ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಬೆಂಬಲಿಗರಿಂದ ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಅಮೃತಸರ/ ನವದೆಹಲಿ (ಪಿಟಿಐ): ಹೊಸ ವರ್ಷಾಚರಣೆ ಪ್ರಯುಕ್ತ ಸ್ವರ್ಣ ಮಂದಿರದಲ್ಲಿ ಭಾನುವಾರ ಸಪತ್ನೀಕರಾಗಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಣ್ಣಾ ಬೆಂಬಲಿಗರು ಎನ್ನಲಾದ ಗುಂಪೊಂದು ಕಪ್ಪು ಬಾವುಟ ಪ್ರದರ್ಶಿಸಿತು.

ಶನಿವಾರ ರಾತ್ರಿಯೇ ಪವಿತ್ರ ನಗರಿಗೆ ಆಗಮಿಸಿದ್ದ ಪ್ರಧಾನಿ, ಬೆಳಿಗ್ಗೆ 6.30ಕ್ಕೆ ಸ್ವರ್ಣ ಮಂದಿರ ತಲುಪಿ ಸುಮಾರು ಅರ್ಧ ಗಂಟೆ ಪ್ರಾರ್ಥನೆ ಸಲ್ಲಿಸಿ ಹೊರ ಬಂದ ಸಂದರ್ಭದಲ್ಲಿ ಈ ಘಟನೆ ನಡೆಯಿತು. 40 ಜನರಷ್ಟಿದ್ದ ಗುಂಪು, ಸರ್ಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿತು.

ಆದರೂ ಇದರಿಂದ ವಿಚಲಿತರಾಗದಂತೆ ಕಂಡುಬಂದ ಪ್ರಧಾನಿ ಅಲ್ಲಿಂದ ತಮ್ಮ ಸಂಬಂಧಿಗಳ ಮನೆಗೆ ತೆರಳಿದರು.
ಕಾಂಗ್ರೆಸ್ ಖಂಡನೆ: ಸ್ವರ್ಣ ಮಂದಿರದಲ್ಲಿ ಪ್ರಧಾನಿಗೆ ಅಣ್ಣಾ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿದ್ದು `ದುರದೃಷ್ಟಕರ~, ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಅಂಗೀಕಾರಕ್ಕೆ ತಡೆಯೊಡ್ಡಿದ್ದಕ್ಕಾಗಿ ಜನರು ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಕಾಂಗ್ರೆಸ್ ಹೇಳಿದೆ.

`ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಾಗಿ ಇರುವುದರಿಂದ ಮಸೂದೆ ಅನುಮೋದನೆಗೊಂಡಿತು. ಆದರೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ~ ಎಂದು ಪಕ್ಷದ ವಕ್ತಾರ ರಷೀದ್ ಅಲ್ವಿ ಹೇಳಿದ್ದಾರೆ.

`ಈ ಕೃತ್ಯದ ಹಿಂದೆ ರಾಜ್ಯದ ಅಕಾಲಿ ದಳ- ಬಿಜೆಪಿ ನಾಯಕತ್ವದ ಕೈವಾಡ ಇದೆ. ಪವಿತ್ರ ಸ್ಥಳವನ್ನು ಪ್ರತಿಭಟನೆಗೆ ಬಳಸಿಕೊಂಡದ್ದು ದುರದೃಷ್ಟಕರ ಸಂಗತಿ~ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರೀಂದ್ರ ಸಿಂಗ್ ಹೇಳಿದ್ದಾರೆ.

ತಂಡ ಸಮರ್ಥನೆ: ಕಪ್ಪು ಬಾವುಟ ಪ್ರದರ್ಶಿಸಿದವರು `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಗೆ ಸೇರಿದವರಲ್ಲ ಎಂದು ಅಣ್ಣಾ ತಂಡ ಹೇಳಿದೆ.

`ಆದರೆ ಈ ಪ್ರತಿಭಟನೆ ಕಾನೂನಿನ ಪರಿಧಿಯೊಳಗೇ ಇದ್ದು ಪ್ರಬಲ ಲೋಕಪಾಲ ಬೇಕೆಂಬ ಜನರ ಬೇಡಿಕೆಯನ್ನು ಪ್ರತಿಬಿಂಬಿಸುತ್ತಿದೆ.~  `ಪ್ರತಿಭಟನೆಯ ಬಗ್ಗೆ ಸ್ವಯಂಸೇವಕರು ಸ್ವತಃ ನಿರ್ಧಾರ ಕೈಗೊಂಡಿರಬಹುದು~ ಎಂದು ತಂಡದ ಕಿರಣ್ ಬೇಡಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT