ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಿಗೇರಿ: ಪಂಪ ಸ್ಮಾರಕ ಭವನ ಪೂರ್ಣ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕನ್ನಡದ ಆದಿಕವಿ ಪಂಪನಿಗೊಂದು ಸ್ಮಾರಕ ಭವನ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ನಿರ್ಮಾಣಗೊಂಡಿದ್ದು, ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಹುಬ್ಬಳ್ಳಿ-ಗದಗ (ರಾಷ್ಟ್ರೀಯ ಹೆದ್ದಾರಿ-63) ರಸ್ತೆಯಲ್ಲಿ, ಅಣ್ಣಿಗೇರಿ ಕ್ರಾಸ್ ಹತ್ತಿರ ಎರಡು ಎಕರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣಗೊಂಡಿದ್ದು, 300 ಆಸನಗಳ ಸಭಾಭವನ, ಎರಡು ಗ್ರೀನ್ ರೂಮ್‌ಗಳು ಸಜ್ಜುಗೊಂಡಿವೆ.

ಮೂರು ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಭವನಕ್ಕಾಗಿ ಗುರುತಿಸಿದ ಎರಡು ಎಕರೆ ಜಾಗದಲ್ಲಿ ಗ್ರಂಥಾಲಯ ಮಾತ್ರ ನಿರ್ಮಾಣಗೊಂಡಿತ್ತು. ಆದರೆ ಅಲ್ಲಿ ಮುಳ್ಳುಕಂಟಿ ಬೆಳೆದಿತ್ತು. ಅದೆಲ್ಲ ಸ್ವಚ್ಛಗೊಂಡು ಹುಲ್ಲುಹಾಸು ಹಾಗೂ ಸಸಿಗಳನ್ನು ನೆಡುವ ಕೆಲಸ ಈಗ ನಡೆಯುತ್ತಿದೆ. 

~ರೂ. 1.35 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ಭವನ ನಿರ್ಮಾಣಗೊಂಡಿದೆ. ಜನವರಿಯಲ್ಲಿ ಇದರ ಉದ್ಘಾಟನೆಯಾಗಲಿದ್ದು, ಆಗ ಎರಡು ದಿನಗಳ ಕಾಲ ಪಂಪನ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ~ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ~ಪ್ರಜಾವಾಣಿ~ಗೆ ತಿಳಿಸಿದರು.

ಸ್ಮಾರಕಕ್ಕೆ ಚಾಲನೆ: ಪಂಪನ ಸ್ಮಾರಕಕ್ಕೆ ಚಾಲನೆ ಸಿಕ್ಕಿದ್ದು ಹಿರಿಯ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರಿಂದ. 1998ರಲ್ಲಿ ಕಲಬುರ್ಗಿ ಅವರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿತು.

ಆದರೆ ಅವರು ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಆಗಬೇಕೆಂದು ಪಂಪ ಪ್ರಶಸ್ತಿ ವೇಳೆ ಸರ್ಕಾರ ನೀಡಿದ ಒಂದು ಲಕ್ಷ ರೂಪಾಯಿ ಮೊತ್ತವನ್ನು ಸರ್ಕಾರಕ್ಕೆ ಮರಳಿ ನೀಡಿದರು. ನಂತರ ಪಂಪನ ಸ್ಮಾರಕವಾಗಬೇಕೆಂದು ಪ್ರತಿಷ್ಠಾನದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದರ ಪರಿಣಾಮ ಸ್ಮಾರಕ ಭವನ ಸಜ್ಜುಗೊಂಡಿದೆ.

ಹಿನ್ನೆಲೆ: ಪಂಪನ ಪೂರ್ವಜರು ಆಂಧ್ರಪ್ರದೇಶದ ವೆಂಗಿಪೊಳದವರು. ಆಗಿನ ಅರಸ ಅರಿಕೇಸರಿಯ ಆಶ್ರಯದಲ್ಲಿದ್ದ ಪಂಪ. ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಕುರ್ಕಿಯಾಲದಲ್ಲಿ ದೊರೆತ ಶಾಸನದಲ್ಲಿ ಜಿನವಲ್ಲಭ, ಪಂಪ ತನ್ನ ಅಣ್ಣನೆಂದು, ಆತನ ಹುಟ್ಟು ತಾಯಿಯ ತವರು ಮನೆ ಅಣ್ಣಿಗೇರಿಯಲ್ಲಾಯಿತು ಎಂದು ಬರೆಯುತ್ತಾನೆ.

ಇಂಥ ವಿವರವುಳ್ಳ ಶಾಸನ ಕುರಿತು ಆಂಧ್ರದ ವಿದ್ವಾಂಸ ವೆಂಕಟರಮಣಯ್ಯ ಬರೆದಿದ್ದಾರೆ. ಇದನ್ನು ಕಂಡ ಡಾ.ಎಂ.ಎಂ. ಕಲಬುರ್ಗಿ, ಕುರ್ಕಿಯಾಲಕ್ಕೆ ಹೋಗಿ ಶಾಸನದ ಪ್ರತಿ ತೆಗೆದುಕೊಂಡು ಬಂದರು (ಈ ಶಾಸನವನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನೋಡಬಹುದು).

`ಅಣ್ಣಿಗೇರಿಗೆ ಹೋಗಿ ಜೈನ ಮನೆತನ ಹುಡುಕಿದಾಗ ಸಿಕ್ಕಿದ್ದು ದೇಶಪಾಂಡೆ ಮನೆತನ. ಅಲ್ಲಿ ತಲೆತಲಾಂತರದಿಂದ ಬೀಮಪಯ್ಯ ಎಂಬ ಹೆಸರು ಆ ಮನೆತನದಲ್ಲಿದೆ. ಪಂಪನ ತಂದೆ ಹೆಸರು ಬೀಮಪಯ್ಯ ಎಂಬುದನ್ನು ಗಮನಿಸಿ; ಅವರ ಮನೆತನದಲ್ಲಿ ಭೀಮಪ್ಪಯ್ಯ ಅಲ್ಲ; ಬೀಮಪಯ್ಯ. ಮೊದಲು ಬ್ರಾಹ್ಮಣರಾಗಿದ್ದ ಬೀಮಪಯ್ಯ ಜೈನರಾಗಿ ಪರಿವರ್ತನೆಗೊಂಡರು~ ಎನ್ನುತ್ತಾರೆ ಕಲಬುರ್ಗಿಯವರು.

ಪಂಪನ ಮನೆತನ: ಅಣ್ಣಿಗೇರಿಯಲ್ಲಿ ಈಗಲೂ ಪಂಪನ ಮನೆತನವಿದೆ. ಅಲ್ಲಿ ರಾಜೇಂದ್ರ ದೇಶಪಾಂಡೆ ವಾಸವಿರುತ್ತಾರೆ. ಆದರೆ ಅವರು ವಾಸಿಸುವ ವಾಡೆ ಶಿಥಿಲಾವಸ್ಥೆಯಲ್ಲಿದೆ. `ಸರ್ಕಾರ ಇದನ್ನೂ ಸ್ಮಾರಕವಾಗಿ ಪರಿವರ್ತಿಸಬೇಕಾದ ಅಗತ್ಯವಿದೆ~ ಎನ್ನುವ ಬೇಡಿಕೆ ಪಂಪ ಪ್ರತಿಷ್ಠಾನದ ಅಧ್ಯಕ್ಷ ಚೆಂಬಣ್ಣ ಕಲಬುರ್ಗಿ ಹಾಗೂ ಕಾರ್ಯದರ್ಶಿ ಪ್ರೊ.ಎಸ್.ಎಸ್. ಹರ್ಲಾಪುರ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT