ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಫಸಲು ಜಪ್ತಿ ತಡೆ ಹಿಡಿಯಲು ಆಗ್ರಹ

Last Updated 10 ಡಿಸೆಂಬರ್ 2013, 5:19 IST
ಅಕ್ಷರ ಗಾತ್ರ

ಶಿರಸಿ: ಅತಿವೃಷ್ಟಿಯಿಂದ ಉಂಟಾದ ಕೊಳೆರೋಗದಿಂದ ಶೇ 50ರಷ್ಟು ಅಡಿಕೆ ಫಸಲು ನಷ್ಟವಾಗಿದೆ. ಈ ಪರಿಸ್ಥಿತಿಯಲ್ಲಿ ಸಹಕಾರಿ ಸಂಘದವರು ಸಾಲಗಾರ ರೈತರ ಸಾಲ ವಸೂಲಿ ಮಾಡಲು ಉಳಿದ ಫಸಲನ್ನು ಜಪ್ತಿ ಮಾಡುವ ಕ್ರಮಕ್ಕೆ ಮುಂದಾಗಿದ್ದು, ಇದನ್ನು ತಕ್ಷಣ ತಡೆಹಿಡಿಯಬೇಕು ಎಂದು ಬಕ್ಕಳ ಕೃಷಿ ಮತ್ತು ಕೃಷಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರು ತಹಶೀಲ್ದಾರರಿಗೆ ಸೋಮವಾರ ಇಲ್ಲಿ ಮನವಿ ನೀಡಿದರು.

ಈಗಾಗಲೇ ಕೊಳೆರೋಗದಿಂದ ಬೆಳೆ ನಷ್ಟವಾಗಿದೆ. ತೋಟದಲ್ಲಿ ಅರ್ಧದಷ್ಟು ಮಾತ್ರ ಪೀಕು ಉಳಿದಿದ್ದು, ಇದನ್ನು ಸಹಕಾರಿ ಸಂಘದವರು ಜಪ್ತು ಮಾಡಿದರೆ ರೈತರು ಜೀವನ ಸಾಗಿಸುವುದು ಕಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.  ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ರೈತರ ಜಮೀನು ಮತ್ತು ಬೆಳೆ ಜಪ್ತಿ ಆದೇಶ ನೀಡದಂತೆ ಸೂಚನೆ ನೀಡಬೇಕು. ಸಹಕಾರಿ ಸಂಘದವರು ಈಗಾಗಲೇ ಜಪ್ತಿ ಆದೇಶ ನೀಡಿರುವ ರೈತರ ಬೆಳೆಯನ್ನು ಸಹ ಜಪ್ತಿ ಮಾಡದಂತೆ ತಡೆ ಹಿಡಿಯಬೇಕು. ಸಂಘದ ಸಾಲ ವಸೂಲಿ ಕ್ರಮದಿಂದ ಎರಡು ವರ್ಷಗಳ ಹಿಂದೆ ಸಾಲ್ಕಣಿಯ ರೈತ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಹ ನಡೆದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎನ್‌.ಹೆಗಡೆ ಹಾಗೂ ಅನೇಕ ರೈತರು ಸಾಲ ವಸೂಲಾತಿಯನ್ನು 2015ರ ಫೆಬ್ರುವರಿ ತನಕ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಬೇಡಿಕೆಪತ್ರ ಸಲ್ಲಿಸಿದರು.

‘ಅಡಿಕೆ ಬೆಳೆಗಾರರ ಬೆಳೆ ಹಾನಿ ಕುರಿತಂತೆ ಸರ್ಕಾರ ಈಗಾಗಲೇ ಪರಿಹಾರಧನ ವಿತರಿಸಿದೆ. ಇದರಿಂದ ರೈತರ ಶೇ 50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವುದು ದೃಢಪಟ್ಟಿದೆ. ಆದರೆ ಈಗ ಸಹಕಾರಿ ಸಂಘಗಳು ಸಾಲಗಾರ ರೈತರಿಗೆ ಸಾಲ ಭರಣ ಮಾಡುವಂತೆ ಒತ್ತಡ ಹೇರುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡ ರೈತರು ಒಮ್ಮೆಲೇ ದೊಡ್ಡ ಮೊತ್ತದ ಸಾಲ ಪಡೆದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಪಡೆದ ಸಾಲ, ಬಡ್ಡಿ ಸೇರಿ ಈಗ ಅದು ದೊಡ್ಡ ಮೊತ್ತವಾಗಿ ಪರಿವರ್ತನೆಯಾಗಿದೆ. ಆದರೆ ಸಹಕಾರಿ ಸಂಘದವರು ಏಕಕಂತಿನಲ್ಲಿ ಸಾಲದ ಮೊತ್ತ ಭರಣ ಮಾಡಬೇಕು’ ಎಂದು ಒತ್ತಡ ಹೇರುತ್ತಿರುವುದು ನ್ಯಾಯಬದ್ಧವಲ್ಲ ಎಂದು ಜಿ.ಎನ್‌.ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು. 

ಬೆಳೆಗಾರರ ಎಲ್ಲ ಸಾಲಗಳಿಗೆ ಶೇ 3 ಬಡ್ಡಿ ಆಕರಿಸಿ ಕೇಂದ್ರ ಸರ್ಕಾರದ ಅಡಿಕೆ ಪ್ಯಾಕೇಜ್‌ನಂತೆ ಸಾಲವನ್ನು 11 ಕಂತುಗಳನ್ನಾಗಿ ಪರಿವರ್ತಿಸಿ ರೈತರಿಗೆ ಅನುಕೂಲ ಮಾಡಿ ಕೊಡಲು ನಿರ್ದೇಶಿಸಬೇಕು. ಸಾಲ ಮನ್ನಾ ಮಾಡಬೇಕು. ಸಾಧ್ಯವಾಗದಿದ್ದಲ್ಲಿ 2000ದಿಂದ 2013 ರವರೆಗಿನ ಆಸಾಮಿ ಸಾಲಕ್ಕೆ ಆಕರಿಸಿರುವ ಬಡ್ಡಿ ಮನ್ನಾ ಮಾಡಬೇಕು. ಸಹಕಾರಿ ಸಂಘಗಳಿಗೆ 2015 ರವರೆಗೆ ಅವಶ್ಯವಿರುವ ಹಣಕಾಸಿನ ಸೌಲಭ್ಯವನ್ನು ‘ಸೀಡ್ ಮನಿ’ ರೂಪದಲ್ಲಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಡಿಕೆ ಬೆಳೆಗಾರರಾದ ಚಂದ್ರಶೇಖರ ಹೆಗಡೆ, ಜನಾರ್ದನ ಭಟ್ಟ, ದೇವರು ಭಟ್ಟ, ತಿಮ್ಮಣಿ ಹೆಗಡೆ, ಲಲಿತಾ ವಿ. ಹೆಗಡೆ, ಸಂಜಯ ಭಟ್ಟ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT