ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಅಪರಾಧಿ ಯಾರು?

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

`ಮಹಿಳೆಯ ಮೇಲಿನ ಲೈಂಗಿಕ ಅಪರಾಧಗಳ ಹೆಚ್ಚಳಕ್ಕೆ ಅವರು ತೊಡುವ ಪ್ರಚೋದನಾತ್ಮಕ ಬಟ್ಟೆಗಳೇ ಕಾರಣ.~- ಆಂಧ್ರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ವಿ. ದಿನೇಶ್ ರೆಡ್ಡಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ. ಸಿ. ಪಾಟೀಲ್ ಅವರೂ, ಕರ್ನಾಟಕ ಮಹಿಳಾ ಆಯೋಗ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಲೈಂಗಿಕ ಕಿರುಕುಳ ತಡೆಗೆ `ಪ್ರಚೋದನಾತ್ಮಕ~ ಉಡುಪು ಧರಿಸಬಾರದೆಂದು ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ.

ಇಷ್ಟರ ನಂತರ, ಬೆಂಗಳೂರು ವಿಶ್ವವಿದ್ಯಾಲಯದ ಲೈಂಗಿಕ ಕಿರುಕುಳ ವಿರುದ್ಧದ ಸಮಿತಿಯ ಮುಖ್ಯಸ್ಥೆ ಹಾಗೂ ಮಹಿಳಾ ಅಧ್ಯಯನ ವಿಭಾಗದ ಮಾಜಿ ಮುಖ್ಯಸ್ಥೆ ಕೆ ಕೆ ಸೀತಮ್ಮ ಹೇಳಿದ ಮಾತುಗಳಿವು: `ಮಹಿಳೆಯರು ಅಶ್ಲೀಲ ಉಡುಪು ಧರಿಸಬಾರದು. ಅಂತಹ ಬಟ್ಟೆಗಳು ಪುರುಷರನ್ನು ಅನಗತ್ಯ ಕೆರಳಿಸಿ, ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಸೀರೆ ಉಟ್ಟರೂ ಉದ್ದ ತೋಳಿನ ರವಿಕೆಯನ್ನೇ ಧರಿಸಬೇಕು. ಬೆಂಗಳೂರು ವಿಶ್ವವಿದ್ಯಾಲಯದ ಅನೇಕ ಉಪನ್ಯಾಸಕಿಯರು ಸೆಲ್ವಾರ್ ಅಥವಾ ಜೀನ್ಸ್ ಧರಿಸುತ್ತಾರೆ. ಹುಡುಗರಿಂದ ಅವರು ಯಾವ ಬಗೆಯ ಗೌರವ ನಿರೀಕ್ಷಿಸುವುದು ಸಾಧ್ಯ?~ ಎಂದು ಅಪ್ಪಣೆ ಕೊಡಿಸಿದ್ದಾರೆ.

ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಅಪರಾಧಗಳಿಗೆ ಬಲಿಯಾದವರನ್ನೇ ಅಪರಾಧಿಗಳಾಗಿ ನೋಡುವಂತಹ ಮನೋಭಾವಗಳ ಕಥೆ ಇದು. ಈ ಕಥೆ ಇಂದು ನಿನ್ನೆಯದಲ್ಲ ಅಥವಾ ಭಾರತಕ್ಕೆ ಸೀಮಿತವಾದುದೂ ಅಲ್ಲ. ಕಳೆದ ವರ್ಷ ವಿಶ್ವದಾದ್ಯಂತ ಹಲವು ನಗರಗಳಲ್ಲಿ ನಡೆದ `ಸ್ಲಟ್‌ವಾಕ್~ ಆಂದೋಲನವನ್ನು ನೆನಪಿಸಿಕೊಳ್ಳಿ. ಇದಕ್ಕೆ ಕಾರಣವಾದದ್ದು ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರ ನುಡಿ. `ಲೈಂಗಿಕ ಅಪರಾಧಗಳಿಗೆ ಬಲಿಪಶುಗಳಾಗಬಾರದು ಎಂದಿದ್ದರೆ `ಸ್ಲಟ್~(ನಡತೆಗೆಟ್ಟವಳು)ಗಳ ರೀತಿ ಬಟ್ಟೆ ಧರಿಸುವುದನ್ನು ಬಿಡಬೇಕು~ ಎಂದಿದ್ದರು ಆತ. ಈ ಮಾತುಗಳಿಗೆ ತೀವ್ರ ಪ್ರತಿಭಟನೆ ತೋರಿ ಜಗತ್ತಿನ ವಿವಿಧ ನಗರಗಳಲ್ಲಿ ತುಂಡುಡುಗೆ ತೊಟ್ಟ ಮಹಿಳೆಯರು ಪ್ರದರ್ಶನ ನಡೆಸಿದ್ದು ದೊಡ್ಡ ಜಾಗತಿಕ ಆಂದೋಲನವಾಗಿ ಪರಿವರ್ತಿತವಾಯಿತು. ಭಾರತದ ದೆಹಲಿ ಹಾಗೂ ಭೋಪಾಲ್‌ಗಳಲ್ಲಿ ನಡೆದ `ಸ್ಲಟ್‌ವಾಕ್~ಗಳ ವಿಶೇಷವೆಂದರೆ, ಇದರಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಪ್ರಚೋದನಾತ್ಮಕವಾದ ಬಟ್ಟೆಗಳನ್ನು ಧರಿಸಿರಲಿಲ್ಲ. ಬೆಂಗಳೂರಿನಲ್ಲೂ ನಡೆಸಲು ಉದ್ದೇಶಿಸಲಾಗಿದ್ದ ಇಂತಹದೇ `ಸ್ಲಟ್‌ವಾಕ್~ಗೆ ಪೊಲೀಸರ ಅನುಮತಿ ದೊರಕದಿದ್ದುದು ಇತ್ತೀಚಿನ ವಿದ್ಯಮಾನ.

ಮಹಿಳೆ ವಿರುದ್ಧದ ಅಪರಾಧಗಳಿಗೆ ಮಹಿಳೆಯನ್ನೇ ದೂರುವಂತಹ ಮನಸ್ಥಿತಿ ಸರ್ವವ್ಯಾಪಿಯಾಗಿರುವುದನ್ನು ಈ ವಿದ್ಯಮಾನಗಳು ಎತ್ತಿ ಹೇಳುತ್ತವೆ. ಇಂತಹ ಮನಸ್ಥಿತಿಗಳು ಮಹಿಳೆಯೊಳಗಿನ ಅಸುರಕ್ಷತೆಯ ಭಾವವನ್ನು ಮತ್ತಷ್ಟು ಹೆಚ್ಚಿಸುವಂತಹದ್ದು.

ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರಗಳಂತಹ ಪ್ರಕರಣಗಳನ್ನು ನಿರ್ವಹಿಸುವಷ್ಟು ಸಂವೇದನಾಶೀಲತೆ ಬಹುತೇಕ ಪೊಲೀಸ್ ಅಧಿಕಾರಿಗಳಿಗೆ ಇಲ್ಲ ಎಂಬುದು ಅನೇಕ ಮಹಿಳೆಯರ ಅನುಭವ. ಬಹುತೇಕ ಪ್ರಕರಣಗಳಲ್ಲಿ ನೊಂದ ಮಹಿಳೆಯರು ಇಂತಹ ಮನೋಭಾವದ ಅಧಿಕಾರಿಗಳಿಂದಾಗಿ ಮತ್ತಷ್ಟು ಕಿರುಕುಳಗಳಿಗೆ ಗುರಿಯಾಗುವುದು ಮಾಮೂಲು. ಎಷ್ಟೇ ವಿದ್ಯಾವಂತರಿರಲಿ, ಉನ್ನತ ಹುದ್ದೆ ಅಲಂಕರಿಸಿರಲಿ, ಹೆಣ್ಣಿನ ಕುರಿತಾಗಿ ಅಂತರ್ಗತವಾಗಿರುವ ಮನೋಭಾವಗಳು ಸಾಯುವುದು ಕಷ್ಟ ಎಂಬುದನ್ನು ಆಂಧ್ರ ಡಿಜಿಪಿಯವರ ಮಾತುಗಳು ಮತ್ತೊಮ್ಮೆ ಅನಾವರಣಗೊಳಿಸಿವೆ. ಹಳ್ಳಿಗಳ ಹೆಣ್ಣುಮಕ್ಕಳೂ ಸೆಲ್ವಾರ್ ಕಮೀಜ್ ಧರಿಸಲಾರಂಭಿಸಿರುವ ಬೆಳವಣಿಗೆಯ ಬಗೆಗೂ ಈ ಅಧಿಕಾರಿ ವ್ಯಕ್ತಪಡಿಸಿರುವ ಆತಂಕವಂತೂ ಬಾಲಿಶವಾದುದು.

ಪ್ರಚೋದನಾತ್ಮಕ ಬಟ್ಟೆ ತೊಟ್ಟು ಫ್ಯಾಷನ್ ಮಾಡುವ ಸುಂದರ ಯುವತಿಯರು ಮಾತ್ರ ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂಬಂತಹ ಧೋರಣೆ ಅತ್ಯಾಚಾರವೆಂಬುದು ಭಾವೋದ್ರೇಕ ಅಥವಾ ಕಾಮೋದ್ರೇಕದಿಂದುಂಟಾಗುವ ಅಪರಾಧ ಎಂಬ ಭಾವನೆಯನ್ನು ಸ್ಥಿರಗೊಳಿಸುತ್ತದೆ. ಆದರೆ ಸಾಂಪ್ರದಾಯಿಕ ಉಡುಪು ಧರಿಸುವ ಹಳ್ಳಿ ಹೆಣ್ಣುಮಕ್ಕಳು, ಪುಟ್ಟ ಬಾಲೆಯರು, ವಯಸ್ಸಾದ ಮಹಿಳೆಯರೂ ಲೈಂಗಿಕ ದೌರ್ಜನ್ಯಗಳಿಗೆ ಬಲಿಯಾಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ವಾಸ್ತವವಾಗಿ ಬಿಗಿ ಜೀನ್ಸ್‌ನಂತಹ ಆಧುನಿಕ ಉಡುಗೆ ತೊಟ್ಟ ಹೆಣ್ಣುಮಕ್ಕಳು ಕಿರುಕುಳಗಳಿಗೆ ಗುರಿಯಾಗುವುದು ಕಡಿಮೆ ಎಂಬ ಭಾವನೆ ಪ್ರಚಲಿತವಿದೆ. ಆಧುನಿಕ ಉಡುಗೆ ತೊಟ್ಟ ದಿಟ್ಟ ಹುಡುಗಿಯರ ತಂಟೆಗೆ ಹೋಗುವುದಕ್ಕಿಂತ, ಮೆತ್ತಗೆ ಅಸಹಾಯಕರಂತಿರುವ ಪಾಪದ ಹೆಣ್ಣುಮಕ್ಕಳ ಮೇಲೇ ದೌರ್ಜನ್ಯಗಳು ನಡೆಯುವುದು ಹೆಚ್ಚು ಎಂಬುದನ್ನು ಸಮೀಕ್ಷೆಗಳು ತೋರಿಸಿವೆ.

ನಿಯಂತ್ರಣದ ಹಂಬಲ: ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಶೇಕಡಾ 60ರಿಂದ 75ರಷ್ಟು ಅತ್ಯಾಚಾರಗಳು ಪೂರ್ವಯೋಜಿತ. ಇಂತಹ ಪ್ರಕರಣಗಳಲ್ಲಿ ಕಾಮದ ಭಾವಕ್ಕಿಂತ ಹೆಚ್ಚಾಗಿ ದ್ವೇಷ ಹಾಗೂ ಆಕ್ರಮಣಶೀಲತೆ ಹಿನ್ನೆಲೆಯಲ್ಲಿರುತ್ತದೆ. ಅಧಿಕಾರ ಹೊಂದಿ ನಿಯಂತ್ರಣ ಸಾಧಿಸುವ ಹಂಬಲದ ಅಪರಾಧ ಇದು. ಪುರುಷ ಪ್ರಧಾನ ಮೌಲ್ಯಗಳನ್ನು ಒಂದಿಷ್ಟು ಪ್ರಶ್ನಿಸಿದ್ದೇ ಆದಲ್ಲಿ, ಅಧಿಕಾರದಲ್ಲಿರುವ ಪುರುಷರು ಸಾರ್ವಜನಿಕವಾಗಿ ಅಂತಹ ಹೆಣ್ಣಿನ ಬಟ್ಟೆ ಕಳಚುವುದು ನಡೆದು ಬಂದದ್ದೇ.

ಬಾಲ್ಯವಿವಾಹಕ್ಕೆ ತಡೆ ಒಡ್ಡಿದ ರಾಜಸ್ತಾನ ಸರ್ಕಾರದ ಮಹಿಳಾ ಅಭಿವೃದ್ಧಿ ಯೋಜನೆಯಡಿ `ಸಾಥಿನ್~ ಆಗಿ ದುಡಿಯುತ್ತಿದ್ದ ಭನ್ವರಿ ದೇವಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಇದಕ್ಕೆ ದೊಡ್ಡ ಉದಾಹರಣೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1997ರಲ್ಲಿ ನೀಡಿದ ತೀರ್ಪು ದೊಡ್ಡ ಮೈಲಿಗಲ್ಲಾಯಿತು.

ಅತ್ಯಾಚಾರ ಎಂಬುದು ಯುದ್ಧದ ಸಂದರ್ಭಗಳಲ್ಲಿ ರಾಜಕೀಯ ಅಸ್ತ್ರವಾಗಿಯೂ ಬಳಕೆ ಆಗುವುದನ್ನು ಜಗತ್ತಿನ ವಿದ್ಯಮಾನಗಳು ತೋರಿಸಿಕೊಟ್ಟಿವೆ. ಇಂತಹ ಕಟು ವಾಸ್ತವಗಳು ಕಣ್ಣೆದುರೇ ಕಾಣುತ್ತಿದ್ದರೂ, ಆಕ್ರಮಣಶೀಲವಾದ ಪುರುಷರ ಮನೋಧರ್ಮವನ್ನು ಮುಚ್ಚಿಟ್ಟು ಅತ್ಯಾಚಾರವನ್ನು ಆಹ್ವಾನಿಸುವುದು ಹೆಣ್ಣುಮಕ್ಕಳ ವೇಷಭೂಷಣವೇ ಎಂದು ಅತ್ಯಾಚಾರದ ಹೊಣೆಗಾರಿಕೆಯನ್ನೂ ಹೆಣ್ಣುಮಕ್ಕಳ ಮೇಲೆಯೇ ಜಾರಿಸುವ ಪ್ರಯತ್ನ ಎಷ್ಟು ಸರಿ?

ಇಂದು ಮಹಿಳೆಯರ ಉಡುಪಿನ ಮೇಲೆ ನಿರ್ಬಂಧ ವಿಧಿಸುವ ಮನೋಧರ್ಮವೇ ನಾಳೆ ಮಹಿಳೆಯರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಹೇಳಿದರೂ ಅಚ್ಚರಿಯಿಲ್ಲ. ಒಳ್ಳೆಯ ಭಾರತೀಯ ಹುಡುಗಿಯರು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂಬುದು ಸ್ವಯಂ ಘೋಷಿತ ನೈತಿಕ ಪೊಲೀಸರ ಹಕ್ಕಾಗುವುದು ಪ್ರಜಾತಂತ್ರದ ಮೌಲ್ಯಗಳಿಗೆ ವಿರುದ್ಧವಾದುದು. ನಮ್ಮ ಸಾಂಸ್ಕೃತಿಕ ನುಡಿಗಟ್ಟುಗಳಂತೂ ಲಿಂಗ ತಾರತಮ್ಯವನ್ನೇ ಧ್ವನಿಸುವುದನ್ನು ಗಮನಿಸಬೇಕು. ಸಭ್ಯತೆ, ಮರ್ಯಾದೆ, ನೈತಿಕತೆಯಂತಹ ಪದಗಳನ್ನು ಮಹಿಳೆಗೆ ಅನ್ವಯಿಸಿದಾಗ ಅವು ಬೇರೆಯದೇ ಅರ್ಥಗಳನ್ನು ಪಡೆಯುತ್ತವೆ. ಆದರೆ, ಪುರುಷರು ಚಡ್ಡಿ, ಬರ್ಮುಡಾಗಳಲ್ಲಿ ತಿರುಗುವುದು, ಹೊಟ್ಟೆ, ಎದೆ ತೆರೆದುಕೊಂಡಿರುವುದು, ಪಂಚೆ ಧರಿಸಿದಾಗ ತೊಡೆಗಳ ಪ್ರದರ್ಶನ - ಇವೆಲ್ಲಾ ಅಸಭ್ಯತೆ ಆಗುವುದೇ ಇಲ್ಲ.

ಸಭ್ಯತೆ ಅಥವಾ ಅಸಭ್ಯತೆ ಎಂಬುದು ಪ್ರತಿಯೊಂದು ಸಂಸ್ಕೃತಿಯಲ್ಲೂ ಭಿನ್ನ ದನಿ ಪಡೆಯುತ್ತದೆ. ಇರಾನ್‌ನಲ್ಲಿ ಹೆಣ್ಣುಮಕ್ಕಳ ಕೇಶವೇ ಲೈಂಗಿಕವಾಗಿ ಪ್ರಚೋದನಕಾರಿಯಂತೆ. ಹೀಗಾಗಿ ಕೂದಲು ಮುಚ್ಚುವಂತೆ ಸ್ಕಾರ್ಫ್ ಕಟ್ಟುವುದು ಅಲ್ಲಿ ಕಡ್ಡಾಯ. ಇದೇ ರೀತಿ ಲಂಗ ಅಥವಾ ಸೀರೆಯಂತಹ ಉಡುಪಿನ ಜತೆಗೆ ಮೇಲು ಸೆರಗು ಇಲ್ಲದೆ ಕುಪ್ಪಸವಷ್ಟೇ ಧರಿಸುವುದು (ಶ್ರೀಲಂಕಾ, ಕೇರಳ) ಅನೇಕ ಸಂಸ್ಕೃತಿಗಳಲ್ಲಿ ಅಂತರ್ಗತ ಭಾಗವೇ ಆಗಿದೆ.

ಈ ಹಿನ್ನೆಲೆಯಲ್ಲಿ ಉಡುಪು ಸಂಹಿತೆ ವಿವಾದವೇ ಸಂಕೀರ್ಣವಾದುದು. ನೀತಿ ಬೋಧಿಸುವ ಸಂಸ್ಕೃತಿಯ ವಕ್ತಾರರ ಜೊತೆಜೊತೆಗೇ ಮುಕ್ತತೆ, ಸ್ವಚ್ಛಂದತೆಯ ಪ್ರಭಾವವನ್ನು ಬೀರುತ್ತಿರುವ ಸರಕು ಸಂಸ್ಕೃತಿಯ ಮಾರುಕಟ್ಟೆ ಶಕ್ತಿಗಳ ಹಿಡಿತಗಳ್ಲ್ಲಲಿ ಸಿಲುಕಿ ಗೊಂದಲದಲ್ಲಿದ್ದಾರೆ ಯುವಜನತೆ. ಈ ಗೊಂದಲಗಳ ನಿವಾರಣೆಗೆ, ನಿಜವಾದ ಮೌಲ್ಯಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವಂತಹ ವಾತಾವರಣ ಇಂದಿನ ಅಗತ್ಯ. ಈ ನಿಟ್ಟಿನಲ್ಲಿ, ಹೆಣ್ಣನ್ನು ಭೋಗದ ವಸ್ತುವಂತಲ್ಲದೆ ಸ್ವತಂತ್ರ ವ್ಯಕ್ತಿತ್ವದ ವ್ಯಕ್ತಿಯಾಗಿ ಕಾಣುವ ದೃಷ್ಟಿಕೋನ ಸಮಾಜದಲ್ಲಿ ಮೂಡಬೇಕಿರುವುದು ಸದ್ಯದ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT