ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ಯಾತ್ರೆ: ಪ್ರಚಾರಕ್ಕೆ ಮಿನಿ ರಥಗಳು

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ `ಜನ ಚೇತನ ಯಾತ್ರೆ~ಯ ಕುರಿತು ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಐದು ಮಿನಿ ರಥಗಳಿಗೆ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಪಕ್ಷದ ಕಚೇರಿ `ಜಗನ್ನಾಥ ಭವನ~ದಲ್ಲಿ ಚಾಲನೆ ಪಡೆದುಕೊಂಡ ಈ ರಥಗಳು ಯುವ ಮೋರ್ಚಾ ಮುಖಂಡರ ನೇತೃತ್ವದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರಗಳ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಲಿವೆ. ಶುಕ್ರವಾರ ಮತ್ತು ಶನಿವಾರ ಸಂಚಾರ ಕೈಗೊಳ್ಳಲಿರುವ ರಥಗಳು ಜನ ಚೇತನ ಯಾತ್ರೆಯ ಬೆಂಗಳೂರು ಸಮಾವೇಶದ ಕುರಿತು ಪ್ರಚಾರ ನಡೆಸಲಿವೆ.

ಜನ ಕಲ್ಯಾಣ ರಥ, ಜನ ವಿಶ್ವಾಸ ರಥ, ಜನ ಜಾಗೃತಿ ರಥ, ಜನ ಪ್ರೇರಣಾ ರಥ ಮತ್ತು ಜನ ಶಕ್ತಿ ರಥ ಎಂದು ಇವುಗಳಿಗೆ ಹೆಸರಿಡಲಾಗಿದೆ.

ಜಯಗಳಿಸುವ ವಿಶ್ವಾಸ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾತ್ರೆಯ ಬೆಂಗಳೂರು ಉಸ್ತುವಾರಿ, ಸಂಸದ ಪ್ರಹ್ಲಾದ ಜೋಷಿ, `ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್. ಅಶೋಕ ಅವರು ಕಾನೂನು ಸಮರದಲ್ಲಿ ಜಯಗಳಿಸುವ ವಿಶ್ವಾಸ ಇದೆ~ ಎಂದರು.

`ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಖಾಸಗಿ ದೂರು ದಾಖಲಿಸುವ ಪರಿಪಾಠ ರಾಜ್ಯದಲ್ಲಿ ಆರಂಭವಾಗಿದೆ. ಕೆಲವರ ವಿರುದ್ಧದ ಸಾಕ್ಷಿಗಳಲ್ಲಿ ಹುರುಳಿಲ್ಲದಿದ್ದರೂ ಖಾಸಗಿ ದೂರುಗಳು ದಾಖಲಾಗುತ್ತಿವೆ~ ಎಂದರು.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇಲ್ಲದೆ ಎಂಟು ವರ್ಷಗಳಾಗುತ್ತ ಬಂದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರ ವಿರುದ್ಧ ಕೇಳಿಬಂದ ಹುಡ್ಕೋ ಹಗರಣದ ಆರೋಪದಲ್ಲಿ ಆಧಾರ ಇದ್ದಿದ್ದರೆ ಯುಪಿಎ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ಅನಂತ ಕುಮಾರ್ ವಿರುದ್ಧದ ಆರೋಪವೇ ಆಧಾರ ರಹಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಪ್ರತಿಕ್ರಿಯೆ ಇಲ್ಲ~: `ಲೋಕಾಯುಕ್ತ ಸ್ಥಾನಕ್ಕೆ ಸರ್ಕಾರ ಶಿಫಾರಸು ಮಾಡಿರುವ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರೂ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಈ ವಿಚಾರದಲ್ಲಿ ಸತ್ಯಾಸತ್ಯತೆ ಏನೆಂಬುದು ನನಗೆ ಗೊತ್ತಿಲ್ಲ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಈಶ್ವರಪ್ಪ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT