ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಗೆ ಬಾಗಿದ ಸರ್ಕಾರ

Last Updated 23 ಆಗಸ್ಟ್ 2011, 19:00 IST
ಅಕ್ಷರ ಗಾತ್ರ

ನವದೆಹಲಿ: ಕ್ಷಿಪ್ರ ಬೆಳವಣಿಗೆಯಲ್ಲಿ ಮಂಗಳವಾರ ಅಣ್ಣಾ ಹಜಾರೆ ಅವರೊಂದಿಗಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಯತ್ನಕ್ಕೆ ಸರ್ಕಾರ ಮುಂದಾಗಿದ್ದು ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿಯನ್ನು ಮತ್ತು ಸಿಬಿಐನ ಭ್ರಷ್ಟಾಚಾರ ವಿರೋಧಿ ಘಟಕವನ್ನು ಓಂಬುಡ್ಸ್‌ಮನ್‌ನಡಿ ತರಲು ಒಪ್ಪಿಕೊಂಡಿದೆ.

ಲೋಕಪಾಲ ಮಸೂದೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಂಡ ಮತ್ತು  ಸರ್ಕಾರದ ನಡುವೆ ಮಂಗಳವಾರ ರಾತ್ರಿ ನಡೆದ ಮೊದಲ ಸುತ್ತಿನ ಮಾತುಕತೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಅಪೂರ್ಣಗೊಂಡಿತು. ಬುಧವಾರ ಉಭಯ ಬಣಗಳು ಪುನಃ ಸಭೆ ಸೇರಲಿವೆ.

ಸಂಸತ್ತಿನ ಸ್ಥಾಯಿ ಸಮಿತಿ ಮುಂದಿರುವ ಸರ್ಕಾರದ ಲೋಕಪಾಲ ಮಸೂದೆಯನ್ನು ಹಿಂದಕ್ಕೆ ಪಡೆದು ನಾಗರಿಕ ಸಂಘಟನೆಗಳ ಜನ ಲೋಕಪಾಲ ಮಸೂದೆಯನ್ನೇ ಮಂಡಿಸಬೇಕು. ಈ ಮಸೂದೆಯಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ಕಾನೂನು ಇಲಾಖೆಯು ಸರಿಪಡಿಸಿ, ಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಅಂಗೀಕರಿಸಬೇಕು ಎಂದು ಅಣ್ಣಾ ತಂಡ ಹಟ ಹಿಡಿದಿದೆ.

ಮೊದಲಿಗೆ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಆರು ಅಂಶಗಳ ಬಗೆಗೆ ಭಿನ್ನಾಭಿಪ್ರಾಯಗಳಿತ್ತು. ಮೊದಲ ಸುತ್ತಿನ ಚರ್ಚೆ ಬಳಿಕ ಮೂರಕ್ಕೆ ಇಳಿದಿದೆ. ಪ್ರಧಾನಿ ಕಚೇರಿಯನ್ನು ಲೋಕಪಾಲದ ವ್ಯಾಪ್ತಿಗೆ ತರಲು ಒಪ್ಪಲಾಗಿದೆ. ಉನ್ನತ ನ್ಯಾಯಾಂಗಕ್ಕೆ ಪ್ರತ್ಯೇಕ `ನ್ಯಾಯಾಂಗ ಹೊಣೆಗಾರಿಕೆ ಮಸೂದೆ~ ಜಾರಿಗೆ ತರಲಾಗುತ್ತಿದೆ. ಸಂಸತ್ತಿನೊಳಗಿನ ಸಂಸದರ ನಡವಳಿಕೆ ಮತ್ತು ಕಿರಿಯ ಅಧಿಕಾರಿಗಳ ಸೇರ್ಪಡೆ ಒಳಗೊಂಡಂತೆ ಉಳಿದ ಮೂರು ಅಂಶಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟು ಮುಂದುವರಿದಿದೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಅಣ್ಣಾ ತಂಡದ ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಪ್ರಶಾಂತ್ ಭೂಷಣ್ ಅವರ ನಡುವೆ ಮೂರು ಗಂಟೆ ಮಾತುಕತೆ ನಡೆಯಿತು.

ಜನ ಲೋಕಪಾಲ ಮಸೂದೆ ಬೇಡಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಹಿರಿಯ ಸಚಿವರ ಜತೆ ಸಮಾಲೋಚಿಸಿ ಬುಧವಾರ ನಿಲುವು ಬಹಿರಂಗ ಮಾಡುವುದಾಗಿ ಪ್ರಣವ್ ಮುಖರ್ಜಿ ಭರವಸೆ ನೀಡಿದ್ದಾರೆ ಎಂದು ಕೇಜ್ರಿವಾಲ್, ಪ್ರಶಾಂತ್ ಭೂಷಣ್ ತಿಳಿಸಿದರು.

ಅಣ್ಣಾ ಅವರಿಗೆ ಉಪವಾಸ ಕೈಬಿಡಲು ಮನವೊಲಿಸುವಂತೆ ಸರ್ಕಾರ ಮನವಿ ಮಾಡಿತು. ಬೇಡಿಕೆ ಕುರಿತು ಸರ್ಕಾರದಿಂದ ಲಿಖಿತ ಭರವಸೆ ಸಿಗದ ಹೊರತು ಉಪವಾಸ ನಿಲ್ಲಿಸಲು ಅವರು ಒಪ್ಪುವುದಿಲ್ಲ ಎಂದು ಮನವರಿಕೆ ಮಾಡಲಾಯಿತು ಎಂದು ಕಿರಣ್ ಬೇಡಿ ಹೇಳಿದರು.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರಣವ್ ಮುಖರ್ಜಿ, ಜನ ಲೋಕಪಾಲ ಮಸೂದೆ ಕುರಿತು ಬುಧವಾರ ಸಭೆ ಮುಂದುವರಿಯಲಿದ್ದು, ಬಿಕ್ಕಟ್ಟಿಗೆ ಪರಿಹಾರ ಸಿಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದರು.

ಇದಕ್ಕೆ ಕೆಲವೇ ಗಂಟೆಗಳ ಮೊದಲು, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮನಮೋಹನ್ ಸಿಂಗ್, ಜನ ಲೋಕಪಾಲ ಮಸೂದೆಯನ್ನೂ ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಲು ಸರ್ಕಾರ ಸಿದ್ಧವಿದ್ದು, ಉಪವಾಸ ಕೈಬಿಡಲು ವಿನಂತಿಸಿಕೊಂಡಿದ್ದಾರೆ.

ಪತ್ರದಲ್ಲಿ, `ಜನ ಲೋಕಪಾಲ ಮಸೂದೆಯನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಔಪಚಾರಿಕವಾಗಿ ಕಳುಹಿಸುವಂತೆ ಸ್ಪೀಕರ್‌ಗೆ ಮನವಿ ಮಾಡಲು ಸರ್ಕಾರ ಸಿದ್ಧವಿದೆ. ನಿಮ್ಮ ತಂಡ ಪದೇ ಪದೇ ಜನ ಲೋಕಪಾಲ ಮಸೂದೆಯನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸುವಂತೆ ಒತ್ತಡ ಹೇರುತ್ತಿದೆ. ಇದಕ್ಕಿಂತ ಮಿಗಿಲಾಗಿ ನಿಮ್ಮ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈ ತೀರ್ಮಾನಕ್ಕೆ ಮುಂದಾಗಿದೆ~ ಎಂದಿದ್ದಾರೆ.

`ಭ್ರಷ್ಟಾಚಾರವನ್ನು ಪೂರ್ಣವಾಗಿ ಅಲ್ಲದಿದ್ದರೂ ಪರಿಣಾಮಕಾರಿಯಾಗಿ ಹದ್ದುಬಸ್ತಿನಲ್ಲಿಡುವ ಸರ್ಕಾರ ಮತ್ತು ನಿಮ್ಮ ತಂಡದ ಧ್ಯೇಯದಲ್ಲಿ ಸಾಮ್ಯತೆ ಇದೆ. ನಮ್ಮ ದಾರಿ ಮತ್ತು ವಿಧಾನಗಳ ಬೇರೆ ಬೇರೆ ಆಗಿರಬಹುದು. ಈ ನಿಟ್ಟಿನಲ್ಲಿ ಸಂವಿಧಾನದ ಪಾರಮ್ಯಕ್ಕೆ ಒಳಪಟ್ಟು ಜನ ಲೋಕಪಾಲ ಮಸೂದೆಯ ಉತ್ತಮ ಅಂಶಗಳನ್ನು ಒಳಗೊಂಡ ಅತ್ಯುತ್ತಮವಾದ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ.ಈ ಕಾರಣಕ್ಕೆ ಯಾರ ಜತೆಗಾದರೂ ಚರ್ಚೆಗೆ ಬದ್ಧ. ಆದರೆ, ಸಂಸತ್ತಿನ ಪರಮಾಧಿಕಾರದ ಚೌಕಟ್ಟಿನೊಳಗೆ  ಒಮ್ಮತ ಮೂಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತು ಹಿರಿಯ ಸಚಿವರ ಜತೆ ದಿನವಿಡೀ ಎಡಬಿಡದೆ ನಡೆಸಿದ ಪ್ರತ್ಯೇಕ ಸಭೆಯ ಬಳಿಕ ಪ್ರಧಾನಿ ಅಣ್ಣಾ ಅವರಿಗೆ ಈ ಪತ್ರ ಬರೆದಿದ್ದಾರೆ. ಸರ್ಕಾರದ ಲೋಕಪಾಲ ಮಸೂದೆ ಪರಿಶೀಲಿಸುತ್ತಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಅಭಿಷೇಕ್ ಮನುಸಿಂಘಿ ್ವ ಅವರನ್ನು ಬೆಳಿಗ್ಗೆ ಭೇಟಿ ಮಾಡಿದ್ದರು. ಇಬ್ಬರ ನಡುವೆ ಒಂದೂವರೆ ಗಂಟೆ ಸುದೀರ್ಘ ಮಾತುಕತೆ ನಡೆಯಿತು.

ಅನಂತರ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿ ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ  ರಾಹುಲ್ ಗಾಂಧಿ, ಹಿರಿಯ ಸಚಿವರಾದ ಪ್ರಣವ್ ಮುಖರ್ಜಿ, ಎ. ಕೆ. ಆಂಟನಿ ಅವರೊಂದಿಗೆ ಪ್ರಧಾನಿ ಸಮಾಲೋಚಿಸಿದರು. ಬಳಿಕ  ಸಿಂಗ್ ಮತ್ತು ರಾಹುಲ್ ಇಬ್ಬರೇ ಮಾತುಕತೆ ನಡೆಸಿದರು. ರಾಹುಲ್ ಮತ್ತು ಸಿಂಗ್ ಚರ್ಚೆಯ ಪರಿಣಾಮವೇ ಈ ಪತ್ರ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

`ನಿಮಗೇ ತಿಳಿದಿರುವಂತೆ ಲೋಕಪಾಲ ಮಸೂದೆ ಸ್ಥಾಯಿ ಸಮಿತಿ ಮುಂದಿದೆ. ನಾನು ಮೊದಲೇ ಹೇಳಿರುವಂತೆ ಈ ಸಮಿತಿ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಿಕೊಂಡಿದೆ. ಸರ್ಕಾರದ ಮಸೂದೆಯ ಪ್ರತಿಯೊಂದು ಅಂಶಗಳನ್ನು ಅದರ ವಿವೇಚನೆಗೆ ಒಳಪಟ್ಟು  ವಿವರವಾಗಿ ಪರಿಶೀಲಿಸಲಿದೆ. ಇದರ ಜತೆ ನಿಮ್ಮ ತಂಡದ ಜನ ಲೋಕಪಾಲ ಮಸೂದೆ ಹಾಗೂ ಅರುಣಾ ರಾಯ್ ಅವರ ಲೋಕಪಾಲ ಮಸೂದೆ  ಒಳಗೊಂಡು ತನ್ನ ಮುಂದಿರುವ ಎಲ್ಲ ಮಸೂದೆಗಳನ್ನು ಅಷ್ಟೇ ಪ್ರಮುಖವಾಗಿ ಅಧ್ಯಯನ ಮಾಡಲಿದೆ~.

`ಕೇಂದ್ರ ಮಂಡಿಸಿರುವ ಮಸೂದೆಯಲ್ಲಿ ಏನೇ ಬದಲಾವಣೆ ಮಾಡುವ ಅಧಿಕಾರ ಸ್ಥಾಯಿ ಸಮಿತಿಗಿದೆ. ಈ ಹಿನ್ನೆಲೆಯಲ್ಲಿ ಜನ ಲೋಕಪಾಲ ಮಸೂದೆಯನ್ನು ಸರ್ಕಾರ ಔಪಚಾರಿಕವಾಗಿ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂಬ ಬೇಡಿಕೆ ಅಪ್ರಸ್ತುತ. ಆದರೂ ಕ್ಷೀಣಿಸುತ್ತಿರುವ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಪೀಕರ್ ಒಪ್ಪಿಗೆ ಪಡೆದು ಔಪಚಾರಿಕವಾಗಿ ಮಂಡಿಸಲಾಗುವುದು~ ಎಂದಿದ್ದಾರೆ.

`ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದ ಕಾಲಮಿತಿ ಕುರಿತು ನಿಮಗೆ ಕಳವಳವಿದ್ದರೆ, ಸಮಿತಿ ವಿವೇಚನೆಗೊಳಪಟ್ಟು ಸಾಧ್ಯವಾದಷ್ಟು ತ್ವರಿತವಾಗಿ ಮಸೂದೆಯ ಮಹತ್ವವನ್ನು ಪರಿಗಣಿಸಿ ಆದ್ಯತೆ ಮೇಲೆ ಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದು ಪ್ರಧಾನಿ ಪತ್ರದಲ್ಲಿ ವಿವರಿಸಿದ್ದಾರೆ.

ನಿಮ್ಮ ಆರೋಗ್ಯ ಕುರಿತ ಕಳಕಳಿ ಮತ್ತು ಪ್ರಬಲ ಲೋಕಪಾಲ ಮಸೂದೆ ಜಾರಿ ಈ ಎರಡೂ ಉದ್ದೇಶದಿಂದ  ಪತ್ರ ಬರೆಯಲಾಗುತ್ತಿದೆ~ ಎಂದು ಸಿಂಗ್ ಅಣ್ಣಾ ಅವರಿಗೆ ವಿವರಿಸಿದ್ದಾರೆ.

ಪ್ರಧಾನಿ ಪತ್ರದ ಹಿನ್ನೆಲೆಯಲ್ಲಿ, `ಕೇಂದ್ರದ ಲೋಕಪಾಲ ಮಸೂದೆಯು ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಪರಿಶೀಲನೆಯಲ್ಲಿ     ಇರುವಾಗ ಅದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಮಸೂದೆಯನ್ನು ಮಂಡಿಸಲು ಸಾಧ್ಯವೇ?~ ಎಂಬ ಪ್ರಶ್ನೆ ಎದುರಾಗಿದೆ. ಜನ ಲೋಕಪಾಲ ಮಸೂದೆ ಮಂಡಿಸಲು ಲೋಕಪಾಲ ಮಸೂದೆ ಹಿಂತೆಗೆದುಕೊಳ್ಳಬೇಕೇ ಎಂಬ ಗೊಂದಲವೂ ತಲೆದೋರಿದೆ. ಆದರೆ, ಸ್ಪೀಕರ್ ವಿವೇಚನಾ ಅಧಿಕಾರ ಬಳಸಿ ನಿಯಮ 67ರ ಅಡಿ ಜನ ಲೋಕಪಾಲ ಮಸೂದೆ ಮಂಡನೆಗೆ ಅವಕಾಶ ಕೊಡಬಹುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಅಣ್ಣಾ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡದೆ ನಿರಾಶೆಗೊಳಿಸಿದ್ದ ಹಿರಿಯ ಹೋರಾಟಗಾರ ಮಂಗಳವಾರ ಎರಡು ಸಲ ವೇದಿಕೆ ಮೇಲೆ ಪ್ರತ್ಯಕ್ಷವಾದರು. ಪ್ರಣವ್‌ಮುಖರ್ಜಿ ಅವರು ಅಣ್ಣಾ ತಂಡದ ಜತೆ ಚರ್ಚೆ ನಡೆಸಿದ ಬಳಿಕ, ತಡರಾತ್ರಿ ಪ್ರಧಾನಿ  ಹಿರಿಯ ಸಹದ್ಯೋಗಿಗಳ ಜತೆ ಚರ್ಚಿಸಿದ್ದಾರೆ.

ಅಣ್ಣಾ ಹಜಾರೆ ಬಳಗದ ಹೇಳಿಕೆ
ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರಲು ಸರ್ಕಾರಕ್ಕೆ ಯಾವುದೇ ಆಕ್ಷೇಪ ಇದ್ದಂತಿಲ್ಲ. ಆದರೆ ನ್ಯಾಯಾಧೀಶರ ಕುರಿತಂತೆ ಸರ್ಕಾರ `ಪ್ರತ್ಯೇಕ ಕಾನೂನು~ ತರುವುದಾಗಿ ಮತ್ತು `ಅದನ್ನು ನಮ್ಮ ಗಮನಕ್ಕೆ ತರುವುದಾಗಿ ಭರವಸೆ ನೀಡಿದೆ.
* ಸಿಬಿಐನ ಭ್ರಷ್ಟಾಚಾರ ವಿರೋಧಿ ಘಟಕವನ್ನು ಲೋಕಪಾಲದಡಿ ತರಲು ಮತ್ತು ಸಂಸತ್ ಸದಸ್ಯರ ಭ್ರಷ್ಟಾಚಾರದ ಕಾರ್ಯಗಳನ್ನು ಓಂಬುಡ್ಸ್‌ಮನ್ ವ್ಯಾಪ್ತಿಗೆ ತರಲು ಸರ್ಕಾರ ಒಪ್ಪಿದೆ
* ಮೂರು ವಿಷಯಗಳಲ್ಲಿ ಉಳಿದ ಭಿನ್ನಾಭಿಪ್ರಾಯ: ನಾಗರಿಕರ ಸನ್ನದು ರಚನೆ, ಕೆಳ ಹಂತದ ಅಧಿಕಾರಿಗಳ ಸೇರ್ಪಡೆ ಮತ್ತು ರಾಜ್ಯಗಳ ಲೋಕಾಯುಕ್ತ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT