ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣು ಶಕ್ತಿ ಪ್ರದರ್ಶನ: ಅಮೆರಿಕಕ್ಕೆ ಇರಾನ್ ಸೆಡ್ಡು

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಟೆಹರಾನ್ (ಎಪಿ): ಪರಮಾಣು ಕಾರ್ಯಕ್ರಮಗಳಿಗೆ ಪಾಶ್ಚಾತ್ಯ ದೇಶಗಳ ವಿರೋಧದ ಹೊರತಾಗಿಯೂ ಇರಾನ್ ಇದೇ ಮೊದಲ ಬಾರಿಗೆ ದೇಶೀಯವಾಗಿ ನಿರ್ಮಿಸಿರುವ ಪರಮಾಣು ಇಂಧನದ ಸರಳುಗಳನ್ನು ಸಂಶೋಧನಾ ಸ್ಥಾವರಗಳಿಗೆ ಭರ್ತಿ ಮಾಡುವ ಕಾರ್ಯವನ್ನು ಬುಧವಾರ ಆರಂಭಿಸಿದೆ.

ಟೆಹರಾನ್‌ನ ಉತ್ತರ ಭಾಗದಲ್ಲಿರುವ ಸ್ಥಾವರಕ್ಕೆ ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಈ ಸಲಾಕೆಯನ್ನು ಅಳವಡಿಸಿದರು ಎಂದು ಐಆರ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಕಾರ್ಯಕ್ರಮವನ್ನು ಸರ್ಕಾರಿ ವಾಹಿನಿಯೊಂದು ನೇರ ಪ್ರಸಾರ ಕೂಡ ಮಾಡಿದೆ. ಪರಮಾಣು ತಜ್ಞರು ಅಧ್ಯಕ್ಷರಿಗೆ ಸ್ಥಾವರಗಳು ಕಾರ್ಯನಿರ್ವಹಿಸುವ ವಿಧಾನವನ್ನು ವಿವರಿಸುತ್ತಿದ್ದ ದೃಶ್ಯ ಕೂಡ ಬಿತ್ತರಗೊಂಡಿದೆ. ಕಾರ್ಯಕ್ರಮದ ನಂತರ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರಾಷ್ಟ್ರದ ಪರಮಾಣು ಸಾಧನೆ ಕುರಿತ ಇತ್ತೀಚಿನ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ ನೆದರ್‌ಲೆಂಡ್ಸ್, ಸ್ಪೇನ್ , ಇಟಲಿ, ಫ್ರಾನ್ಸ್, ಗ್ರೀಸ್, ಪೋರ್ಚುಗಲ್‌ಗಳಿಗೆ ಇಂಧನ ರಫ್ತು ನಿಲ್ಲಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಇರಾನ್ ಪರಮಾಣು ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಒತ್ತಡ ಹೇರುವ ಕ್ರಮವಾಗಿ ಐರೋಪ್ಯ ಒಕ್ಕೂಟವು ಆ ರಾಷ್ಟ್ರದೊಂದಿಗೆ ವ್ಯಾಪಾರ- ವಹಿವಾಟು ನಿಷೇಧಿಸುವ ನಿರ್ಧಾರ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಚೀನಾ ಬೆಂಬಲ, ಅಮೆರಿಕ ಆತಂಕ: ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಚೀನಾ ಬಹಿರಂಗ ಬೆಂಬಲ ಘೋಷಿಸಿದ್ದರೆ,  ಸ್ಥಾವರಕ್ಕೆ ದೇಶೀಯವಾಗಿ ನಿರ್ಮಿಸಿದ ಸಂವರ್ಧಿತ ಇಂಧನದ ಸಲಾಕೆಯನ್ನು ಭರ್ತಿ ಮಾಡುವ ದೃಶ್ಯವನ್ನು ಆತಂಕದಿಂದ ಅಮೆರಿಕ ವೀಕ್ಷಿಸಿದೆ.
 
ಅಣ್ವಸ್ತ್ರ ಹೊಂದುವ ಇರಾನ್ ಆಶಯಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದ ಅಮೆರಿಕ, ಇರಾನ್ ಅನ್ನು ಜಾಗತಿಕವಾಗಿ ಏಕಾಂಗಿಯಾಗಿಸಲು ಪ್ರಯತ್ನ ಮಾಡಿತ್ತು. ಇದಕ್ಕೆ ಈಗ ಸೆಡ್ಡು ಹೊಡೆದಿರುವ ಇರಾನ್, ಪರಮಾಣು ತಂತ್ರಜ್ಞಾನದಲ್ಲಿ ರಾಷ್ಟ್ರವು ಬಹುದೊಡ್ಡ ಸಾಧನೆಗೈದಿದೆ ಎಂದು ಹೇಳಿಕೊಂಡಿದೆ.

`ಅಣ್ವಸ್ತ್ರದ ಉದ್ದೇಶ ಇಲ್ಲ~: ಈ ತಂತ್ರಜ್ಞಾನದ ಉದ್ದೇಶ ಶಾಂತಿ ಸ್ಥಾಪನೆಯೇ ಹೊರತು, ಅಣ್ವಸ್ತ್ರ ಹೊಂದುವುದಲ್ಲ ಎಂದು ಅಹ್ಮದಿನೆಜಾದ್ ರಾಷ್ಟ್ರ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
ಪಾಶ್ಚಾತ್ಯ ರಾಷ್ಟ್ರಗಳು ಪರಮಾಣು ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂದು ಕಟುವಾಗಿ ಟೀಕಿಸಿರುವ ಅವರು, `ಪಾಶ್ಚಾತ್ಯ ರಾಷ್ಟ್ರಗಳು ಅಣು ಸ್ಥಾವರಗಳನ್ನು ಸ್ಥಾಪಿಸಬಹುದು. ಆದರೆ, ನಾವು ಅದನ್ನು ಮಾಡಿದರೆ ಅನಾಹುತ ಆಗುತ್ತದೆ ಎಂದು ಬೊಬ್ಬೆ ಇಟ್ಟು ನಮಗೆ ಗಾಸಿ ಉಂಟು ಮಾಡಿವೆ. ನಮ್ಮ ವಿರೋಧಿಗಳೇನು ಬಲಾಢ್ಯರಲ್ಲ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ~ ಎಂದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

`ನಮ್ಮ ರಾಷ್ಟ್ರದ ಮೇಲೆ ನಿರ್ಬಂಧ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಇದರಿಂದ ನಮ್ಮನ್ನು ನಿಯಂತ್ರಿಸಲಾಗದು.  ಅವುಗಳ ಇಂತಹ ಕುತಂತ್ರವೇ ನಮ್ಮನ್ನು ಪರಮಾಣು ಕಾರ್ಯಕ್ರಮದಲ್ಲಿ ದೇಶೀಯವಾಗಿ ಯಶಸ್ಸು ಸಾಧಿಸುವಂತೆ ಮಾಡಿದೆ~ ಎಂದಿದ್ದಾರೆ.

ಭಾರತದ ಬೆಂಬಲ: ದೆಹಲಿಯಲ್ಲಿ ಈಚೆಗೆ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯಲ್ಲಿ ಇರಾನ್ ಕೈವಾಡವಿರುವ ಬಗ್ಗೆ ಖಚಿತವಾಗುವವರೆಗೆ ಆ ರಾಷ್ಟ್ರವನ್ನು ವಿರೋಧಿಸುವುದಿಲ್ಲ ಎಂದು ಭಾರತ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮಹ್ಮೂದ್ ಅಹ್ಮದಿನೆಜಾದ್ ಹೇಳಿದ್ದೇನು?
* ನಮ್ಮ ಉದ್ದೇಶ ಶಾಂತಿ, ಆದರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಮೊದಲು ವಿರೋಧ ಮಾಡುವುದನ್ನು ನಿಲ್ಲಿಸಿ. ಪರಮಾಣು ವಿಜ್ಞಾನ ಯಾರೊಬ್ಬರ ಸೊತ್ತಲ್ಲ.

* ನಮ್ಮನ್ನು ನಿಯಂತ್ರಿಸಲು ನೋಡಿದರು. ಆದರೆ, ನಮ್ಮ ವಿಜ್ಞಾನಿಗಳು ಸಂಕಷ್ಟದ ನಡುವೆಯೂ ಸಾಧನೆಗೈದಿದ್ದಾರೆ.

* ಪರಮಾಣು ಶಕ್ತಿ ರಾಷ್ಟ್ರಗಳ ಮೇಲೆ ಅಮೆರಿಕ ಸವಾರಿ ಮಾಡುತ್ತಿದೆ.
ಬೇರೆ ರಾಷ್ಟ್ರಗಳ ಪ್ರಗತಿಯನ್ನು ಅಮೆರಿಕ ಸಹಿಸುವುದಿಲ್ಲ.


* ನಮ್ಮ ಪರಮಾಣು ವಿಜ್ಞಾನಿಗಳನ್ನು ಅಮೆರಿಕ ಹತ್ಯೆ ಮಾಡಲು ಯತ್ನಿಸಿತು. ಜ್ಞಾನ ಪಸರಿಸುವುದು ಆ ರಾಷ್ಟ್ರಕ್ಕೆ ಬೇಕಿಲ್ಲ. ನಮ್ಮ ವಿಜ್ಞಾನಿ ಮಾಡಿದ ತಪ್ಪಾದರೂ ಏನು?

* ಪ್ರತಿಯೊಂದು ರಾಷ್ಟ್ರದ ಬಳಿಯೂ ಜ್ಞಾನ- ವಿಜ್ಞಾನ ಇದ್ದರೆ ಯಾವೊಂದು ರಾಷ್ಟ್ರವೂ ಜಗತ್ತಿನ ದೊಡ್ಡಣ್ಣನ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.

* ಪ್ರಗತಿ ಹೊಂದುವ ಪ್ರತಿ ರಾಷ್ಟ್ರವೂ ಸ್ವಾತಂತ್ರ್ಯಬಯಸುತ್ತದೆ. ದುರಹಂಕಾರದಿಂದ ದಿಗ್ಬಂಧನ ವಿಧಿಸುವ ಯಾವುದೇ ಶಕ್ತಿಯನ್ನು ಹತ್ತಿಕ್ಕುತ್ತದೆ.

* ಅಮೆರಿಕ ಬಳಿ 10 ಸಾವಿರ ಬಾಂಬ್‌ಗಳಿವೆ. ಆದರೂ ಆ ರಾಷ್ಟ್ರ ತಾನು ಬಾಂಬ್ ವಿರೋಧಿ ಎಂದು ಹೇಳಿಕೊಳ್ಳುತ್ತದೆ. ಇತಿಹಾಸ ಆ ದೇಶದ ಬಗ್ಗೆ ನಗೆಯಾಡುತ್ತದೆ.

* ಎಲ್ಲಾ ಸಾಧ್ಯತೆಗಳು ಮಾತುಕತೆಯ ಮೇಜಿನ ಮೇಲೆ ಇವೆ ಎಂದು ಪಾಶ್ಚಾತ್ಯ ದೇಶಗಳು ಹೇಳುತ್ತವೆ. ಅವು ಕೊಳೆತು ನಾರುವ ತನಕ ಮೇಜಿನ ಮೇಲೆಯೇ ಇರಲಿ.

* ಇದು ದಬಾವಣೆಯ ಕಾಲವಲ್ಲ. ಜಗತ್ತು ಬದಲಾಗುತ್ತಿದೆ.

* ಇದು ಸಂಶೋಧನಾ ಅಣು ಸ್ಥಾವರ. ಇಲ್ಲಿ ನಾವು ಔಷಧವನ್ನಷ್ಟೆ ತಯಾರಿಸುತ್ತೇವೆ.

* ಈ ಯಶಸ್ಸಿಗಾಗಿ ನಾನು ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT