ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹಜಾರೆ ಬೇಡಿಕೆಗಳಿಗೆ ಸ್ಪಂದಿಸಲು ಆಗ್ರಹ

Last Updated 26 ಆಗಸ್ಟ್ 2011, 8:30 IST
ಅಕ್ಷರ ಗಾತ್ರ

ಯಾದಗಿರಿ: ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಣ್ಣಾ ಹಜಾರೆ ಹೋರಾಟ ನಡೆಸುತ್ತಿದ್ದು, ಅವರ ಬೇಡಿಕೆಗಳಿಗೆ ಕೂಡಲೇ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ನಗರದಲ್ಲಿ ಗುರುವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಆಗ್ರಹಿಸಲಾಯಿತು.

ಅಣ್ಣಾ ಹಜಾರೆ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಕರೆ ನೀಡಲಾಗಿದ್ದ ಬಂದ್ ಹಿನ್ನೆಲೆಯಲ್ಲಿ ಇಲ್ಲಿಯ ಗಾಂಧಿ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಗಣ್ಯರು, ಕೂಡಲೇ ಅಣ್ಣಾ ಹಜಾರೆ ಅವರ ಬೇಡಿಕೆಗಳನ್ನು ಒಪ್ಪಿ, ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಬೇಕು. ಅಣ್ಣಾ ಹಜಾರೆ ಅವರಿಗೆ ಏನಾದರೂ ತೊಂದರೆ ಆದರೆ, ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿರಿಯರಾದ ಅಯ್ಯಣ್ಣ ಹುಂಡೇಕಾರ ಮಾತನಾಡಿ, ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಾಗಿದೆ. ಇದಕ್ಕಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಅಣ್ಣಾಗೆ ವ್ಯಕ್ತವಾಗಿರುವ ಬೆಂಬಲವನ್ನು ನೋಡಿದರೆ, ಇಡೀ ದೇಶವೇ ಭ್ರಷ್ಟಾಚಾರದಿಂದ ರೋಸಿ ಹೋಗಿದೆ.

ಎಲ್ಲೆಡೆಯೂ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಇದರಿಂದ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ, ಈ ದೇಶದಲ್ಲಿ ಎಲ್ಲ ರಂಗಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗುತ್ತಿದೆ. ಇದನ್ನು ನಿಗ್ರಹಿಸದಿದ್ದಲ್ಲಿ, ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ. ದೇಶದ ಜನರ ಕೂಗು ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಣ್ಣಾ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧಾರೆಡ್ಡಿ ಬಲಕಲ್ ಮಾತನಾಡಿ, ದೇಶವ್ಯಾಪಿ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಯುವಕರು ಸೇರಿದಂತೆ ಎಲ್ಲ ವರ್ಗದ ಜನರು ಉಪವಾಸ, ಧರಣಿ, ಮೆರವಣಿಗೆ, ಮೋಂಬತ್ತಿ ಮೆರವಣಿಗೆ ಸೇರಿದಂತೆ ನಾನಾ ರೀತಿಯ ಹೋರಾಟಗಳ ಮೂಲಕ ಅಣ್ಣಾ ಹಜಾರೆ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜನರ ಆಶಯಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ವಹಿವಾಟು ಬಂದ್: ಅಣ್ಣಾ ಹಜಾರೆ ಹೋರಾಟ ಸಮಿತಿ ಕರೆ ನೀಡಿದ್ದ ಯಾದಗಿರಿ ಬಂದ್‌ಗೆ ವರ್ತಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಎಲ್ಲ ವರ್ತಕರು ಬೆಳಿಗ್ಗೆಯಿಂದಲೇ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿ ಹೋರಾಟವನ್ನು ಬೆಂಬಲಿಸಿದರು.

ಆದರೆ ಅಟೋ ರಿಕ್ಷಾ, ಬಸ್ ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು. ಸರ್ಕಾರಿ ಶಾಲೆ-ಕಾಲೇಜುಗಳು ಕಾರ್ಯನಿರ್ವಹಿಸಿದರೆ, ಖಾಸಗಿ ಸಂಸ್ಥೆಗಳ ಕೆಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದರಿಂದಾಗಿ ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿದ್ದರೆ, ಇನ್ನೂ ಕೆಲ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಹಾತ್ಮಾ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಔಷಧಿ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು.

ಬೆಳಿಗ್ಗೆ ಮೈಲಾಪುರ ಅಗಸಿಯಿಂದ ಮೆರವಣಿಗೆ ಆರಂಭಿಸಲಾಯಿತು. ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಸೊಪ್ಪಿಮಠದ ಚೆನ್ನದೇವರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚೆನ್ನೂರ, ಅಣ್ಣಾ ಹಜಾರೆ ಹೋರಾಟ ಸಮಿತಿ ಸಂಚಾಲಕ ಗೌರೀಶ ಬಾಡದ, ವಿಶ್ವನಾಥ ಸಿರವಾರ, ಬದ್ರಿ ನಾರಾಯಣ ಭಟ್ಟಡ, ವಿ.ಸಿ. ರೆಡ್ಡಿ, ಅನಿಲ ಗುರೂಜಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸುನೀತಾ ಚವ್ಹಾಣ, ನಗರ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವಿನೋದ ಜೈನ್, ಗೋಪಾಲ ದಾಸನಕೇರಿ, ನಾಗರಾಜ ಬೀರನೂರ, ಮಹೇಂದ್ರಗೌಡ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಕರವೇ  ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ಜಯಕರ್ನಾಟಕ ಸಂಘಟನೆಯ ಕೃಷ್ಣಮೂರ್ತಿ ಕುಲಕರ್ಣಿ, ಭೀಮಾಶಂಕರ ಆಲ್ದಾಳ, ಡಾ. ಎನ್.ಜಿ. ವಾರದ, ಇಂದೂಧರ ಸಿನ್ನೂರ, ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT