ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹಜಾರೆ ಆಂದೋಲನಕ್ಕೆ ಮಾರು ಹೋದ ಅಡ್ವಾಣಿ ರಾಜಕೀಯ ಸಿನಿಕರಿಂದ ಅಪಚಾರ

Last Updated 12 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಕೀಯದ ಬಗ್ಗೆ ಜಿಗುಪ್ಸೆ ಹುಟ್ಟಿಸುವಂತೆ ಮಾತನಾಡುವವರು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಭಾರಿ ಅಪಚಾರ ಎಸಗುತ್ತಿದ್ದಾರೆ ಎಂದು ಖಂಡಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಅಡ್ವಾಣಿ , ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ಅವರು ನಡೆಸಿದ ಆಂದೋಲನವನ್ನು ಶ್ಲಾಘಿಸಿದ್ದಾರೆ.ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ 2 ಜಿ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂಬ ಬೇಡಿಕೆ ಈಡೇರಿಸಿಕೊಳ್ಳಲು ಪ್ರತಿಪಕ್ಷಗಳು ಎರಡು ತಿಂಗಳು ಕಾಲ ಹೋರಾಡಬೇಕಾಗಿ ಬಂತು. ಆದರೆ ಅಣ್ಣಾ ಅವರ ಉಪವಾಸ ಕೇವಲ ನಾಲ್ಕೇ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಿದೆ ಎಂದು ಅವರು ಬ್ಲಾಗ್‌ನಲ್ಲಿ ಬರೆದಿದ್ದಾರೆ.
 

ಅಣ್ಣಾ ಅವರ ಈ ಕ್ಷಿಪ್ರ ಸಾಧನೆಯ ಹಿಂದೆ ಟಿ.ವಿ. ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾಲೂ ಇದೆ ಎಂದಿರುವ ಅಡ್ವಾಣಿ, ಇದೇ ವೇಳೆ ಹಜಾರೆ ಅವರನ್ನು ಆರೆಸ್ಸೆಸ್ ಏಜೆಂಟ್ ಎಂದು ಟೀಕಿಸಿದ ಕೇಂದ್ರದ ಆಡಳಿತಾರೂಢ ನಾಯಕರನ್ನು ಖಂಡಿಸಿದ್ದಾರೆ.ಅಣ್ಣಾ ಹಜಾರೆ ಅವರು ಜಂತರ್‌ಮಂತರ್‌ನಲ್ಲಿ ಉಪವಾಸ ಕೂತಿದ್ದ ವೇಳೆ ಬಿಜೆಪಿ ಮಾಜಿ ನಾಯಕಿ ಉಮಾ ಭಾರತಿ ಅವರು ಅಲ್ಲಿಗೆ ಭೇಟಿ ನೀಡಿದ್ದನ್ನು ಟೀಕಿಸಿದವರ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿರುವ ಅವರು, ಮನಮೋಹನ್ ಸಿಂಗ್ ಅವರ ಆಡಳಿತ ಸ್ವತಂತ್ರ ಭಾರತ ಕಂಡ ಅತಿ ಭ್ರಷ್ಟ ಆಡಳಿತ ಎಂದಿದ್ದಾರೆ.
 

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿದ್ದರೂ, ಅಂತಃಸಾಕ್ಷಿಯುಳ್ಳ ಹಾಗೂ ಧೀಮಂತ ರಾಜಕೀಯ ನಾಯಕರು ಈಗಲೂ ಇದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.ಹಜಾರೆ ಅವರ ಚಳವಳಿಯಲ್ಲಿ ಭಾಗಿಯಾದ ಯೋಗಗುರು ರಾಮ್‌ದೇವ್ ಅವರನ್ನು ಕೊಂಡಾಡಿರುವ ಅಡ್ವಾಣಿ, ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಕಪ್ಪುಹಣ ದಂಧೆ ಹಾಗೂ ಚುನಾವಣೆಯಲ್ಲಿ ಹಣಬಲದ ಮೇಲಾಟ ತಡೆಯುವ ಬಗ್ಗೆ ಚರ್ಚಿಸಲು ರಾಜಕೀಯ ಪಕ್ಷಗಳ ಸಭೆಯೊಂದನ್ನು ಕರೆಯಬೇಕೆಂದು ಅವರು ಸಲಹೆ ನೀಡಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು ಏ.8ರ ಸಂಜೆ ತಮ್ಮನ್ನು ಭೇಟಿಯಾಗಿ, ಉದ್ದೇಶಿತ ಲೋಕಪಾಲ ಮಸೂದೆಯ ಕುರಿತು ಚರ್ಚಿಸಿದರು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT