ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ನಿರೀಕ್ಷೆ ಹುಟ್ಟಿಸಿದ ನಿರಾಶೆ

Last Updated 24 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ಆಡದೆಯೇ ಮಾಡಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿರುವ ಬಜೆಟ್ ಈಗಿನ ನಿರಾಶೆಯನ್ನು ಮೂಡಿಸುತ್ತಿರಲಿಲ್ಲವೇನೋ? ಆಡಿದ್ದು ಅತಿಯಾದ ಕಾರಣ ಮಾಡಿದ್ದು ಕಡಿಮೆಯಾಯಿತು ಎನ್ನುವ ಭಾವನೆ ಮುಖ್ಯವಾಗಿ ರೈತಸಮುದಾಯದಲ್ಲಿ ಮೂಡಿದರೆ, ತಪ್ಪು ಅವರದ್ದಲ್ಲ, ಅದು ಮುಖ್ಯಮಂತ್ರಿಯವರದ್ದೇ. ದೇಶದಲ್ಲಿಯೇ ಮೊದಲ ಕೃಷಿ ಬಜೆಟ್ ಎನ್ನುವ ಪ್ರಚಾರದ ಮೂಲಕ ಮುಖ್ಯಮಂತ್ರಿಗಳು ರೈತಸಮುದಾಯದ ನಿರೀಕ್ಷೆ ಮುಗಿಲು ಮುಟ್ಟುವಂತೆ ಮಾಡಿದ್ದರು.

ಆ ಮಟ್ಟದ ಕೊಡುಗೆಗಳನ್ನು ನೀಡಲು ಯಡಿಯೂರಪ್ಪನವರಿಗೆ ಸಾಧ್ಯವಾಗಿಲ್ಲ. ಮುಂಬರುವ ಹಣಕಾಸು ವರ್ಷದಲ್ಲಿ ಕೃಷಿ, ಕೃಷಿ ಸಂಬಂಧಿತ ಮತ್ತು ನೀರಾವರಿ ಕ್ಷೇತ್ರಗಳಲ್ಲಿ ರೂ.17,857 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಉದ್ದೇಶವೇ ಕೃಷಿ ಬಜೆಟ್‌ನ ಮುಖ್ಯಾಂಶ. ಆದರೆ ‘ಕೃಷಿಬಜೆಟ್’ ಎಂಬ ಹೊರಶೃಂಗಾರದ ಹೊದಿಕೆಯನ್ನು ತೆಗೆದುನೋಡಿದರೆ ಒಳಗೆ ಕಾಣುವುದು ಅದೇ ಹಳೆಯ ಸಾಮಾನ್ಯ, ನಿರಾಕರ್ಷಕ ಬಜೆಟ್. ಕಳೆದ ಬಾರಿ ಯಡಿಯೂರಪ್ಪನವರೇ ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ ಒಂದು ರೂಪಾಯಿಯ ಹದಿನೇಳು ಪೈಸೆಯಷ್ಟನ್ನು ಖರ್ಚುಮಾಡುವುದಾಗಿ ಘೋಷಿಸಿದ್ದರು. ಈ ಬಾರಿ ಅದನ್ನು ಹದಿನೆಂಟು ಪೈಸೆಗೆ ಏರಿಸಿದ್ದಾರೆ. ಈ ಒಂದು ಪೈಸೆಯಷ್ಟು ಹೆಚ್ಚಳಕ್ಕೆ ಇಷ್ಟೊಂದು ಪ್ರಚಾರ ವೈಭವದ ಅಗತ್ಯ ಇತ್ತೇ? ಕೃಷಿ ಮತ್ತು ತೋಟಗಾರಿಕೆಗೆ ಕಳೆದ ಬಜೆಟ್‌ನಲ್ಲಿ ರೂ.2094 ಕೋಟಿ ನೀಡಿದ್ದರೆ ಈ ಬಾರಿ ಹಂಚಿಕೆಯಾಗಿರುವುದು ರೂ.3179 ಕೋಟಿ. ಎಲ್ಲ ಹಳೆಯ ಯೋಜನೆಗಳೇ. ಕೃಷಿ ಬಜೆಟ್ ಎಂಬ ಹೆಗ್ಗಳಿಕೆಗೆ ಅನುಗುಣವಾಗಿ ಕನಿಷ್ಠ ಒಂದೆರಡು ಶಾಶ್ವತರೂಪದ ಹೊಸ ಯೋಜನೆಗಳನ್ನಾದರೂ ರೂಪಿಸಬಹುದಿತ್ತು. ಸಹಕಾರಿ ಸಂಸ್ಥೆಗಳ ಮೂಲಕ ಪಡೆಯುವ ಮೂರು ಲಕ್ಷ ರೂಪಾಯಿ ವರೆಗಿನ ಸಾಲದ ಮೇಲಿನ ಬಡ್ಡಿಪ್ರಮಾಣವನ್ನು ಶೇಕಡಾ ಮೂರರಿಂದ ಒಂದಕ್ಕೆ ಇಳಿಸುವ ಕ್ರಮ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ ನಿಜ. ಆದರೆ ಬಡ್ಡಿದರ ಇಳಿಕೆಯ ವ್ಯತ್ಯಾಸದ ಮೊತ್ತವನ್ನು ಸರ್ಕಾರ ತುಂಬಿ ಕೊಡಲು ವಿಫಲವಾಗಿರುವ ಕಾರಣ ಈಗಾಗಲೇ ಸಹಕಾರಿ ಸಂಸ್ಥೆಗಳೆಲ್ಲ ದಿವಾಳಿಯ ಅಂಚಿನಲ್ಲಿವೆ. ಇದರಿಂದಾಗಿ ರೈತರೆಲ್ಲ ಮತ್ತೆ ವಾಣಿಜ್ಯ ಬ್ಯಾಂಕುಗಳಿಗೆ ಮೊರೆಹೋಗುವಂತಹ ಪರಿಸ್ಥಿತಿ ಇದೆ. ಬಡ್ಡಿದರ ಇಳಿಕೆ ವಾಣಿಜ್ಯಬ್ಯಾಂಕುಗಳಿಗೂ ಅನ್ವಯವಾಗುವಂತೆ ಮಾಡಿದರೆ ಮಾತ್ರ ರೈತರಿಗೆ ನಿಜವಾದ ಲಾಭ ಆಗಬಹುದು. ಆದರೆ ಇದನ್ನು ಮಾಡಬೇಕಾಗಿರುವುದು ಕೇಂದ್ರ ಸರ್ಕಾರ. ಈಗಲೂ ಕಾಲ ಮಿಂಚಿಲ್ಲ, ಯಡಿಯೂರಪ್ಪನವರು ಇದನ್ನೊಂದು ರಾಜಕೀಯ ವಿಷಯವಾಗಿ ಎತ್ತಿಕೊಳ್ಳಬಹುದು.

 ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದುಬರುವಂತೆ  ಮಾಡುವ ಕೃಷಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ ರಚನೆ, ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆಯಂತಹ ಕ್ರಮಗಳು ಅಗತ್ಯವಾಗಿತ್ತು.ಅದೇ ರೀತಿ ಇಂಧನ ಕ್ಷೇತ್ರಕ್ಕೆ ನೀಡುವ ಹಣವನ್ನು ರೂ.3547 ಕೋಟಿಗಳಿಂದ ರೂ.8523 ಕೋಟಿಗೆ ಹೆಚ್ಚಿಸಿರುವುದು ಕೂಡಾ ಸ್ವಾಗತಾರ್ಹ ಕ್ರಮ. ನೀರಾವರಿ ಕ್ಷೇತ್ರಕ್ಕೂ ಕಳೆದ ಬಜೆಟ್‌ಗಿಂತ ಸುಮಾರು ರೂ.2780 ಕೋಟಿಯಷ್ಟು ಹೆಚ್ಚು ಹಣ ನೀಡಲಾಗಿದೆ. ಈ ಹಣ ಗುತ್ತಿಗೆದಾರರ ಜೇಬು ಸೇರದೆ ನದಿನೀರಿನ ಬಳಕೆಗೆ ವಿನಿಯೋಗವಾಗುವಂತೆ ಎಚ್ಚರಿಕೆ ವಹಿಸಬೇಕಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಎಂದಿನಂತೆ ಅತಿ  ಹೆಚ್ಚಿನ ಹಣ  (ರೂ.12284 ಕೋಟಿ) ನೀಡಲಾಗಿದೆ. ವಸತಿ ಕ್ಷೇತ್ರ ಮಾತ್ರ ಹಿಂದಿನ ಎರಡು ವರ್ಷಗಳಂತೆ ಈ ಬಾರಿಯೂ ನಿರ್ಲಕ್ಷ್ಯಕ್ಕೀಡಾಗಿದೆ (ರೂ.1194). ಕಳೆದೆರಡು ಬಜೆಟ್‌ಗಳಲ್ಲಿ ಮಠ,ದೇವಸ್ಥಾನಗಳಿಗೆ ಕೈ ಎತ್ತಿಎತ್ತಿ ದಾನ ಮಾಡಿದ್ದ ಮುಖ್ಯಮಂತ್ರಿಗಳು ಈ ಬಾರಿ ಸಂಯಮ ತೋರಿರುವುದಕ್ಕೆ ಜನಾಭಿಪ್ರಾಯದ ಒತ್ತಡವೂ ಕಾರಣ ಇರಬಹುದು. ಜನಪ್ರಿಯತೆಯಲ್ಲಿ ತೇಲಿಹೋಗುವ ಮುಖ್ಯಮಂತ್ರಿಗಳು ಆರ್ಥಿಕ ದಕ್ಷತೆಗೆ ಹೆಸರಾದವರೇನಲ್ಲ. ಹೀಗಿದ್ದರೂ ರಾಜ್ಯದ ಬೊಕ್ಕಸ ಅಷ್ಟೇನೂ ಬರಿದಾಗಿಲ್ಲ ಎನ್ನುವುದು ಸಮಾಧಾನಕರ ಅಂಶ. ಇದಕ್ಕೆ ಹಿಂಜರಿತದಿಂದ ಚೇತರಿಸಿಕೊಂಡ ಆರ್ಥಿಕ ಕ್ಷೇತ್ರ ಮತ್ತು ಸುಧಾರಣೆಯ ಹಾದಿಯಲ್ಲಿರುವ ಕೃಷಿ ಕ್ಷೇತ್ರ  ಕಾರಣ ಇರಬಹುದು. ಆಡಿದಂತೆ ನಡೆಯುವ ಸಂಕಲ್ಪವನ್ನು ಮುಖ್ಯಮಂತ್ರಿಗಳು ಮಾಡಿದರೆ ಆರ್ಥಿಕ ಸುಧಾರಣೆಯ ಲಾಭವನ್ನು ಬಳಸಿಕೊಂಡು ರಾಜ್ಯವನ್ನು ಆರ್ಥಿಕ ಮುನ್ನಡೆಯ ಹಾದಿಯಲ್ಲಿ ಕೊಂಡೊಯ್ಯುವ ಅವಕಾಶದ ಬಾಗಿಲು ತೆರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT