ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಬೆಚ್ಚಿಬಿದ್ದ ‘ಶೈಕ್ಷಣಿಕ ನಗರಿ’

ಚಳಿಯಿಂದ ಮೈಕೊಡವಿ ಎದ್ದವರ ತಲ್ಲಣಗೊಳಿಸಿದ ಸುದ್ದಿ!
Last Updated 23 ಡಿಸೆಂಬರ್ 2013, 5:16 IST
ಅಕ್ಷರ ಗಾತ್ರ

ದಾವಣಗೆರೆ: ಬಿಸಿಎ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ‘ಶೈಕ್ಷಣಿಕ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಜಿಲ್ಲೆಯನ್ನೇ ಭಾನುವಾರ ಬೆಳ್ಳಂಬೆಳಿಗ್ಗೆ ತಲ್ಲಣಗೊಳಿಸಿತು. ಎಂದಿನಂತೆ ಚಳಿಯಿಂದ ಮೈಕೊಡವಿ ಎದ್ದ ನಾಗರಿಕರಿಗೆ ಬರಸಿಡಿಲಿನಂತೆ
ಈ ಸುದ್ದಿ ಬಂದು ಅಪ್ಪಳಿಸಿತು. ಘಟನೆಯ ಮಾಹಿತಿ ಪಡೆದ ವಿದ್ಯಾರ್ಥಿಗಳು, ಸಹಪಾಠಿಗಳು ಮರುಗಿದರು. ಪೋಷಕರು ಆತಂಕಕ್ಕೆ ಒಳಗಾದರು.

ಖಾಸಗಿ ಕಾಲೇಜಿನ ಬಿಸಿಎ ವಿದ್ಯಾರ್ಥಿನಿಯ ಮೇಲೆ ಶನಿವಾರ ರಾತ್ರಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಸರಸ್ವತಿ ಬಡಾವಣೆ ನಿವಾಸಿ ಪೃಥ್ವಿಯನ್ನು ಭಾನುವಾರ ಮಧ್ಯಾಹ್ನದ ವೇಳೆಗೆ ಬಂಧಿಸಲು ಪೊಲೀಸರು ಯಶಸ್ವಿಯಾದರು.

ಸಂಜೆ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಸಂಘಟನೆಯ ಮುಖಂಡರು ಘಟನೆಯನ್ನು ಖಂಡಿಸಿದರು.

ಎಬಿವಿಪಿಯ ಮುಖಂಡ ಪ್ರಸನ್ನಕುಮಾರ್‌ ಮಾತನಾಡಿ, ‘ದೆಹಲಿ, ಮುಂಬೈ ಬಳಿಕ ದಾವಣಗೆರೆಯಲ್ಲಿ ನಡೆದಂತಹ ಅತ್ಯಂತ ಅಮಾನುಷ ಘಟನೆಯಿದು. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ಪೊಲೀಸರು ಮಹಿಳಾ ಹಾಸ್ಟೆಲ್‌ಗಳ ಬಳಿ ರಾತ್ರಿಯ ವೇಳೆ ಬಂದೋಬಸ್ತ್‌ ಕಲ್ಪಿಸಬೇಕು. ಎಲ್ಲಿಯೂ ರಾತ್ರಿ ವೇಳೆ ಪೊಲೀಸರು ಕಾಣಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದು 24 ಗಂಟೆಗಳ ಒಳಗೆ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ ಕಾರ್ಯ. ಮಹಿಳಾ ಹಾಸ್ಟೆಲ್‌ಗಳ ಬಳಿ ಮಹಿಳಾ ಕಾವಲುಗಾರರನ್ನೇ ನೇಮಿಸಬೇಕು. ಆಯಾಕಟ್ಟಿನ ಜಾಗದಲ್ಲಿ ಬಂದೋಬಸ್ತ್‌ ಹೆಚ್ಚಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಮುಖಂಡ ಮಾಗನಹಳ್ಳಿ ಮಂಜು ಘಟನೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ತೀವ್ರತರನಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ದುಷ್ಕೃತ್ಯವನ್ನು ಆಕೆ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲೇಜು ಆಡಳಿತ ಮಂಡಳಿಯೂ ತೀವ್ರವಾಗಿ ಖಂಡಿಸಿದೆ. ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿರುವುದು ಅಮಾನುಷ ಕೃತ್ಯ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದೆ. 

‘ಜೀವನವೇ ಹಾಳಾಗಿದೆ’: ‘ನಮ್ಮ ಕುಟುಂಬದ ಜೀವನವೇ ಹಾಳಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಮಗಳು ಬುದ್ಧಿವಂತೆ. ಕರಾಟೆ, ಯೋಗದಲ್ಲೂ ಮುಂದಿದ್ದಳು. ನೃತ್ಯ ಅವಳಿಗೆ ಇಷ್ಟ’ ಎಂದು ಯುವತಿಯ ತಂದೆ ಗದ್ಗದಿತರಾದರು.

ಆಸ್ಪತ್ರೆ ಬಳಿ ರಕ್ಷಣೆಯೇ ಇರಲಿಲ್ಲ..
ಅತ್ಯಾಚಾರಕ್ಕೆ ಒಳಗಾದ ಯುವತಿ ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯ ಬಳಿ ಭಾನುವಾರ ಮಧ್ಯಾಹ್ನ ಯಾವುದೇ ಪೊಲೀಸ್‌ ಬಂದೋಬಸ್ತ್‌ ಇರಲಿಲ್ಲ. ಘಟನೆ ಅತ್ಯಂತ ಅಮಾನುಷವಾಗಿ ನಡೆದಿದ್ದು, ಆಕೆಯ ರಕ್ಷಣೆಗೆ ಯಾವುದೇ ಸಿಬ್ಬಂದಿಯನ್ನೂ ಪೊಲೀಸರು ನೇಮಿಸಿರಲಿಲ್ಲ. ಘಟನೆಯ ಮಾಹಿತಿ ಪಡೆದ ನಾಗರಿಕರು ಆಸ್ಪತ್ರೆ ಆವರಣಕ್ಕೆ ಬಂದು ಹೋಗುತ್ತಿದ್ದ ದೃಶ್ಯಕಂಡ ಪೋಷಕರು ಭದ್ರತೆ ನಿಯೋಜಿಸುವಂತೆ ಆಗ್ರಹಿಸಿದರು. ವಿವರಣೆ ಪಡೆಯಲು ಮಾತ್ರ ಪೊಲೀಸರು ಬರುತ್ತಿದ್ದಾರೆ. ಭದ್ರತೆಗೆ ಯಾರೂ ಇಲ್ಲ ಎಂದು ಅವರು ದೂರಿದರು. 

ಮತ್ತೊಬ್ಬ ಆರೋಪಿ ಸೆರೆ?
ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮತ್ತೊಬ್ಬ ಆರೋಪಿಯನ್ನು ಭಾನುವಾರ ರಾತ್ರಿ ಬಂಧಿಸಿದ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಆತ ಘಟನೆಗೆ ಸಹಕರಿಸಿದ್ದ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT