ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಾದಿಡ್ಡಿ ಪಾರ್ಕಿಂಗ್‌: ತಪ್ಪದ ಕಿರಿಕಿರಿ

Last Updated 9 ಡಿಸೆಂಬರ್ 2013, 5:29 IST
ಅಕ್ಷರ ಗಾತ್ರ

ಗದಗ: ನಗರದ ಪ್ರಮುಖ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.

ಕಾಮತ್‌ ಹೋಟೆಲ್‌, ಟಾಂಗಾ ಕೂಟ, ಮಾರುಕಟ್ಟೆ ಮುಂಭಾಗ, ಸ್ಟೇಷನ್‌ ರಸ್ತೆ , ತಹಶೀಲ್ದಾರ್‌ ಕಚೇರಿ ಎದುರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದಾಗಿ ಸವಾರರು ವಾಹನಗಳ ಪಾರ್ಕಿಂಗ್‌ಗೆ ಪ್ರಯಾಸ ಪಡಬೇಕು. ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸಮಸ್ಯೆ ಒಂದೆಡೆಯಾದರೆ ಕಾರು ಮಾಲೀಕರ ಸಮಸ್ಯೆ­ಯಂತು ಹೇಳ ತೀರದು. ಕಾರು ಪಾರ್ಕಿಂಗ್‌ ಮಾಡೋದೆ ದೊಡ್ಡ ಸಮಸ್ಯೆ.

ಪ್ರಮುಖವಾಗಿ ತಹಶೀಲ್ದಾರ ಕಚೇರಿಗೆ ಪ್ರತಿದಿನ ನೂರಾರು ಜನ ಆಗಮಿಸುತ್ತಾರೆ. ವಾಹನ ನಿಲ್ಲಿಸಲು ಸೂಕ್ತ ಸ್ಥಳ ಇಲ್ಲದೆ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಸಹ ಕೇಳಿ ಬಂದಿದೆ.

ತಾಲ್ಲೂಕು ಕಚೇರಿಗೆ ವಿವಿಧ ಕೆಲಸದ ಮೇಲೆ ಗ್ರಾಮಗಳ ಜನರು ಬರುತ್ತಾರೆ. ಅಟಲ್‌ ಜನಸಂಪರ್ಕ ಕೇಂದ್ರ, ಪಹಣಿ ಪತ್ರ, ವೃದ್ಧಾಪ್ಯ ವೇತನ, ಜಾತಿ, ಆದಾಯ ಮತ್ತು ವಾಸಸ್ಥಾನ ದೃಢೀಕರಣ ಪತ್ರ ಸೇರಿದಂತೆ ವಿವಿಧ
ಕೆಲಸಕ್ಕೆ ಬರುವವರು  ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಇಲ್ಲದೆ ಕಚೇರಿ ಮುಂದೆಯೇ ನಿಲ್ಲಿಸುತ್ತಾರೆ.

ರೋಣ, ಗಜೇಂದ್ರಗಡ ರಸ್ತೆ ಮಾರ್ಗದಲ್ಲಿ ಕಚೇರಿ ಇರುವುದರಿಂದ ಕಚೇರಿ ಆವರಣದಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸ­ಲಾಗಿದೆ. ವಾಹನ ನಿಲುಗಡೆ ಮಾಡಿದರೆ  ದಂಡ ವಿಧಿಸಲಾಗುವುದು ಎಂಬ ಫಲಕ ಅಳವಡಿಸ­ಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸವಾರರು ಅನ್ಯ ಮಾರ್ಗ ಇಲ್ಲದೆ ಕಚೇರಿ ಎದುರೇ ವಾಹನ ನಿಲುಗಡೆ ಮಾಡು­ತ್ತಿದ್ದಾರೆ. ಇದರಿಂದಾಗಿ  ಪಾದಚಾರಿಗಳು ಹಾಗೂ ವಾಹನಗಳಿಗೆ ಕಿರಿಕಿರಿ ಆಗುತ್ತಿದೆ. ಅಷ್ಟೇ ಅಲ್ಲದೇ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಾಗುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುತ್ತದೆ.

ಇನ್ನೂ ಮಾರುಕಟ್ಟೆ ರಸ್ತೆಯಲ್ಲಿ ರಾಜ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಸ್ಥಳವೇ ಇಲ್ಲ.  ಮಾರು­ಕಟ್ಟೆ ಪಕ್ಕದ ರಸ್ತೆಗಳಲ್ಲಿ ವಾಹನ ನಿಲ್ಲಿಸಿ ವಸ್ತುಗಳನ್ನು ಖರೀದಿಸಲು ಬರಬೇಕು.  ಮಾರು­ಕಟ್ಟೆಗೆ ಸುತ್ತಮುತ್ತಲಿನ ಗ್ರಾಮದ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಬರು­ವುದ­ರಿಂದ ಸಹಜವಾಗಿ ಟ್ರಾಫಿಕ್‌ ಜಾಮ್‌ ಆಗು­ತ್ತದೆ. ಅಂಗಡಿಗಳ ಮುಂದೆ ವಾಹನ ನಿಲುಗಡೆ ಮಾಡುವುದರಿಂದ ಮಾಲೀಕರಿಗೂ ಕಿರಿಕಿರಿ ಉಂಟಾ­ಗುತ್ತಿದೆ.

ಹಾಗೆಯೇ ಕಾಮತ್‌ ಹೋಟೆಲ್‌ ರಸ್ತೆಯಲ್ಲೂ  ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿ ತೊಂದರೆ­­ ಆಗಿದೆ.
‘ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಅಂಗಡಿಗಳಿಗೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಾರೆ.

ಪೊಲೀಸರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದೆ. ಕೂಡಲೇ ಅಧಿಕಾರಿಗಳು ಎಚ್ಚೇತ್ತುಕೊಂಡು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅಂಗಡಿ ಮಾಲೀಕ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT