ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ನಿಷೇಧ ಪ್ರಸ್ತಾವಕ್ಕೆ ವಿರೋಧ

Last Updated 19 ಡಿಸೆಂಬರ್ 2013, 6:44 IST
ಅಕ್ಷರ ಗಾತ್ರ

ಸಿದ್ದಾಪುರ: ಕೇಂದ್ರ ಸರ್ಕಾರದ ಅಡಿಕೆ ನಿಷೇಧ ಪ್ರಸ್ತಾವ ವಿರೋಧಿಸಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ತಿಮ್ಮಪ್ಪ ನಾಯಕ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನೆಕಾರರು, ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಸುಮಾರು ಒಂದು ತಾಸು ಕಾಲ ರಸ್ತೆ ತಡೆ ಕೈಗೊಂಡರು.

ಅಡಿಕೆ ನಿಷೇಧದ ಕುರಿತು ಮುಖ್ಯಮಂತ್ರಿಗಳು ದಾಖಲೆಗಳೊಂದಿಗೆ ಲಿಖಿತ ಹೇಳಿಕೆ ನೀಡಬೇಕು. ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಕುತ್ತು ತರುವ ಯಾವುದೇ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಡೆಹಿಡಿಯಬೇಕು. ಅಡಿಕೆ ನಿಷೇಧದ ಕಾರಣದಿಂದ ಬರುವ ದಿನಗಳಲ್ಲಿ ಜೀವ ಅಥವಾ ಆಸ್ತಿ ಹಾನಿ ಉಂಟಾಗುವುದಕ್ಕೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಘಟಕ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ, ‘ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಬರೆದ ಪತ್ರದಲ್ಲಿ ಅಡಿಕೆ ಮತ್ತು ಅಡಿಕೆಯನ್ನು ಹೊಂದಿರುವ ವಸ್ತುಗಳನ್ನು ನಿಷೇಧ ಮಾಡುವ ಬಗ್ಗೆ ಕೇಳಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ದಾಖಲೆಗಳೊಂದಿಗೆ ಸಿಕ್ಕಿಬಿದ್ದಿದೆ. ಇದರಿಂದ ಅಡಿಕೆ ಹಾನಿಕಾರಕ ಮತ್ತು ಅದು ನಿಷೇಧ ಆಗಬೇಕು ಎಂಬ ಧೋರಣೆ ಬಹಿರಂಗ ಗೊಂಡಿದೆ. ಜನರಿಗೆ ಗೊತ್ತಾಗದಂತೆ ಅಡಿಕೆ ನಿಷೇಧ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯವಾಗಿದೆ. ಅಡಿಕೆ ನಿಷೇಧ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿಗಳು ದಾಖಲೆಯೊಂದಿಗೆ ಹೇಳಿಕೆ ನೀಡಿದರೆ ಮಾತ್ರ ನಂಬಬಹುದು’ ಎಂದರು.

‘ವಿದರ್ಭ  ಪ್ಯಾಕೇಜ್‌ನಲ್ಲಿ ಮತ್ತು ಇತರ ಅನುದಾನದಲ್ಲಿ ಕೆಲವು ಬೆಳೆಗಾರರ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಅಡಿಕೆ ಬೆಳೆಗಾರರ ಬಗ್ಗೆ ಕುರುಡಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಇಡಲಾಗಿರುವ ₨ 50ಸಾವಿರ ಕೋಟಿ ಹಣದಲ್ಲಿ ಖಾತೆ ಸಾಲ ಮತ್ತು ವೆನಿಲ್ಲಾ ಸಾಲ ಮನ್ನಾ ಮಾಡಬೇಕು. ಈಗ ಭತ್ತದ ಬೆಳೆ ಬೆಳೆಯಲು ಯಾರೂ ಮುಂದಾಗುತ್ತಿಲ್ಲ. ಆದ್ದರಿಂದ ಭತ್ತದ ಬೆಳೆಗೆ ಕ್ವಿಂಟಲ್‌ಗೆ ₨ 2 ಸಾವಿರ  ಬೆಂಬಲ ಬೆಲೆ ನೀಡಬೇಕು’ ಎಂದು ಆಗ್ರಹಿಸಿದರು.

ರೈತ  ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ, ‘ಅವೈಜ್ಞಾನಿಕ ವರದಿಯ ಆಧಾರದ ಮೇಲೆ  ಕೇಂದ್ರ ಸರ್ಕಾರ ಅಡಿಕೆ ನಿಷೇಧ ಮಾಡಲು ಹೊರಟಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಪೂರ್ಣ ನಾಶವಾಗುತ್ತಾರೆ’ ಎಂದರು.

ಹಾರ್ಸಿಕಟ್ಟಾ ವೆನಿಲ್ಲಾ ಸಾಲಮನ್ನಾ ಹೋರಾಟ ಸಮಿತಿ ಸಂಚಾಲಕ ಪಿ.ವಿ.ಹೆಗಡೆ ಹೊಸಗದ್ದೆ, ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್‌.ಎಂ.ಪಾಟೀಲ, ಆರ್‌.ಆರ್‌.ಹೆಗಡೆ ಐನಕೈ, ವಿಠ್ಠಲ ನಾಯ್ಕ ಅವರಗುಪ್ಪ, ವಿ.ಎಂ.ಭಟ್ಟ ಕೊಳಗಿ,ಆಕಾಶ ಕೊಂಡ್ಲಿ ಮಾತನಾಡಿದರು. ಸದಾಶಿವ ಹೆಗಡೆ ನರ್ಸಗಲ್, ಡಿ.ಕೆ.ನಾಯ್ಕ ತೆಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು. ತಹಶೀಲ್ದಾರ್‌ ಸುಭಾಷ್‌ ಫುಲಾರಿ ಅವರಿಗೆ ಮನವಿ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT