ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡವಿಕೊತ್ತೂರು: ಸಮಸ್ಯೆಗಳ ಸರಮಾಲೆ

Last Updated 13 ಸೆಪ್ಟೆಂಬರ್ 2011, 9:30 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಮನೆ, ನಿವೇಶನ, ಸಾರಿಗೆ ಸೌಕರ್ಯ ಇಲ್ಲದ ಅಡವಿಕೊತ್ತೂರು ದಟ್ಟ ಅರಣ್ಯದಲ್ಲಿ ಹುದುಗಿರುವ ಕುಗ್ರಾಮ. ಈ ಗ್ರಾಮದ ಜನ ಏನು ಬೇಕಾದರೂ ಕನಿಷ್ಠ 3 ಕಿ.ಮೀ ನಡೆಯಬೇಕು. ಮೂಲ ಸೌಕರ್ಯಗಳೇ ಇಲ್ಲದೆ ಗ್ರಾಮದ ಜನರ ತತ್ತರಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿರುವ ಈ ಗ್ರಾಮ ಬೆಟ್ಟಗುಡ್ಡ ಮತ್ತು ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಅಸ್ವಸ್ಥತೆ, ಅನಾರೋಗ್ಯ ಸಮಸ್ಯೆ ಕಾಡಿದರೆ, ಸುಮಾರು ಮೂರು ಕಿ.ಮೀ.ನಷ್ಟು ದೂರದಲ್ಲಿರುವ ಬಿಳ್ಳೂರು ಗ್ರಾಮಕ್ಕೆ ನಡೆದು ಹೋಗಬೇಕು. ವಾಹನಗಳ ಸೌಕರ್ಯವಿರದ ಕಾರಣ ಗ್ರಾಮಸ್ಥರು ಸಂಜೆ 6ರೊಳಗೆ ಗ್ರಾಮ ಸೇರಲೇ ಬೇಕೆಂಬ ಅಲಿಖಿತ ನಿಯಮವಿದೆ.

`ಸಮರ್ಪಕ ವಿದ್ಯುತ್ ಮತ್ತು ನೀರಿನ ಪೂರೈಕೆ ಇಲ್ಲ. ಚರಂಡಿಗಳಿಲ್ಲದೇ ಮನೆ ಮುಂದೆಯೇ ಕಲುಷಿತ ನೀರು ಹರಿಯುತ್ತದೆ. ಚರಂಡಿ ತುಂಬ ಗಿಡಗಂಟಿಗಳು ಬೆಳೆದಿದ್ದು, ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ. ರಾತ್ರಿ ಸಮಯದಲ್ಲಿ ಈ ಪ್ರದೇಶದಲ್ಲಿ ಸಂಚರಿಸುವುದೇ ದುಸ್ತರ. ಬೀದಿದೀಪದ ವ್ಯವಸ್ಥೆ ಇಲ್ಲ. ಈ ಸಂಬಂಧ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಹಣ ವ್ಯಯಿಸುತ್ತಿದೆ ಎಂಬ ಜಾಹಿರಾತು ನೋಡಿದ್ದೇವೆ. ಆದರೆ, ನಮ್ಮ ಗ್ರಾಮದಲ್ಲಿ ಮಾತ್ರ ಅಭಿವೃದ್ಧಿ ಎನ್ನುವುದು ದೂರದ ಮಾತು. ಕುಡಿಯುವ ನೀರಿನ ಬವಣೆ ಸಾಕಷ್ಟಿದೆ. ಸಮರ್ಪಕ ವಸತಿ ಸೌಕರ್ಯ ಇಲ್ಲದೇ ಗುಡಿಸಲುಗಳಲ್ಲಿ ವಾಸವಿದ್ದೇವೆ~ ಎನ್ನುತ್ತಾರೆ ಅವರು.

`ಉದ್ಯೋಗ ಖಾತರಿ ಯೋಜನೆಯಡಿ  ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗುತ್ತಿಗೆದಾರರು ನಮ್ಮಿಂದ ಕೆಲಸ ಮಾಡಿಸಿಕೊಂಡು ಕೂಲಿ ಪಾವತಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ~ ಎಂದು ಮತ್ತೊಂದು ಸಮಸ್ಯೆ ತೆರೆದಿಟ್ಟರು ಗ್ರಾಮಸ್ಥ ಮುತ್ತಣ್ಣ.

`ವೃದ್ಧಾಪ್ಯ ಹಾಗೂ ವಿಧವಾ ವೇತನಗಳು ಪ್ರತಿ ತಿಂಗಳು ಸಿಗುತ್ತಿಲ್ಲ. ಪೋಸ್ಟ್ ಮ್ಯಾನ್ 2 ಅಥವಾ 3 ತಿಂಗಳಿಗೊಮ್ಮೆ ಬಂದು ರೂ. 20ರಿಂದ ರೂ.40 ಹಿಡಿದುಕೊಂಡು ಹಣ ನೀಡುತ್ತಾರೆ. ಮನೆ-ನಿವೇಶನ ಇಲ್ಲದೆ ಗುಡಿಸಲು ಹಾಗೂ ವಠಾರದಲ್ಲಿಯೇ ಜೀವನ ಸಾಗಿಸಬೇಕಿದೆ~ ಎಂದು ಗ್ರಾಮದ ವಯೋವೃದ್ಧೆ ಫಾತೀಮಾಬೀ ತಮ್ಮ ಸಮಸ್ಯೆ ಬಿಡಿಸಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT