ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ: 3200 ಲೋಡ್ ಖೋತಾ!

Last Updated 23 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಾದ್ಯಂತ ಎರಡು ತಿಂಗಳಿಂದ ಅಡುಗೆ ಅನಿಲ ಪಡೆಯಲು ಗ್ರಾಹಕರು ಹರಸಾಹಸ ಪಡುತ್ತಿದ್ದಾರೆ. ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ನಿರೀಕ್ಷೆಯಿಲ್ಲ. ಜಿಲ್ಲೆಗೆ ಬರಬೇಕಾಗಿದ್ದ ಅಡುಗೆ ಅನಿಲದಲ್ಲಿ 3200 ಲಾರಿ ಲೌಡ್ ಅನಿಲ ಖೋತಾ ಮಾಡಿರುವುದೇ ಈ ಪರದಾಟಕ್ಕೆ ಕಾರಣ ಎನ್ನಲಾಗಿದೆ.

ಅಡುಗೆ ಅನಿಲ ಇಲ್ಲದೆ ಜಿಲ್ಲೆಯಾದ್ಯಂತ ಜನರ ಪರದಾಟ ಹೆಚ್ಚಿದ್ದು, ಪ್ರತಿಭಟನೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಜಾಣ ಮರೆವು ತೋರುತ್ತಿದೆ. ಗ್ಯಾಸ್ ವಿತರಣೆ ಅವ್ಯವಸ್ಥೆ ಸರಿಯಾಗುವವರೆಗೂ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಜನವರಿ 14ರಿಂದ ಈವರೆಗೂ ಜಿಲ್ಲೆಯಲ್ಲಿ ಸುಮಾರು 96 ಸಾವಿರ ಸಿಲಿಂಡರ್ ಕಡಿಮೆ ಪೂರೈಕೆ ಮಾಡಲಾಗಿದೆ. ಹೀಗಾಗಿ ಇದನ್ನು ಸರಿದೂಗಿಸಲು ಹರಸಾಹಸ ಪಡಬೇಕಾಗಿದೆ. ಯಾರು ಮೊದಲು ಬುಕ್ ಮಾಡಿರುತ್ತಾರೋ ಅವರಿಗೆ ಮೊದಲು ಸಿಲಿಂಡರ್ ವಿತರಿಸಲು ಸೂಚಿಸಲಾಗಿದ್ದು, ಹೊಸದಾಗಿ ಬುಕ್ ಮಾಡಿದವರು ಸಿಲಿಂಡರ್‌ಗೆ ಕಾಯದೆ ಬೇರೆ ದಾರಿ ಇಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಗಳು ತಿಳಿಸಿವೆ.

ಎಚ್‌ಪಿ ಗ್ಯಾಸ್ ಸಿಲಿಂಡರ್ ಜ. 30ರಂದು ಬುಕ್ ಮಾಡಿದ್ದು, ಇಲ್ಲಿಯವರೆಗೂ ಬಂದಿಲ್ಲ. ಇರುವುದೊಂದೇ ಗ್ಯಾಸ್ ಸಿಲಿಂಡರ್. ನಗರದಲ್ಲಿ ಸೀಮೆಎಣ್ಣೆ ಸಿಗುವುದಿಲ್ಲ. ಹೋಟೆಲ್‌ನಲ್ಲಿ ಊಟ ತಿನ್ನುತ್ತಾ ದಿನ ನೂಕುವಂತಾಗಿದೆ ಎಂದು ಮಹಾಲಕ್ಷ್ಮೀ ಬಡಾವಣೆ ಗ್ರಾಹಕರೊಬ್ಬರು ದೂರಿದರು.

ತುಮಕೂರು ನಗರದಲ್ಲಿ ಶೇ.90ಕ್ಕೂ ಹೆಚ್ಚಿನ ಜನರು ಅಡುಗೆ ಅನಿಲದ ಮೇಲೆಯೇ ಅವಲಂಬಿತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲೂ ಗ್ಯಾಸ್ ಸಂಪರ್ಕ ಪಡೆದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ 190420 ಗ್ಯಾಸ್ ಸಂಪರ್ಕಗಳಿವೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎಂಬ ಭೇದವಿಲ್ಲದೆ ಎಲ್ಲಾ ಕಡೆ ಅಡುಗೆ ಅನಿಲ ಪಡೆಯಲು ಗ್ಯಾಸ್ ಮಳಿಗೆಗಳ ಮುಂದೆ ಜನತೆ ದಿನವಿಡೀ ಕಾಯುವಂತಾಗಿದೆ.

ನಗರ ಪ್ರದೇಶದ ಗ್ರಾಹಕರಿಗೆ ಹೆಚ್ಚು ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಲ್ಲಬೇಕಾದ ಸಿಲಿಂಡರ್‌ಗಳನ್ನು ನಗರ ಪ್ರದೇಶಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆದರೂ ಗ್ರಾಹಕರು ಒಂದು ಸಿಲಿಂಡರ್ ಪಡೆಯಲು ಹದಿನೈದಕ್ಕೂ ಹೆಚ್ಚು ದಿನ ಕಾಯುವಂತಾಗಿದೆ ಎಂದು ಗ್ಯಾಸ್ ಏಜೆನ್ಸಿಯೊಂದರ ಸಿಬ್ಬಂದಿ ಮಾಹಿತಿ ನೀಡಿದರು.

ಎರಡು ತಿಂಗಳಿನಿಂದ ಅಡುಗೆ ಅನಿಲ ವಿತರಣೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಕೆಲವೇ ದಿನಗಳಲ್ಲಿ ಸಮಸ್ಯೆ ಸರಿಹೋಗಲಿದೆ. ಜನವರಿ ತಿಂಗಳಿನಲ್ಲಿ ನಡೆದ ಗ್ಯಾಸ್ ಸಾಗಣೆ ಲಾರಿ ಮುಷ್ಕರ, ಹಡಗು ಮೂಲಕ ರಾಜ್ಯಕ್ಕೆ ಬರಬೇಕಾಗಿದ್ದ ಗ್ಯಾಸ್ ನಿಗದಿತ ಸಮಯಕ್ಕೆ ಬರಲಿಲ್ಲ. ಇದರಿಂದಾಗಿ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸಿಕೊಂಡು ಸಮಸ್ಯೆಗೆ ಕಾರಣವಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಪಿ.ಸಾಂಬಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

30 ದಿನಕ್ಕೆ ಒಂದು ಸಿಲಿಂಡರ್‌ನಂತೆ ಗ್ರಾಹಕರಿಗೆ ನೀಡಬೇಕು. ಗ್ರಾಹಕರು ಬುಕ್ ಮಾಡಿಸಿದ ಎರಡು-ಮೂರು ದಿನದಲ್ಲಿ ಸಿಲಿಂಡರ್ ವಿತರಿಸಬೇಕು. ಆದರೆ ಈ 2 ತಿಂಗಳಿನಿಂದ ಈ ರೀತಿ ಮಾಡಲು ಆಗುತ್ತಿಲ್ಲ. ಈಗಿನ ಸಮಸ್ಯೆ ಕೆಲವೇ ದಿನಗಳಲ್ಲಿ ಸರಿಯಾಗಲಿದ್ದು, ನಂತರ ಗ್ಯಾಸ್ ಸಿಲಿಂಡರ್ ವಿತರಣೆ ಯಥಾಸ್ಥಿತಿಗೆ ಬರಲಿದೆ ಎಂದರು.

ಆದರೆ ಗ್ರಾಹಕರೊಬ್ಬರು ಹೇಳುವ ಪ್ರಕಾರ ಪ್ರಸ್ತುತ ಗ್ಯಾಸ್ ಬುಕ್ ಮಾಡಿ ತಿಂಗಳಾದರೂ ವಿತರಣೆಯಾಗುತ್ತಿಲ್ಲ. ಈ ಹಿಂದೆ ಕೂಡ 30 ದಿನಕ್ಕೊಂದು ಅನಿಲ ಸಿಲಿಂಡರ್ ವಿತರಣೆ ಮಾಡಿದ ಉದಾಹರಣೆಯೇ ಇಲ್ಲ. ಲೆಕ್ಕಾಚಾರದಂತೆ 45 ದಿನಕ್ಕೊಂದು ಸಿಲಿಂಡರ್ ಸಿಗುತ್ತಿದೆ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT