ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹಜಾರೆ ನಿರಶನ ಎಂಟನೇ ದಿನಕ್ಕೆ:ಸಂಧಾನಕ್ಕೆ ಎರಡು ಹೆಜ್ಜೆ

Last Updated 22 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ದಿನೇ ದಿನೇ ಜನ ಬೆಂಬಲ ಹೆಚ್ಚುತ್ತಿರುವ ನಡುವೆಯೇ ~ಲೋಕಪಾಲ ಮಸೂದೆ~ ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರದ ಜತೆ ಮಾತುಕತೆಗೆ ಸಿದ್ಧ. ಆದರೆ, ಚರ್ಚೆ ಏನಿದ್ದರೂ ಪ್ರಧಾನಿ, ಹಿರಿಯ ಸಚಿವರು, ರಾಹುಲ್ ಗಾಂಧಿ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತ್ರ~ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಸೋಮವಾರ ಹೇಳಿದ್ದಾರೆ.

ಮತ್ತೊಂದೆಡೆ, `ಲೋಕಪಾಲ ಮಸೂದೆ ಕುರಿತು ಅರ್ಥಪೂರ್ಣ ಚರ್ಚೆಗೆ ಸಿದ್ಧ. ಆದರೆ, ಭ್ರಷ್ಟಾಚಾರಕ್ಕೆ ಇದೊಂದೇ ಪರಿಹಾರ ಅಲ್ಲ. ಮಂತ್ರದಂಡದಿಂದ ಭ್ರಷ್ಟಾಚಾರ ನಿವಾರಣೆ ಮಾಡಲು ಸಾಧ್ಯವಿಲ್ಲ~ ಎಂದು ಪ್ರಧಾನಿ ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಮಾರಂಭದಲ್ಲಿ ಸ್ಪಷ್ಟಡಿಸಿದ್ದಾರೆ.

ಅಣ್ಣಾ ಹಜಾರೆ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಸೋಮವಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ನೆಚ್ಚಿನ ನಾಯಕನಿಗೆ ಬೆಂಬಲ ವ್ಯಕ್ತಪಡಿಸಲು ಜನ ಸಾಗರ ರಾಮಲೀಲಾ ಮೈದಾನಕ್ಕೆ ಹರಿದು ಬರುತ್ತಿದೆ.

ಅಣ್ಣಾ ಅವರ ತೂಕ ಏಳು ದಿನಗಳಲ್ಲಿ ಐದು ಕೆ.ಜಿ ಇಳಿದಿದೆ. ಮರಾಠಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅಣ್ಣಾ ಹಜಾರೆ, ಮನಮೋಹನ್‌ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್,  ಕೇಂದ್ರದ ಹಿರಿಯ ಸಚಿವರು (ಗೃಹ ಸಚಿವ ಚಿದಂಬರಂ ಮತ್ತು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರನ್ನು ಹೊರತುಪಡಿಸಿ) ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಜತೆ ಚರ್ಚೆಗೆ ಸಿದ್ಧ ಎಂದಿದ್ದಾರೆ.

ಲೋಕಪಾಲ ಮಸೂದೆ ಕುರಿತು ಸರ್ಕಾರೇತರ ಸಂಸ್ಥೆ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುವ ಪ್ರಶ್ನೆ ಇಲ್ಲ. ಇದುವರೆಗೆ ಅಧಿಕೃತ ಸಂಧಾನಕಾರರು ಯಾರೂ ತಮ್ಮನ್ನು ಭೇಟಿ ಮಾಡಿಲ್ಲ  ಎಂದು ಅಣ್ಣಾ ಸ್ಪಷ್ಟಪಡಿಸಿದ್ದಾರೆ. ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರಿಗೆ ಕಾಂಗ್ರೆಸ್ ಕೇಳಿದೆ ಎಂಬ ಹಿನ್ನೆಲೆಯಲ್ಲಿ ಅಣ್ಣಾ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಇಂದೋರ್ ಮೂಲದ ಬೈಯ್ಯೂಜಿ ಮಹಾರಾಜ್ ಮತ್ತು ಮಹಾರಾಷ್ಟ್ರದ ಹಿರಿಯ ಅಧಿಕಾರಿ ಉಮೇಶ್ ಚಂದ್ರ ಸಾರಂಗ್ ಅವರ ಜತೆಗೂ ಮಾತುಕತೆ ಮಾಡುವುದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ಇವರಿಬ್ಬರೂ ತೆರೆಮರೆಯಲ್ಲಿ ಸಂಧಾನ ನಡೆಸಿದ್ದರು ಎಂದು ಹೇಳಲಾಗಿತ್ತು. ಇದನ್ನು ಅಣ್ಣಾ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಮಸೂದೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು.
 
ಅತ್ಯಂತ ದುರ್ಬಲವಾದ ಈ ಮಸೂದೆಗೆ ಭ್ರಷ್ಟಾಚಾರ ಹತ್ತಿಕ್ಕಲು ಸಾಧ್ಯವಿಲ್ಲ. ಆದರೆ, ಮಸೂದೆ ವ್ಯಾಪ್ತಿಗೆ ಉನ್ನತ ನ್ಯಾಯಾಂಗವನ್ನು ತರಬೇಕೆಂಬ ಬೇಡಿಕೆ ಕುರಿತು ಮರು ಚಿಂತಿಸಬಹುದು ಎಂಬ ಸುಳಿವನ್ನು ಹಜಾರೆ ಇದೇ ಮೊದಲ ಬಾರಿಗೆ ನೀಡಿದ್ದಾರೆ. ಸರ್ಕಾರದ ಜತೆ ಮಾತುಕತೆ ಸಮಯದಲ್ಲಿ ತಮ್ಮ ಸಲಹೆಗಾರರನ್ನು ಹೊರಗಿಡುವ ಮಾತೇ ಇಲ್ಲ.ಯಾವುದೇ ಚರ್ಚೆ ಅವರ ಹಾಜರಾತಿಯಲ್ಲೇ ನಡೆಯಬೇಕು ಎಂದಿದ್ದಾರೆ.

 ಉನ್ನತ ನ್ಯಾಯಾಂಗವನ್ನು ಲೋಕಪಾಲದ ವ್ಯಾಪ್ತಿಯಿಂದ ಹೊರಗಿಡುವುದಾದರೆ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ನ್ಯಾಯಾಂಗ ಹೊಣೆಗಾರಿಕೆ ಮಸೂದೆಯನ್ನು ಬಲಪಡಿಸಬೇಕು ಎಂಬ ಷರತ್ತನ್ನು ಹಾಕುವ ಇಂಗಿತವನ್ನು ಅಣ್ಣಾ ವ್ಯಕ್ತಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT