ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ತೆರವಿಗೆ ಕಟ್ಟುನಿಟ್ಟಿನ ಸೂಚನೆ

Last Updated 3 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಬೆಳಗಾವಿ: ಸಮ್ಮೇಳನ ವೇಳೆಗೆ ರಸ್ತೆ ಬದಿಗಳಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಡಬ್ಬಾ ಅಂಗಡಿಗಳನ್ನು ತೆಗೆಯಬೇಕು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.ನಗರದ ಹಳೆ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಬುಧವಾರ ನಡೆದ ವಿಶ್ವ ಕನ್ನಡ ಸಮ್ಮೇಳನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಖಾಲಿ ಇರುವ ಜಾಗಗಳನ್ನು ಸ್ವಚ್ಛಗೊಳಿಸಬೇಕು. ವೃತ್ತಗಳನ್ನು ಅಂದಗೊಳಿಸಬೇಕು. ವೀರಸೌಧ, ಕಮಲ ಬಸೀದಿಯಂತಹ ತಾಣಗಳಿಗೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು’ ಎಂದು ಅವರು ಸೂಚಿಸಿದರು.ಪಾಲಿಕೆ ಆಯುಕ್ತ ಎಸ್.ಜಿ. ಪಾಟೀಲ ಮಾತನಾಡಿ, 4.48 ಕೋಟಿ ರೂಪಾಯಿಯಲ್ಲಿ 15 ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. 44 ಲಕ್ಷ ರೂಪಾಯಿ ವೆಚ್ಚದಲ್ಲಿ ಫುಟ್‌ಪಾತ್ ರಿಪೇರಿ ಮಾಡಲಾಗುವುದು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗುವುದು ಎಂದು ವಿವರಿಸಿದರು.

‘ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಜನರು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೋಗಿ ಬರುವಂತಹ ಪ್ಯಾಕೇಜ್ ವ್ಯವಸ್ಥೆ ಮಾಡಬೇಕು. ಜತೆಗೆ ನೀರಾವರಿ ಇಲಾಖೆಯವರು ಆ ದಿನಗಳಲ್ಲಿ ಅಣೆಕಟ್ಟುಗಳಿಂದ ನೀರು ಬಿಡುವ ಮೂಲಕ ಗೋಕಾಕ ಫಾಲ್ಸ್, ಗೊಡಚನಮಲ್ಕಿ ಮುಂತಾದ ಜಲಪಾತ ನೋಡಲು ಅನುವು ಮಾಡಬೇಕು’ ಎಂದು ಸಚಿವ ಕತ್ತಿ ಸಲಹೆ ಮಾಡಿದರು.

‘ಪಕ್ಕದ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಿಗೆ ಬಸ್ ವ್ಯವಸ್ಥೆ ಮಾಡಬೇಕು. ನಗರದಲ್ಲಿಯೂ ಬಸ್ ವ್ಯವಸ್ಥೆ ಚೆನ್ನಾಗಿರಬೇಕು’ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸಚಿವ ಗೋವಿಂದ ಕಾರಜೋಳ ಹೇಳಿದರು.ಸ್ವಾಗತ ಕಮಾನು ನಿರ್ಮಿಸಬೇಕು ಎಂಬ ಸಲಹೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಸಚಿವರು, ಕಮಾನು ನಿರ್ಮಾಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸಮ್ಮೇಳನ ಅಂಗವಾಗಿ ಸ್ಮಾರಕವೊಂದನ್ನು ನಿರ್ಮಿಸೋಣ. ಅದನ್ನು ಮುಖ್ಯಮಂತ್ರಿಗಳು ಉದ್ಘಾಟನಾ ಸಮಾರಂಭದಲ್ಲಿ ಘೋಷಿಸಲಿದ್ದಾರೆ ಎಂದು ಹೇಳಿದರು.

‘28 ಸ್ಥಳಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗುವುದು. ಅಲ್ಲಿ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಇರುತ್ತಾರೆ. 30 ಆ್ಯಂಬುಲೆನ್ಸ್ ಇರಲಿವೆ, ಅಗತ್ಯ ಔಷಧ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಮಂಜುಳಾ ಹೇಳಿದರು.ಸಾಹಿತಿ ಜಿನದತ್ತ ದೇಸಾಯಿ ಮಾತನಾಡಿ, ಶಾಶ್ವತ ಕಮಾನು ನಿರ್ಮಿಸದಿದ್ದರೂ ತಾತ್ಕಾಲಿಕ ಮಹಾದ್ವಾರಗಳನ್ನು ಮಾಡಬಹುದು ಎಂದು ಸಲಹೆ ಮಾಡಿದರು.

ವಕೀಲರಾದ ಎಂ.ಬಿ. ಝಿರಲಿ ಮಾತನಾಡಿ, ದಾರ್ಶನಿಕ ಸಂತರ ಭಾವಚಿತ್ರ ಹಾಗೂ ಅವರ ಸಂದೇಶ ಸಾರುವ ಪ್ರದರ್ಶನವೊಂದನ್ನು ಏರ್ಪಡಿಸಬೇಕು ಎಂದು ತಿಳಿಸಿದರು.ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಮಾತನಾಡಿ, ಸ್ಥಳೀಯ ಕಲಾವಿದರಿಗೂ ಸಾಕಷ್ಟು ಅವಕಾಶ ನೀಡಬೇಕು. ಸಮಿತಿಯಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು ಎಂದರು.

ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಡಿ. ಐಹೊಳೆ, ಶ್ಯಾಮ ಘಾಟಗೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ, ಮಹಾಂತೇಶ ಕವಟಗಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ, ಜಿಲ್ಲಾಧಿಕಾರಿ ಏಕರೂಪ್ ಕೌರ್, ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ ಉಪಸ್ಥಿತರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಎಲ್ಲ ಇಲಾಖೆಗಳಿಗೆ ನಿಗದಿತ ಜವಾಬ್ದಾರಿ ವಹಿಸಲಾಗಿದೆ. ಕೆಲಸ ಆರಂಭಿಸಲು ಸೂಚಿಸಲಾಗಿದೆ. ಸಮಿತಿ ರಚನೆಯಲ್ಲಿ ತಪ್ಪುಗಳಾಗಿದ್ದು, ಸರಿಪಡಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಭೂಸೇನಾ ನಿಗಮದಲ್ಲಿ ನುಂಗಣ್ಣರು!
‘ಗುಣಮಟ್ಟದ ಕಾಮಗಾರಿ ಮಾಡುವುದಿಲ್ಲ. ಜಿಲ್ಲೆಯಲ್ಲಿ ಕೇವಲ 17 ಮಂದಿ ಸಿಬ್ಬಂದಿ ಇದ್ದಾರೆ. ಎಲ್ಲರೂ ಅವರಿಗೆ ಕಾಮಗಾರಿ ವಹಿಸುತ್ತಾರೆ. ಅವರು ಬರೀ ಹಣ ನುಂಗುತ್ತಾರೆ’
ವಿಶ್ವ ಕನ್ನಡ ಸಮ್ಮೇಳನದ ಕೆಲವು ಕಾಮಗಾರಿಗಳನ್ನು ಭೂ ಸೇನಾ ನಿಗಮಕ್ಕೆ ವಹಿಸಿಕೊಡಬೇಕು ಎಂದು ಕೆಲವರು ಸೂಚಿಸಿದಾಗ ಸಂಸದ ರಮೇಶ ಕತ್ತಿ ಮೇಲಿನಂತೆ ಹೇಳಿದರು.
‘ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿಯಿಲ್ಲ. ಎಲ್ಲರೂ ಅವರಿಗೇ ಕಾಮಗಾರಿ ವಹಿಸುತ್ತಾರೆ. ಹೀಗಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಿಲ್ಲ. ದಯವಿಟ್ಟು ಬೇರೆಯವರಿಗೆ ನೀಡಿ’ ಎಂದು ಅವರು ಸಲಹೆ ಮಾಡಿದರು.

ಬಿಲ್ ಕೊಡುವವರು ಯಾರು?
‘ಹಣ ಇರುವವರೇ ನೀವು, ನೀವೇ ಹಣ ಕೇಳಿದರೆ ಹೇಗೆ’ ಎಂದು ಸಚಿವ ಗೋವಿಂದ ಕಾರಜೋಳ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ ಬುಧವಾರ ನಡೆದ ವಿಶ್ವ ಕನ್ನಡ ಸಮ್ಮೇಳನ ಪ್ರಗತಿ ಪರಿಶೀಲನಾ ಸಭೆಯಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.

‘ನೀವು ಒಂದು ನೋಟಿಸ್ ನೀಡಿದರೆ ಸಾಕು. ಎಲ್ಲ ವಾಹನಗಳು ನಿಮ್ಮ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುತ್ತವೆ’ ಎಂದು ಸಂಸದ ರಮೇಶ ಕತ್ತಿ ನಗೆ ಚಟಾಕಿ ಹಾರಿಸಿದರು.ಸಮ್ಮೇಳನದ ಮಂಟಪಗಳಿಗೆ ಪೂರೈಸುವ ವಿದ್ಯುತ್ ಬಿಲ್ಲನ್ನು ಹೆಸ್ಕಾಂನವರೇ ಭರಿಸಿಕೊಳ್ಳಬೇಕು ಎಂದು ಸಚಿವ ಕಾರಜೋಳ ಹೇಳಿದರು.ಅಧಿಕಾರಿ ಹೆಸ್ಕಾಂ ಅಧಿಕಾರಿ ಮಜ್ಜಗಿ, ‘ಸರ್ ಬಿಲ್ ಪಾವತಿಸಬೇಕಾಗುತ್ತದೆ’ ಎಂದರು. ‘ಸರಿ ಮಂಟಪದ ಬಿಲ್ಲಷ್ಟೇ ಹಚ್ಚಿರಿ. ಬೀದಿ ದೀಪಗಳದ್ದು ನಮಗೆ ಹಚ್ಚಬೇಡಿರಿ’ ಎಂದು ಸಚಿವರು ಸೂಚಿಸಿದರು.ಆಗ ಅಧಿಕಾರಿಯು, ‘ನಿಮಗೇನು ಹಚ್ಚುವುದಿಲ್ಲ. ಪಾಲಿಕೆಯವರಿಗೆ ಹಚ್ಚುತ್ತೇವೆ’ ಎಂದಾಗಲೂ ಎಲ್ಲರೂ ಮನಸಾರೆ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT