ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಪಲ್ಲಕ್ಕಿ ಉತ್ಸವ ರದ್ದುಗೊಳಿಸಲು ಆಗ್ರಹ

Last Updated 11 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ಸಿಂಧನೂರು: ಅ. 13ರಂದು ವೀರಶೈವ ಯುವ ವೇದಿಕೆ ನಡೆಸಲು ಉದ್ದೇಶಿಸಿರುವ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ರದ್ದುಗೊಳಿಸಲು ಆಗ್ರಹಿಸಿ ಬಸವಕೇಂದ್ರ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತಹಸೀಲ್ದಾರರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.

ಬೆಳಗಿನ 11ಗಂಟೆಗೆ ಬಸವವೃತ್ತದಿಂದ ಆರಂಭವಾದ ಮೆರವಣಿಗೆ ಬಸ್‌ನಿಲ್ದಾಣ ರಸ್ತೆ ಮತ್ತು ಗಾಂಧಿ ವೃತ್ತದ ಮುಖಾಂತರ ತಹಸೀಲ್ದಾರ ಕಚೇರಿಗೆ ತೆರಳಿ ಬಹಿರಂಗ ಸಭೆಯಾಗಿ ಮಾರ್ಪಾಡಾಯಿತು. ಈ ಸಂದರ್ಭದಲ್ಲಿ ಬಸವಕೇಂದ್ರದ ಸಹ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಮಾತನಾಡಿ ವಿವಿಧ ಸಮುದಾಯಗಳು ತಮ್ಮ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಮಠಗಳನ್ನು ಮಾಡಿಕೊಂಡರೆ ಸಮಾಜವನ್ನು ವಿಭಾಗಗಳನ್ನಾಗಿ ಮಾಡಲಾಗುತ್ತಿದೆಯೆಂದು ಆರೋಪಿಸುವ ಪಟ್ಟಭದ್ರ ಹಿತಾಸಕ್ತಿಗಳಿಗೆ, ಮನುಷ್ಯನ ಮೇಲೆ ಮತ್ತೊಬ್ಬ ಮನುಷ್ಯ ಕುಳಿತುಕೊಳ್ಳುವುದು ಅಮಾನವೀಯ ಎಂದು ತಿಳಿಯದಿರುವುದು ದುರದೃಷ್ಟಕರಎಂದು ವಿಷಾದಿಸಿದರು.

ಅಡ್ಡಪಲ್ಲಕ್ಕಿ ಉತ್ಸವದ ಆಚರಣೆ ಮಾನವ ಹಕ್ಕು ಉಲ್ಲಂಘನೆ ಮತ್ತು ಸಂವಿಧಾನದ ವಿರೋಧಿ ಕೃತ್ಯವಾಗಿದೆಯೆಂದು ಸಿ.ಪಿ.ಐ.ಎಂ. ಕಾರ್ಯದರ್ಶಿ ಶೇಕ್ಷಾಖಾದ್ರಿ ಅಭಿಪ್ರಾಯಪಟ್ಟರು. ಬಡವರು ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದೇ ನರಳುತ್ತಿರುವ ಸಂದರ್ಭದಲ್ಲಿ ಪಲ್ಲಕ್ಕಿಯಲ್ಲಿ ಮೆರೆಯುವ ವ್ಯಕ್ತಿಗಳು ಯೋಗಿಗಳಾಗಲಾರರು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ಬಡಿಗೇರ ಕಟುವಾಗಿ ಟೀಕಿಸಿದರು.

ಸಮುದಾಯದ ಎಸ್.ದೇವೇಂದ್ರಗೌಡ, ಮಾನವಿ ಸಿದ್ದಯ್ಯಸ್ವಾಮಿ, ಹಡಪದ ಸಮಾಜದ ಸಂಸ್ಥಾಪಕ ಅಧ್ಯಕ್ಷ ಹೆಚ್.ಜಿ.ಹಂಪಣ್ಣ, ರೈತ ಮುಖಂಡ ಶ್ಯಾಮಸುಂದರ ಕೀರ್ತಿ ಮಾತನಾಡಿದರು.

ಎ.ಐ.ಟಿ.ಯು.ಸಿ. ಮುಖಂಡ ಹನುಮೇಶ ಗಿಣಿವಾರ, ಯುವ ಮುಖಂಡ ಬಸವರಾಜ ಬಾದರ್ಲಿ, ದಲಿತ ಸಂಘರ್ಷ ಸಮಿತಿಯ ಮಂಜುನಾಥ ಸಾಸಲಮರಿ, ರಾಮಣ್ಣ, ಆರ್.ವೈ.ಎಫ್.ನ ಗಂಗಾಧರ ಬುದ್ದಿನ್ನಿ, ನಿಜಗುಣಪ್ಪ, ಯುವ ಬಸವಕೇಂದ್ರದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಮುಖಂಡರಾದ ವೀರಭದ್ರಗೌಡ ಅಮರಾಪುರ, ಶಾಂತಪ್ಪ ಚಿಂಚರಿಕಿ, ನಿವೃತ್ತ ಎಂಜಿನೀಯರ ಗೋವಿಂದರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಉಪ್ಪಲದೊಡ್ಡಿ ಬಸವಲಿಂಗ ಸ್ವಾಮೀಜಿ ತಹಸೀಲ್ದಾರ್ ಕೆ.ನರಸಿಂಹ ಅವರಿಗೆ ಮನವಿ ಸಲ್ಲಿಸಿದರು. ಬಸವಕೇಂದ್ರದ ಅಧ್ಯಕ್ಷ ಶಿವಣ್ಣ ಸಣ್ಣಪ್ಪನವರ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT