ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹಜಾರೆ ಬೆಂಬಲಕ್ಕೆ ಹಜಾರೊ ಹಾತ್!

Last Updated 25 ಆಗಸ್ಟ್ 2011, 10:45 IST
ಅಕ್ಷರ ಗಾತ್ರ

ಮೈಸೂರು: ಜನಲೋಕಪಾಲ್ ಮಸೂದೆ ಬೆಂಬಲಿಸಿ ಹಾಗೂ ಭ್ರಷ್ಟಾಚಾರ ವಿರುದ್ಧ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟ ಬೆಂಬಲಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಹಾತ್ಮ ಗಾಂಧಿ ಚೌಕ, ಜಿಲ್ಲಾಧಿಕಾರಿ ಕಚೇರಿ, ಚಾಮುಂಡಿ ಬೆಟ್ಟದಲ್ಲಿ ಬುಧವಾರ ಧರಣಿ ನಡೆಸಿದರು.

ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಮೈಸೂರು ಆಟೋ ರಿಕ್ಷಾ ಚಾಲಕರ ಸಂಘದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಆಟೋ ರಿಕ್ಷಾಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ಚೌಕದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.

ಅಸಮರ್ಪಕ ಆಡಳಿತ, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ನಾವು ದನಿ ಎತ್ತಲು ಇದು ಸಕಾಲ. ಪಡಿತರ ವ್ಯವಸ್ಥೆಯಲ್ಲಿ ರೂ.1737 ಕೋಟಿಗೂ ಹೆಚ್ಚು ಹಣ ಲೂಟಿಯಾಗಿರುವುದನ್ನು ಸರಿಪಡಿಸಲು ಎಲ್ಲರು ಚಳವಳಿಯಲ್ಲಿ ಭಾಗವಹಿಸಬೇಕು. ಸ್ವಿಸ್ ಬ್ಯಾಂಕ್‌ನಲ್ಲಿ ಇರುವ ಸಾವಿರಾರು ಕೋಟಿ ಕಪ್ಪು ಹಣವನ್ನು ಹಿಂದಕ್ಕೆ ತರಿಸಲು ಈ ಹೋರಾಟ ಅನಿವಾರ್ಯ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಣ್ಣಾ ಹಜಾರೆ ಅವರ ಭಾವಚಿತ್ರ ಹಾಗೂ ರಾಷ್ಟ್ರಧ್ವಜವನ್ನು ಆಟೋಗಳಿಗೆ ಹಾಕಿ ನಗರದ ಪ್ರಮುಖ ರಸ್ತೆಗಳಲ್ಲಿ ಆಟೋ ರಿಕ್ಷಾ ಚಾಲಕರು ಮೆರವಣಿಗೆಯಲ್ಲಿ ಸಾಗುವ ಮೂಲಕ ಗಮನ ಸೆಳೆದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಟಿ.ರಾಜ್, ಎಚ್.ಎಸ್.ಛಾಯ, ಎಂ.ಮಹದೇವ ಸ್ವಾಮಿ, ಸಿ.ರಾಮಸ್ವಾಮಿ, ಸಾಯಿಬಾಬಾ ನಾಗರಾಜ್, ಪ್ರಸನ್ನಕುಮಾರ್, ನಾರಾಯಣಸಿಂಗ್ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

ಚಾಮುಂಡಿ ಬೆಟ್ಟ: ಹಜಾರೆ ಹೋರಾಟ ಬೆಂಬಲಿಸಿ ಚಾಮುಂಡಿ ಬೆಟ್ಟ ಕ್ಷೇತ್ರದ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ಶಾಲಾ ಮಕ್ಕಳು ಚಾಮುಂಡಿ ಬೆಟ್ಟದ ಮಹಿಷಾಸುರ ವೃತ್ತದ ಬಳಿ ಧರಣಿ ನಡೆಸಿದರು.

ವಿದೇಶಗಳಲ್ಲಿ ಇರುವ ದೇಶದ ಕಪ್ಪು ಹಣವನ್ನು ಹಿಂದಕ್ಕೆ ತರಿಸಬೇಕು. ಭ್ರಷ್ಟಾಚಾರಕ್ಕೆ ಪ್ರಭಲ ಅಸ್ತ್ರವಾಗಿರುವ ಲೋಕಪಾಲ್ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಮುಂದಾಗುತ್ತಿದೆ. ಇದಕ್ಕೆ ಅಣ್ಣಾ ಬಗ್ಗುತ್ತಿಲ್ಲ. ಹಜಾರೆ ಹೋರಾಟಕ್ಕೆ ಎಲ್ಲರ ಬೆಂಬಲವಿದೆ ಎಂದು ಧರಣಿನಿರತರು ಘೋಷಣೆಗಳನ್ನು ಕೂಗಿದರು.

ನಾಗರಿಕ ಹಿರತರಕ್ಷಣಾ ಸಮಿತಿ ಗೌರವ ಅಧ್ಯಕ್ಷ ಎನ್.ಶ್ರೀಧರ್ ದೀಕ್ಷಿತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ, ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸಾರ್ವಜನಿಕ ಪ್ರೌಢಶಾಲೆಯ ಮಕ್ಕಳು, ಯುವಕ ಮತ್ತು ಮಹಿಳಾ ಸಂಘಟನೆಗಳ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು.

ಪ್ರೊಫೆಷನಲ್ ಕೊರಿಯರ್: ಜನಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಪ್ರೊಫೆಷನಲ್ ಕೊರಿಯರ್, ಸರ್ಫೇಸ್ ಲೈನ್ ಪಾರ್ಸಲ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯ ಸಿಬ್ಬಂದಿ ವರ್ಗ ಗಾಂಧಿ ಚೌಕದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿತು.

ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ಲೋಕಪಾಲ ಮಸೂದೆ ಜಾರಿ ಅಗತ್ಯವಿದೆ. ಕೇಂದ್ರ ಸರ್ಕಾರ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವವರೆಗೂ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಿದೆ ಎಂದು ಧರಣಿನಿರತರು ತಿಳಿಸಿದರು.

ವೆಂಕಟೇಶ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಎನ್.ಎಸ್.ನಾಗೇಂದ್ರಸ್ವಾಮಿ, ಉದಯ್‌ಶಂಕರ್, ಮಾದೇಶ್, ಸುಹೇಲ್, ಶಿವಕುಮಾರ್, ನಂಜುಂಡ ಸ್ವಾಮಿ, ವಿಜಯ್‌ಕುಮಾರ್, ಮಂಜುನಾಥ್ ಬಸವರಾಜು ಇತರರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಕಚೇರಿ: ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಜೆಎಸ್‌ಎಸ್ ಕಾನೂನು ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ಮಾಡಿದರು. ಲೋಕಪಾಲ್ ಮಸೂದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೂಗಿದ ಘೋಷಣೆ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT