ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣೆದೊಡ್ಡಿಗೆ ಸಿಇಒ ಭೇಟಿ: ಸೊಳ್ಳೆ ಬ್ಯಾಟ್ ವಿತರಣೆ

146 ಜನರಿಗೆ ಜ್ವರ ್ಞ 40 ಡೆಂಗೆ ಪ್ರಕರಣ ಶಂಕೆ
Last Updated 2 ಆಗಸ್ಟ್ 2013, 12:00 IST
ಅಕ್ಷರ ಗಾತ್ರ

ರಾಮನಗರ : ಜಿಲ್ಲೆಯ ಪ್ರಮುಖ ಡೆಂಗೆ ಜ್ವರ ಪೀಡಿತ ಗ್ರಾಮವಾದ ಹಾರೋಹಳ್ಳಿಯ ಅಣ್ಣೆದೊಡ್ಡಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ವಿ.ವೆಂಕಟೇಶ್ ಅವರು ರೋಟರಿ ರಾಮನಗರ ಸಂಸ್ಥೆ ಪ್ರಾಯೋಜಕತ್ವದಲ್ಲಿ ನೀಡಿದ 50 ಸೊಳ್ಳೆ ಬ್ಯಾಟ್‌ಗಳನ್ನು ವಿತರಿಸಿದರು.

ಗ್ರಾಮದಲ್ಲಿ 296 ಮನೆಗಳಿದ್ದು 1174 ಜನರಿರುವರು. ಇವರಲ್ಲಿ 146 ಜನರು ಜ್ವರದಿಂದ ಬಳಲುತ್ತಿದ್ದು, 40 ಡೆಂಗೆ ಪ್ರಕರಣಗಳೆಂದು ಶಂಕಿಸಿ ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. 9 ಪ್ರಕರಣಗಳು ಡೆಂಗೆ ಪೀಡಿತವೆಂದು ತಿಳಿದುಬಂದಿದೆ. ಇವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಲಾಗಿದೆ. ದೊಂಬರದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯ ತಿಮ್ಮಯ್ಯ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಸಿಇಒ ವೆಂಕಟೇಶ್ ತಿಳಿಸಿದರು.

ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲ ಗ್ರಾಮಗಳು ರೇಷ್ಮೆ ಮತ್ತು ಹೈನುಗಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ಗ್ರಾಮದಲ್ಲಿ ನೈರ್ಮಲ್ಯ ಕೊರತೆಯಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಿ ಸೊಳ್ಳೆ ಕಚ್ಚುವಿಕೆಯಿಂದ ಗ್ರಾಮಸ್ಥರಲ್ಲಿ ಹೆಚ್ಚಾಗಿ ಡೆಂಗೆ, ಚಿಕೂನ್ ಗುನ್ಯಾ ರೋಗಗಳು ಕಂಡುಬಂದಿವೆ. ಈ ಹಿಂದಿನ ವರ್ಷಗಳಲ್ಲೂ ಡೆಂಗೆ ಪ್ರಕರಣ ವರದಿಯಾಗಿದ್ದು, ಈ ಬಾರಿ ಇದು ಸಾಂಕ್ರಾಮಿಕವಾಗಿ ಹರಡಿ ಗ್ರಾಮದ ಇಬ್ಬರನ್ನು ಬಲಿ ತೆಗೆದುಕೊಂಡಿದೆ ಎಂದು ಅವರು ವಿಷಾದಿಸಿದರು.

ಡೆಂಗೆ ಸಾಂಕ್ರಾಮಿಕವಾಗಿ ಗ್ರಾಮಕ್ಕೆ ಹರಡಿರುವುದನ್ನು ತಿಳಿದ ರಾಮನಗರ ರೋಟರಿ ಸಂಸ್ಥೆಯವರು ಗ್ರಾಮದ ಜ್ವರ ಪೀಡಿತರಿಗೆ, ಮೃತರ ಕುಟುಂಬ ವರ್ಗದವರಿಗೆ, ಶಾಲೆ, ಅಂಗನವಾಡಿ ಕೇಂದ್ರಕ್ಕೆ ಸೊಳ್ಳೆ ಬ್ಯಾಟ್‌ಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಈ ಕಾರ್ಯಕ್ಕೆ ಮುಂದಾದ ರೋಟರಿ ಸಂಸ್ಥೆ ಅಭಿನಂದನೆಗೆ ಅರ್ಹವಾಗಿದೆ ಎಂದರು.

ಡೆಂಗೆ ನಿಯಂತ್ರಣಕ್ಕೆ:
ಗ್ರಾಮದಲ್ಲಿ ಕಂಡುಬಂದಿರುವ ಡೆಂಗೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತ್ವರಿತ ಕ್ರಮ ಕೈಗೊಂಡಿದ್ದು, ಜ್ವರವು ನಿಯಂತ್ರಣಕ್ಕೆ ಬಂದಿದೆ. ಜೂನ್ 13 ರಂದು ಗ್ರಾಮದಲ್ಲಿ ಪ್ರಥಮವಾಗಿ 2 ಡೆಂಗೆ ಪ್ರಕರಣ ವರದಿಯಾಗಿದ್ದು, ಬಳಿಕ ಡೆಂಗೆ ಸಾಂಕ್ರಾಮಿಕವಾಗಿ ಗ್ರಾಮದಲ್ಲಿ ಹರಡಿದೆ.

ಗ್ರಾಮದ 202 ಮನೆಗಳಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ 178 ಮನೆಗಳಲ್ಲಿ ಲಾರ್ವ ತಾಣಗಳ ವರದಿಯಾಗಿತ್ತು. ಈಗ ಪರೀಕ್ಷೆಗೊಳಡಿಸಿದ 296 ಮನೆಗಳಲ್ಲಿ 2 ಮನೆಯಲ್ಲಿ ಲಾರ್ವ ತಾಣಗಳು ಮಾತ್ರ ಇರುವುದಾಗಿ ವರದಿಯಾಗಿದೆ. ಅಲ್ಲದೆ ಸೊಳ್ಳೆಗಳ ನಿಯಂತ್ರಣವಾಗಿರುವುದರಿಂದ 3ರಿಂದ 4 ದಿನಗಳಿಗೊಮ್ಮೆ ಒಂದು ಅಥವಾ ಎರಡು ಜ್ವರದ ಪ್ರಕರಣ ವರದಿಯಾಗಿವೆ. ರೋಗ ನಿಯಂತ್ರಣಕ್ಕೆ ಗ್ರಾಮಸ್ಥರ ಸಹಭಾಗಿತ್ವ, ನೈರ್ಮಲ್ಯ ಕಾಪಾಡುವಿಕೆ ಅಗತ್ಯವಿದೆ ಎಂದು ತಿಳಿಸಿದರು.

ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಬೇವಿನ ಸೊಪ್ಪಿನ ಹೊಗೆ ಮೂಲಕ ಸೊಳ್ಳೆಗಳನ್ನು ಹೋಗಲಾಡಿಸಿದೆ. ಚರಂಡಿ, ಅನೈರ್ಮಲ್ಯ ತಾಣಗಳು, ದನದ ಕೊಟ್ಟಿಗೆಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಸೊಳ್ಳೆ ಮೊಟ್ಟೆ ಇಡುವ ತಾಣಗಳಲ್ಲಿ ರೇಷ್ಮೆ ಹುಳುಗಳಿಗೆ ತೊಂದರೆಯಾಗದಂತೆ `ಡಿಕಾಲ್ ಅಂಟಿಸೆಪ್ಟಿಕ್' ಸಿಂಪಡಿಸಲಾಗಿದೆ. ಪ್ರತಿನಿತ್ಯ ಲಾರ್ವ ತಪಾಸಣೆ ಮತ್ತು ಲಾರ್ವ ತಾಣಗಳನ್ನು ನಾಶಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 166 ಡೆಂಗೆ ಪ್ರಕರಣ:
ಜಿಲ್ಲೆಯಲ್ಲಿ ಇದುವರೆಗೂ 166 ಡೆಂಗೆ ಪ್ರಕರಣಗಳು ವರದಿಯಾಗಿದ್ದು, ಮೂವರು ಡೆಂಗೆಯಿಂದ ಮೃತಪಟ್ಟಿದ್ದಾರೆ. ಶಾಲೆಯಲ್ಲಿ ಮಕ್ಕಳು ಒಂದೆಡೆ ಸೇರುವುದರಿಂದ ಮಕ್ಕಳ ಮೂಲಕ ಡೆಂಗೆ ಹರಡದಂತೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮುನ್ನೆಚ್ಚರಿಕೆ ತಿಳಿವಳಿಕೆ ನೀಡಲಾಗಿದೆ.

ಇದಕ್ಕಾಗಿ ಶಾಲೆಗಳಲ್ಲಿ ಮಕ್ಕಳ ಬರುವ ಮುನ್ನವೇ ಬೇವಿನ ಸೊಪ್ಪಿನ ಹೊಗೆ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಶಾಲೆಗಳನ್ನು ಸೊಳ್ಳೆಗಳೇ ಇಲ್ಲದ ತಾಣವನ್ನಾಗಿ ಮಾಡುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಘುನಾಥ್ ಮಾಹಿತಿ ನೀಡಿದರು.

ರೋಟರಿ ಜಿಲ್ಲಾ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್ ಸಾಂಕ್ರಾಮಿಕ ಡೆಂಗೆ ತಡೆಗೆ ಸರ್ಕಾರದೊಂದಿಗೆ ರೋಟರಿ ಸಂಸ್ಥೆಯು ಕೈಜೋಡಿಸಿದ್ದು, ಸಮುದಾಯದ ನೆರವಿಗೆ ಸದಾ ಸಿದ್ಧವಿದೆ ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ಕಾವ್ಯ ತಿಮ್ಮಯ್ಯ, ರೋಟರಿ ಕಾರ್ಯದರ್ಶಿ ಎಚ್.ಪಿ.ಮಹಾಲಿಂಗಯ್ಯ, ನಿರ್ದೇಶಕ ಪುಟ್ಟಸ್ವಾಮಿಗೌಡ,  ಹಿರಿಯ ಆರೋಗ್ಯ ಸಹಾಯಕ ವಿನಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಆರೋಗ್ಯ ಇಲಾಖಾಧಿಕಾರಿ ಭೇಟಿ
ಅಣ್ಣೆದೊಡ್ಡಿ ಗ್ರಾಮಕ್ಕೆ ಗುರುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಜಂಟಿ ನಿರ್ದೇಶಕಿ ಡಾ. ಸುಲೋಚನಾ ಹಾಗೂ ಅಧಿಕಾರಿಗಳ ತಂಡ ಗ್ರಾಮದ ಮನೆ ಮನೆಗೂ ತೆರಳಿ ಡೆಂಗೆ ರೋಗದ ಬಗ್ಗೆ ಮಾಹಿತಿ ಪಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಲೋಚನಾ ಅವರು ಜಿಲ್ಲೆಗೆ ಡೆಂಗೆ ನಿಯಂತ್ರಣಕ್ಕೆ ರೂ 2.85 ಲಕ್ಷ ಬಿಡುಗಡೆ ಮಾಡಿದ್ದು, ಸಮಸ್ಯಾತ್ಮಕ ಗ್ರಾಮಗಳಿಗೆ ತೆರಳಿ ಸೊಳ್ಳೆ ಲಾರ್ವ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಲು ಈ ಹಣವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಅಲ್ಲದೆ ಪ್ರತಿ ಆರೋಗ್ಯ ಕಾರ್ಯಕರ್ತರು 10 ದಿನಗಳ ಅವಧಿಯಲ್ಲಿ 1000 ಮನೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸುವಂತೆ ತಿಳಿಸಲಾಗಿದೆ. ಅಣ್ಣೆದೊಡ್ಡಿ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗ್ರಾಮದಲ್ಲಿನ ಪರಿಶೀಲನಾ ವರದಿಯನ್ನು ಇಲಾಖೆಗೆ ಸಲ್ಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT