ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬೆಳೆಗಾರರ ಬಂದ್ ಪೂರ್ಣ ಯಶಸ್ವಿ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ನರಸಿಂಹರಾಜಪುರ: ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ರಾಜಕೀಯ ಪಕ್ಷಗಳು ಅಡಿಕೆಗೆ ಹಳದಿ ಎಲೆ ರೋಗಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗೋರಕ್ ಸಿಂಗ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರೆ ನೀಡಿದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ನರಸಿಂಹರಾಜಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾವುದೇ ಒತ್ತಡವಿಲ್ಲದೆ ಜನರು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿದರು.

 ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟುಗಳು, ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದರೂ ಜನರಿಲ್ಲದೆ ಬೀಕೊ ಎನ್ನುತ್ತಿದ್ದವು. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಾರದೆ ಇದ್ದುದರಿಂದ ಅಘೋಷಿತ ರಜೆ ಇದ್ದಂತಿತ್ತು. ಆಟೊ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿತ್ತು.

ತಾಲ್ಲೂಕಿನ ಬಿ.ಎಚ್.ಕೈಮರ ಹಾಗೂ ಸಿಂಸೆ ಗ್ರಾಮದಲ್ಲೂ ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.

ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು, ಶಾಲೆಗಳನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ರೈತ ಎಂ.ಕೆ.ದಯಾನಂದ್, ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಗೋರಕ್ ಸಿಂಗ್ ವರದಿ ಸರ್ಕಾರ ತಕ್ಷಣವೇ ಅನುಷ್ಠಾನಕ್ಕೆ ತರಬೇಕು. ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಭತ್ತಕ್ಕೆ ಸೂಕ್ತ ಬೆಲೆ ನೀಡಬೇಕು ಹಾಗೂ ಅದನ್ನು ಸರ್ಕಾರವೇ ಖರೀದಿಸಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಜಿ.ಟಿ. ಸುರೇಂದ್ರ, ಬಿ.ಕೆ.ಉದಯಕರ್,ಕೆ.ಎನ್.ನಾಗರಾಜ್, ಎ.ಎಸ್.ಮಂಜುನಾಥ್, ಡಿ.ಎಸ್.ಮುರುಳೀಧರ್, ಎ.ಎಸ್.ಗೋಪಾಲಗೌಡ, ಎಂ. ಮಹೇಶ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT