೂತ, ವರ್ತಮಾನದ ಘಟನೆಗಳನ್ನು ಜನಪದರು ಹೇಗೆ ಗ್ರಹಿಸಿರುವರೆಂಬುದನ್ನು ಮೂವತ್ತು ವರ್ಷಗಳಿಂದ ಗಮನಿಸುತ್ತ, ಕೇಳುತ್ತ ಬಂದು ಅವು ನನ್ನ ಮನಸ್ಸಿನಲ್ಲಿ ಕಾಡುತ್ತಲೇ ಇದ್ದು, ಸಾಮಾನ್ಯನೊಬ್ಬನ ನೋಟದಲ್ಲಿ, ಹಿನ್ನೆಲೆಯಲ್ಲಿ ಒಂದು ದೀರ್ಘ ಕಥನವನ್ನು ಬರೆಯಬೇಕೆನಿಸಿತು. ಪ್ರಾಚೀನ ಕಾಲದ ಮೋಜಿನ ಸಂಗತಿಗಳೆನಿಸುವ ಪ್ರಾಣಿ ಬೇಟೆ ಮತ್ತು ಹೆಣ್ಣಿನ ಬೇಟೆಯೂ ಸೇರಿದಂತೆ, ಬುಡಕಟ್ಟು ಜೀವನ ಕ್ರಮ,  ಯುದ್ಧದ ಹಿಂಸೆ ಅದರ ಕೆಸರು, ಜನಪದರ ಜಾತ್ರೆ, ಜಗಳ, ಅವರ ಜಾನುವಾರುಗಳ ಆರಾಧನೆ, ಸೈನಿಕರ, ರಾಜರ ಆನೆ, ಹುಲಿ, ಕುದುರೆಯ ಏರಾಟದ ಮೋಹ, ಈ ನಡುವೆ ಹೆಂಗಸರ ಬಲಿ ಇದೆಲ್ಲ ಸಂಗತಿಯನ್ನು ಒಳಗೊಂಡಂಥ ಕಥೆ ವರ್ತಮಾನದಿಂದ ಆರಂಭಗೊಂಡು, ವರ್ತಮಾನ ಸಂಗತಿಗೇ ಬಂದು ನಿಲ್ಲುವಂತಲ್ಲದೆ ಕಥನದ ಬಹುಭಾಗ ಕತ್ತಲೆಯಲ್ಲೇ ನಡೆಯಬೇಕೆಂದೆನಿಸುತ್ತಿತ್ತು. ಜೊತೆಗೆ ಜನಪದದ ಸಂಗತಿ ಸಾಹಿತ್ಯವೇ ಬೇರೆ, ಶಿಷ್ಟವೇ ಬೇರೆ, ಅರಮನೆಯ ಕಥೆ ಬೇರೆ, ಪುರಾಣ ಇನ್ನೊಂದು ಬಗೆಯದು, ವರ್ತಮಾನದ ರಾಜಕಾರಣ ಬೇರೆ, ಆಧುನಿಕ ಜಗತ್ತು ಪ್ರವರ್ಧಮಾನ ಸ್ಥಿತಿಯಲ್ಲಿದೆ ಎಂದೆಲ್ಲ ಬಗೆಯದೆ ಎಲ್ಲವನ್ನೂ ಒಂದು ಹಂದರದಲ್ಲಿ ತರುವ ಬಗೆ ಹೇಗೆ; ಅದು ನಿಜಕ್ಕೂ ಕಥನವಾಗಿ ರೂಪುಗೊಳ್ಳಬಹುದೇ ಎಂದು ಆಲೋಚಿಸಿದ ನಿಟ್ಟಿನಲ್ಲಿ ಹುಟ್ಟಿದ್ದು `ಅಜ್ಞಾತನೊಬ್ಬನ ಆತ್ಮಚರಿತೆ'್ರ  ಕಾದಂಬರಿ. ಈ ಕಥನ ಬರವಣಿಗೆಗೆ ತೆಗೆದುಕೊಂಡ ಕಾಲ ಮತ್ತು ಶ್ರಮ ಮಾತ್ರ ದೀರ್ಘವಾದುದೇ. ಆದರೆ ಇಂಥದೊಂದು ಕಾದಂಬರಿ ಮೂರು ತಿಂಗಳ ಹಿಂದೆ ಪ್ರಕಟಗೊಂಡ ನಂತರ ಬಂದ ಓದುಗರ ಪ್ರತಿಕ್ರಿಯೆಯನ್ನು ಗಮನಿಸಿದರೆ ಕನ್ನಡ ಜಗತ್ತು `ಹೊಸತ'ನ್ನು ಸ್ವೀಕರಿಸುವ ಪರಿ ಮಾತ್ರ ಆಶ್ಚರ್ಯಕರ ಮತ್ತು ಸಂತೋಷದಾಯಕವಾದುದೇ ಎನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT