ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಟ್ಟೂರ್, ಮುಳೆ ಲೆಕ್ಕಕಿಲ್ಲ, ಧರ್ಮಸಿಂಗ್‌ಗೆ ಹೆದರುತ್ತೇನೆ'

Last Updated 17 ಡಿಸೆಂಬರ್ 2012, 9:55 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಶರಣರ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಬಿಜೆಪಿ ಸರ್ಕಾರ ಕೇವಲ 16 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ ಎಂದು ಮಾಜಿ ಶಾಸಕರು ಮತ್ತು ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಖೂಬಾ ದೂರಿದ್ದಾರೆ.

ಅವರು ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೇ 23 ಕೋಟಿ ರೂಪಾಯಿ ಬಿಡುಗಡೆ ಮಾಡಿ ಮಂಡಳಿ ಕಾರ್ಯಕ್ಕೆ ಚಾಲನೆ ಕೊಡಲಾಗಿತ್ತು. ಆದರೂ, ತಾವೇ ಎಲ್ಲವನ್ನೂ ಮಾಡಿದ್ದೇವೆ ಎಂದು ಈ ಸರ್ಕಾರದವರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಇಲ್ಲಿನ ತ್ರಿಪುರಾಂತ ಕೆರೆ ಕಾಮಗಾರಿಗೆ 4 ಕೋಟಿ ರೂಪಾಯಿ ಮಂಜೂರಾಗಿದ್ದರೂ ಕೆಲಸ ಅರ್ಧಕ್ಕೆ ನಿಂತಿದೆ. ಇಲ್ಲಿ ಲಾರಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಅಟೋ ಪಾರ್ಕ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರೂ ಇದುವರೆಗೆ ಕೆಲಸ ಆರಂಭ ಆಗಿಲ್ಲ. ಇಲ್ಲಿನ ವಿವಿಧ ಇಲಾಖೆಗಳಲ್ಲಿ ಒಟ್ಟು 254 ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಲಾಗಿಲ್ಲ ಎಂದು ದೂರಿದರು.

ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮತ್ತು ಮಾಜಿ ಶಾಸಕ ಎಂ.ಜಿ.ಮುಳೆ ಆಡಳಿತಾರೂಢ ಪಕ್ಷದಲ್ಲಿದ್ದರೂ ಕ್ಷೇತ್ರದ ವಿಕಾಸ ಕಾರ್ಯ ಕೈಗೊಳ್ಳದೆ ತಮ್ಮ ಸ್ವಾರ್ಥ ಸಾಧಿಸಿದ್ದಾರೆ. ತಮ್ಮಕ್ಕಿಂತ ಹಿರಿಯರಾದ ಅವರಿಬ್ಬರಿಂದ ತಾವು ಏನನ್ನಾದರೂ ಒಳ್ಳೆಯದನ್ನು ಕಲಿಯಬೇಕೆಂದರೆ ಅವರು ಪಕ್ಷ ಬದಲಾಯಿಸಿರುವುದನ್ನು ಬಿಟ್ಟು ಬೇರೆ ಏನನ್ನೂ ಸಾಧಿಸಿಲ್ಲ ಎಂದು ಲೇವಡಿ ಮಾಡಿದರು.

ಈ ಇಬ್ಬರೂ ಪಕ್ಷ ಬದಲಾಯಿಸಿ ಎಷ್ಟು ಲಾಭ ಮಾಡಿಕೊಂಡಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಜನರೆದುರಿಗೆ ಇಡಲಾಗುವುದು ಎಂದರು. ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ವೃದ್ಧಾಪ್ಯವೇತನ ಸಿಗದೆ ಜನರು ಪರದಾಡುತ್ತಿದ್ದಾರೆ. ಗೊಂಡ ಮತ್ತು ಕೋಲಿ ಸಮಾಜದವರಿಗೆ ಜಾತಿ ಪ್ರಮಾಣಪತ್ರ ದೊರೆಯುತ್ತಿಲ್ಲ ಎಂದರು.

ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ. ತಮಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಎದುರಾಳಿ ಇಲ್ಲ. ಈ ಪಕ್ಷದವರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಈ ಜಿಲ್ಲೆಯ ಸಂಸದರಾಗಿದ್ದು ಅವರು ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಾಗುವುದಿಲ್ಲ. ಅವರಿಗೆ ಮಾತ್ರ ಹೆದರುತ್ತೇನೆ. ಅಟ್ಟೂರ್, ಮುಳೆ ತಮ್ಮ ಲೆಕ್ಕಕ್ಕಿಲ್ಲ ಎಂದರು.

ನಗರಸಭೆಯ ಎಲ್ಲ ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತಿದೆ. ಜನವರಿ 26 ಕ್ಕೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಆಸಕ್ತರು ತಮಗೆ ಭೇಟಿ ಆಗಬೇಕು ಎಂದೂ ಮಲ್ಲಿಕಾರ್ಜುನ ಖೂಬಾ ವಿನಂತಿಸಿದ್ದಾರೆ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಬ್ಬೀರಪಾಶಾ, ಪ್ರಮುಖರಾದ ಕಾಳಿದಾಸ ಜಾಧವ, ಸುಧಾಕರ ಮದನೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT