ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಟಕ್ಕಲರಿ ನೃತ್ಯ ಹಬ್ಬ

Last Updated 11 ಜನವರಿ 2013, 19:59 IST
ಅಕ್ಷರ ಗಾತ್ರ

`ನೃತ್ಯ ಕೇವಲ ದೈಹಿಕ ಚಲನೆಯಲ್ಲ. ಅಭಿನಯವೂ ಅಲ್ಲ, ಅದು ಶರೀರವನ್ನು ಭಾವಗಳಿಗೆ ಒಗ್ಗಿಸುವ ಕಲೆ. ದೇಹ, ಮನಸ್ಸನ್ನು ತಾಲೀಮಿನಿಂದ ಈ ಕಲೆಗೆ ಪಕ್ವಗೊಳಿಸಿದರೆ ಮಾತ್ರ ಕಲಾವಿದನ ಕಲ್ಪನೆಗೆ ಸಾರ್ಥಕ್ಯ. ಕಟ್ಟು ಪಾಡುಗಳಿಲ್ಲದೆ ಸುಂದರ ಚಿತ್ರಣದ ಮೂಲಕ ಹೆಣೆದುಕೊಳ್ಳುವ ನೃತ್ಯಕ್ಕೆ ವಿಶ್ವ ತಲೆಬಾಗದಿರುವುದೇ?... ಹೀಗೆ ಒಂದಾದರೊಂದಂತೆ ನೃತ್ಯದ ಲಹರಿ  ಕೇಳಿಬಂದದ್ದು ಅಟ್ಟಕ್ಕಲರಿ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ.

ನಗರದಲ್ಲಿ ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಜನವರಿ 25ರಿಂದ ಆರಂಭವಾಗಿ ಫೆಬ್ರುವರಿ 3ರವರೆಗೆ `ಸಮಕಾಲೀನ ನೃತ್ಯ ಹಾಗೂ ಡಿಜಿಟಲ್ ಕಲಾ ಉತ್ಸವ'ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಪೂರ್ವಭಾವಿಯಾಗಿ ನೃತ್ಯದ ತುಣುಕುಗಳನ್ನು ಪರಿಚಯಿಸುವ ಕಾರ್ಯಕ್ರಮ ಅದಾಗಿತ್ತು.

`ಫ್ರೇಮ್ಸ ಆಫ್ ಡ್ಯಾನ್ಸ್' ಎಂಬ ಪರಿಕಲ್ಪನೆಯಲ್ಲಿ 10 ದಿನಗಳ ಅವಧಿ ಈ ಉತ್ಸವ ಮೂಡಿಬರಲಿದೆ. ಜಾಗತಿಕ ಮಟ್ಟದ 12 ದೇಶಗಳ 16 ನೃತ್ಯ ಸಂಯೋಜಕರು, ಚಿಂತಕರು ಹಾಗೂ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಯುವ ನೃತ್ಯ ಸಂಯೋಜಕರು, ಪ್ರತಿಭಾವಂತ ಕಲಾವಿದರು ಮತ್ತು ನೃತ್ಯ ಪ್ರೇಮಿಗಳನ್ನು ಉದ್ದೇಶಿಸಿಕೊಂಡು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ನೃತ್ಯ ಪ್ರಕಾರದಲ್ಲಿ ವ್ಯಾಪಕವಾಗಿ ಆಗಿರುವ ಪರಿವರ್ತನೆ, ಈ ಕಲೆಯಲ್ಲಿ ಅಡಕವಾಗಿರುವ ಸಾಮಾಜಿಕ, ಪ್ರಾದೇಶಿಕ, ಧಾರ್ಮಿಕ, ಭಾಷಿಕ ಅಷ್ಟೇ ಅಲ್ಲ, ವೈಯಕ್ತಿಕ ಅಂಶಗಳು ಈ `ಫ್ರೇಮ್ಸ ಆಫ್  ಡಾನ್ಸ್' ಪರಿಕಲ್ಪನೆಯಲ್ಲಿ ಮೂಡಿಬರಲಿದೆ.

ವಿಭಿನ್ನ ಆಯಾಮಗಳಲ್ಲಿ ನೃತ್ಯೋತ್ಸವ ತೆರೆಕಾಣಲಿದ್ದು, ಮೊದಲಿಗೆ `ಮಾಂಗನಿಯರ್ ಸೆಡಕ್ಷನ್' ಕೃತಿ ಪ್ರಸ್ತುತಪಡಿಸಲಾಗುವುದು. ರಾಜಸ್ತಾನದ ಈ ಮಾಂಗನಿಯಾರ್ ನೃತ್ಯ ಪ್ರಕಾರ ನೋಡಗನಲ್ಲಿ ಅಚ್ಚರಿ ಮೂಡಿಸುವುದಲ್ಲದೆ, ಅದೇ ರೀತಿ `ಗ್ಲೋ' ನೃತ್ಯ ಪ್ರಕಾರವೂ ಆಂಗಿಕ ಅಭಿನಯದ ಉತ್ತುಂಗವನ್ನು ತಿಳಿಸಿಕೊಡಲಿದೆ. `ಅರ್ಬನ್ ಬ್ಯಾಲೆಟ್' ಪ್ರವಾಸ ಕತೆಯನ್ನು ಹೇಳುತ್ತದೆ. `ಚೇಂಜ್ ಆಫ್ಟರ್ ಕೊಹೆಶನ್', ಎಸೆನ್ಸ್ ಎನ್ ಆನ್ (ತಿರುಗಿ ಓದಿದರೆ ನಾನ್‌ಸೆನ್ಸ್), ಬ್ಯೂಟಿಫುಲ್ ಥಿಂಗ್ಸ್, ಗ್ಲಿಂಪ್ಸ್, ವೈಟ್ ಕ್ಯಾಪ್ಸ್, ಅಮೂರ್ತಕ್ಕೆ ಸಾಹಿತ್ಯಕ ಹುಡುಕಾಟ ನಡೆಸುವ ಪರಿಯನ್ನು `ಒಡಿಸ್ಸಿ ಕಾಂಪ್ಲೆಕ್ಸ್', `ಲ್ಯಾಂಕ್ಸ್ ಮತ್ತು ಆಬ್ಟಸ್', `ಬಾರ್ಟೂನ್ ಬೀಯಿಂಗ್ಸ್', `ಐ ಸೀ ಡ್ರೀಮ್ ಇನ್ ಗ್ರೇ', `ಜೆನೆಸಿಸ್' ಹೀಗೆ ಒಂದೊಂದು ನೃತ್ಯದ ತುಣುಕುಗಳೂ ವಿಭಿನ್ನ ಅನುಭವ ನೀಡಲಿವೆ.

ಒಂದೊಂದು ಚಲನವಲನವೂ ಜೀವತಳೆದಂತೆ ಕಾಣುವ ಈ ನೃತ್ಯ ಪ್ರಕಾರಗಳಲ್ಲಿ ವಿವಿಧ ದೇಶ, ಭಾಷೆ, ಜನಾಂಗದ ನೃತ್ಯ ಪ್ರಕಾರಗಳನ್ನು ಮಿಶ್ರಣ ಮಾಡಿದ ಸೊಗಸಾದ `ಹೈಬ್ರಿಡ್‌ನೃತ್ಯ' ಕಾರ್ಯಕ್ರಮದ ಮುಖ್ಯ ಆಕರ್ಷಣೆ. ಹಿಪ್ ಹಾಪ್, ಬ್ರೇಕ್ ಡ್ಯಾನ್ಸ್‌ನೊಂದಿಗೆ ತಳುಕುಹಾಕಿಕೊಂಡಿದ್ದರೂ, ಧ್ಯಾನಸ್ಥ ಸ್ಥಿತಿಯನ್ನು ತಿಳಿಸುವ `ಬ್ಯಾಲೆನ್ಸ್ ಅಂಡ್ ಇಂಬ್ಯಾಲೆನ್ಸ್', ಇಬ್ಬರ ನಡುವಿನ ಸಂಬಂಧವನ್ನು ಸಂಕೇತಿಸುವ `ಆರ್ಗ್ಯುಮೆಂಟ್', `ಮಾಡರ್ನ್ ಫೀಲಿಂಗ್ ಅಂಡ್ ಹೆಲ್ಪ್' ಹೀಗೆ ಹಲವು ಕೃತಿಗಳು ಪ್ರೇಕ್ಷಕನಿಗೆ ರಸದೌತಣ ಉಣಿಸುತ್ತವೆ.

ದಕ್ಷಿಣ ಏಷ್ಯಾದ ಯುವಜನರನ್ನು ಉತ್ತೇಜಿಸುವ ಕಾರ್ಯಕ್ರಮ ಇದಾದ್ದರಿಂದ `ಎಮರ್ಜಿಂಗ್ ಸೌತ್ ಏಷ್ಯಾ ಪ್ಲಾಟ್‌ಫಾಂ 13' ಕಾರ್ಯಕ್ರಮ ವಿದ್ದು, `ಫೇಸೆಟ್' ವಿಭಾಗದಲ್ಲಿ  ಹಲವು ರಂಗಕರ್ಮಿಗಳ, ನೃತ್ಯ ಸಂಯೋಜಕರ, ಡಿಜಿಟಲ್ ಕಲಾವಿದರ ಕ್ರಿಯಾಶೀಲ ನೃತ್ಯ ತುಣುಕುಗಳೂ ಇವೆ. `ಟೈಮ್ ಫ್ರೇಮ್ಸ'ನ ವಿಭಾಗದಲ್ಲಿ ಕಲಾವಿದೆ ಮಾರ್ಗಿ ಮೆಡ್ಲಿನ್ ಅವರು `ಆರ್ಟ್ಸ್ ಇನ್ ಎಜುಕೇಶನ್' 100 ಶಾಲಾ ಮಕ್ಕಳೊಂದಿಗೆ ಪ್ರಸ್ತುತ ಪಡಿಸಲಿದ್ದಾರೆ.

ನೃತ್ಯದಲ್ಲಿ ಕಂಡುಬಂದಿರುವ ಬದಲಾವಣೆ ಕುರಿತ `ಟ್ರಾನ್ಸಿಷನ್' ವಿಚಾರ ಸಂಕಿರಣದಲ್ಲಿ ನೃತ್ಯದ ಅಸ್ತಿತ್ವ, ಪ್ರಕಾರ ಹಾಗೂ ಸಂಪ್ರದಾಯದ ಬಗ್ಗೆ ಪೂರ್ಣ ವಿವರ ನೀಡಲಾಗುವುದು. ಯುವ ನೃತ್ಯ ವಿಮರ್ಶಕರಿಗಾಗಿ `ರೈಟಿಂಗ್ ಆನ್ ಡಾನ್ಸ್' ಕಾರ್ಯಾಗಾರ, ಬೆಳಕು ಮತ್ತು ವಿನ್ಯಾಸದ ಕಾರ್ಯಾಗಾರವನ್ನೂ ಆಯೋಜಿಸಲಾಗಿದೆ ಎಂದರ ಸಂಸ್ಥೆಯ ಕಲಾ ನಿರ್ದೇಶಕ ಜಯಚಂದ್ರನ್ ಪಲಳಿ. 

ನಡೆಯುವುದು ಇಲ್ಲಿ
ಜಯಮಹಲ್ ಪ್ಯಾಲೇಸ್ ಹೋಟೆಲ್, ಅಲಯನ್ಸ್ ಫ್ರಾನ್ಸೈಸ್ ಡಿ, ರಂಗಶಂಕರ, ಚೌಡಯ್ಯ ಸ್ಮಾರಕ ಭವನ, ಗೋಥೆ ಇನ್‌ಸ್ಟಿಟ್ಯೂಟ್, ಮ್ಯಾಕ್ಸ್ ಮುಲ್ಲರ್ ಭವನ, ಎಡಿಎ ರಂಗಮಂದಿರ.

ಟಿಕೆಟ್ ದರ
ರಂಗಶಂಕರ ಹಾಗೂ ಎಡಿಎ ರಂಗಮಂದಿರ: 200ರೂ.
ಚೌಡಯ್ಯ ಸ್ಮಾರಕ ಭವನ: 300ರೂ./ 100ರೂ.
ಚೌಡಯ್ಯ ಜಯಮಹಲ್ ಪ್ಯಾಲೇಸ್ ಹೋಟೆಲ್ : 300ರೂ./ 500ರೂ., 1000ರೂ..
ಅಲಯನ್ಸ್ ಫ್ರಾಂಚೈಸ್, ಗೋಥೆ ಇನ್ಸ್‌ಟಿಟ್ಯೂಟ್, ಮ್ಯಾಕ್ಸ್ ಮುಲ್ಲರ್‌ಭವನದಲ್ಲಿ ಪ್ರವೇಶ ಉಚಿತ.
ಹೆಚ್ಚಿನ ಮಾಹಿತಿ: 080 22123684, 4148.
ಟಿಕೆಟ್‌ಗೆ ವೆಬ್‌ಸೈಟ್: www.bookmyshow.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT