ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ತಂಡದ ಮಹತ್ವದ ಸಭೆ ಇಂದು

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಶನಿವಾರದ ಮಹತ್ವದ ಸಭೆಗೆ ಅಣ್ಣಾ ತಂಡ ಸಜ್ಜಾಗುತ್ತಿರುವ ಬೆನ್ನಲ್ಲೇ  ತಂಡವನ್ನು ಪುನರ್‌ರಚಿಸುವ ಸುಳಿವನ್ನು ಅಣ್ಣಾ ಹಜಾರೆ ನೀಡಿದ್ದಾರೆ. ಈ ನಡುವೆ ತಂಡದ ಸದಸ್ಯರ ನಡುವಿನ ಬಿಕ್ಕಟ್ಟು ಉಲ್ಬಣಿಸಿದ್ದು, ನಾಳಿನ ಸಭೆಯಿಂದ ದೂರ ಉಳಿಯುವ  ಹಜಾರೆ ಅವರನ್ನು ಮೇಧಾ ಪಾಟ್ಕರ್ ಮತ್ತು ನ್ಯಾ. ಸಂತೋಷ್ ಹೆಗ್ಡೆ ಹಿಂಬಾಲಿಸಲಿದ್ದಾರೆ.

ಅಣ್ಣಾ ತಂಡದ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಹಾಗೂ ಕೆಲವರ ಮೇಲೆ ಬಂದಿರುವ ಹಣಕಾಸು ಅವ್ಯವಹಾರ ಆರೋಪಗಳ  ಬಗ್ಗೆ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಬಹುದೆಂಬ ನಿರೀಕ್ಷೆ ನಡುವೆಯೇ ಪ್ರಮುಖರ ಸಮಿತಿ (ಕೋರ್ ಕಮಿಟಿ) ವಿಸರ್ಜಿಸಿ ಹೊಸಬರ ಸೇರ್ಪಡೆಯೊಂದಿಗೆ ಪುನರ‌್ರಚಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಬೇಡಿಕೆಗೆ ಅಣ್ಣಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಅಣ್ಣಾ ತಂಡದ ಪ್ರಮುಖ ಸದಸ್ಯರಾದ ಮೇಧಾ ಪಾಟ್ಕರ್ ಘಾಜಿಯಾಬಾದ್ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ತಮಗೆ ಬೇರೆ ಬೇರೆ ಕಾರ್ಯಕ್ರಮಗಳು ಇರುವುದರಿಂದ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ. ಆದರೆ, ಅಣ್ಣಾ ತಂಡದ ಕೆಲವು ಸದಸ್ಯರ ಮೇಲೆ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಸಮಿತಿಯನ್ನು ಪುನರ‌್ರಚಿಸಬೇಕೆಂದು ದನಿ ಎತ್ತಿದ್ದಾರೆ. ಅಣ್ಣಾ ತಂಡದಲ್ಲಿ ಒಡಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರೂ ಪ್ರಮುಖರ ಸಮಿತಿ ಸಭೆಯಲ್ಲಿ ಹಾಜರಾಗುತ್ತಿಲ್ಲ. ತಮಗೆ ಮುಂಬೈಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮೇಧಾ ಪಾಟ್ಕರ್ ಜತೆ ದನಿಗೂಡಿಸಿರುವ ಮತ್ತೊಬ್ಬ ಸದಸ್ಯ ಕುಮಾರ್ ವಿಶ್ವಾಸ್ ಅಣ್ಣಾ ಅವರಿಗೆ ಪತ್ರ ಬರೆದು `ಕಾಂಗ್ರೆಸ್ ಪಕ್ಷ ತಂಡದ ಕೆಲವು ಸದಸ್ಯರ ವಿರುದ್ಧ ಮಾಡಿರುವ ಆರೋಪಗಳಿಂದ ತಂಡದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದರಿಂದ ಭ್ರಷ್ಟಾಚಾರ ವಿರೋಧಿ ಚಳವಳಿಯ ಶಕ್ತಿ ಕುಂದಲಿದೆ. ಈ ಹಿನ್ನೆಲೆಯಲ್ಲಿ ಈಗಿನ ಸಮಿತಿ ರದ್ದು ಮಾಡಿ ಹೊಸದಾಗಿ ರಚಿಸಬೇಕೆಂಬ ಆಗ್ರಹ ಮಾಡಿದ್ದಾರೆ.  ಚಳವಳಿ ತಳಹದಿ ವಿಸ್ತರಿಸುವ ಉದ್ದೇಶದಿಂದ ಹೆಚ್ಚು ಜನರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಸಲಹೆ ಮುಂದಿಟ್ಟಿದ್ದಾರೆ.

ಈ ಮಧ್ಯೆ, ಸಮಿತಿ ಸದಸ್ಯರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಣ್ಣಾ ಹಜಾರೆ ತಮ್ಮ ತಂಡವನ್ನು ಪುನರ‌್ರಚಿಸಿ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ ಎಂದು ಅವರ ನಿಕಟವರ್ತಿ ಪತ್ರಕರ್ತ ರಾಜು ಪರುಲೇಕರ್  ಹೇಳಿದ್ದಾರೆ. ಆದರೆ, ಪುನರ‌್ರಚನೆ ಕಸರತ್ತು ಯಾವಾಗ ಮತ್ತು ಹೇಗೆ ನಡೆಯಲಿದೆ ಎಂಬ ವಿವರಗಳನ್ನು ನೀಡಿಲ್ಲ.

ಕಳೆದ 16ರಿಂದ ಮೌನವ್ರತ ಕೈಗೊಂಡಿರುವ ಅಣ್ಣಾ ಹಜಾರೆ ಚುನಾವಣಾ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರುವ ಉದ್ದೇಶದಿಂದ ಮತ್ತೊಂದು ~ಪಾನ್ ಇಂಡಿಯಾ~ ಎಂಬ ಸಂಘಟನೆ ಹುಟ್ಟು ಹಾಕುವ ಆಲೋಚನೆ ಹೊಂದಿದ್ದಾರೆ. ಈ ಸಂಘಟನೆಗೂ ಚುನಾವಣೆಗೂ ಸಂಬಂಧ ಇರುವುದಿಲ್ಲ ಎಂದು ಪರುಲೇಕರ್ ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರ ಹತ್ತಿಕ್ಕಲು ಜನ ಲೋಕಪಾಲ ಮಸೂದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಅಣ್ಣಾ ಹಜಾರೆ ಚಳವಳಿ ನಡೆಸಿದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ತಂಡದ ಸದಸ್ಯರು ಚರ್ಚೆ ವಸ್ತುವಾಗಿದ್ದಾರೆ. ಪ್ರಮುಖ ಸದಸ್ಯರಾದ ಅರವಿಂದ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಅವರ ಮೇಲೆ ಅವ್ಯವಹಾರದ ಆರೋಪಗಳು ಕೇಳಿ ಬಂದಿವೆ.

ಹಿಸ್ಸಾರ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಿದ್ದರಿಂದ ಬೇಸತ್ತಿರುವ ರಾಜೇಂದ್ರಸಿಂಗ್, ಪಿ.ವಿ.ರಾಜಗೋಪಾಲ್ ಅಣ್ಣಾ ತಂಡದಿಂದ ಹೊರ ಬಂದಿದ್ದಾರೆ. ಈ ಇಬ್ಬರನ್ನು ರಾಜೇಂದ್ರ ಸಿಂಗ್ `ದುರಹಂಕಾರಿ~ಗಳು ಎಂದು ಜರಿದಿದ್ದಾರೆ. ಕೇಜ್ರಿವಾಲ್ ಮತ್ತು ಬೇಡಿ ತಮ್ಮ ತೀರ್ಮಾನಗಳನ್ನು ಬೇರೆಯವರ ಮೇಲೆ ಹೇರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅಣ್ಣಾ ತಂಡದ ಮತ್ತೊಬ್ಬ ಸದಸ್ಯ ವಕೀಲ ಪ್ರಶಾಂತ್‌ಭೂಷಣ್ ಕಾಶ್ಮೀರ ಕುರಿತು ನೀಡಿದ ಹೇಳಿಕೆಗಾಗಿ ಹಲ್ಲೆಗೊಳಗಾಗಿದ್ದಾರೆ. `ಕಾಶ್ಮೀರದಲ್ಲಿ ಜನಮತ ಗಣನೆ ನಡೆಯಬೇಕು~ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT