ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ಕೈಯಲ್ಲಿ ಭವಿಷ್ಯ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಸಚಿವ ಸ್ಥಾನಕ್ಕೆ ಸಾಮೂಹಿಕವಾಗಿ ನೀಡಿದ್ದ ರಾಜೀನಾಮೆಯನ್ನು ಬಿ.ಎಸ್.ಯಡಿಯೂರಪ್ಪ ಬಣದ ಒಂಬತ್ತೂ ಮಂದಿ ಸೋಮವಾರ ಬೆಳಿಗ್ಗೆ ಹಿಂದಕ್ಕೆ ಪಡೆಯುತ್ತಿದ್ದಂತೆ,  ಕಮಲ ಪಾಳೆಯದ `ಬಣ ರಾಜಕೀಯ~ ದೆಹಲಿಗೆ ಸ್ಥಳಾಂತರಗೊಂಡಿತು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಭವಿಷ್ಯ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ತೀರ್ಮಾನದ ಮೇಲೆ ನಿಂತಿದೆ.

ಯಡಿಯೂರಪ್ಪ ಅವರನ್ನು ಪಟ್ಟು ಹಿಡಿದು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಅಡ್ವಾಣಿ, ಸದಾನಂದ ಗೌಡರ ಪರ ನಿಲ್ಲಬಹುದೆಂಬ ಸಣ್ಣ ಆತಂಕ ಭಿನ್ನಮತೀಯರಲ್ಲಿದೆ. ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರಾದ ಅಡ್ವಾಣಿ ತಮ್ಮ ನೆರವಿಗೆ ಬರಬಹುದೆಂಬ ನಿರೀಕ್ಷೆ ಮುಖ್ಯಮಂತ್ರಿ ಬಣದಲ್ಲಿದೆ.

 

ರಾಜೀನಾಮೆ ಹಿಂದಕ್ಕೆ ಪಡೆದವರು
ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ,  ಉಮೇಶ ವಿ.ಕತ್ತಿ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ರೇವುನಾಯಕ ಬೆಳಮಗಿ, ರಾಜುಗೌಡ.

`ಪಕ್ಷದ ತೀರ್ಮಾನಕ್ಕೆ ಬದ್ಧ~
 ತಮ್ಮ `ತಲೆದಂಡ~ಕ್ಕಾಗಿ ಯಡಿಯೂರಪ್ಪ ಬಣ ಕಾದು ಕುಳಿತಿರುವಾಗಲೇ, ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗುವುದಾಗಿ ಮುಖ್ಯಮಂತ್ರಿ ಸದಾನಂದಗೌಡರು ಹೇಳಿದ್ದಾರೆ.

`ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ವರಿಷ್ಠರು ಕೈಗೊಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳುವೆ~ ಎಂದು ಸದಾನಂದಗೌಡರು ಸೋಮವಾರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

`ನನ್ನ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ನೀಡಿದ್ದ ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪ ಬಣದ ಒಂಬತ್ತು ಸಚಿವರು ಹಿಂದಕ್ಕೆ ಪಡೆದಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ~ ಎಂದು ಮುಖ್ಯಮಂತ್ರಿ ನುಡಿದರು.

ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಭಿನ್ನರ ಬಣದಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಯಡಿಯೂರಪ್ಪ ಬಣದ ಹಲವು ಸಚಿವರು ರಾಜಧಾನಿಗೆ ಧಾವಿಸಿದ್ದಾರೆ. ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಸೋಮವಾರ ಸಂಜೆ ಪಂಚತಾರಾ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರನ ಮದುವೆ ಆರತಕ್ಷತೆ ಸಮಾರಂಭದಲ್ಲಿ ಪಕ್ಷದ ರಾಜ್ಯ ಮುಖಂಡರು ಪಾಲ್ಗೊಂಡರು. ಇದಕ್ಕೂ ಮುನ್ನ ರಾಷ್ಟ್ರಪತಿ ಚುನಾವಣೆ ಸಂಬಂಧ ಅಡ್ವಾಣಿ ಕರೆದಿದ್ದ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಸದಾನಂದಗೌಡರು ಭಾಗವಹಿಸಿದ್ದರು. ಇದೇ ಸಮಯ ಬಳಸಿಕೊಂಡು ಮುಖ್ಯಮಂತ್ರಿ ಎಲ್ಲ ಬೆಳವಣಿಗೆಯನ್ನು ಪ್ರತ್ಯೇಕವಾಗಿ ವಿವರಿಸಿದರು. ಮಾತುಕತೆ ವಿವರಗಳನ್ನು ಬಹಿರಂಗಪಡಿಸಲು ಮುಖ್ಯಮಂತ್ರಿ ನಿರಾಕರಿಸಿದರು.

ಮಂಗಳವಾರ ಗಡ್ಕರಿ, ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್ ಮತ್ತಿತರ ಮುಖಂಡರು ಬಿಜೆಪಿ ಬಿಕ್ಕಟ್ಟು ಕುರಿತು ಉಭಯ ಬಣಗಳ ನಾಯಕರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಈ ಚರ್ಚೆಗೆ ವೇದಿಕೆ ಸಿದ್ಧಪಡಿಸುವ ಉದ್ದೇಶದಿಂದ ಸಚಿವರು ತಮ್ಮ ರಾಜೀನಾಮೆ ಪತ್ರಗಳನ್ನು ಬೇಷರತ್ತಾಗಿ ಹಿಂದಕ್ಕೆ ಪಡೆದಿದ್ದಾರೆ. ಎಲ್ಲ ಬಣಗಳ ಅಭಿಪ್ರಾಯ ಪಡೆದ ಬಳಿಕ ವರಿಷ್ಠರು ಸಭೆ ಸೇರಿ ಸೂಕ್ತ ತೀರ್ಮಾನ ಮಾಡುವರೆಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ನಾಯಕತ್ವ ಬದಲಾವಣೆಗೆ ಗಡ್ಕರಿ ಮತ್ತು ಜೇಟ್ಲಿ ಒಲವು ತೋರಿದ್ದಾರೆ. ಆದರೆ, ಅಡ್ವಾಣಿ ವಿರೋಧ ಮಾಡುತ್ತಿದ್ದಾರೆ. ಶೆಟ್ಟರ್ ಪರ ಯಡಿಯೂರಪ್ಪ ನಿಂತಿರುವುದು ಅಡ್ವಾಣಿ ವಿರೋಧಕ್ಕೆ ಕಾರಣ. ಇದರ ಹಿಂದೆ ರಾಜ್ಯದವರೇ ಆಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಪಾತ್ರವೂ ಇದೆ ಎಂದು ಮೂಲಗಳು ಹೇಳಿವೆ.

 ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಏನೇ ತೀರ್ಮಾನ ಕೈಗೊಂಡರೂ ಅಡ್ವಾಣಿ ಒಪ್ಪಿಗೆ ಪಡೆಯುವ ಅಗತ್ಯವಿದೆ. ಅವರನ್ನು ಬದಿಗಿಟ್ಟು ತೀರ್ಮಾನ ಮಾಡುವ ಧೈರ್ಯ ಗಡ್ಕರಿ ಅವರಿಗೆ ಇಲ್ಲ. ಕರ್ನಾಟಕದ ಬಿಜೆಪಿಯಲ್ಲಿ ಮೇಲಿಂದ ಮೇಲೆ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವುದರಿಂದ ಅಡ್ವಾಣಿ ಅಸಮಾಧಾನಗೊಂಡಿದ್ದಾರೆ. ಪಕ್ಷದ ವರಿಷ್ಠರನ್ನು `ಬ್ಲಾಕ್‌ಮೇಲ್~ ಮಾಡುವ ನಾಯಕರಿಗೆ ಸೊಪ್ಪು ಹಾಕುವುದು ಬೇಡ. ಸರ್ಕಾರ ಹೋದರೂ ಪರವಾಗಿಲ್ಲ.

ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂಬ ನಿಲುವನ್ನು ಅಡ್ವಾಣಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
`ಲಿಂಗಾಯತ ಸಮುದಾಯ ಬಿಜೆಪಿಯ ಶಕ್ತಿ. ಯಡಿಯೂರಪ್ಪ ಈ ಸಮುದಾಯದ ಪ್ರಭಾವಿ ನಾಯಕ. ಅವರನ್ನು ಬಿಟ್ಟು ಚುನಾವಣೆಗೆ ಹೋದರೆ ಕಷ್ಟ. ಗೌಡರ ನಾಯಕತ್ವದಲ್ಲಿ ಚುನಾವಣೆ ನಡೆದರೆ ಪಕ್ಷ ಗೆಲ್ಲುವುದು ಕಷ್ಟ.

ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಅಡ್ವಾಣಿ ಮನವೊಲಿಸಬೇಕು~ ಎಂಬ  ನಿಲುವನ್ನು ಗಡ್ಕರಿ, ಜೇಟ್ಲಿ ಹೊಂದಿದ್ದಾರೆ. ಮಂಗಳವಾರದ ಸಭೆ ಬಳಿಕ ಹಿರಿಯ ಮುಖಂಡರೊಬ್ಬರು ಅಡ್ವಾಣಿ ಅವರನ್ನು ಭೇಟಿ ಮಾಡಿ ಮನವೊಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಕರ್ನಾಟಕ ಭವನ ಸೋಮವಾರ ಮಧ್ಯಾಹ್ನದಿಂದ ರಾಜಕೀಯ ಚಟುವಟಿಕೆ ಕೇಂದ್ರವಾಗಿದೆ.

ಮುಖ್ಯಮಂತ್ರಿ ನಾಲ್ಕನೇ ಮಹಡಿಯ ಮುಖ್ಯಮಂತ್ರಿ ಸೂಟ್‌ನಲ್ಲಿದ್ದಾರೆ. ಶೆಟ್ಟರ್ ಮತ್ತಿತರ ಸಚಿವರು ಮೂರನೇ ಮಹಡಿಯಲ್ಲಿದ್ದಾರೆ. ಹೈಕಮಾಂಡ್ ಅಂಗಳದಲ್ಲಿರುವ ತಮ್ಮ ರಾಜಕೀಯ ಭವಿಷ್ಯ ಏನಾಗುವುದೋ ಎಂಬ ಆತಂಕ ಎರಡೂ ಬಣದ ಮುಖಂಡರಲ್ಲಿದೆ. ಹೈಕಮಾಂಡ್‌ನಿಂದ ತಮಗೆ ಸಕಾರಾತ್ಮಕ ಸುಳಿವು ಸಿಕ್ಕಿದೆ ಎಂದು ಯಡಿಯೂರಪ್ಪ ಬಣ ಹೇಳಿಕೊಂಡಿದೆ.

ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ನೀಡಿರುವ ತಮ್ಮನ್ನೇ ಅಧಿಕಾರದಲ್ಲಿ ಮುಂದುವರಿಸುವ ವಿಶ್ವಾಸವಿದೆ ಎಂದಿದ್ದಾರೆ ಮುಖ್ಯಮಂತ್ರಿ. ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ, ಆನಂದ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ ಮುಂತಾದ ಸಚಿವರು ದೆಹಲಿಗೆ ಬಂದಿಳಿದಿದ್ದಾರೆ.

ಹೈಕಮಾಂಡ್ ಮೇಲೆ ವಿಶ್ವಾಸ: ರಾಜೀನಾಮೆ ಪತ್ರ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ ಬಳಿಕ ಬೆಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಚಿವರಾದ ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ, `ನಾಯಕತ್ವ ಬದಲಾವಣೆ ಕುರಿತು ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟು ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇವೆ~ ಎಂದು ಹೇಳಿದರು.

ಜೇಟ್ಲಿ ಕರೆ: ಜೇಟ್ಲಿ ಸೋಮವಾರ ಬೆಳಿಗ್ಗೆ ದೂರವಾಣಿ ಮೂಲಕ ಯಡಿಯೂರಪ್ಪ ಜತೆ ಮಾತನಾಡಿದರು. ಬೇಡಿಕೆ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು. `ರಾಜೀನಾಮೆ ಹಿಂದಕ್ಕೆ ಪಡೆಯದೆ ಬಿಕ್ಕಟ್ಟು ಪರಿಹರಿಸಲು ಸಾಧ್ಯ ಇಲ್ಲ. ಮೊದಲು ರಾಜೀನಾಮೆ ಹಿಂದಕ್ಕೆ ಪಡೆಯಿರಿ. ಬಳಿಕ ಮಾತುಕತೆಗೆ ದೆಹಲಿಗೆ ಬನ್ನಿ~ ಎಂದು ಸೂಚಿಸಿದರು. ಜೇಟ್ಲಿ ಮಾತು ಈ ಬಣದ ವಿಶ್ವಾಸ ಕುದುರಿಸಿದೆ. `ರಾಜೀನಾಮೆ ಹಿಂದಕ್ಕೆ ಪಡೆಯಲು ಅವರು ನೀಡಿದ ಆಶ್ವಾಸನೆಯೇ ಪ್ರಧಾನ ಕಾರಣ~ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಕಚೇರಿಯಲ್ಲಿ ಸಭೆ: ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ತಡರಾತ್ರಿ ನಡೆದ ಸಭೆ ಯಡಿಯೂರಪ್ಪ ಬಣದ ಮನವೊಲಿಕೆಗೆ ವೇದಿಕೆಯಾಯಿತು. ಈಶ್ವರಪ್ಪ, ಸದಾನಂದ ಗೌಡ, ಶೆಟ್ಟರ್ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಭೆಯಲ್ಲಿ ಭಾಗವಹಿಸಿದ್ದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕುರಿತು ಇವರು ಸಮಾಲೋಚನೆ ನಡೆಸಿದರು. `ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು~ ಎನ್ನುವ ಒಂದು ಸಾಲಿನ ನಿರ್ಣಯವನ್ನೂ ತೆಗೆದುಕೊಂಡರುಎನ್ನಲಾಗಿದೆ.

`ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದ ಮೇಲೆ ಒತ್ತಡ ಹೇರಿದ್ದು ಸರಿಯಲ್ಲ~ ಎಂಬುದನ್ನು ಶೆಟ್ಟರ್ ಅವರಿಗೆ ಪಕ್ಷದ ಮುಖಂಡರು ಮನವರಿಕೆ ಮಾಡಿಕೊಟ್ಟರು. ಆದರೆ, ರಾಜೀನಾಮೆ ಹಿಂದಕ್ಕೆ ಪಡೆಯುವ ವಿಚಾರದಲ್ಲಿ ತಕ್ಷಣ ತೀರ್ಮಾನ ತಿಳಿಸಲು ಶೆಟ್ಟರ್ ಹಿಂದೇಟು ಹಾಕಿದರು.

ಯಡಿಯೂರಪ್ಪ ಹಾಗೂ ತಮ್ಮ ಬಣದ ಇತರೆ ಸಚಿವರ ಜೊತೆ ಚರ್ಚಿಸಿದ ಬಳಿಕ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ ಅವರು, ಇದಕ್ಕಾಗಿ ಸಮಯ ಕೋರಿದರು. ಸೋಮವಾರ ಬೆಳಿಗ್ಗೆ ಯಡಿಯೂರಪ್ಪ ನಿವಾಸದಲ್ಲಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದರು. ರಾಜೀನಾಮೆ ಹಿಂದಕ್ಕೆ ಪಡೆಯಲು ಸಚಿವರು ಒಪ್ಪಿಗೆ ಸೂಚಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT