ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತ ಬಂದ್ ಇತ್ತ ಮೊಕದ್ದಮೆ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಹಗರಣ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಅವರು ಶನಿವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡು ಖಾಸಗಿ ಮೊಕದ್ದಮೆಗಳನ್ನು ದಾಖಲಿಸಿದರು. ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮೊಕದ್ದಮೆಗಳನ್ನು ಹೂಡಲಾಗಿದೆ.

ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988 ಮತ್ತು ‘ಕರ್ನಾಟಕ ಭೂ ಕಾಯ್ದೆ (ಪರಭಾರೆ ನಿಯಂತ್ರಣ) ಕಾಯ್ದೆ -1991’ರ ವಿವಿಧ ಕಲಂಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ವಂಚನೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಅಧಿಕಾರ ಬಳಸಿಕೊಂಡು ತನ್ನ ಕುಟುಂಬದ ಸದಸ್ಯರು ಅಕ್ರಮ ಆಸ್ತಿ ಸಂಪಾದಿಸಲು ನೆರವಾಗಿರುವುದು ಮತ್ತಿತರ ಆರೋಪಗಳು ಮೊಕದ್ದಮೆಯಲ್ಲಿವೆ.

ಯಡಿಯೂರಪ್ಪ, ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿಯವರ ಅಳಿಯ ಆರ್.ಎನ್.ಸೋಹನ್‌ಕುಮಾರ್, ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್ ವಿರುದ್ಧ ಮೊದಲ ಮೊಕದ್ದಮೆ ದಾಖಲಿಸಲಾಗಿದೆ.

ಎರಡನೇ ಮೊಕದ್ದಮೆಯನ್ನು ಯಡಿಯೂರಪ್ಪ ಮತ್ತು 15 ಇತರರ ವಿರುದ್ಧ ಹೂಡಲಾಗಿದೆ. ಅದರಲ್ಲಿ 14 ಖಾಸಗಿ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಅವರೆಲ್ಲರೂ ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಅವ್ಯವಹಾರಗಳಲ್ಲಿ ಸಹಕರಿಸಿದ್ದಾರೆ ಎಂಬ ಆರೋಪವಿದೆ. ಶಿವಮೊಗ್ಗದ ಇಬ್ಬರು, ಹೊನ್ನಾಳಿಯ ಒಬ್ಬ ಮತ್ತು ಬೆಂಗಳೂರಿನ 11 ವ್ಯಕ್ತಿಗಳು ಈ ಪಟ್ಟಿಯಲ್ಲಿದ್ದಾರೆ. ಇವರು ಯಡಿಯೂರಪ್ಪ ಕುಟುಂಬದ ಅಕ್ರಮ ಆಸ್ತಿಗಳಿಗೆ ಬೇನಾಮಿ ವಾರಸುದಾರರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡೂ ಮೊಕದ್ದಮೆಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ತಲಾ ಮೂರು ಪ್ರಕರಣಗಳನ್ನು ಪ್ರಸ್ತಾಪಿಸಲಾಗಿದೆ. ಈ ವಕೀಲರು ಮುಖ್ಯಮಂತ್ರಿ ವಿರುದ್ಧ ಸೋಮವಾರ ಇನ್ನೂ ನಾಲ್ಕು ಮೊಕದ್ದಮೆಗಳನ್ನು ಹೂಡಲಿದ್ದಾರೆ.ಕೇವಿಯಟ್ ಸಲ್ಲಿಕೆ: ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಶುಕ್ರವಾರ ಅನುಮತಿ ನೀಡಿದ್ದರು. ರಾಜ್ಯಪಾಲರ ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಇಬ್ಬರೂ ವಕೀಲರು ಶನಿವಾರ ಬೆಳಿಗ್ಗೆಯೇ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದರು. ‘ರಾಜ್ಯಪಾಲರು ನೀಡಿರುವ ಆದೇಶ ಸಂವಿಧಾನಬದ್ಧವಾಗಿದೆ.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ. ಆದರು ಕೂಡ ಮುಖ್ಯಮಂತ್ರಿಗಳು ಅರ್ಜಿ ಸಲ್ಲಿಸುವ ಪ್ರಯತ್ನ ಮಾಡಬಹುದು. ಇದರಿಂದ ತಮ್ಮ ವಾದವನ್ನು ಆಲಿಸದೇ ರಾಜ್ಯಪಾಲರ ಅನುಮತಿಗೆ ಮಧ್ಯಂತರ ತಡೆ ನೀಡಬಾರದು’ ಎಂದು ಅವರು ಕೇವಿಯಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಳಿಕ ಮಧ್ಯಾಹ್ನ 3.45ಕ್ಕೆ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರೊಂದಿಗೆ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಿದರು.ಎರಡೂ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಬೃಹತ್ ಪ್ರಮಾಣದ ದಾಖಲೆಗಳನ್ನೂ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದರು. ಬಿಡಿಎ ಭೂಮಿಯ ಕಾನೂನುಬಾಹಿರ ಡಿನೋಟಿಫಿಕೇಷನ್, ಅವುಗಳಿಂದ ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರಿಗೆ ಆಗಿರುವ ಲಾಭ, ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ, ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದನೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯ ಜೊತೆ ಸಲ್ಲಿಸಲಾಗಿದೆ.


ವಕೀಲರ ಅರ್ಜಿಗಳನ್ನು ಸ್ವೀಕರಿಸಿದ ನ್ಯಾಯಾಧೀಶ ಚಂದ್ರಶೇಖರ ಬಿ.ಹಿಪ್ಪರಗಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಸುವುದಾಗಿ ಪ್ರಕಟಿಸಿದರು. ಯಡಿಯೂರಪ್ಪ ಅವರು ಭಾಗಿಯಾಗಿರುವ ಇನ್ನೂ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರ ನಾಲ್ಕು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡುವುದಾಗಿ ಅರ್ಜಿದಾರರ ಪರ ವಕೀಲ ಹನುಮಂತರಾಯ ನ್ಯಾಯಾಲಯಕ್ಕೆ ತಿಳಿಸಿದರು.ಕಿಕ್ಕಿರಿದ ನ್ಯಾಯಾಲಯ: ವಕೀಲರು ಮುಖ್ಯಮಂತ್ರಿ ವಿರುದ್ಧ ಮಧ್ಯಾಹ್ನ ಮೊಕದ್ದಮೆ ದಾಖಲಿಸುವ ಸುದ್ದಿ ತಿಳಿಯುತ್ತಿದ್ದಂತೆ ಬೃಹತ್ ಸಂಖ್ಯೆಯಲ್ಲಿ ವಕೀಲರು ವಿಶೇಷ ನ್ಯಾಯಾಲಯದ ಬಳಿ ಜಮಾಯಿಸಿದ್ದರು. 
 
ಸಿಎಂ, ಪುತ್ರರು, ಅಳಿಯ ಗುರಿ
ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಆಗಮಿಸುತ್ತಿದ್ದಂತೆ ನ್ಯಾಯಾಲಯದ ಒಳಗೂ ಜನಸಂದಣಿ ಜಾಸ್ತಿಯಾಯಿತು.ಅರ್ಜಿದಾರರು ಮತ್ತು ಅವರ ಪರ ವಕೀಲರ ಮಾತನ್ನು ಕೇಳಿಸಿಕೊಳ್ಳುವುದಕ್ಕೂ ನ್ಯಾಯಾಧೀಶರಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆಯೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಾಧೀಶರು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಿದರು.

18 ಪ್ರಕರಣಗಳಿಗೆ ಅನುಮತಿ: ಮೊಕದ್ದಮೆ ದಾಖಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಕೀಲ ಹನುಮಂತರಾಯ, ‘ಜಸ್ಟೀಸ್ ಲಾಯರ್ಸ್ ಫೋರಂನ ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೋರಿದ್ದರು. ಈ ಪೈಕಿ 18 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಶುಕ್ರವಾರ ಅನುಮತಿ ನೀಡಿದ್ದಾರೆ’ ಎಂದರು.

‘ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಮೂರು ಪ್ರಕರಣಗಳನ್ನು ಮಾತ್ರ ಒಂದು ಮೊಕದ್ದಮೆಯ ಅಡಿಯಲ್ಲಿ ತರಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ 18 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಮೊಕದ್ದಮೆಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ. ಈಗ ಆರು ಪ್ರಕರಣಗಳ ಸಂಬಂಧ ಎರಡು ಮೊಕದ್ದಮೆ ದಾಖಲಿಸಿದ್ದು, ಉಳಿದ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರ ನಾಲ್ಕು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಲಾಗುವುದು’ ಎಂದು ವಿವರಿಸಿದರು.

‘ಮುಖ್ಯಮಂತ್ರಿಯವರ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ನಮಗೆ ಕಾನೂನಿನ ಅಡಿಯಲ್ಲಿ ಅನುಮತಿ ನೀಡಿದ್ದಾರೆ. ದಾಖಲೆಗಳ ಆಧಾರದಲ್ಲಿ ಈಗ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇವೆ. ಇದು ಭ್ರಷ್ಟಾಚಾರದ ವಿರುದ್ಧದ ತತ್ವಾಧಾರಿತ ಹೋರಾಟ’ ಎಂದು ಸಿರಾಜಿನ್ ಮತ್ತು ಬಾಲರಾಜ್ ಪ್ರತಿಕ್ರಿಯಿಸಿದರು.

ಮುಂದಿನ ಹಾದಿ: ವಕೀಲರು ದಾಖಲಿಸಿರುವ ಮೊಕದ್ದಮೆಗಳ ವಿಚಾರಣೆ ನಡೆಸುವ ನ್ಯಾಯಾಲಯ ನೇರವಾಗಿ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಬಹುದು. ಇಲ್ಲವೇ, ದಾಖಲೆಗಳ ಆಧಾರದಲ್ಲಿ ಮುಖ್ಯಮಂತ್ರಿ ಮತ್ತು ಇತರೆ ವ್ಯಕ್ತಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಂತೆ ಅರ್ಜಿದಾರರಿಗೇ ಸೂಚಿಸಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT