ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡ ಮತದಾನದ ವಿರುದ್ಧ ಕಠಿಣ ಕ್ರಮ:ಕೆ.ಎಸ್.ಈಶ್ವರಪ್ಪ ಹೇಳಿಕೆ

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷದ ನಿರ್ದೇಶನವನ್ನು ಮೀರಿ ಕೆಲವು ಶಾಸಕರು ಅಡ್ಡಮತ ಚಲಾವಣೆ ಮಾಡಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಜೆಪಿಯ 12 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಮತ ಚಲಾಯಿಸಿದವರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಹಿಂದೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಏಳು ಬಿಜೆಪಿ ಶಾಸಕರನ್ನು ಗುರುತಿಸಲಾಗಿತ್ತು.

ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆ ಎಲ್ಲರಿಗೂ ಟಿಕೆಟ್ ನಿರಾಕರಿಸಲಾಯಿತು. ಈಗ ಅಡ್ಡ ಮತದಾನ ಮಾಡಿರುವವರ ವಿರುದ್ಧವೂ ಟಿಕೆಟ್ ನಿರಾಕರಣೆಯಂತಹ ಗಂಭೀರ ಕ್ರಮ ಜರುಗಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕರ ಉಚ್ಚಾಟನೆಗೆ ಆಗ್ರಹ
ಶಿವಮೊಗ್ಗ: ಪಕ್ಷದ `ವಿಪ್~ ಉಲ್ಲಂಘಿಸಿ, ಅಡ್ಡ ಮತದಾನ ಮಾಡಿ, ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಗೆ ಕಾರಣರಾದ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಯ ಸೋಲಿನಲ್ಲಿ ವ್ಯವಸ್ಥಿತ ಪಿತೂರಿ ಅಡಗಿದೆ. ಇಂತಹ ಅನಿಷ್ಟ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಇರಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯೂ ಸರಿ ಅಲ್ಲ; ಲಿಂಗಾಯತರ ವಿರುದ್ಧ ದಲಿತರು ಬಂಡೇಳುತ್ತಾರೆಂಬ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಮಾತೂ ಸರಿ ಇಲ್ಲ.  ಈ ವಿಷಯ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗಬೇಕು. ಬಹಿರಂಗವಾಗಿ ಜಾತಿ ಹೆಸರಿನಲ್ಲಿ ಯಾರೂ ಪ್ರಚೋದನಾತ್ಮಕ ಹೇಳಿಕೆ ನೀಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಖರೀದಿ ನಿಜ
ಬೀದರ್: `ವಿಧಾನಸಭೆಯಿಂದ ಮೇಲ್ಮನೆಗೆ ಈಚೆಗೆ ನಡೆದಿರುವ ಚುನಾವಣೆಯಲ್ಲಿ `ಶಾಸಕರ ಖರೀದಿ~ ನಡೆದಿರುವುದು ಸ್ಪಷ್ಟ. ಅಧಿಕೃತ ಅಭ್ಯರ್ಥಿ  ಸೋತಿರುವ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿರುವುದು ನಿಜ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಇಲ್ಲಿ ಹೇಳಿದರು.

ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಸರಡಗಿ ಅವರಿಗೆ ಹಂಚಿಕೆ ಮಾಡಿದ್ದ ಮತಗಳಲ್ಲೂ ನಾಲ್ಕು ಮತಗಳ ಅಡ್ಡ ಮತದಾನವಾಗಿವೆ ಎಂಬುದು ಆತಂಕದ ವಿಷಯ ಎಂದು ಹೇಳಿದರು.

`ಇದರಲ್ಲಿ ಯಾರ ಲೋಪ ಆಗಿದೆ ಎಂದು ಹೇಳುವುದು ಕಷ್ಟ. ಹೈಕಮಾಂಡ್ ತನಿಖೆ ಮಾಡುವುದಾಗಿ ಹೇಳಿದೆ. ಮೇಲ್ನೋಟದ ಲಭ್ಯ ಅಂಶಗಳನ್ನು ಆಧರಿಸಿ ತಿಳಿಯಬಹುದೇನೋ? ಆದರೆ, ಇಲ್ಲಿ `ಶಾಸಕರ ಖರೀದಿ~ ಆಗಿದೆ ಎಂಬುದು ನಿಜ~ ಎಂದು ಹೇಳಿದರು.

ಅಭ್ಯರ್ಥಿಗಳಿಗೆ ಮತ ಹಂಚಿಕೆ ಮಾಡುವುದರಲ್ಲಿ ಲೋಪ ಇದೆಯಾ ಎಂಬ ಪ್ರಶ್ನೆಗೆ, ಲೋಪ ಇದೆ ಎಂಬುದಕ್ಕಿಂತಲೂ ನಾಲ್ಕನೇ ಅಭ್ಯರ್ಥಿಗೆ ಮತ ನೀಡುವುದಾಗಿ ಪಕ್ಷೇತರ ಅಭ್ಯರ್ಥಿಗಳು ಭರವಸೆ ನೀಡಿರಲಿಲ್ಲ. ಹೀಗಾಗಿ, ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮುನ್ನ ಚಿಂತನೆ ನಡೆಸಬೇಕಿತ್ತು ಎಂದರು.

ತಿಂಗಳ ಅಂತ್ಯಕ್ಕೆ ಕಾಂಗ್ರೆಸ್ ವರದಿ
ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷದ ಶಾಸಕರು ಅಡ್ಡ ಮತದಾನ ನಡೆಸಿರುವ ಕುರಿತು ಆಂತರಿಕ ತನಿಖೆ ನಡೆಸಲು ಕಾಂಗ್ರೆಸ್ ನೇಮಿಸಿರುವ ಐವರು ಸದಸ್ಯರ ಸಮಿತಿ ಇದೇ 30ರೊಳಗೆ ವರದಿ ಸಲ್ಲಿಸಲು ನಿರ್ಧರಿಸಿದೆ.

ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಅಧ್ಯಕ್ಷತೆಯ ಸಮಿತಿ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮೊದಲ ಸಭೆ ನಡೆಸಿತು. ತನಿಖೆಯ ವೇಳಾಪಟ್ಟಿ ಅಂತಿಮಗೊಳಿಸಿತು. ತನಿಖೆಯ ಸ್ವರೂಪವನ್ನೂ ಸಭೆಯಲ್ಲಿ ನಿರ್ಧರಿಸಲಾಗಿದೆ.

`ಸಮಿತಿ ಇನ್ನೂ ಆರು ಬಾರಿ ಸಭೆ ಸೇರಲಿದೆ. ಇದೇ 18 ಮತ್ತು 19ರಂದು ಶಾಸಕಾಂಗ ಪಕ್ಷದ ಕಾರ್ಯದರ್ಶಿ, ನಾಲ್ವರು ಅಭ್ಯರ್ಥಿಗಳು, ಮುಖ್ಯ ಸಚೇತಕರು, ಚುನಾವಣಾ ಏಜೆಂಟರು, ಮತ ಎಣಿಕೆ ಏಜೆಂಟರು ಮತ್ತು ಕೆಪಿಸಿಸಿ ಉಸ್ತುವಾರಿಗಳನ್ನು ವಿಚಾರಣೆಗೆ ಕರೆಯಲಾಗುವುದು. ಶಾಸಕಾಂಗ ಪಕ್ಷದ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರಿಂದಲೂ ವಿವರಣೆ ಪಡೆಯಲಾಗುವುದು~ ಎಂದು ಸುದರ್ಶನ್ ತಿಳಿಸಿದರು.

`ಪರಿಷತ್ ಚುನಾವಣೆಯಲ್ಲಿ ಪದೇ ಪದೇ ತಲೆದೋರುವ ಅಡ್ಡ ಮತದಾನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT