ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಲನ್ ಷಾ ಕಪ್ ಹಾಕಿ: ಗೆಲುವಿನ ಹಾದಿಗೆ ಮರಳಿದ ಭಾರತ

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ಇಪೊ, ಮಲೇಷ್ಯ (ಪಿಟಿಐ): ಸೋಲಿನ ಸಂಕಷ್ಟದಲ್ಲಿದ್ದ ಭಾರತ ಹಾಕಿ ತಂಡ ಈಗ ಗೆಲುವಿನ ಹಾದಿಗೆ ಮರಳಿದೆ. ಇಲ್ಲಿ ನಡೆಯುತ್ತಿರುವ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಸೋಮವಾರ 3-2ಗೋಲುಗಳಿಂದ ಆತಿಥೇಯ ಮಲೇಷ್ಯ ತಂಡವನ್ನು ಸೋಲಿಸಿತು.

ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋಲು ಕಂಡಿದ್ದ ಭಾರತ ಈ ಪಂದ್ಯದಲ್ಲಿ ಚೇತರಿಕೆಯ ಪ್ರದರ್ಶನ ನೀಡಿತು. ದನೇಶ್ ಮುಜ್ತಬಾ 9ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ ಶಿವೇಂದರ್ ಸಿಂಗ್ (12ನೇ ನಿ.) ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಈ ವೇಳೆ ಮಲೇಷ್ಯದ ಮಹಮ್ಮದ್ ಅಮಿನ್ ರಹೀಮ್ (40ನೇ ನಿ.) ಗೋಲು ತಂದಿತ್ತು ತಿರುಗೇಟು ನೀಡುವ ಯತ್ನ ಮಾಡಿದರು. ಈ ವೇಳೆ ಭಾರತದ ತುಷಾರ್ ಖಾಂಡ್ಕರ್ (43ನೇ ನಿ.) ಗೋಲುಗಳ ಅಂತರವನ್ನು ಇನ್ನಷ್ಟು ಹಿಗ್ಗಿಸಿದರು. ಆತಿಥೇಯ ತಂಡದ ಎರಡನೇ ಗೋಲು ಮಹಮ್ಮದ್ ಫಿತ್ರಿ ಅವರಿಂದ 57ನೇ ನಿಮಿಷದಲ್ಲಿ ಬಂತು.
ಮೂರು ಪಂದ್ಯಗಳಲ್ಲಿ ಗೆಲುವು ಪಡೆದಿರುವ ನ್ಯೂಜಿಲೆಂಡ್ ಒಂಬತ್ತು ಪಾಯಿಂಟ್ಸ್‌ನಿಂದ ಅಗ್ರಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳನ್ನಾಡಿರುವ ಭಾರತ ಹಾಗೂ ಅರ್ಜೆಂಟೀನಾ ತಲಾ ಆರು ಪಾಯಿಂಟ್ಸ್ ಕಲೆ ಹಾಕಿ ಜಂಟಿ ಎರಡನೇ ಸ್ಥಾನದಲ್ಲಿವೆ.

ಈ ಟೂರ್ನಿಯಲ್ಲಿ ಐದು ಸಲ ಚಾಂಪಿಯನ್ ಆಗಿರುವ ಭಾರತ ಈ ಗೆಲುವಿನೊಂದಿಗೆ ಮತ್ತೆ ವಿಶ್ವಾಸ ಹೆಚ್ಚಿಸಿಕೊಂಡಿದೆ. ಅಷ್ಟೇ ಅಲ್ಲ ಪ್ರಶಸ್ತಿ ಜಯಿಸುವ ಭರವಸೆಯನ್ನೂ ಉಳಿಸಿಕೊಂಡಿದೆ. ಮುಂದಿನ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಭಾರತ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT