ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಬೆಂಬಲಿಸಿ ಪಾದಯಾತ್ರೆ; ಹೋಮಕ್ಕೆ ಭ್ರಷ್ಟರ ಪ್ರತಿಕೃತಿ

Last Updated 23 ಆಗಸ್ಟ್ 2011, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಹಾಗೂ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಹುಬ್ಬಳ್ಳಿ ನಾಗರಿಕ ಸಮಿತಿಯು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ. ಹುಬ್ಬಳ್ಳಿಯ ನಾಗರಿಕ ಸಮಿತಿ ಸದಸ್ಯ ಸಜ್ಜನಭಾಯಿ ಜೈನ ಅವರು ಸೋಮವಾರ ರೈಲು ನಿಲ್ದಾಣ ಬಳಿಯ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರು. ಸುಧೀರ ದೇಶಪಾಂಡೆಯವರು ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಜನಲೋಕಪಾಲ ಮಸೂದೆ ಜಾರಿಯಾಗಬೇಕು ಜೊತೆಗೆ ಭ್ರಷ್ಟಾಚಾರ ತೊಲಗಬೇಕೆಂದು ಧಾರವಾಡದಲ್ಲಿ ಸೋಮವಾರ ಶ್ರೀರಾಮ ಸೇನೆಯ ಧಾರವಾಡ ಘಟಕದ ಪದಾಧಿಕಾರಿಗಳು ಭ್ರಷ್ಟ ರಾಜಕಾರಣಿಗಳ ಪ್ರತಿಕೃತಿಗಳನ್ನು ಹೋಮದಲ್ಲಿ ಹಾಕಿದರು. ಪ್ರಮೋದ ಮುತಾಲಿಕ್ ಮೊದಲಾದವರು ಭಾಗವಹಿಸಿದ್ದರು.

ನಗರದ ಪ್ರಮುಖ ಕಾಳು-ಕಡಿ, ಕಿರಾಣಿ, ಹಾರ್ಡ್‌ವೇರ್, ಚಹಾ ಹಾಗೂ ಕಾಫಿ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಅಕ್ಕಿಹೊಂಡದಿಂದ ಕಿತ್ತೂರು ಚನ್ನಮ್ಮ ಸರ್ಕಲ್‌ವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಸವಿತಾ ಸಮಾಜ ಹಾಗೂ ಇಂಡಿಯಾ ಅಗೆನೆಸ್ಟ್ ಕರಪ್ಷನ್ ಪದಾಧಿಕಾರಿಗಳು ವರ್ತಕರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಂಜೆ ಮೋಂಬತ್ತಿ ಮೆರವಣಿಗೆಯನ್ನು ಇಂಡಿಯಾ ಅಗೆನೆಸ್ಟ್ ಕರಪ್ಷನ್ ಪದಾಧಿಕಾರಿಗಳು ನಡೆಸಿದರು.

ಪಾದಯಾತ್ರೆ: ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದ ಮಹಿಳಾ ವಿದ್ಯಾಪೀಠದಿಂದ ಧಾರವಾಡದವರೆಗೆ ಪಾದಯಾತ್ರೆ ಕೈಗೊಂಡರು. ಕೆಎಸ್‌ಆರ್‌ಟಿಸಿ ನಿರ್ವಾಹಕ ದೇವೇಂದ್ರ ಭಜಂತ್ರಿ ಕೀಲುಕುದುರೆ ಕಟ್ಟಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಬಾನಿ ಓಣಿಯ ಗಣೇಶೋತ್ಸವ ಮಂಡಳಿ ವತಿಯಿಂದ ಏರ್ಪಡಿಸಿದ ಮೆರವಣಿಗೆಯಲ್ಲಿ ಕಿರಣ್ ಬೇಡಿ, ಅಣ್ಣಾ ಹಜಾರೆ, ಸಂತೋಷ ಹೆಗ್ಡೆ ಹಾಗೂ ರಾಮ್‌ದೇವ್ ಬಾಬಾ ಅವರ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಗಾಂಧಿವಾಡದ ಎಸ್.ಕೆ. ಹೆಲ್ಪಿಂಗ್ ಹ್ಯಾಂಡ್ಸ್ ವೆಲ್‌ಫೇರ್ ಸೊಸೈಟಿಯ ಪದಾಧಿಕಾರಿಗಳು ರೈಲ್ವೆ ಕಲ್ಯಾಣ ಕೇಂದ್ರದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇಂದಿರಾನಗರದ ಯುವಕ ವೃಂದ, ಮಟನ್ ಸಂಘದ ಪದಾಧಿಕಾರಿಗಳು ಮೆರವಣಿಗೆ ನಡೆಸಿದರು.

ಟೈಲರ್ಸ್‌ ಮೆರವಣಿಗೆ: ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ಸೋಮವಾರ ನಗರದಲ್ಲಿ ಮೆರವಣಿಗೆ ನಡೆಸಿದರು. ಗಾಂಧಿ ಟೋಪಿ ಹಾಗೂ ಕೊರಳಲ್ಲಿ ಟೇಪು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್‌ ಅಸೋಸಿಯೇಶನ್ ಪದಾಧಿಕಾರಿಗಳು ರ‌್ಯಾಲಿ ನಡೆಸಿದರು. 
 
ಧಾರವಾಡ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದವರು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತಮ್ಮ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.ರೇಣುಕಾನಗರ ನಿವಾಸಿಗಳ ಸಂಘ: ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಹುಬ್ಬಳ್ಳಿಯ ರೇಣುಕಾನಗರ ನಿವಾಸಿಗಳ ಅಭಿವೃದ್ಧಿ ಸಂಘದ ಸದಸ್ಯರು ಈಚೆಗೆ ಸತ್ಯಾಗ್ರಹ ನಡೆಸಿದರು.

ರೇಣುಕಾನಗರ ಕೊನೆಯ ಬಸ್ ತಂಗುದಾಣದಿಂದ ಕುಮಾರ ಪಾರ್ಕ್ ಮೂಲಕ ಮೆರವಣಿಗೆ ನಡೆಸಿದ ಸದಸ್ಯರು ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷ ಎಫ್.ಬಿ. ನಾಗಮ್ಮನವರ, ಕಾರ್ಯದರ್ಶಿ ಅಶೋಕ ಜಿ.ಇರಕಲ್, ಉಪಾಧ್ಯಕ್ಷ ಸಿ.ಎಸ್. ಕಲ್ಲೋಳಿಮಠ, ವಿ.ಬಿ. ಪತಂಗೆ, ಶಂಸುದ್ಧೀನ್ ಹುಬ್ಬಳ್ಳಿ, ರಮೇಶ ಮಿಸ್ಕಿನ್, ಎಸ್.ಜಿ. ಹಿಪ್ಪರಗಿ ಮತ್ತಿತರರು ಭಾಗವಹಿಸಿದ್ದರು.

ಹಜಾರೆಗೆ ಬೆಂಬಲ: ಇಂದು ಪಾರಾಯಣ
ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಖಿಲ ಭಾರತೀಯ ಶ್ರೀ ಸ್ವಾಮಿ ಸಮರ್ಥ ಸೇವಾ ಗುರುಪೀಠದ ಹುಬ್ಬಳ್ಳಿ ಶಾಖೆಯ ವತಿಯಿಂದ ಶ್ರೀ ದುರ್ಗಾ ಸಪ್ತಶತಿ ಹಾಗೂ ಶ್ರೀ ಸ್ವಾಮಿ ಸಮರ್ಥ ಸಾರಾಮೃತ ಪಾರಾಯಣ ಆಗಸ್ಟ್ 23ರಂದು ನಡೆಯಲಿದೆ.

ಸೇವಾಕೇಂದ್ರ ಹಾಗೂ ಅಧ್ಯಾತ್ಮ ವಿಕಾಸ ಕೇಂದ್ರದ ಸದಸ್ಯರು ಪಾರಾಯಣ ಮಾಡುವರು.
ನಗರದ ನ್ಯಾಯಾಲಯ ಸಮೀಪದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಸಂಜೆ 4 ಗಂಟೆಗೆ ಪಾರಾಯಣ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT