ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಾದಿಡ್ಡಿ ಚಲಿಸಿದ ಕಾರು: ನಗರದ ವ್ಯಕ್ತಿ ಸೇರಿ ಇಬ್ಬರ ಸಾವು

Last Updated 20 ಫೆಬ್ರುವರಿ 2012, 20:10 IST
ಅಕ್ಷರ ಗಾತ್ರ

ನವದೆಹಲಿ, (ಐಎಎನ್‌ಎಸ್): ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಕಾರನ್ನು ಸಂತೋಷದ ಸವಾರಿಗೆ ಕೊಂಡೊಯ್ದ ಸೇವಕನೊಬ್ಬ  ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಬೆಂಗಳೂರಿನ ವ್ಯಕ್ತಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ದಕ್ಷಿಣ ದಿಲ್ಲಿಯಲ್ಲಿ ವರದಿಯಾಗಿದೆ.

ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿ ಕಾರ್ತಿಕ್ ಪಾಂಡೆ ಅವರ ಕಾರನ್ನು ಶುಚಿಗೊಳಿಸಲೆಂದು ಕೀ ಪಡೆದ ಮನೀಶ್ (19) ಎಂಬಾತ ತನ್ನ ಮೂವರು ಗೆಳೆಯರ ಒತ್ತಾಯದ ಮೇರೆಗೆ ಕಾರನ್ನು ರಸ್ತೆಗೆ ಇಳಿಸಿದ. ಆಕಸ್ಮಿಕವಾಗಿ 100 ಕಿ. ಮೀ. ವೇಗದಲ್ಲಿ ಓಡಲು ಆರಂಭಿಸಿದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿತು. ನಂತರ ಗುಲ್‌ಮೊಹರ್ ಪಾರ್ಕ್ ಬಳಿ ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಇಬ್ಬರಿಗೆ ಗುದ್ದಿದ ಬಳಿಕ ಮರವೊಂದಕ್ಕೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರನ್ನು ಸುಲ್ತಾನ್ ಸಿಂಗ್ (50) ಮತ್ತು ಬೆಂಗಳೂರಿನ ರಘು ವರ್ಮ ರಾಜ ಎಂದು ಗುರುತಿಸಲಾಗಿದೆ. ಸುಲ್ತಾನ್ ಸಿಂಗ್ ಅವರ ಪುತ್ರಿಯ ವಿವಾಹ ನಿಶ್ಚಿತಾರ್ಥಕ್ಕೆಂದು ರಘು ವರ್ಮ ರಾಜ ಅವರು ದೆಹಲಿಗೆ ಆಗಮಿಸಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಇವರನ್ನು ಕೂಡಲೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾದರೂ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ಅಪಘಾತ ನಡೆದೊಡನೆ ಅಲ್ಲಿಂದ ಕಾಲ್ಕಿತ್ತ ಮನೀಶ್, ಕಾರಿನ ಕೀಯನ್ನು ಅಧಿಕಾರಿ ಮನೆಗೆ ತಲುಪಿಸಿದರೂ ಅಪಘಾತ ಕುರಿತು ಅವರಿಗೆ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೀಶ್‌ನನ್ನು ಆತನ ಮನೆಯಲ್ಲಿ ಬಂಧಿಸಲಾಗಿದ್ದು, ಆತನ ಸ್ನೇಹಿತರನ್ನು ಬಿಡುಗಡೆಗೊಳಿಸಲಾಗಿದೆ. ಕಾರ್ತಿಕ್ ಪಾಂಡೆ ಅವರ ಪತ್ನಿ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT