ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಮಾನ ಖಾತರಿ ಸಂಸ್ಥೆ ಶೀಘ್ರ ಅಸ್ತಿತ್ವಕ್ಕೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೃಹ ಸಾಲ ಪಡೆಯುವ ಸಾಲಗಾರರ ಪರವಾಗಿ ಗೃಹ ಹಣಕಾಸು  ಸಂಸ್ಥೆಗಳು ಮತ್ತು  ಬ್ಯಾಂಕ್‌ಗಳಿಗೆ, ಸಾಲ ಖಾತರಿ ನೀಡುವ `ಅಡಮಾನ ಖಾತರಿ~ ಸಂಸ್ಥೆಯು ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.

 ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡುವುದರಿಂದ ಹಲವಾರು ಪ್ರಯೋಜನಗಳು ಲಭಿಸಲಿವೆ. ಗೃಹ ಸಾಲವು ಸುಲಭವಾಗಿ ದೊರೆಯಲಿದೆ.   ಬಡ್ಡಿ ದರಗಳು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಜತೆಗೆ,  ಗೃಹ ಸಾಲದ ಪ್ರಮಾಣವೂ ಹೆಚ್ಚಳಗೊಳ್ಳಲಿದೆ.

ಇದುವರೆಗೆ ಹಣಕಾಸು ವ್ಯವಸ್ಥೆಯ ಭಾಗವಾಗಿರದವರಿಗೂ ಗೃಹ ಸಾಲ ಸಂಸ್ಥೆಗಳು ಸಾಲ ನೀಡಲು ಸಾಧ್ಯವಾಗಲಿದೆ. ಈಗಾಗಲೇ ಸಾಲ ಪಡೆದವರಿಗೂ ಇದರಿಂದ ಹೆಚ್ಚುವರಿ ಪ್ರಯೋಜನಗಳು ದೊರೆಯುವ ನಿರೀಕ್ಷೆ ಇದೆ.

ದೇಶದ ಮೊಟ್ಟ ಮೊದಲ `ಅಡಮಾನ ಖಾತರಿ ಸಂಸ್ಥೆ~ಯು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿರುವುದನ್ನು ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ನ (ಎನ್‌ಎಚ್‌ಬಿ) ಅಧ್ಯಕ್ಷ ಆರ್. ವಿ. ವರ್ಮಾ ಖಚಿತಪಡಿಸಿದ್ದಾರೆ.

ನಾಲ್ಕು ಸಂಸ್ಥೆಗಳ ಜಂಟಿ ಪಾಲುದಾರಿಕೆಯಲ್ಲಿ ಈ `ಅಡಮಾನ ಖಾತರಿ~ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಹೊಸ ಸಂಸ್ಥೆಗೆ `ಭಾರತದ ಅಡಮಾನ ಖಾತರಿ ಸಂಸ್ಥೆ (ಐಎಂಜಿಸಿ) ಎನ್ನುವ ಹೆಸರಿಡಲು  ನಿರ್ಧರಿಸಲಾಗಿದೆ.

ಹೊಸ ಸಂಸ್ಥೆಯಲ್ಲಿ `ಎನ್‌ಎಚ್‌ಬಿ~ ಶೇ 38ರಷ್ಟು ಪಾಲು ಬಂಡವಾಳ ಹೊಂದಿರಲಿದೆ. ಅಮೆರಿಕ ಮೂಲದ ಜೆನ್‌ವರ್ತ್ ಫೈನಾನ್ಶಿಯಲ್, ತಾಂತ್ರಿಕ ಸಹಯೋಗ ಒದಗಿಸಲಿದ್ದು, ಶೇ 36ರಷ್ಟು ಪಾಲುದಾರಿಕೆ ಹೊಂದಿರುತ್ತದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಗಮಗಳು (ಐಎಫ್‌ಸಿ)  ತಲಾ ಶೇ 13ರಷ್ಟು ಪಾಲು ಬಂಡವಾಳ ಹೊಂದಿರುತ್ತವೆ.

`ಅಡಮಾನ ಖಾತರಿ~ಯು ಮೂಲತಃ ಗೃಹ ಸಾಲದ ನಷ್ಟದ ಸಾಧ್ಯತೆ ತಗ್ಗಿಸುವ ಉದ್ದೇಶ ಹೊಂದಿರುತ್ತದೆ. ಇದರಿಂದ ಗೃಹ ಸಾಲ ಪಡೆಯುವವರು ಆರಂಭದಲ್ಲಿ ಹೊಂದಿಸಬೇಕಾದ ಮೊತ್ತವೂ ಕಡಿಮೆ ಇರಲಿದೆ. ಬ್ಯಾಂಕ್ ಮತ್ತು ಗೃಹ ಹಣಕಾಸು ಸಂಸ್ಥೆಗಳು ಉದಾರವಾಗಿ ಸಾಲ ನೀಡಲು ಈ ವ್ಯವಸ್ಥೆ ಉತ್ತೇಜನ ನೀಡಲಿದೆ.ಒಂದು ವೇಳೆ ಸಾಲಗಾರರು ಸುಸ್ಥಿದಾರರಾದರೆ, ಅದಕ್ಕೆ ನೀಡಲಾಗಿದ್ದ ಖಾತರಿ ರದ್ದಾಗಲಿದೆ.

ಖಾತರಿ ಶುಲ್ಕವೇ, ಈ ಸಂಸ್ಥೆಯ ವರಮಾನ ಮೂಲವಾಗಿರುತ್ತದೆ. ಸಾಲಗಾರರೇ ಈ ಶುಲ್ಕವನ್ನು ಪೂರ್ಣವಾಗಿ ಭರಿಸಬೇಕಾಗುತ್ತದೆ. ಇಲ್ಲವೇ ಸಾಲಗಾರರು ಮತ್ತು ಬ್ಯಾಂಕ್‌ಗಳು ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT