ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಡಿಗರಿಂದ ಕನ್ನಡ ಸಾಹಿತ್ಯಕ್ಕೆ ಆಧುನಿಕ ಪ್ರಜ್ಞೆ'

Last Updated 17 ಫೆಬ್ರುವರಿ 2013, 18:47 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪ್ರಜ್ಞೆಯನ್ನು ತಂದ ಮೊದಲಿಗರು ಗೋಪಾಲಕೃಷ್ಣ ಅಡಿಗ' ಎಂದು ಲೇಖಕ ಎನ್.ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಅಡಿಗ- 95 ಸ್ಮರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಗ್ರಹಿಕೆಯ ಆಧುನಿಕತೆ ಬಗ್ಗೆ ಅಡಿಗರ ಕಾವ್ಯ ಓದುಗನನ್ನು ಪದೇ ಪದೇ ಎಚ್ಚರಿಸುತ್ತದೆ. ಅಡಿಗರ ಕವನಗಳು ಬುದ್ಧಿಯ ಜತೆಗೆ ಭಾವಯಾನ ನಡೆಸುತ್ತವೆ. ಚಂಡೆಮದ್ದಳೆಯ ನಂತರದ ಅಡಿಗರ ಕವಿತೆಗಳಲ್ಲಿ ಪಾರಂಪರಿಕ ಚಿತ್ರಣಗಳ ಮೂಲಕ ವಾಸ್ತವವನ್ನು ನಿರೂಪಿಸುವ ಕ್ರಮ ಕಂಡುಬರುತ್ತದೆ' ಎಂದು ಅವರು ನುಡಿದರು.

`ಕನ್ನಡ ಸಾಹಿತ್ಯ ಡಿಜಿಟಲೀಕರಣ' ವಿಷಯದ ಸಂವಾದದಲ್ಲಿ ಮಾತನಾಡಿದ ಕಥೆಗಾರ ವಸುಧೇಂದ್ರ, `ಮೊಬೈಲ್ ಸೇರಿದಂತೆ ಎಲ್ಲ ಕಡೆಯೂ ಕನ್ನಡ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚು ಪ್ರಯತ್ನಗಳಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಅಳವಡಿಕೆಯಾಗಬೇಕು. ಯೂನಿಕೋಡ್‌ನಿಂದಾಗಿ ತಂತ್ರಾಂಶಗಳಲ್ಲಿ ಕನ್ನಡ ಬಳಕೆಗೆ ಸಾಕಷ್ಟು ಸಹಾಯವಾಗಿದೆ. ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದಲ್ಲಿ ಬ್ಲಾಗ್ ಬರೆಯುತ್ತಿರುವುದು ಉತ್ತಮ ಬೆಳವಣಿಗೆ' ಎಂದರು.

ಕನ್ನಡ ಗಣಕ ಪರಿಷತ್‌ನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ ಮಾತನಾಡಿ, `ಪ್ರಾಚೀನ ಕೃತಿಗಳನ್ನು ಅಂತರ್ಜಾಲಕ್ಕೆ ಅಳವಡಿಸಿಕೊಳ್ಳುವ ಬಗ್ಗೆ ಹಕ್ಕುಸ್ವಾಮ್ಯದ ತೊಡಕಿಲ್ಲ. ಆದರೆ, ಆಧುನಿಕ ಸಾಹಿತಿಗಳ ಕೃತಿಗಳನ್ನು ಅಂತರ್ಜಾಲಕ್ಕೆ ಅಳವಡಿಸಲು ಹಕ್ಕುಸ್ವಾಮ್ಯ ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತವೆ' ಎಂದರು.

`ಇತರೆ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆಯ ಬಳಕೆ ಅಂತರ್ಜಾಲದಲ್ಲಿ ಕಡಿಮೆ ಇದೆ. ಅಂತರ್ಜಾಲದಲ್ಲಿ ಕನ್ನಡ ಅಳವಡಿಕೆಯ ಬಗ್ಗೆ ಕನ್ನಡ ಗಣಕ ಪರಿಷತ್ ಸಾಕಷ್ಟು ಕೆಲಸ ಮಾಡಿದೆ. ಕನ್ನಡದಲ್ಲಿ ಸುಮಾರು 750ಕ್ಕೂ ಹೆಚ್ಚು ಬರಹಗಾರರು ಬ್ಲಾಗ್ ಬರೆಯುತ್ತಿದ್ದಾರೆ. ಆದರೆ, ಬ್ಲಾಗ್‌ಗಳಲ್ಲಿ ನೀಡುವ ಮಾಹಿತಿಗೆ ಅಧಿಕೃತತೆ ಇಲ್ಲ' ಎಂದು ಹೇಳಿದರು.

ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕ ಡಿ.ವಿ.ಪ್ರಹ್ಲಾದ್ ಮಾತನಾಡಿ, `ಬ್ಲಾಗ್ ಬರಹಗಳಿಗೆ ಯಾರು, ಹೇಗೆ ಬೇಕಾದರೂ ಪ್ರತಿಕ್ರಿಯಿಸಬಹುದು. ಇಂತಹ ಪ್ರತಿಕ್ರಿಯೆಗಳಿಂದ ಕನ್ನಡ ಸಾಹಿತ್ಯಕ್ಕೆ ಯಾವುದೇ ಪ್ರಯೋಜನವಿಲ್ಲ' ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಅವರು ಅಡಿಗರ ಸಾಹಿತ್ಯ ಸಾಧನೆಯ ಬಗ್ಗೆ ರೂಪಿಸುತ್ತಿರುವ ವೆಬ್‌ಸೈಟ್ ಕಾರ್ಯಕ್ಕೆ ಚಾಲನೆ ನೀಡಿದರು. ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಅಡಿಗರ `ಮೌನದ ಸುವರ್ಣ ಪುತ್ಥಳಿ', `ಶಾಂತವೇರಿಯ ಶಾಂತ ಸಂತ', `ಕಟ್ಟುವೆವು ನಾವು' ಮತ್ತಿತರ ಕವಿತೆಗಳನ್ನು ವಾಚಿಸಿದರು. ಕವಿ ಟಿ.ಯಲ್ಲಪ್ಪ, ಮೈಸೂರಿನ ಜೆ.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಸುದರ್ಶನ ಪಾಟೀಲ್ ಕುಲಕರ್ಣಿ, ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್‌ನ ಎಂ.ಜಯರಾಮ ಅಡಿಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT