ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ಹೋರಾಟಕ್ಕೆ ಆನೆ ಬಲ

Last Updated 17 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಬಲ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟ ಬೆಂಬಲಿಸಿ `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಧರಣಿಗೆ ಬುಧವಾರವೂ ಭಾರಿ ಜನ ಬೆಂಬಲ ವ್ಯಕ್ತವಾಗಿದೆ.

ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿರುವ ಪರಿಣಾಮ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಪಾಲ್ಗೊಂಡು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಹಜಾರೆ ಅವರ ಬಂಧನ ಖಂಡಿಸಿ `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ ನಲವತ್ತು ಮಂದಿ ಸದಸ್ಯರು ಬೆಂಗಳೂರಿನಿಂದ ನವದೆಹಲಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೂ ಇದೇ ಸಂದರ್ಭದಲ್ಲಿ ಚಾಲನೆ ದೊರಕಿತು. ಹಾಡು, ನೃತ್ಯ, ಕಿರುನಾಟಕಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ನಾಟಕದ ಮೂಲಕ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಹೋರಾಟದಲ್ಲಿ ಎರಡನೇ ದಿನವೂ ಪಾಲ್ಗೊಂಡು ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, `ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮಂತ್ರದಂಡ ಸರ್ಕಾರದ ಬಳಿ ಇಲ್ಲ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಮಂತ್ರದಂಡ ಇಲ್ಲ ಸರಿ, ಆದರೆ ಭ್ರಷ್ಟಾಚಾರ ಹೋಗಲಾಡಿಸಲು ದಾರಿ ಹುಡುಕಬೇಕಲ್ಲವೇ. ಲೋಕಪಾಲ ಮಸೂದೆಯೇ ಆ ಮಂತ್ರ ದಂಡ~ ಎಂದರು. ಕ್ಯಾಪ್ಟನ್ ಗೋಪಿನಾಥ್ ಮುಂತಾದವರು ಧರಣಿಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಅಖಾಡಕ್ಕೆ: ಹಜಾರೆ ಅವರ ಬಂಧನ ಖಂಡಿಸಿ ಬೀದಿಗಿಳಿಯುವಂತೆ ವಿವಿಧ ಸಂಘಟನೆಗಳು ನೀಡಿದ್ದ ಕರೆಗೆ ವಿದ್ಯಾರ್ಥಿಗಳಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಯಿತು. ಬೆಳಿಗ್ಗೆ ಕಾಲೇಜಿಗೆ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ತಂಡೋಪತಂಡವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೇರೇಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಕೆಲ ಕಾಲೇಜುಗಳ ಆಡಳಿತ ಮಂಡಳಿಯವರು ಸ್ವಯಂಪ್ರೇರಿತರಾಗಿ ತರಗತಿಗಳಿಗೆ ರಜೆ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೆಲವು ವಿದ್ಯಾರ್ಥಿಗಳು ವಾಹನಗಳಲ್ಲಿ ನೇರವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದರೆ, ಇನ್ನೂ ಹಲವರು ಗುಂಪು ಗುಂಪಾಗಿ ಘೋಷಣೆಗಳನ್ನು ಕೂಗುತ್ತಾ ಬಂದು ಹೋರಾಟಗಾರರನ್ನು ಸೇರ್ಪಡೆಯಾದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಇದ್ದ ಚಿತ್ರಣ ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಸಂಪೂರ್ಣ ಬದಲಾಗಿತ್ತು. ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳ- ಯುವಕರ ಹೋರಾಟ ಎಂಬಂತೆ ಭಾಸವಾಗುತ್ತಿತ್ತು.

`ಭಾರತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಈ ಬಗ್ಗೆ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ಇದನ್ನು ಬುಡಸಮೇತ ಕಿತ್ತು ಹಾಕದಿದ್ದರೆ ದೇಶಕ್ಕೆ ಮಾರಕವಾಗಲಿದೆ. ಆದ್ದರಿಂದಲೇ ನಾವು ಬೀದಿಗಿಳಿದಿದ್ದೇವೆ. ಸ್ವಯಂಪ್ರೇರಿತವಾಗಿ ಹೋರಾಟ ಮುಂದುವರೆಸುತ್ತೇವೆ~ ಎಂದು ಬೆಂಗಳೂರು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿ ಕಾರ್ತಿಕ್ ಹೇಳಿದರು.

`ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಯಾವಾಗಲೂ ಬೆಂಬಲಿಸಿದ್ದೇನೆ. ಆದರೆ ಯಾವತ್ತೂ ನೇರವಾಗಿ ಬೀದಿಗೆ ಇಳಿದಿರಲಿಲ್ಲ. ಹಜಾರೆ ಅವರನ್ನು ಪೊಲೀಸರು ಬಂಧಿಸಿದ್ದನ್ನು ನೋಡಿದ ಮೇಲೆ ಬೀದಿಗಿಳಿಯಬೇಕು ಎನಿಸಿತು. ಹಜಾರೆ ಅವರ ಬಂಧನ ಸರಿಯಲ್ಲ~ ಎಂದು ವಿದ್ಯಾರ್ಥಿ ರಾಹುಲ್ ಹೇಳಿದರು. ಒಕ್ಕಲಿಗರ ಸಂಘ ದಂತ ವೈದ್ಯಕೀಯ ಮಹಾವಿದ್ಯಾಲಯದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದರು. `ಪ್ರಬಲ ಲೋಕಪಾಲ್ ಮಸೂದೆ ಬೇಕು, ಭ್ರಷ್ಟಾಚಾರ ಸಾಕು~ ಮುಂತಾದ ಬರಹಗಳಿದ್ದ ಪೋಸ್ಟರ್‌ಗಳನ್ನು ಅವರು ಪ್ರದರ್ಶಿಸಿದರು.

ವ್ಯಾಪಾರ ಬಂದ್: ಹಜಾರೆ ಅವರ ಹೋರಾಟ ಬೆಂಬಲಿಸಿ ನಗರದ ಚಿಕ್ಕಪೇಟೆ ವರ್ತಕರು ಬುಧವಾರ ವ್ಯಾಪಾರವನ್ನು ಬಂದ್ ಮಾಡಿದ್ದರು. ಚಿಕ್ಕಪೇಟೆ ಪ್ರದೇಶದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾವಿರಾರು ಮಂದಿ ಆಗಮಿಸಿದ ಕಾರಣ ಉದ್ಯಾನದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಯಿತು.

ಜೆಡಿಯು ಪ್ರತಿಭಟನೆ: ಹಜಾರೆ ಅವರ ಬಂಧನ ಕ್ರಮವನ್ನು ವಿರೋಧಿಸಿ ಜೆಡಿಯು ಪಕ್ಷದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ನಗರದ ಆನಂದರಾವ್ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 12 ಗಂಟೆಯಿಂದ ಎರಡು ಗಂಟೆಯವರೆಗೆ ಈ ಪ್ರತಿಭಟನೆ ನಡೆಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸಿ.ರೆಡ್ಡಿ, ಸಂಘಟನಾ ಕಾರ್ಯದರ್ಶಿ ಅಭಯ ರಂಗನಾಥ್, ಮಾಜಿ ಶಾಸಕ ಧರ್ಮಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೆಳಕು ಸೇವಾ ಟ್ರಸ್ಟ್: ಬಿಟಿಎಂ ಲೇಔಟ್‌ನ ನೂರು ಅಡಿ ರಸ್ತೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಬೆಳಕು ಸೇವಾ ಟ್ರಸ್ಟ್‌ನ ಸದಸ್ಯರು `ಹಜಾರೆ ಅವರ ಹೋರಾಟವನ್ನು ದಮನಗೊಳಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ದೋರಣೆ ಪ್ರದರ್ಶಿಸುತ್ತಿದೆ~ ಎಂದು ದೂರಿದರು.

ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಟಿ.ಆರ್. ತುಳಸಿರಾಮ್, ಟ್ರಸ್ಟ್‌ನ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಚಿಕ್ಕರಾಜು, ಕಾರ್ಯದರ್ಶಿ ಬಿ.ಬಿ.ಕರುಣಾಕರ್ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ದಲಿತ ಸಂಘರ್ಷ ಸಮಿತಿ ಕರ್ನಾಟಕ: ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರತಿಭಟನೆ ಮಾಡಿದ ದಲಿತ ಸಂಘರ್ಷ ಸಮಿತಿ ಸದಸ್ಯರು ಸಶಕ್ತ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿದರು.

ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ದೇಶದ ಎಲ್ಲ ನಾಗರಿಕರು ಬೆಂಬಲ ನೀಡಬೇಕೆಂದು ಸಂಘಟನೆಯ ವಿಭಾಗೀಯ ಸಂಚಾಲಕ ಎ.ಮಂಜುನಾಥ್ ಮನವಿ ಮಾಡಿದರು.

ಬಿಇಎಸ್ ಕಾಲೇಜು: ಜಯನಗರದ ಬಿಇಎಸ್ ಕಾಲೇಜಿನ ವಿದ್ಯಾರ್ಥಿಗಳು `ಫ್ರೆಂಡ್ಸ್ ಪವರ್~ ಸಂಘಟನೆ ನೇತೃತ್ವದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಜಯನಗರ ನಾಲ್ಕು ಮತ್ತು ಮೂರನೇ ಬ್ಲಾಕ್‌ನಲ್ಲಿ ವಿದ್ಯಾರ್ಥಿಗಳು ರ‌್ಯಾಲಿ ನಡೆಸಿದರು. ಫ್ರೆಂಡ್ಸ್ ಪವರ್ ಸಂಘಟನೆಯ ಅಧ್ಯಕ್ಷ ವಿ.ಆರ್.ಆನಂದ್, ಧನಂಜಯ್ ಮತ್ತಿತರರು ಪಾಲ್ಗೊಂಡಿದ್ದರು.

ಸಿಪಿಎಂ: ಸತ್ಯಾಗ್ರಹಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಿಪಿಎಂ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

`ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕಾರಣ~ ಎಂದು ಅವರು ಆರೋಪಿಸಿದರು. ಸಂಘಟನೆ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಎಸ್.ವೈ.ಗುರುಶಾಂತ್, ಜಿ.ಸಿ.ಬಯ್ಯಾರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸತ್ಯಾಗ್ರಹಿಗಳು ಅಸ್ವಸ್ಥ
ಸ್ವಾತಂತ್ರ್ಯ ಉದ್ಯಾನದಲ್ಲಿ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನಲೀಮಾ ರೆಡ್ಡಿ (34), ನಫೀಜ್ ಅಹಮ್ಮದ್ (65) ಮತ್ತು ಯೋಗೇಶ್ ಹುಕ್ಕೇರಿ (50) ಎಂಬುವರು ಅಸ್ವಸ್ಥಗೊಂಡಿದ್ದಾರೆ. ಮೂರು ಮಂದಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಗಮನ ಸೆಳೆದ ಪೋಸ್ಟರ್‌ಗಳು
ಹೋರಾಟಗಾರರು ಪ್ರದರ್ಶಿಸಿದ ಪೋಸ್ಟರ್‌ಗಳು ಎಲ್ಲರ ಗಮನ ಸೆಳೆದವು. `1947ರ ಆಗಸ್ಟ್ 15ರಂದು ನಾವು ಸ್ವಾತಂತ್ರ್ಯ ಪಡೆದವು, ಆದರೆ 2011ರ ಆಗಸ್ಟ್ 16ರಂದು ಆ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡಿದ್ದೇವೆ~. ಭ್ರಷ್ಟಾಚಾರ ವಿರೋಧಿಸಿ ಸತ್ಯಾಗ್ರಹ ನಡೆಸಲು ಮುಂದಾದ ಹಜಾರೆ ಅವರನ್ನು ಬಂಧಿಸುವ ಮೂಲಕ ಸರ್ಕಾರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂಬುದು ಈ ಬರಹದ ಸಾರಾಂಶವಾಗಿತ್ತು.   ಬ್ರಿಟೀಷರು ದೇಶ ಕೊಳ್ಳೆ ಹೊಡೆದು ಸಂಪತ್ತನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು. ರಾಜಕಾರಣಿಗಳು ದೇಶದ ಸಂಪತ್ತು ಲೂಟಿ ಮಾಡಿ ವಿದೇಶಿ ಬ್ಯಾಂಕ್‌ಗಳಲ್ಲಿ ಇಡುತ್ತಿದ್ದಾರೆ. ಏನಿದೆ ವ್ಯತ್ಯಾಸ? ಎಂಬ ಇನ್ನೊಂದು ಪೋಸ್ಟರ್ ಅರ್ಥಗರ್ಭಿತವಾಗಿತ್ತು. `ನಾನು ಅಣ್ಣಾ ಹಜಾರೆ~ ಎಂಬ ಬರಹವಿದ್ದ ಟೀ ಶರ್ಟ್ ಮತ್ತು ಟೋಪಿಗಳು ಎಲ್ಲೆಡೆ ಕಂಡುಬಂದವು.

ದೆಹಲಿಗೆ ಹೊರಟ ಪಾದಯಾತ್ರೆ
`ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ 40 ಮಂದಿ ಸದಸ್ಯರು ಬುಧವಾರ ಬೆಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಆರಂಭಿಸಿದರು. `ಪ್ರತಿ ದಿನ ನಲವತ್ತು ಕಿ.ಮೀ ಕ್ರಮಿಸುವ ಉದ್ದೇಶವಿದೆ. ಎರಡೂವರೆ ತಿಂಗಳಲ್ಲಿ ದೆಹಲಿ ತಲುಪುವ ನಿರೀಕ್ಷೆ ಇದೆ.  ಸಾರ್ವಜನಿಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ವಾಹನದಲ್ಲಿ ಬರುವವರಿಗೂ ಅವಕಾಶವಿದೆ~ ಎಂದು ಸಂಘಟನೆಯ ಸದಸ್ಯರು ತಿಳಿಸಿದರು. ಸಂತೋಷ್ ಹೆಗ್ಡೆ ಅವರು ಈ ಪಾದಯಾತ್ರೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬಡಾವಣೆಗಳ ಮೂಲಕ ಯಶವಂತಪುರ ಜೆ.ಪಿ.ಉದ್ಯಾನದವರೆಗೆ ಮೊದಲ ದಿನದ ಪಾದಯಾತ್ರೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT