ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಗೆ ಬಿಜೆಪಿಯತ್ತ ಏಕಿಷ್ಟು ಮಮಕಾರ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಬಿಜೆಪಿ ಬಗ್ಗೆ ನಿಮಗೆ ಏಕಿಷ್ಟು ಮಮಕಾರ? ಎಂದು ಕಾಂಗ್ರೆಸ್ ಧುರೀಣ ದಿಗ್ವಿಜಯ್ ಸಿಂಗ್ ಅವರು ಅಣ್ಣಾ ಹಜಾರೆ ಮತ್ತು ತಂಡವನ್ನು ಪ್ರಶ್ನಿಸಿದ್ದಾರೆ.

ಹಿಸ್ಸಾರ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರದಲ್ಲಿ ತೊಡಗಿರುವ ಅಣ್ಣಾ ಮತ್ತು ತಂಡವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅವರು, ನೀವೇಕೆ ಒಮ್ಮೆಯೂ ಬಿಜೆಪಿಯ ವಿರುದ್ಧ ಧ್ವನಿ ಎತ್ತಿಲ್ಲ ಎಂದು ಕುಟುಕಿದ್ದಾರೆ.

 ಆರಂಭದಿಂದಲೂ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಲೇ ಬಂದಿರುವ ದಿಗ್ವಿಜಯ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ನಡೆದ ಭ್ರಷ್ಟಾಚಾರಗಳ ಬಗ್ಗೆ ಚಕಾರ ಎತ್ತದೆ `ಮೌನ~ದ ಮೊರೆಹೋಗಲು ಕಾರಣವೇನು ಎಂದು ಕೆಣಕಿದ್ದಾರೆ.

ಬಿಜೆಪಿ ಅಣ್ಣಾ ಹಜಾರೆ ಅವರನ್ನು ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಎಂದು ಆಸೆ ಹುಟ್ಟಿಸಿದೆ. ಹುಸಿ ಭರವಸೆಯ ಬಗ್ಗೆ ಎಚ್ಚರದಿಂದ ಇರಿ ಎಂದು ಸಲಹೆ ನೀಡಿದ್ದಾರೆ.

`ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ವಿರೋಧಿಸುತ್ತಿರುವ ನೀವು, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದೀರಿ. ಆದರೆ, ಗುಜರಾತ್‌ನಲ್ಲಿ ಕಳೆದ 9 ವರ್ಷಗಳಿಂದ ಲೋಕಾಯುಕ್ತರನ್ನೇ ನೇಮಕ ಮಾಡಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಅಣ್ಣಾ ಅವರಿಗೆ ಬರೆದಿರುವ ನಾಲ್ಕು ಪುಟಗಳ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಹಿಸ್ಸಾರ್ ಉಪ ಚುನಾವಣೆಗೆ ಎರಡು ದಿನಗಳ ಮೊದಲು ಬಿಡುಗಡೆ ಮಾಡಿರುವ ಈ ಪತ್ರದಲ್ಲಿ ಅಣ್ಣಾ ಮತ್ತು ತಂಡದ ಮೇಲೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. 

ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಜನರಿಂದ ಅಣ್ಣಾ ಸುತ್ತುವರಿದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಶಾಂತಿಭೂಷಣ್, ಅವರ ಪುತ್ರ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ಬಂದಿರುವವರು. ಇವರು ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳಿಗಾಗಿ ಅಣ್ಣಾ ಅವರ ವ್ಯಕ್ತಿತ್ವವನ್ನು ಬಲಿ ಕೊಡುತ್ತಿದ್ದಾರೆ ಎಂದು ಸಿಂಗ್ ನೇರ ಆರೋಪ ಮಾಡಿದ್ದಾರೆ.

ತಮ್ಮನ್ನು ಸುತ್ತುವರಿದಿರುವ ಇಂತಹ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿರುವ ಅಣ್ಣಾ ತಮ್ಮ ವ್ಯಕ್ತಿತ್ವ ಮತ್ತು ಸಿದ್ಧಾಂತಗಳಿಗೆ ವಿರೋಧವಾದ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದಿದ್ದಾರೆ.

ಬಿಜೆಪಿ ಧುರೀಣ ಎಲ್.ಕೆ.ಅಡ್ವಾಣಿ ಅವರ ಜನ ಚೇತನ ಯಾತ್ರೆಯನ್ನು ಪ್ರಸ್ತಾಪಿಸಿರುವ ಅವರು, ಎನ್‌ಡಿಎ ಅಧಿಕಾರಿದಲ್ಲಿದ್ದಾಗ ಏನು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ. ಯಾತ್ರೆಗೆ ಆರ್‌ಎಸ್‌ಎಸ್ ಬೆಂಬಲ ಸೂಚಿಸಿರುವುದು ಗೊತ್ತಿಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದ. ರಾಷ್ಟ್ರವ್ಯಾಪಿ ಯಾತ್ರೆ ಹಮ್ಮಿಕೊಂಡಿರುವ ನಿಮಗೆ ಯಾರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದೂ ತಿಳಿದಿಲ್ಲ ಎನ್ನುವುದು ನಿಮ್ಮ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ಉಂಟು ಮಾಡುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT