ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಗಳ ಕಳಂಕ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹರಿಯಾಣದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 12 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅತ್ಯಾಚಾರಕ್ಕೆ ಗುರಿಯಾಗಿರುವ ಹೆಚ್ಚಿನ ಹೆಣ್ಣುಮಕ್ಕಳು ಹದಿಹರೆಯದ ದಲಿತ ಹೆಣ್ಣುಮಕ್ಕಳು ಎಂಬುದು ಆತಂಕಕಾರಿ.

ಅನೇಕ ಪ್ರಕರಣಗಳಲ್ಲಿ ಇವು ಅಪಹರಣದ ನಂತರದ ಸಾಮೂಹಿಕ ಅತ್ಯಾಚಾರಗಳಾಗಿವೆ ಎಂಬುದು ಮತ್ತಷ್ಟು ಆತಂಕ ಹುಟ್ಟಿಸುವ ಸಂಗತಿ. ಅನೇಕ ಪ್ರಕರಣಗಳಲ್ಲಿ, ಅಪರಾಧದ ಎಂಎಂಎಸ್ ಕ್ಲಿಪ್‌ಗಳನ್ನುಆರೋಪಿಗಳು ಪ್ರಚಾರ ಮಾಡುವ ಧಾರ್ಷ್ಟ್ಯ ತೋರಿರುವುದಂತು ಮತ್ತೂ ಆಘಾತಕಾರಿ.

ಆದರೆ  `ಕಳೆದ ವರ್ಷಕ್ಕೆ ಹೋಲಿಸಿದರೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆ~ ಎಂಬಂತಹ ಸಮರ್ಥನೆಯನ್ನು ಇದೇ ವೇಳೆ ಹರಿಯಾಣದ ಪೊಲೀಸ್ ಮಹಾ ನಿರ್ದೇಶಕರು ನೀಡಿರುವುದು ನಾಚಿಕೆಗೇಡು. ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹಿಸಾರ್, ಜಿಂದ್, ಭಿವಾನಿ, ಸೋನಿಪತ್ ಹಾಗೂ ಯಮುನಾನಗರ ಜಿಲ್ಲೆಗಳಿಂದ ವರದಿಯಾಗಿವೆ.

ರೋಹ್ಟಕ್, ಫರಿದಾಬಾದ್ ಜಿಲ್ಲೆಗಳಿಂದಲೂ ಅತ್ಯಾಚಾರಗಳು ವರದಿಯಾಗಿವೆ. ಈ ಬಗೆಯಲ್ಲಿ, ಅದೂ ಹದಿಹರೆಯದ ದಲಿತ ಹೆಣ್ಣುಮಕ್ಕಳ ಮೇಲೆಯೇ ಅತ್ಯಾಚಾರ ಪ್ರಕರಣಗಳು ಹೆಚ್ಚಲು ಕಾರಣವೇನು ಎಂಬಂತಹ ಪ್ರಶ್ನೆಯನ್ನು ಈ  ಪ್ರಕರಣಗಳು ಎತ್ತಿವೆ. ಹರಿಯಾಣದಲ್ಲಿ  ಪುರುಷ - ಮಹಿಳೆ ಅನುಪಾತ ತೀವ್ರ ಕುಸಿತವಾಗಿರುವುದು ಇಂತಹ

ವಿದ್ಯಮಾನಕ್ಕೆ ಒಂದು ಕಾರಣವಾಗಿರಬಹುದು ಎಂಬಂತಹ ವಾದವನ್ನು ತಜ್ಞರು ಮುಂದಿಡುತ್ತಿದ್ದಾರೆ. ಲಿಂಗ ಅನುಪಾತದಲ್ಲಿ ಹರಿಯಾಣದ್ದು ಕಟ್ಟಕಡೆಯ ಸ್ಥಾನ. 2011ರ ಜನಗಣತಿಯ ಪ್ರಕಾರ ಹರಿಯಾಣದಲ್ಲಿ 1000 ಪುರುಷರಿಗೆ ಕೇವಲ 877 ಮಹಿಳೆಯರಿದ್ದಾರೆ.

ಹಾಗೆಯೇ 0-6 ವಯೋಮಾನದ ಮಕ್ಕಳ ಪೈಕಿ 1000 ಗಂಡುಮಕ್ಕಳಿಗೆ ಕೇವಲ 830 ಹೆಣ್ಣುಮಕ್ಕಳಿದ್ದಾರೆ. ಲಿಂಗಾನುಪಾತದಲ್ಲಿನ ಈ ತೀವ್ರ ಏರುಪೇರುಗಳಿಂದಾಗಿ ಮದುವೆ ಮಾಡಿಕೊಳ್ಳಲು ಹುಡುಗಿಯರೇ ಸಿಗದಂತಹ ವಾತಾವರಣ ಹರಿಯಾಣದಲ್ಲಿ ಸೃಷ್ಟಿಯಾಗಿದೆ.
ಹೆಣ್ಣುಮಕ್ಕಳ ವಿರುದ್ಧದ ಹಿಂಸಾಚಾರಗಳಿಗೆ ಇಂತಹ ಸಂಗತಿಗಳೂ ಕೊಡುಗೆ ಸಲ್ಲಿಸುತ್ತಿವೆ ಎಂಬಂತಹ ವಾದಗಳಲ್ಲಿ ಹುರುಳಿದೆ. ಈ ವಿದ್ಯಮಾನಗಳು, ಹೆಣ್ಣುಭ್ರೂಣಹತ್ಯೆಗಳಿಗೆ ಮುಂದಾಗುವಂತಹ ಸಮಾಜದ ಕಣ್ತೆರೆಸಬೇಕಾಗಿದೆ.

ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಹರಿಯಾಣದಲ್ಲಿ ಸಕಾಲದಲ್ಲಿ ಕಾರ್ಯ ನಿರ್ವಹಿಸದ ಪೊಲೀಸರೂ ಕಾರಣರಾಗುತ್ತಿದ್ದಾರೆ ಎಂಬಂತಹ ಆರೋಪಗಳಿವೆ. ಅಪರಾಧಿಗಳಿಗೆ ರಕ್ಷಣೆ ನೀಡುತ್ತಾರೆಂಬ ಆರೋಪಗಳಿರುವುದರಿಂದ ಅನೇಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡದೇ ಇರುವ ಸಂದರ್ಭಗಳೂ ಇವೆ.

ಈ ಮಧ್ಯೆ, ಲೈಂಗಿಕ ಆಸಕ್ತಿ ನಿಯಂತ್ರಣಕ್ಕಾಗಿ ಹುಡುಗ ಹುಡುಗಿಯರ ವಿವಾಹ ವಯಸ್ಸನ್ನು 16ಕ್ಕೆ ಇಳಿಸಬೇಕೆಂದು ಕೆಲವು ಪ್ರಭಾವಶಾಲಿ ಖಾಪ್‌ಪಂಚಾಯಿತಿಗಳು ಒತ್ತಾಯಿಸಿರುವುದು ಹಾಸ್ಯಾಸ್ಪದ. ಬಾಲ್ಯವಿವಾಹದ ಪಿಡುಗಿನ್ನೂ ರಾಷ್ಟ್ರದಲ್ಲಿ ತೊಲಗಿಲ್ಲ. ಇಂತಹ ಸಂದರ್ಭದಲ್ಲಿ, ಈ ತರಹದ ಮಾತುಗಳು ಅಸಂಗತ. ಅತ್ಯಾಚಾರದಂತಹ ಹೀನ ಅಪರಾಧದ ಪ್ರಕರಣಗಳೂ ರಾಜಕೀಯ ರಂಪಾಟದ ವಸ್ತುಗಳಾಗುವುದಂತೂ ನಮ್ಮ ರಾಜಕೀಯ ವ್ಯವಸ್ಥೆ ತಲುಪಿರುವ ಅಧೋಗತಿಗೆ ದ್ಯೋತಕ.

`ಹರಿಯಾಣದಲ್ಲಿನ ಅತ್ಯಾಚಾರ ಪ್ರಕರಣಗಳು ಸರ್ಕಾರದ ವಿರುದ್ಧ ರಾಜಕೀಯ ಸಂಚಾಗಿರಬಹುದು~ ಎಂಬಂತಹ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಫೂಲ್ ಚಂದ್ ಮೌಲಾನ ಅವರ ಮಾತುಗಳು ಸಂವೇದನಾಶೀಲತೆಯ ಕೊರತೆಯನ್ನು ಎತ್ತಿ ಹೇಳುವಂತಹದ್ದು.

ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದು ಮುಖ್ಯ. ವಿಶೇಷವಾದ ತ್ವರಿತ ನ್ಯಾಯಾಲಯಗಳ ಮೂಲಕ ಇದು ಜಾರಿಯಾಗುವಂತೆ ಮಾಡಬೇಕಾದುದು ಸರ್ಕಾರದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT