ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಡಿಗರ ಕಾವ್ಯ ಪ್ರತಿಮೆಗಳ ರಾಶಿ'

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  `ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯ ಪ್ರತಿಮೆಗಳ ರಾಶಿ. ಅವರ ಕಾವ್ಯದ ಒಂದೊಂದು ಸಾಲು ಒಂದೊಂದು ಪ್ರತಿಮೆ. ಪ್ರತಿಮೆಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಅವರ ಕಾವ್ಯವನ್ನು ಅರ್ಥೈಸಿಕೊಳ್ಳಲು ಆಗುವುದಿಲ್ಲ' ಎಂದು ಹಿರಿಯ ವಿಮರ್ಶಕ ಬಿ.ವೆಂಕಟಕೃಷ್ಣ ಕೆದಿಲಾಯ ಅಭಿಪ್ರಾಯಪಟ್ಟರು.

ನಗರದ ಸುಚಿತ್ರಾ ಕಲಾಕೇಂದ್ರದ ಆಶ್ರಯದಲ್ಲಿ ಸುಚಿತ್ರಾ ಸಭಾಂಗಣದಲ್ಲಿ ಭಾನುವಾರ ನಡೆದ ಮೊಗೇರಿ ಗೋಪಾಲಕೃಷ್ಣ ಅಡಿಗ ಸಂಸ್ಮರಣೆ ಸಮಾರಂಭದಲ್ಲಿ `ಅಡಿಗರ ಗದ್ಯ- ಕಾವ್ಯದ ಮೀಮಾಂಸೆ' ಕುರಿತು ಮಾತನಾಡಿದರು.

`ವೇದ ಪುರಾಣ ಕಾಲದಿಂದ ಹಿಡಿದು ಇವತ್ತಿನ ಅಮಿತಾಬ್ ಬಚ್ಚನ್ ಅವರಂತಹ ನಟರೂ ಅಡಿಗರ ಕಾವ್ಯದಲ್ಲಿ ಪ್ರತಿಮೆಗಳಾಗಿದ್ದಾರೆ. ಸಾಂದ್ರವಾಗಿ ಹೇಳುವ ಕ್ರಮ ಅಡಿಗರ ಕಾವ್ಯದ ವಿಶೇಷತೆ. ಅವರು ಕಾವ್ಯವನ್ನು ಸಮಕಾಲೀನವಾಗಿಯೂ ಸಾರ್ವಕಾಲಿಕವಾಗಿಯೂ ಬರೆದರು. ಆ ಕಾವ್ಯಗಳು ದ್ವಂದ್ವಗಳ ಸಮನ್ವಯವೂ ಹೌದು' ಎಂದು ಅವರು ವಿಶ್ಲೇಷಿಸಿದರು.

`ಅವರು ಕಾವ್ಯವನ್ನು ಛಂದೋಬದ್ಧವಾಗಿ ಬರೆಯಲಿಲ್ಲ. ಅವರು ಛಂದಸ್ಸನ್ನು ಮೀರಿದರು. ಆದರೆ, ಅವರು ಛಂದಸ್ಸನ್ನು ವಿರೋಧಿಸಲಿಲ್ಲ. ಪರಂಪರೆಯನ್ನು ಉಳಿಸಿಕೊಂಡು ಕಾವ್ಯದಲ್ಲಿ ಆಧುನಿಕತೆಯನ್ನು ತಂದರು. ಅವರ ಕಾವ್ಯಗಳು ಕವಿಗಳಿಗೆ ಹೊಸ ದಿಕ್ಕನ್ನು ತೋರಿದವು' ಎಂದು ಅವರು ಅಭಿಪ್ರಾಯಪಟ್ಟರು.

`ಅಡಿಗರು ಪರಂಪರೆಯನ್ನು ಆಳವಾಗಿ ಛೇದಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಅವರು ಪರಂಪರೆಯನ್ನು ಸಂಪೂರ್ಣವಾಗಿ ನಿರಾಕರಿಸಲಿಲ್ಲ. ಪರಂಪರೆಯ ಜೊತೆಗೆ ನಮ್ಮ ಸಂಬಂಧ ಆರೋಗ್ಯಕರ ಆಗಿರಬೇಕು ಎಂದು ಭಾವಿಸಿದ್ದರು. ಪರಂಪರೆಯನ್ನು ವಿಮರ್ಶೆ ಮಾಡಿ ಸಾರ್ವಕಾಲಿಕ ಉತ್ತಮ ಅಂಶಗಳನ್ನು ಸ್ವೀಕರಿಸಿ ಅರ್ಥಹೀನ ವಿಚಾರಗಳನ್ನು ಬಿಟ್ಟು ಬಿಡಬೇಕು ಎಂಬುದು ಅವರ ಧೋರಣೆಯಾಗಿತ್ತು' ಎಂದರು.

`ಅವರು ಕ್ರಾಂತಿಕಾರಿ ಕವಿ. ಅವರದ್ದು ಘನ ವ್ಯಕ್ತಿತ್ವ, ಅದ್ಭುತ ಚಿಂತನೆ. ಅವರ ಕಾವ್ಯ ಶ್ರೇಷ್ಠವಾದುದು. ಜೊತೆಗೆ ಕ್ಲಿಷ್ಟವೂ ಹೌದು. ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಬೇಕಾಗಿರುವುದು ಸಹೃದಯ ಮನಸ್ಸು ಹಾಗೂ ಭಾಷೆಯ ಸೂಕ್ಷ್ಮ ಜ್ಞಾನ' ಎಂದು ಅವರು ಪ್ರತಿಪಾದಿಸಿದರು.

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಟಿ.ಎನ್.ಕೃಷ್ಣರಾಜು ಮಾತನಾಡಿ, `ಅಡಿಗರ ಕಾವ್ಯದ ಪ್ರತಿಮೆಗಳು ಸರ್ವ ಕಾಲಕ್ಕೂ ಅನ್ವಯ ಆಗುತ್ತದೆ. ಅವು ಜೀವನದ ಎಲ್ಲ ವಿವರಗಳನ್ನು ಹೇಳುವ ಪ್ರತಿಮೆಗಳು. ಅವರ `ಭೂಮಿಗೀತೆ' ಕಾವ್ಯದ ಮೊದಲ ನಾಲ್ಕು ಸಾಲುಗಳು ಜಗತ್ತಿನ ಶ್ರೇಷ್ಠ ಸಾಲುಗಳು' ಎಂದು ಅವರು ಬಣ್ಣಿಸಿದರು.   

ಕಥೆಗಾರ ಎಸ್.ದಿವಾಕರ್ ಹಾಗೂ ರೋಸಿ ಡಿಸೋಜ ಕಾವ್ಯವಾಚನ ಮಾಡಿದರು. ಪಂಡಿತ್ ಡಾ.ನಾಗರಾಜರಾವ್ ಹವಾಲ್ದಾರ್ ಹಾಗೂ ಎಂ.ಡಿ. ಪಲ್ಲವಿ ಅಡಿಗರ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಅಡಿಗರ ಧೂಮ ಲೀಲೆ!
`ಅಡಿಗರೊಂದಿಗೆ ಸಾಹಿತ್ಯಿಕ ಮತ್ತು ವೈಯಕ್ತಿಕ ಅನುಭವ' ವಿಷಯದ ಕುರಿತು ವಿಷಯ ಮಂಡಿಸಿದ ಡಾ.ಟಿ.ಎನ್.ಕೃಷ್ಣರಾಜು ಅವರು ಅಡಿಗರ ಸಿಗರೇಟ್ ಚಟವನ್ನು ಸ್ವಾರಸ್ಯಕರವಾಗಿ ಬಿಚ್ಚಿಟ್ಟರು.

`ಅಡಿಗರಿಗೆ ಸಿಗರೇಟ್ ಮೇಲೆ ಭಾರಿ ಪ್ರೀತಿ. ನನಗೂ ಅಭ್ಯಾಸ ಇತ್ತು. ಇನ್ನು ಸಿಗರೇಟ್ ಚಟವನ್ನು ಬಿಡೋಣ ಎಂದು ಇಬ್ಬರೂ ತೀರ್ಮಾನಿಸಿದೆವು. ಅದಕ್ಕೂ ಮುನ್ನ ಇಡೀ ರಾತ್ರಿ ಸಿಗರೇಟ್ ಸೇದಿದೆವು. ಮರುದಿನ ಸಿಗರೇಟ್ ಇಲ್ಲದೆ ಚಡಪಡಿಕೆಯಲ್ಲೇ ಕಾಲ ಕಳೆದೆ. ಎರಡನೇ ದಿನವಂತೂ ಸಿಗರೇಟ್ ಸೇದದೆ ಇರಲು ಸಾಧ್ಯವೇ ಆಗಲಿಲ್ಲ. ಲಾಂಡ್ರಿಗೆ ಬಟ್ಟೆ ಕೊಡುತ್ತೇನೆ ಎಂದು ಹೇಳಿ ತೆರಳಿ ಅಲ್ಲೊಂದು ಸಿಗರೇಟ್ ಸೇದಿ ಬಂದೆ' ಎಂದು ಕೃಷ್ಣರಾಜು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

`ಮೂರನೇ ದಿನವೂ ಸಿಗರೇಟ್ ಬೇಕು ಎಂದು ಅನಿಸಿತು. ಲಾಂಡ್ರಿಗೆ ಹೋಗುತ್ತೇನೆ ಎಂದರೆ ಅಡಿಗರಿಗೆ ಸಂಶಯ ಬರುತ್ತದೆ ಎಂದು ಸುಮ್ಮನಾದೆ. 2-3 ದಿನ ಹೇಗೋ ಸಹಿಸಿಕೊಂಡೆ. 6ನೇ ದಿನ ಸುಳ್ಳು ಹೇಳಿ ಸಿಗರೇಟ್ ಸೇದಿ ಆಚೆ ಹೋದಾಗ ಅಡಿಗರು ಸಿಗರೇಟ್ ಸೇದುತ್ತಾ ನಿಂತಿರುವುದು ಕಾಣಿಸಿತು. `ಲಾಂಡ್ರಿಗೆ ಬಂದದ್ದಾ' ಎಂದು ಪ್ರಶ್ನಿಸಿದರು.

`ಇನ್ನು ಮುಂದೆ ಇಂತಹ ಬುರುಡೆ ಬೇಡ. ಸಂತೋಷದಿಂದ ಸ್ಮೋಕ್ ಮಾಡೋಣ' ಎಂದು ತೀರ್ಮಾನಿಸಿ ಸಿಗರೇಟ್ ಸೇದಿಯೇ ಮನೆಗೆ ತೆರಳಿದೆವು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT