ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಬೆಯ ಅದ್ಭುತ ಲೋಕ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಈ ಬಾರಿ ಮಳೆರಾಯನ ಆಗಮನವೇ ತಡ. ಹಾಗಾಗಿ ಅಂದ ಚೆಂದದ ಅಣಬೆಗಳು ಕಾಣಿಸಿಕೊಂಡಿದ್ದು ತಡವಾಗಿಯೇ. ಈ ಮಳೆಯೆಂಬ ಜಾದೂಗಾರನಿಗೆ ಕಾದು ಕುಳಿತ ಕಿನ್ನರಿಯರಂತೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಣಬೆಗಳು ಮೂಡಿರುತ್ತವೆ.

ಕಾಫಿ ತೋಟಗಳಲ್ಲಂತೂ ಅಣಬೆಗಳ ಮಾಯಾಲೋಕ ಸೃಷ್ಟಿಯಾಗಿರುತ್ತದೆ. ಅತ್ತಿ, ಸಂಪಿಗೆ, ಹಲಸಿನ ಮರದ ಕೆಳಗೆ ಮಲ್ಲಿಗೆ ಹೂವರಳಿದಂತೆ, ಇನ್ನೂ ಕೆಲವೆಡೆ ಯಾರೋ ಪೋಣಿಸಿಟ್ಟ ಬಿಳಿ ಮುತ್ತುಗಳಂತೆ ಅಣಬೆಗಳ ರಾಶಿ ಹರಡಿಕೊಂಡಿರುತ್ತದೆ.

ಮುರಿದು ಬಿದ್ದ ಒಣ ಮರದ ಕೊಂಬೆಗಳಲ್ಲಿ ಸಾಲುಸಾಲಾಗಿರುವ ವರ್ಣರಂಜಿತ ಅಣಬೆಗಳು ವಾರಗಟ್ಟಲೆ ನಳನಳಿಸುತ್ತವೆ. ಮರದ ಪೊಟರೆಗಳಲ್ಲಿ ಮುದ್ದು ಮಗು ಕದ್ದು ನೋಡುವಂತೆ ಕೆಲವಿದ್ದರೆ, ಇನ್ನೂ ಕೆಲವು ಯಾರೋ ಬಿಡಿಸಿಟ್ಟ ಛತ್ರಿಗಳಂತೆ ಭಾಸವಾಗುತ್ತವೆ.
 
ಕೊಳೆತ ಎಲೆ, ಸಗಣಿ, ಮರದ ತುಂಡು, ತೇವಾಂಶವಿರುವ ಕೆಲ ಜಾಗಗಳಲ್ಲಿ ಇದ್ದಕ್ಕಿದ್ದಂತೆ ಬೆಡಗಿನಿಂದ ಅಣಬೆಗಳು ಸೃಷ್ಟಿಯಾಗುವ ಪರಿಯೇ ಅಚ್ಚರಿಯೆನಿಸುತ್ತದೆ.

  ಮಳೆಗಾಲದ ಆರಂಭದಲ್ಲಿ ಸಿಗುವ ಅಣಬೆಗಳನ್ನು ಕೆಲವರು ಅಡುಗೆ ಮಾಡಿ ತಿನ್ನುತ್ತಾರೆ. ತೇವದ ಮಣ್ಣಿನಲ್ಲಿ ಕೊಳೆತ ಎಲೆಗಳ ಮೇಲೆ ಮಲ್ಲಿಗೆ ಮೊಗ್ಗಿನಂತೆ ಕಾಣುವ ಈ ಅಣಬೆಗಳನ್ನು `ಬೇರಣಬೆ, ಗುಡುಗಣಬೆ, ಬರ್ಕಾಟಿ, ಕುಕ್ಕಡಿ, ಹಂದಿ ಅಣಬೆ~ ಎಂದೆಲ್ಲಾ ಹೆಸರಿನಿಂದ ಕರೆಯುತ್ತಾರೆ.

ಅಣಬೆಗಳು ಶಿಲೀಂಧ್ರದ ಗುಂಪಿಗೆ ಸೇರುತ್ತವೆ. ಇವುಗಳಲ್ಲಿ ಪತ್ರ ಹರಿತ್ತಿಲ್ಲದ ಕಾರಣ ಆಹಾರ ತಯಾರಿಸಿಕೊಳ್ಳಲಾರವು. ಅಣಬೆಗಳನ್ನು ಕಿತ್ತಾಗ ಕಾಣುವ ಬಿಳಿ ದಂಟನ್ನು ಸ್ಟೈಫ್ ಎನ್ನುತ್ತಾರೆ. ಇದು ಈ ಸಸ್ಯದ ಮುಖ್ಯ ಭಾಗ. ಭೂಮಿಯ ಮೇಲ್ಭಾಗದಲ್ಲಿ ಛತ್ರಿಯಂತೆ ಬೆಳೆಯುವುದೆ ಸಸ್ಯದ ಫಲಕಾಯ. ಕೊಡೆ ಆಕಾರದ ಕೆಳಭಾಗದಲ್ಲಿ ಇರುವ ಪದರದಂಥ ನವಿರಾದ ರಚನೆಗಳೇ ಕಿವಿರುಗಳು.

ಆಕಾರದ ಆಧಾರದ ಮೇಲೆ ಅವಲಂಬಿಸಿ ಇವುಗಳನ್ನು ವರ್ಗೀಕರಿಸಲಾಗಿದೆ. ರಂಗುರಂಗಿನ ಅಮನಿಟ ಸಿಸೇರಿಯ, ಮೊಗ್ಗಿನಂತಿರುವ ಪಫ್ ಬಾಲ್, ಅರಳಿದ ಹೂವಿನಂಥ ಚಾನ್ಟೇರೆಲ್ಲ, ಹಕ್ಕಿ ಗೂಡಿನಂಥ ಬರ್ಡ್ಸ್‌ನೆಸ್ಟ್, ಕೆಂಪಗಿನ ಚಿಕನ್ ಇನ್ ವುಡ್, ರಾತ್ರಿ ಮಿನುಗುವ ವಿಷಪೂರಿತ ಜಾಕೊಲ್ಯಾಂಡ್ರಿನ್, ಬಿಳಿ ಬಟನ್, ಆಯಿಸ್ಟರ್, ಲೂಕೋಪ್ರಿನ್ಸ್. ಪೋರಿಫೆರ‌್ರ, ಜೈಂಗಾಟಿಕ ಹೀಗೆ ಅನೇಕ ಹೆಸರುಗಳಿವೆ.

ಸಂಶೋಧನೆಗಳ ಪ್ರಕಾರ ಅಣಬೆಗಳಲ್ಲಿ ವಿಟಮಿನ್ ಡಿ, ವಿಟಮಿನ್ ಸಿ, ಪ್ರೋಟೀನ್, ಕ್ಯಾಲ್ಷಿಯಂ, ಅಪಾಯಕಾರಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶ ಇದೆ. ಹತ್ತು ಸಾವಿರ ವಿಧದ ಅಣಬೆಗಳಿದ್ದು ಅದರಲ್ಲಿ ಶೇ 10ರಷ್ಟು ಮಾತ್ರ ವಿಷಕಾರಿ. ಜಪಾನ್, ಕೊರಿಯ, ಚೀನಾಗಳಲ್ಲಿ ಮೈಗ್ರೇನ್ (ಅರೆ ತಲೆನೋವು), ಹೃದಯ ಸಂಬಂಧಿ ತೊಂದರೆಗಳಿಗೆ, ನಂಜು ತಡೆಗಟ್ಟಲು ಅಣಬೆಗಳನ್ನು ಬೆಳೆಸಿ ಬಳಸುತ್ತಾರೆ.

ಹ್ಯಾಲ್ಲುಸಿನೋಜೆನಿಕ್ ಎಂಬ ಅಣಬೆಯನ್ನು ಮಾದಕ ವಸ್ತು ತಯಾರಿಕೆಯಲ್ಲಿ ಬಳಸುತ್ತಾರಂತೆ. ಒಟ್ಟಾರೆ ಚಿತ್ತಾಕರ್ಷಕ ಅಣಬೆಗಳನ್ನು ನೋಡುವುದೇ ಒಂದು ಸೊಗಸಾದ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT