ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ನೆರಳಿನ ಆಸರೆ

Last Updated 29 ಜುಲೈ 2013, 19:59 IST
ಅಕ್ಷರ ಗಾತ್ರ

ಕಾಲ ಬದಲಾದಂತೆ ವ್ಯವಸಾಯದಲ್ಲೂ ಗಮನಾರ್ಹ ಬದಲಾವಣೆಗಳಾಗತೊಡಗಿವೆ. ರೈತರು ಭತ್ತದ ಗದ್ದೆಗಳನ್ನೆಲ್ಲಾ ಅಡಿಕೆ ತೋಟವನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹಿಂದಿನ ಹಳೆಯ ತೋಟಗಳಿಗೆ ಇರುವಂತೆ ಇತ್ತಿತ್ತಲಾಗಿ ಗದ್ದೆ ಬಯಲಿನಲ್ಲಿ ಹಾಕಿರುವ ಅಡಿಕೆ ತೋಟಗಳಿಗೆ ಅಂಚಡಿಗೆ ಧರೆ, ಬೆಟ್ಟ ಮತ್ತು ಬೇಣ ಇದ್ಯಾವುದೂ ಇರುವುದಿಲ್ಲ.

ಹಾಗಾಗಿ ಹೊಸತಾಗಿ ನೆಟ್ಟ ಅಡಿಕೆ ಸಸಿಗಳಿಗೆ ಇಳಿ ಬಿಸಿಲು ತಾಗಿ ಸಸಿ ಬಾಡುತ್ತದೆ. ಎಳೆಯ ಮರಗಳಿಗೂ ಕಟುವಾದ ಬಿಸಿಲು ಸೋಕಿ `ಒಗ್ಗರೆ' ಬೀಳುವುದುಂಟು. ಆದ್ದರಿಂದ ಬಯಲು ಪ್ರದೇಶದಲ್ಲಿ ತೋಟ ಮಾಡಬೇಕಾದರೆ ಮೊದಲು ಇಳಿ ಬಿಸಿಲು ತಾಕದಂತೆ ಎಚ್ಚರವಹಿಸಲೇಬೇಕಾದ ಅನಿವಾರ್ಯತೆಯಿದೆ.

ಇಂತಹ ಅಡಿಕೆ ತೋಟಕ್ಕೆ ಇಳಿ ಬಿಸಿಲು ಬರದಂತೆ ತಡೆಯಲು ಇರುವ ಏಕ ಮಾತ್ರ ಉಪಾಯವೆಂದರೆ ನೆರಳಿಗಾಗಿ ಸಾಲು ಮರಗಳನ್ನು ಬೆಳೆಸುವುದು. ಅಡಿಕೆ ತೋಟದ ನೆರಳಿಗೆ ಹೇಳಿ ಮಾಡಿಸಿದ್ದೆಂದರೆ ಅದೇ 'ಕೋಲುಸಂಪಿಗೆ ಮರ'. ಬರೀ ನೆರಳೊಂದೇ ಅಲ್ಲ. ತೋಟದ ಮುಚ್ಚಿಗೆಗೆ ಹಸಿರು ಸೊಪ್ಪು, ದರಕು ಮತ್ತು ಉರುವಲಿಗೆ ಕಟ್ಟಿಗೆ ಅಲ್ಲದೇ ಹಸುಗಳ ಮೇವಿಗೆ ಸಹ ಈ ಕೋಲುಸಂಪಿಗೆ ಮರ ಉಪಕಾರಿ.

ಇದರ ವಿಶಿಷ್ಟ ಗುಣಗಳೇನೆಂದರೆ, ಒಂದು ಟೊಂಗೆ ನೆಟ್ಟರೂ ಸಾಕು ಚಿಗುರುತ್ತದೆ. ಅತಿ ಕಡಿಮೆ ಅವಧಿಯಲ್ಲಿ ನೇರವಾಗಿ ಬೆಳೆಯುತ್ತದೆ. ಎಲೆಗಳು ದೊಡ್ಡದಾಗಿದ್ದು, ತೋಟಕ್ಕೆ ಇಳಿ ಬಿಸಿಲಿನಿಂದ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಅಡಿಕೆಗೆ ನೆರಳು, ನೆಮ್ಮಗಿ ಸಾರ, ಸತ್ವ ಎಲ್ಲಾ ಒದಗಿಸುತ್ತದೆ.

ಅಕೇಶಿಯಾ, ನೀಲಗಿರಿ, ಗಾಳಿ ಮತ್ತು ಮ್ಯಾಜಿಯಂ ಮುಂತಾದ ಆಧುನಿಕ ತಳಿಯ ಮರಗಳನ್ನು ನೆರಳಿಗಾಗಿ ನೆಟ್ಟರೆ ಉಪಕಾರಕ್ಕಿಂತ ಅಪಾಯವೇ ಅಧಿಕ. ಇವು ರಾಕ್ಷಸ ರೂಪದಲ್ಲಿ ಬೆಳವಣಿಗೆ ಕಂಡರೂ ನೆಲದ ಸಾರ ಸತ್ವಗಳನ್ನು ಹೀರುವುದಲ್ಲದೇ ಅಡಿಕೆಗೆ ಹಾಕಿದ ನೀರು ಗೊಬ್ಬರವನ್ನೂ ಕಬಳಿಸಿ ಮುಗಿಲೆತ್ತರಕ್ಕೆ ಚಾಚುತ್ತವೆ. ಒಂದು ದಿನ ತೋಟದ ಮೇಲೇ ಮುರಿದು ಬೀಳುತ್ತವೆ. ಆದ್ದರಿಂದ ಇವೆಲ್ಲದಕ್ಕಿಂತ ಕೋಲುಸಂಪಿಗೆ ಮರ ರೈತರ ಮಿತ್ರನೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT