ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಜತೆ ಸಂಘರ್ಷವಿಲ್ಲ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಮತ್ತು ತಮ್ಮ ನಡುವೆ ಯಾವುದೇ ರೀತಿಯ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿರುವ ಅರವಿಂದ ಕೇಜ್ರಿವಾಲ್, ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ತಮ್ಮಿಬ್ಬರ ಗುರಿ ಒಂದೇ. ಆದರೆ, ಮಾರ್ಗ ಮಾತ್ರ ಭಿನ್ನ ಎಂದಿದ್ದಾರೆ.

ರಾಜಕೀಯ ಪಕ್ಷ ಸ್ಥಾಪಿಸುವ ಹಿನ್ನೆಲೆಯಲ್ಲಿ ಅಣ್ಣಾ ತಂಡದಿಂದ ಬೇರೆಯಾದ ಬಳಿಕ ಹಜಾರೆ ಅವರನ್ನು ಕೇಜ್ರಿವಾಲ್ ಮೊದಲ ಬಾರಿ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, `ನಮ್ಮಿಬ್ಬರ ಮಧ್ಯೆ ಸಂಘರ್ಷ ಏರ್ಪಟ್ಟಿದೆ ಎಂದು ಮಾಧ್ಯಮಗಳು ಹುಯಿಲೆಬ್ಬಿಸುತ್ತಿವೆ. ಸಂದರ್ಭ ಬಂದಾಗ ನೆರವಿಗೆ ಬರುವುದಾಗಿ ಅವರಿಗೆ ತಿಳಿಸಿದ್ದೇನೆ~ ಎಂದರು.

ರಾಜಕೀಯ ಸಂಪೂರ್ಣ ಕೊಳೆಯಾಗಿದೆ. ಹೀಗಾಗಿ ಪರ್ಯಾಯ ರಾಜಕೀಯದ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಹೇಗೆ ಸಾಧ್ಯ. ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಹಣ ಎಲ್ಲಿಂದ ಬರುತ್ತದೆ ಎಂದು ಹಜಾರೆ ಅವರು ಕೇಜ್ರಿವಾಲ್ ಅವರ ಉದ್ದೇಶಿತ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಭಾನುವಾರವಷ್ಟೇ ಹಲವು ಪ್ರಶ್ನೆಗಳನ್ನು ಎತ್ತಿದ್ದರು.

ಇಂದು ಅಧಿಕೃತ ಘೋಷಣೆ: ಅರವಿಂದ ಕೇಜ್ರಿವಾಲ್ ಅವರ ಉದ್ದೇಶಿತ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಮಂಗಳವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಮೂಲಕ ಕೇಜ್ರಿವಾಲ್ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ.

ಕೇಜ್ರಿವಾಲ್ ಪರ ಪ್ರಚಾರ- ಹಜಾರೆ
ಮುಂಬರುವ ಚುನಾವಣೆಯಲ್ಲಿ ಕೇಂದ್ರ ಸಚಿವ ಕಪಿಲ್ ಸಿಬಲ್ ವಿರುದ್ಧ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿದರೆ, ಅವರ ಪರ ಪ್ರಚಾರ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಿಳಿಸಿದರು.

`ಸಿಬಲ್ ವಿರುದ್ಧ ಸ್ಪರ್ಧೆಗೆ ಇಳಿದರೆ ಮಾತ್ರ ನಾನು ಅಲ್ಲಿಗೆ ಹೋಗಿ ಪ್ರಚಾರ ನಡೆಸುವೆ. ಅರವಿಂದ ಅವರಲ್ಲಿ ನಾನು ಯಾವುದೇ ತಪ್ಪು ಕಂಡಿಲ್ಲ. ಅವರು ತಮ್ಮ ಕೌಟುಂಬಿಕ ಜೀವನವನ್ನು ತ್ಯಾಗ ಮಾಡಿ ಸಮಾಜಕ್ಕಾಗಿ ದುಡಿದಿದ್ದಾರೆ~ ಎಂದು ಹೇಳಿದರು.

ರಾಮ್‌ದೇವ್ ಜತೆ ಪ್ರವಾಸ: ಬಾಬಾ ರಾಮ್ ದೇವ್ ಅವರು ನಿಷ್ಪಕ್ಷಪಾತವಾಗಿ ನಡೆದುಕೊಂಡಲ್ಲಿ ಅವರೊಂದಿಗೆ ಪ್ರವಾಸ ಮಾಡುವುದಾಗಿಯೂ ಹೇಳಿದ್ದಾರೆ.

`ನಾವು ಒಟ್ಟಾಗಿ ಪ್ರವಾಸ ಮಾಡೋಣ ಎಂದು ಮಾತುಕತೆ ವೇಳೆ ಬಾಬಾ ಹೇಳಿದರು. ಆದರೆ ನಾನು ಈ ಬಗ್ಗೆ ಭರವಸೆ ನೀಡಿಲ್ಲ. ನಿಮಗೆ ಯಾವುದೇ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ಇರದಿದ್ದರೆ ಈ ನಿಟ್ಟಿನಲ್ಲಿ ಯೋಚಿಸಬಹುದು ಎಂದಷ್ಟೇ ಹೇಳಿದೆ. ಆದರೆ ಅವರದಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ~ ಎಂದೂ ಹಜಾರೆ ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT