ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸುಲಿಯಲು ಕುಶಲಕರ್ಮಿಗಳ ಕೊರತೆ

ತೀರ್ಥಹಳ್ಳಿ; ಸಾಂಪ್ರದಾಯಿಕ ಸಂಸ್ಕರಣೆಗೆ ಹೆಚ್ಚಿದ ಬೇಡಿಕೆ
Last Updated 6 ಡಿಸೆಂಬರ್ 2013, 9:26 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅಡಿಕೆ ಸುಲಿಯಲು ಮಾರುಕಟ್ಟೆಯಲ್ಲಿ ಹೊಸ ಹೊಸ ಯಂತ್ರಗಳು ಬಂದಿದ್ದರೂ ಸಾಂಪ್ರದಾಯಿಕವಾಗಿ ಸಂಸ್ಕರಣೆ ಮಾಡುತ್ತಿದ್ದ ಹಸ(ಸರಕು), ಬೆಟ್ಟೆ, ಗೊರಬಲು, ಇಡಿ ಅಡಿಕೆಯ ಉತ್ಪಾದನೆಗೆ ಬೇಡಿಕೆ ಕುಂದಿಲ್ಲ.

ಮಲೆನಾಡಿನ ದೇಶಾವರಿ ತಳಿಯ ಅಡಿಕೆಯನ್ನು ಸಾಂಪ್ರಾದಾಯಿಕವಾಗಿ ಸಿದ್ಧಗೊಳಿಸಿದರೆ ಮಾರುಕಟ್ಟೆಯಲ್ಲಿ ಈ ಬಗೆಯ ಅಡಿಕೆಗೆ ಬೇಡಿಕೆ, ಬೆಲೆ ಹೆಚ್ಚು ಲಭ್ಯವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಡಿಕೆ ಸುಲಿಯಲು ಯಂತ್ರಗಳ ಬಳಕೆಗಿಂತ ಕತ್ತಿ ಮೂಲಕ ಬರಿಗೈಯಲ್ಲಿ ಸುಲಿಯುವ ಪರಿಪಾಟಕ್ಕೆ ಅಡಿಕೆ ಬೆಳೆಗಾರರು ಮುಂದಾಗಿದ್ದರಿಂದ ಅಡಿಕೆ ಸುಲಿಯುವ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅಡಿಕೆ ಸುಲಿಯುವವರು ಸಿಗದೇ ಇರುವುದರಿಂದ ಹೇಗಾದರೂ ಮಾಡಿ ಸಕಾಲದಲ್ಲಿ ಅಡಿಕೆ ಕೊಯ್ಲನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ದೊಡ್ಡ–ದೊಡ್ಡ ಹಿಡುವಳಿದಾರರು ಯಂತ್ರಗಳ ಮೊರೆ ಹೋಗಿದ್ದಾರೆ. ಯಂತ್ರಗಳಿಂದ ಇಡಿ ಅಡಿಕೆ ಸಿದ್ಧಮಾಡಲು ಮಾತ್ರ ಸಾಧ್ಯವಿರುವುದರಿಂದ ಹಸ, ಬೆಟ್ಟೆ ಅಡಿಕೆ ತಯಾರಿಸಲು ಆಗುತ್ತಿಲ್ಲ.

ಮಾರುಕಟ್ಟೆಯಲ್ಲಿ ಹಸ ಹಾಗೂ ಬೆಟ್ಟೆಗೆ ಬೇಡಿಕೆ ಹೆಚ್ಚಿದ್ದು ಬಹುತೇಕ ರೈತರು ಇಂದು ಸಾಧ್ಯವಾದಷ್ಟು ಯಂತ್ರಗಳನ್ನು ಹೊರತುಪಡಿಸಿ ಅಡಿಕೆ ತಯಾರು ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಒಂದು ಟಿನ್‌ ಅಡಿಕೆ ಸುಲಿಯುವ ಕುಶಲ ಕರ್ಮಿಗಳಿಗೆ ` 80 ರಿಂದ 120ರ ವರೆಗೆ ನೀಡಿ ಅಡಿಕೆ ಸಂಸ್ಕರಣೆ ಮಾಡಿಸಬೇಕಾದ ಸಂದರ್ಭ ಎದುರಾಗಿದೆ.

ಬಯಲು ಸೀಮೆಯಿಂದ ಅಡಿಕೆ ಸುಲಿಯುವವರನ್ನು ಕರೆತಂದು ಸಾಂಪ್ರಾದಾಯಿಕವಾಗಿ ಸಿದ್ಧಗೊಳ್ಳುವ ಅಡಿಕೆ ತಯಾರಿಯಲ್ಲಿ ನಿರತರಾಗಿದ್ದಾರೆ. ಬಯಲು ಸೀಮೆಯಲ್ಲಿ ಈಗಾಗಲೇ ಅಡಿಕೆ ಕೊಯ್ಲು ಮುಗಿಯುವ ಹಂತದಲ್ಲಿದೆ. ಕೆಲವು ಕಡೆಗಳಲ್ಲಿ ಸಂಪೂರ್ಣ ಕೊಯ್ಲು ಮುಗಿದಿರುವುದರಿಂದ ಇಲ್ಲಿಂದ ಮಲೆನಾಡಿಗೆ ಅಡಿಕೆ ಸುಲಿಯುವವರ ದಂಡು ಬರುವಂತಾಗಿದೆ. ಅಡಿಕೆ ಸುಲಿಯಲು ಯಂತ್ರಗಳು ಸಿದ್ಧಗೊಂಡರೆ ಬರಿಗೈಯಲ್ಲಿ ಮೆಟ್ಟುಗತ್ತಿ ಮೂಲಕ ಅಡಿಕೆ ಸುಲಿಯುವರಿಗೆ ಬೇಡಿಕೆ ಕುಂದುತ್ತದೆ ಎಂಬುದು ಈಗ ಸುಳ್ಳಾದಂತಾಗಿದೆ.

ಬಯಲುಸೀಮೆಯ ಅಡಿಕೆ ಸುಲಿಯುವವರು ಒಂದು ದಿನಕ್ಕೆ ನಾಲ್ಕರಿಂದ ಐದು ಟಿನ್‌ ಅಡಿಕೆ ಸುಲಿಯುತ್ತಾರೆ. ಮೂರು ತಿಂಗಳು ಕೆಲಸ ಮಾಡಿಕೊಂಡು ಹೊಗುವ ಪರಿಪಾಠ ಹಿಂದಿನಿಂದಲೂ ಇದ್ದರೂ ಈಗ ಮಲೆನಾಡಿನ ಕೆಲವರ ಮನೆಯಲ್ಲಿ ಬಯಲು ಸೀಮೆಯಿಂದ ಬಂದವರೇ ಅಡಿಕೆ ಸುಲಿಯುತ್ತಿದ್ದಾರೆ.

ಈ ಬಾರಿ ಸುಗ್ಗಿ ಕಾಲದಲ್ಲಿಯೂ ಮಾರುಕಟ್ಟೆಯಲ್ಲಿ ಬೆಲೆ ಗಣನೀಯ ಏರು ಪೇರು ಕಾಣದೇ ಇರುವುದರಿಂದ ಬಹುತೇಕ ರೈತರು ತಾವು ಬೆಳೆದ ಹಸಿ ಅಡಿಕೆಯನ್ನು ಕ್ವಿಂಟಲ್‌ಗೆ ` 2000 ದಿಂದ ` 2,500 ವರೆಗೆ ವ್ಯಾಪಾರ ಮಾಡುತ್ತಿದ್ದಾರೆ. ಅಡಿಕೆ ತೋಟದಲ್ಲಿಯೇ ಗೊನೆ ಕಿತ್ತ ನಂತರ ತೂಕ ಹಾಕಿ ಕೊಡುವ ಸಂಪ್ರದಾಯ ಕೂಡಾ ಈಗ ಹೆಚ್ಚಾಗಿದೆ.

ಮಲೆನಾಡಿನ ಸಾಂಪ್ರದಾಯಿಕ ಬೆಳೆ ಸಂಸ್ಕರಣೆಗೆ ಯಂತ್ರದ ಸಂಪರ್ಕ ಸಿಕ್ಕರೂ ಅಡಿಕೆಯನ್ನು ಸುಲಿಯುವ ಮೂಲಕವೇ ಅದನ್ನು ಸಂಸ್ಕರಣೆ ಮಾಡಬೇಕು ಎಂಬ ಪರಂಪರೆಗೆ ಯಾವ ತೊಂದರೆಯೂ ಆಗದೇ ಇರುವುದರಿಂದ ಅಡಿಕೆ ಸುಲಿತಕ್ಕೆ ಹೆಚ್ಚು ಹಣ ಖರ್ಚಾದರೂ ಕಾರ್ಮಿಕರ ಮೂಲಕವೇ ಅಡಿಕೆ ಸುಲಿಸಿ ಬೆಲೆ ಹೆಚ್ಚು ಪಡೆದು  ಲಾಭ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯಕ್ಕೆ ಕೆಲವು ರೈತರು ಬಂದಿದ್ದಾರೆ.

‘ಕೈಯಲ್ಲಿ ಅಡಿಕೆ ಸುಲಿಯುವುದರಿಂದ ಅಡಿಕೆ ಹಾಳಾಗುವುದಿಲ್ಲ. ಒಳ್ಳೆ ಗುಣ ಮಟ್ಟದ ಅಡಿಕೆ ಸಿದ್ಧಪಡಿಸಬಹುದು, ಹಸ, ಬೆಟ್ಟೆ, ಗೊರಬಲು, ಉಂಡೆ ಮಾಡಲು ಹಿಂದಿನ ಪದ್ಧತಿಯೇ ಒಳ್ಳೆಯ ವಿಧಾನ, ಇದರಿಂದ ನಮಗೆ ಹೆಚ್ಚು ಲಾಭ ಸಿಗುತ್ತದೆ’ ಎಂದು ಅಡಿಕೆ ಬೆಳೆಗಾರ ಕೊಪ್ಪಲು ಶ್ರೀನಾಥ್‌ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅಡಿಕೆ ಸುಲಿಯಲು ಯಂತ್ರ ಬಂದಿರುವುದರಿಂದ ನಿಗದಿತ ಅವಧಿಯೊಳಗೆ ಅಡಿಕೆ ಸುಲಿಯಬಹುದು ಎಂಬ ರೈತರ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ಇದರಿಂದ ಅಡಿಕೆ ಸುಲಿಯುವ ಒತ್ತಡ ತಗ್ಗಿದೆ. ಆದರೆ, ಗುಣಮಟ್ಟದ ಅಡಿಕೆ ಸಿದ್ದಪಡಿಸಲು ಕುಶಲಕರ್ಮಿಗಳು ಅನಿವಾರ್ಯ ಎಂಬಂತಾಗಿದ್ದು ಅಡಿಕೆ ಸುಲಿಯುವವರಿಗೆ ಬೇಡಿಕೆ ಹೆಚ್ಚಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT