ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ತಂಡ: ಸಮಿತಿ ಪುನರ್‌ರಚನೆಗೆ ನಿರ್ಧಾರ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಳೇಗಣಸಿದ್ಧಿ (ಪಿಟಿಐ): ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ಅಣ್ಣಾ ತಂಡ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ತನ್ನದೇ ಆದ ನೀತಿ ನಿಯಮಗಳನ್ನು ರೂಪಿಸಿಕೊಂಡು ಈಗಿರುವ ಪ್ರಮುಖರ ಸಮಿತಿಯನ್ನು ಪುನರ್‌ರಚಿಸಲು ನಿರ್ಧರಿಸಿದೆ.

ಈ ಸಂಬಂಧ ಅಣ್ಣಾ ನೇತೃತ್ವದಲ್ಲಿ ಭಾನುವಾರ ಇಲ್ಲಿ ನಡೆದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಕಿರಣ್ ಬೇಡಿ ಭಾಗವಹಿಸಿದ್ದರು.

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಶನಿವಾರ ನಡೆದ ಸಭೆಯಲ್ಲಿ `ಪ್ರಮುಖರ ಸಮಿತಿ~ಯನ್ನು ವಿಸರ್ಜಿಸದೇ ಇರಲು ತಂಡ ತೀರ್ಮಾನ ತೆಗೆದುಕೊಂಡಿತ್ತು.

`ಪ್ರಮುಖರ ಸಮಿತಿ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಲಿದೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬೇಕು ಎನ್ನುವುದು ನಮ್ಮ ಹೋರಾಟದ ಉದ್ದೇಶ.

ನಮ್ಮ ಈ ಚಳವಳಿಗೆ ಮುಂದೆ ನೀತಿ ನಿಯಮಗಳನ್ನು ರೂಪಿಸುತ್ತೇವೆ. ಇದಾದ ಬಳಿಕ ಪ್ರಮುಖರ ಸಮಿತಿಯನ್ನು ಪುನರ್ ರಚಿಸುತ್ತೇವೆ~ ಎಂದು `ಮೌನವ್ರತ~ದಲ್ಲಿರುವ ಅಣ್ಣಾ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ತಮ್ಮ ತಂಡ ದೇಶದಾದ್ಯಂತ `ಯಾತ್ರೆ~ ಕೈಗೊಳ್ಳಲಿದೆ ಎಂದೂ ಅಣ್ಣಾ ಹೇಳಿದ್ದಾರೆ.

`ಸರ್ಕಾರ ಹಾಗೂ ಕಾಂಗ್ರೆಸ್‌ನಲ್ಲಿ ಕೆಲವರು ನಮ್ಮ ತಂಡದ ವರ್ಚಸ್ಸನ್ನು ಕುಂದಿಸಲು ಹಾಗೂ ಚಳವಳಿಗೆ ಅವಮಾನ ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲದೆ ನಮ್ಮ ತಂಡವನ್ನು ಒಡೆಯಲು ಪಿತೂರಿ ಮಾಡುತ್ತಿದ್ದಾರೆ. ಏನೇ ಮಾಡಿದರೂ ನಮ್ಮ ಚಳವಳಿ ಮಾತ್ರ ಮುಂದುವರಿಯುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.

ಮುಗಿದ ಅಧ್ಯಾಯ: ಸುಪ್ರೀಂಕೋರ್ಟ್‌ನ ವಕೀಲರ ಕೊಠಡಿಯಲ್ಲಿ ಯುವಕರಿಂದ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣ ಮುಗಿದ ಅಧ್ಯಾಯ ಎಂದು ವಕೀಲ ಪ್ರಶಾಂತ್ ಭೂಷಣ್ ಘಾಜಿಯಾಬಾದ್‌ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT