ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಧಾರಣೆಯಲ್ಲಿ ನಿರಂತರ ಏರಿಕೆ

ಮೂಡಿದೆ ರೈತರ ಮೊಗದಲ್ಲಿ ಮಂದಹಾಸ
Last Updated 25 ಸೆಪ್ಟೆಂಬರ್ 2013, 6:39 IST
ಅಕ್ಷರ ಗಾತ್ರ

ಶಿವಮೊಗ್ಗ: ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯಬಹುದು ಎಂದು ಆತಂಕಗೊಂಡಿದ್ದ ರೈತರ ಮೊಗದಲ್ಲಿ ಈಗ ಮಂದಹಾಸ ಅರಳಿದೆ.

ಮಲೆನಾಡಿನಲ್ಲಿ ಈ ಬಾರಿ ಸುರಿದ ಭಾರೀ ಮಳೆಗೆ ಬೆಳೆ ಹಾನಿಯಿಂದ ನಷ್ಟಕ್ಕೆ ತುತ್ತಾದ ಸಂತ್ರಸ್ತ ರೈತರ ಮನದಲ್ಲಿ ಈಗ ತುಸು ಭರವಸೆ ಆವರಿಸಿದೆ.

ಹೌದು, ರೈತರ ಈ ಖುಷಿಗೆ, ಭರವಸೆಗೆ ಕಾರಣವಾಗಿರುವುದು ಅಡಿಕೆ ಬೆಲೆಯಲ್ಲಿ ಕಾಣುತ್ತಿರುವ ಚೇತರಿಕೆ. ದಿನದಿಂದ ದಿನಕ್ಕೆ ಏರುತ್ತಲೇ ಸಾಗಿರುವ ಅಡಿಕೆ ಬೆಲೆ ಅಡಿಕೆ ಬೆಳೆಗಾರರಲ್ಲಿ, ಖೇಣಿದಾರರಲ್ಲಿ, ವರ್ತಕರಲ್ಲಿ, ಸಂತಸವುಂಟು ಮಾಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ (ಸರಕು) ಬೆಲೆ `36 ಸಾವಿರದ ಗಡಿ ದಾಟಿದೆ (ಮಂಗಳವಾರ). ಗರಿಷ್ಟ ಬೆಲೆಯ ದಾಖಲೆ ನಿರ್ಮಾಣ ಮಾಡಿದೆ. ಕಳೆದ ವಾರವೇ ಅಡಿಕೆ (ಸರಕು) `35 ಸಾವಿರದ ಗಡಿ ದಾಟಿತ್ತು. ಆಗ ರೈತರು, ವರ್ತಕರು ‘ಇದು ತಾತ್ಕಾಲಿಕ ಏರಿಕೆ ಅಷ್ಟೆ; ಇದೇ ಬೆಲೆ ಇರುವುದಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ, ಎಲ್ಲಾ ಲೆಕ್ಕಾಚಾರಗಳನ್ನು ಲೆಕ್ಕಿಸದೆ, ಬೆಲೆ ಮಾತ್ರ ಈ ವಾರವೂ ಏರಿಕೆ ಕಾಣುತ್ತಿದೆ.

ಈಗಾಗಲೇ ಅಡಿಕೆ ಕೊಯ್ಲು ಶುರುವಾಗಿರುವ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕುಗಳ ರೈತರು ಬೇಗ–ಬೇಗನೆ ಅಡಿಕೆ ಸಂಸ್ಕರಿಸಿ ಉತ್ತಮ ಬೆಲೆಗೆ ಮಾರಾಟ ಮಾಡುವ ಧಾವಂತದಲ್ಲಿದ್ದರೆ. ಇನ್ನು ಜಿಲ್ಲೆಯ ಸಾಂಪ್ರದಾಯಿಕ ಅಡಿಕೆ ಬೆಳೆಯುವ ತಾಲ್ಲೂಕುಗಳಾದ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಕೊಳೆ ರೋಗದಿಂದ ಹೆಚ್ಚಿನ ಫಸಲು ನಾಶವಾಗಿರುವ ಬೇಸರದ ಜತೆಗೆ ತಮ್ಮ ಅಡಿಕೆ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರುವಷ್ಟರಲ್ಲಿ ಎಲ್ಲಿ ಬೆಲೆ ಕುಸಿಯುವುದೋ ಎಂಬ ಆತಂಕಕ್ಕೂ ಒಳಗಾಗಿದ್ದಾರೆ ಈ ಭಾಗದ ರೈತರು.

ಈ ವರ್ಷ ಅಡಿಕೆ ಕೊಳೆ ರೋಗಕ್ಕೆ ತುತ್ತಾಗಿರುವುದರಿಂದ ಫಸಲು ಕಡಿಮೆ ಆಗಿದೆ. ಮುಂದಿನ ವರ್ಷದ ಬೇಡಿಕೆಗೆ ತಕ್ಕಷ್ಟು ಮುಂದೆ ಅಡಿಕೆ ಸಿಗುವುದಿಲ್ಲ ಎಂಬ ಕಾರಣದಿಂದ ವ್ಯಾಪಾರಸ್ಥರು ಖರೀದಿ ಜೋರು ಮಾಡಿದ್ದಾರೆ. ಇದರಿಂದ ಅಡಿಕೆ ಬೆಲೆ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ (ಪ್ರೊ.ನಂಜುಂಡಸ್ವಾಮಿ ರಾಜಕೀಯೇತರ ಬಣ) ಕೆ.ಟಿ.ಗಂಗಾಧರ್‌. 

ಜತೆಗೆ ಗುಟ್ಕಾ ನಿಷೇಧ ಆದಾಗ ವ್ಯಾಪಾರಸ್ಥರು ಅಡಿಕೆ ಬೆಲೆ ಕುಸಿಯುತ್ತದೆ ಎಂಬ ಕೃತಕ ಆತಂಕ ಸೃಷ್ಟಿಸಿ, ರೈತರ ಬಳಿ ಇದ್ದ ಬಹುತೇಕ ಅಡಿಕೆ ಖಾಲಿ ಆಗುವಂತೆ ಮಾಡಿದ್ದಾರೆ. ಈಗ ತಮ್ಮಲ್ಲಿರುವ ದಾಸ್ತಾನಿಗೆ ಬೆಲೆ ಸಿಗುವಂತೆ ಕೃತಕವಾಗಿ ಬೆಲೆ ಏರಿಕೆ ಆಗುವಂತೆ ಮಾಡಲಾಗಿದೆ ಎನ್ನುತ್ತಾರೆ ಅವರು.

ಮಲೆನಾಡಿನ ಅಡಿಕೆ ಮಾರಕಟ್ಟೆಗೆ ಬರವುದು ಅಕ್ಟೋಬರ್‌ ನಂತರ. ಆಗ ಇದೇ ಬೆಲೆ ಇರುವ ವಿಶ್ವಾಸವಿಲ್ಲ. ವ್ಯಾಪಾರಸ್ಥರು ಆ ಸಂದರ್ಭದಲ್ಲಿ ಬೆಲೆ ಕುಸಿಯುವಂತೆ ಮಾಡಿ ರೈತರಿಂದ ಕಡಿಮೆ ಬೆಲೆಗೆ ಅಡಿಕೆ ಖರೀದಿಸುತ್ತಾರೆ. ಮತ್ತೆ ಬೆಲೆ ಏರುವಂತೆ ಮಾಡಿ, ತಾವೇ ಲಾಭ ಪಡೆಯುತ್ತಾರೆ ಎನ್ನುತ್ತಾರೆ ಕೆ.ಟಿ.ಗಂಗಾಧರ್‌.

ಅಡಿಕೆ ಬೆಲೆ ದಿನದಿಂದ ದಿನಕ್ಕೆ ನಿರಂತರವಾಗಿ ಏರುತ್ತಲೇ ಇದೆ. ಮಾರುಕಟ್ಟೆಯಲ್ಲಿ ಅಡಿಕೆ ದಾಸ್ತಾನು ಇಲ್ಲದೇ ಇರುವುದೇ ಬೆಲೆ ಏರಿಕೆಗೆ ಕಾರಣ. ಸದ್ಯದ ಸ್ಥಿತಿ ಅವಲೋಕಿಸದರೆ, ಬೆಲೆ ಕಡಿಮೆ ಆಗುವ ಲಕ್ಷಣಗಳಿಲ್ಲ. ಗುಟ್ಕಾ ನಿಷೇಧ ಆದಾಗ, ಗುಟ್ಕಾ ಮಾರಾಟ ಮಾಡಲು ಮೂರು ತಿಂಗಳು ಕಾಲಾವಕಾಶ ಇತ್ತು. ಇದನ್ನೇ ಬಳಸಿಕೊಂಡ ಕಂಪೆನಿಗಳು, ದಾಸ್ತಾನಿನಲ್ಲಿ ಇದ್ದ ಎಲ್ಲಾ ಅಡಿಕೆಯನ್ನು ಖರೀದಿಸಿ, ಖಾಲಿ ಮಾಡಿದವು. ಗುಟ್ಕಾ ತಯಾರಿಸಿ ಅಡಗಿಟಸಿಟ್ಟವು. ಈಗ ಕಂಪೆನಿಗಳ ಬಳಿಯಿದ್ದ ಎಲ್ಲಾ ಗುಟ್ಕಾ–ಪಾನ್‌ಮಸಾಲ ಖಾಲಿಯಾಗಿದೆ.

ಮಾರುಕಟ್ಟೆಯಲ್ಲಿ ಕಂಪೆನಿಗಳ ಬೇಡಿಕೆಗೆ ತಕ್ಕಷ್ಟು ಅಡಿಕೆ ಇಲ್ಲದೇ ಇರುವುದೇ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸುತ್ತಾರೆ ಶಿವಮೊಗ್ಗ ಅಡಿಕೆ ಮಂಡಿ ವರ್ತಕರ ಸಂಘದ ಅಧ್ಯಕ್ಷ  ಡಿ.ಎಂ.ಶಂಕರಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT