ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ತಂಡದ ಕಾಂಗ್ರೆಸ್ ವಿರೋಧ ಸರಿಯಲ್ಲ

Last Updated 10 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಬೆಂಗಳೂರು, (ಪಿಟಿಐ): ಜನಲೋಕಪಾಲ್ ಮಸೂದೆ ಅನುಮೋದಿಸುವಲ್ಲಿ ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ವಿರೋಧಿ ನಿಲುವು ತಳೆದಿರುವ  ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ತಂಡದಿಂದ ಹಿಸ್ಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕೆನ್ನುವ ಪ್ರಚಾರಾಂದಲೋನಕ್ಕೆ ಅಣ್ಣಾ ತಂಡದ ಸದಸ್ಯರೇ ಆಗಿರುವ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ  ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಸೋಮವಾರ  ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು, ~ಪಕ್ಷವೊಂದರ ವಿರುದ್ಧ  ಪ್ರಚಾರಾಂದಲೋನ ನಡೆಸುವುದು ಸರಿಯಲ್ಲ~ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ~ಪ್ರತಿಯೊಂದು ಪಕ್ಷದಲ್ಲೂ ಒಳ್ಳೆಯ ಮತ್ತು ಪ್ರಾಮಾಣಿಕ ನಾಯಕರು ಇದ್ದೇ ಇರುತ್ತಾರೆ. ಆದರೆ ಒಂದು ಪಕ್ಷವನ್ನೇ ಗುರಿಯಾಗಿಟ್ಟುಕೊಂಡು ಅದರ ವಿರುದ್ಧ ಪ್ರಚಾರಾಂದೋಲನ ನಡೆಸುವುದು ತರವಲ್ಲ~ ಎಂದು ಅವರು ಪ್ರತಿಪಾದಿಸಿದ್ದಾರೆ.

~ನನ್ನ ಪ್ರಕಾರ ಕಾಂಗ್ರೆಸ್ ಪದ ಪ್ರಯೋಗವೇ ಸರಿಯಲ್ಲ. ಭ್ರಷ್ಟ ವ್ಯಕ್ತಿಯ ಅಥವಾ ಭ್ರಷ್ಟ ವ್ಯಕ್ತಿಗಳ ಗುಂಪಿನ ವಿರುದ್ಧ ಪ್ರಚಾರಾಂದೋಲನ ನಡೆಯಬೇಕು. ಆದರೆ ಸಾರಾಸಗಟಾಗಿ ಒಂದು ಪ್ರಕ್ಷದ ವಿರುದ್ಧ ಪ್ರಚಾರಾಂದೋಲನ ನಡೆಸುವುದಕ್ಕೆ ನನ್ನ ವಿರೋಧವಿದೆ~ ಎಂದು ಅವರು ತಮ್ಮ ನಿಲುವುನ್ನು ಸ್ಪಷ್ಟಪಡಿಸಿದ್ದಾರೆ.

ಹಿಸ್ಸಾರ್ ಉಪಚುನಾವಣೆಯಲ್ಲಿ ಅಣ್ಣಾ ತಂಡದ ಪ್ರವೇಶದಿಂದ, ಭ್ರಷ್ಟಾಚಾರದ ವಿರುದ್ಧದ ಅಣ್ಣಾ ಹಜಾರೆ ಅವರ ಚಳವಳಿ ಶಿಥಿಲಗೊಳ್ಳುವುದೆಂಬುದನ್ನು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಅಲ್ಲಗಳೆದಿದ್ದಾರೆ. ಹಿಸ್ಸಾರ್ ಉಪಚುನಾವಣೆಯಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನದ ಪ್ರಚಾರಾಂದೋಲನದಲ್ಲಿ ಪಕ್ಷದ ಹೆಸರನ್ನು ತರಬಾರದಿತ್ತು ಎಂದೂ ಅವರು ಹೇಳಿದ್ದಾರೆ.

ಜನಲೋಕಪಾಲ್ ಮಸೂದೆ ಬೆಂಬಲಿಸಿ ಪತ್ರ ನೀಡದ ಪಕ್ಷಗಳು ಮತ್ತು ಆಡಳಿತ ಪಕ್ಷವಾದ ಕಾಂಗ್ರೆಸ್ ವಿರುದ್ಧ ಮತದಾರರು ಮತ ಚಲಾಯಿಸಬೇಕೆಂದು ಅಣ್ಣಾ ಹಜಾರೆ ಅವರು ಹಿಸ್ಸಾರ್ ಮತಕ್ಷೇತ್ರದ ಮತದಾರರಿಗೆ ಕರೆ ನೀಡಿದ್ದಾರೆ.

ನ್ಯಾಯಮೂರ್ತಿ ಸಂತೋಷ ಹೆಗ್ಟೆ ಅವರು ಲೋಕಾಯುಕ್ತರಾಗಿದ್ದಾಗ, ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಅದರಲ್ಲಿನ ವ್ಯಾಪಕ ಭ್ರಷ್ಟಾಚಾರದ ಕುರಿತು ವಿಚಾರಣೆ ನಡೆಸಿ ಸಿದ್ಧ ಪಡಿಸಿದ ವರದಿಯ ದೆಸೆಯಿಂದ  ಜುಲೈ ತಿಂಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾದುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT