ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಒಂದು ರುಚಿ ಮೂರು!

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಒಗ್ಗರಣೆ’ ಎಂಬ ಪದದಲ್ಲಿಯೇ ಅದ್ಭುತ ಶಕ್ತಿಯಿದೆ, ರುಚಿಯಿದೆ, ಶಬ್ದವಿದೆ, ಪರಿಮಳವಿದೆ.
– ತಮ್ಮ ಸಿನಿಮಾ ಅಡುಗೆಯನ್ನು ಒಂದು ಸಾಲಿನಲ್ಲಿ ಬಣ್ಣಿಸಿದರು ನಟ ಪ್ರಕಾಶ್‌ ರೈ.

‘ನಾನು ನನ್ನ ಕನಸು’ ಬಳಿಕ ಅವರು ಮತ್ತೆ ಕನ್ನಡದಲ್ಲಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ‘ಧೋನಿ’ ನಿರ್ದೇಶಿಸಿದ್ದರೂ ಅದನ್ನು ಕನ್ನಡಕ್ಕೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲ. ಈಗ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಅವರು ಅಡುಗೆ ತಯಾರಿಸಲಿದ್ದಾರೆ. ಈ ನಳಪಾಕಕ್ಕೆ ಪ್ರೇರಣೆ ಮಲಯಾಳಂನ ‘ಸಾಲ್ಟ್‌ ಎನ್‌ ಪೆಪ್ಪರ್‌’ ಚಿತ್ರ. ‘ಅಡುಗೆಯ ಪದಾರ್ಥವಷ್ಟೇ ಮಲಯಾಳಂನದ್ದು, ಇದು ನನ್ನದೇ ಹೊಸರುಚಿ ಪ್ರಯೋಗ’ ಎನ್ನುತ್ತಾರೆ ಪ್ರಕಾಶ್‌ ರೈ. ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಬಿ. ಸುರೇಶ್‌ ಗೆಳೆಯನ ಸಾಹಸಕ್ಕೆ ಹೆಗಲು ನೀಡುತ್ತಿದ್ದಾರೆ.

ಆಡುಮಾತಿನಲ್ಲಿ ‘ಒಗ್ಗರಣೆ’ ಹಲವು ಅರ್ಥ ಪಡೆದುಕೊಂಡಿರಬಹುದು. ಆದರೆ ಇಲ್ಲಿ ‘ಒಗ್ಗರಣೆ’ ಒಗ್ಗರಣೆಯಾಗಿಯೇ ಇರುತ್ತದೆ. ಎರಡು ವಯೋಮಾನದ ಎರಡು ಜೋಡಿಗಳ ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ ಅವರು. ಜೊತೆಗೆ ಆಯಾ ನೆಲದ ಆಹಾರ ಸಂಸ್ಕೃತಿಯನ್ನು ಉಣಬಡಿಸಲಿದ್ದಾರೆ. ಹೀಗಾಗಿ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲಿ ‘ಉಳವುಚರ ಬಿರಿಯಾನಿ’ ಮತ್ತು ತಮಿಳಿನಲ್ಲಿ ‘ಉನ್‌ ಸಮಯಿಲ್‌ ಅರಿವು’ ಎಂಬ ಅಡುಗೆ ಶೀರ್ಷಿಕೆಯಲ್ಲಿಯೇ ಚಿತ್ರ ಸಿದ್ಧವಾಗುತ್ತಿದೆ. ಆಯಾ ಊರಿಗೆ ತಕ್ಕಂತೆ ಅಡುಗೆ ರುಚಿ ಬದಲಾಗಲಿದೆ. ಆದರೆ ಅಡುಗೆಯ ವಿಧಾನವನ್ನು ಅವರು ಬಹಿರಂಗಪಡಿಸಲು ಸಿದ್ಧರಿರಲಿಲ್ಲ.

ಹಲವು ಹೊಸ ಮತ್ತು ಹಳೆಯ ಮುಖಗಳು ‘ಒಗ್ಗರಣೆ’ಯಲ್ಲಿ ಒಂದಾಗುತ್ತಿವೆ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ನಟಿ ಸ್ನೇಹಾ ‘ರವಿಶಾಸ್ತ್ರಿ’ ಚಿತ್ರದ ನಂತರ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಅಚ್ಯುತಕುಮಾರ್‌, ಸಿಹಿಕಹಿ ಚಂದ್ರು ಮುಂತಾದ ನಟರೂ ‘ಒಗ್ಗರಣೆ’ಯ ಪಾಲುದಾರರು. ಯುವಜೋಡಿಯ ಪಾತ್ರಗಳಲ್ಲಿ ಕನ್ನಡದಲ್ಲಿ ಸಂಯುಕ್ತಾ ಬೆಳವಾಡಿ ಮತ್ತು ಹೊಸ ಹುಡುಗ ಶ್ರೇಯಸ್‌ ನಟಿಸುತ್ತಿದ್ದಾರೆ. ಪ್ರೀತಾ ನಾಗರಾಜ್‌ ಛಾಯಾಗ್ರಹಣ, ಪ್ರಕಾಶ್‌ ರೈ ಪತ್ನಿ ಪೋನಿ ವರ್ಮಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಕನ್ನಡದ ಎಲ್ಲಾ ಹಾಡುಗಳನ್ನು ಜಯಂತ ಕಾಯ್ಕಿಣಿ ಹೊಸೆಯಲಿದ್ದಾರೆ. ಸಿನಿಮಾ ಅಧ್ಯಯನ ನಡೆಸುತ್ತಿರುವ ಅನನ್ಯ ಕಾಸರವಳ್ಳಿ, ಅರವಿಂದ್‌ ಮುಂತಾದ ಯುವ ಪಡೆ ಅವರೊಂದಿಗೆ ದುಡಿಯಲಿದೆ.

ಮೂರೂ ಭಾಷೆಗಳಿಗೆ ಏಕಕಾಲದಲ್ಲಿ ಚಿತ್ರೀಕರಣ ನಡೆಸುವುದು ಪ್ರಕಾಶ್‌ ರೈ ಉದ್ದೇಶ. ಎಲ್ಲಾ ಭಾಷೆಗಳಿಗೂ ತಾಳೆಯಾಗುವ ವಾತಾವರಣ ಅವರಿಗೆ ಆಂಧ್ರಪ್ರದೇಶ, ತಮಿಳುನಾಡು ಸುತ್ತಾಡಿದ ಬಳಿಕ ಮೈಸೂರಿನ ತಾಣವೊಂದರಲ್ಲಿ ಸಿಕ್ಕಿದೆ. ಹೀಗಾಗಿ ಸಂಪೂರ್ಣ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT