ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಮರಕ್ಕೆ ಮುಂಡುಸಿರಿ ರೋಗ--–ಆತಂಕ

Last Updated 17 ಡಿಸೆಂಬರ್ 2013, 7:59 IST
ಅಕ್ಷರ ಗಾತ್ರ

ಸುಳ್ಯ: ಹಳದಿ ಎಲೆರೋಗ, ಕೊಳೆರೋಗದಿಂದ ತತ್ತರಿಸಿ­ರುವ ಅಡಿಕೆ ಬೆಳೆಗಾರರಿಗೆ ಬರಸಿಡಿಲಿನಂತೆ ಅಡಿಕೆ ಮರದ ಮುಂಡುಸಿರಿ ರೋಗ ಕಂಡು ಬರು­ತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ.

ದ.ಕ.,ಕೊಡಗು ಗಡಿ ಪ್ರದೇಶವಾದ ಪೆರಾಜೆ ಗ್ರಾಮದ ಅಡಿಕೆ ತೋಟಗಳಲ್ಲಿ ಮುಂಡು ಸಿರಿ ರೋಗ ವ್ಯಾಪಕವಾಗಿ ಕಂಡು ಬಂದಿದೆ. ಪೆರಾಜೆ ಗ್ರಾಮದ ಕುಂಡಾಡು, ನಿಡ್ಯಮಲೆ ಪರಿಸರದಲ್ಲಿ ಅರ್ಧಕ್ಕೂ ಹೆಚ್ಚು ಅಡಿಕೆ ತೋಟಗಳು ಈಗಾಗಲೇ ಮುಂಡುಸಿರಿ ರೋಗಕ್ಕೆ ತುತ್ತಾಗಿ ನಾಶವಾಗಿವೆ. ಸಂಪಾಜೆ, ಕೊಡಗು ಸಂಪಾಜೆ ಹಾಗೂ ಚೆಂಬು ಗ್ರಾಮಗಳಲ್ಲಿ ಹಳದಿ ಎಲೆ ರೋಗದಿಂದ ಸಾವಿರಾರು ಎಕರೆೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ರೋಗ ಈಗಲೂ ಹರಡುತ್ತಿದ್ದು ಪೆರಾಜೆ ಗ್ರಾಮದ  ಬಹು­ತೇಕ ತೋಟಗಳಲ್ಲಿ ಹಳದಿ ರೋಗ ಕಂಡು ಬಂದಿ­ದೆ. ಇದರ ಜತೆಗೆ  ಮುಂಡುಸಿರಿ ರೋಗ ವೇಗ­ವಾಗಿ ಪಸರಿ­ಸುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ನಿಡ್ಯಮಲೆ ಮೋನಪ್ಪ ಗೌಡ, ತೊಕ್ಕುಳಿ ಮಾದಪ್ಪ ಎಂಬರ ತೋಟದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಡಿಕೆ ಮರಗಳು ಮುಂಡುಸಿರಿ ರೋಗಕ್ಕೆ ಬಲಿಯಾಗಿದೆ. ಹೀಗೆ ನೂರಾರು ನೋಟಗಳನ್ನು ಮುಂಡುಸಿರಿ ರೋಗ ಬಲಿ ತೆಗೆದುಕೊಳ್ಳುತ್ತಿದೆ.

ಪ್ರಾರಂಭ ಹಂತದಲ್ಲಿ ಅಡಿಕೆ ಮರದ ಸಿರಿ ತಿರುಚಿಕೊಂಡು ಹಿಂಗಾರವಿರುವ ಜಾಗ ದಪ್ಪವಾಗಿ ಒಂದು ವರ್ಷದಲ್ಲಿ ಕ್ಷೀಣವಾಗಿ ಸಿರಿ ಸುಟ್ಟು ಹೋಗು­ತ್ತದೆ. ಬಳಿಕ ಎಲೆಗಳು ಒಣಗಿ ಅಡಿಕೆ ಮರವೇ ಸಾಯು­ತ್ತದೆ. ಅಡಿಕೆ ಕೃಷಿಯೊಂದಿಗೆ ಕರಿ ಮೆಣಸು ಕೃಷಿ ಅವಲಂಬಿಸಲಾಗಿತ್ತು. ಆದರೆ ಈಗ  ಅಡಿಕೆ ಮರ ಸತ್ತಂತೆ ಕರಿಮೆಣಸು ಬಳ್ಳಿಯೂ ನೆಲಕ್ಕೆ ಬಿದ್ದು ಸಾಯತ್ತದೆ. ಮುಂಡುಸಿರಿ ರೋಗ ಬಂದು ನೂರಾರು ತೆಂಗಿನ ಮರಗಳು ನಾಶವಾದರೆ, ಹಲವು ರೋಗ ತಗುಲಿ ರಬ್ಬರ್ ಕೃಷಿಯೂ ನಷ್ಟದ ಹಾದಿಯಲ್ಲಿದೆ. ಕೆಲವರು ಸತ್ತ ಅಡಿಕೆ ತೋಟಗಳನ್ನು ಕಡಿದು ರಬ್ಬರ್ ನೆಡಲಾರಂಭಿಸಿದ್ದಾರೆ. ಆದರೆ ಪರ್ಯಾಯ ಕೃಷಿ ಮಾಡ­ಲು ದುಡ್ಡಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ.

ಪ್ಯಾಕೇಜ್‌ಗೆ ಕೃಷಿಕರ ಒತ್ತಾಯ:
ಪೆರಾಜೆ ಗ್ರಾಮದಲ್ಲಿ ಮುಂಡುಸಿರಿ ರೋಗ ಬಾದಿಸಿ ಅಡಿಕೆ ತೋಟ ನಾಶವಾಗಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಪರ್ಯಾಯ ಕೃಷಿ ನಡೆಸಲು ಸರ್ಕಾರ ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಪೆರಾಜೆಯ ಅಡಿಕೆ ಬೆಳೆಗಾರರ ಸಂಘ ಆಗ್ರಹಿಸಿದೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿರ್ದೇಶಕ ಲೋಕನಾಥ ಅಮೆಚೂರ್, ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಪೆರಾಜೆ ಭಾಗದಲ್ಲಿ ಶೇ 90ರಷ್ಟು ಅಡಿಕೆ ಫಸಲು ನಾಶವಾಗಿತ್ತು. ಆದರಿಂದ ಅಡಿಕೆ ಬೆಳೆಗಾರರು ತೀವ್ರ ಆಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಇದೀಗ ಅಡಿಕೆ ಮರಗಳು ಸಾಯುವುದರಿಂದ ಅಡಿಕೆ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ. ಬ್ಯಾಂಕ್‌ಗಳಿಂದ ಸಾಲ ವಸೂಲಾತಿಯ ನೋಟೀಸ್ ಬರತೊಡಗಿದ್ದು  ಏನೂ ತೋಚದ ಸ್ಥಿತಿ ಉಂಟಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮೋನಪ್ಪ ನಿಡ್ಯಮಲೆ, ತೊಕ್ಕುಳಿ ಮಾದಪ್ಪ, ಕಾಚಿಲು ಚಂದ್ರಶೇಖರ, ಡಿ.ಬಿ.ಪುರುಷೋತ್ತಮ, ಬಿ.ಆರ್.ಪುರುಷೋತ್ತಮ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT