ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳಿಗೆ ಗಲ್ಲು: ಒತ್ತಾಯ

ದೆಹಲಿ ಬಲಾತ್ಕಾರ ಪ್ರಕರಣ: ತ್ವರಿತಗತಿ ವಿಚಾರಣೆ- ಶಿಂಧೆ
Last Updated 18 ಡಿಸೆಂಬರ್ 2012, 20:01 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ರಾಜಧಾನಿಯಲ್ಲಿ ಭಾನುವಾರ ರಾತ್ರಿ ಓಡುತ್ತಿರುವ ಬಸ್‌ನಲ್ಲೇ ಪ್ಯಾರಾ ಮೆಡಿಕಲ್ (ಅರೆ ವೈದ್ಯಕೀಯ) ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ದೇಶದಾದ್ಯಂತ ದಿಗ್ಭ್ರಮೆ ಮತ್ತು ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸೋಮವಾರ ಚಾಲಕ ರಾಮ್ ಸಿಂಗ್ ಸೇರಿದಂತೆ ನಾಲ್ವರು ಶಂಕಿತ ವ್ಯಕ್ತಿಗಳನ್ನು  ಬಂಧಿಸಲಾಗಿತ್ತು. ದೆಹಲಿ ನ್ಯಾಯಾಲಯ ಚಾಲಕ ರಾಮ್‌ಸಿಂಗ್‌ನನ್ನು ಆರು ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಖಾಸಗಿ ಬಸ್ ಹಿಂಭಾಗದಲ್ಲಿ `ಯಾದವ' ಎಂದು ಬರೆದಿರುವುದನ್ನು ಪತ್ತೆ ಮಾಡಿ, ಹೀಗೆ ಬರೆದ ಒಂದು ಬಸ್‌ನ್ನು ಗುರುತಿಸಿ ತನಿಖೆ ಮಾಡಿದಾಗ, ಆ ಬಸ್‌ನಲ್ಲಿ ಕೃತ್ಯ ನಡೆಯದಿರುವುದು ಮತ್ತು ಅಂತಹ ಇನ್ನೊಂದು ಬಸ್ ಸಹ ಆ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಆ ಮಾಹಿತಿ ಆಧರಿಸಿ ಬಸ್ ಪತ್ತೆ ಮಾಡಿ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಿಳಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ರಾಮ್ ಸಿಂಗ್ ಇತರ 6 ಮಂದಿಯ ಜತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.

ರಾಮ್‌ಸಿಂಗ್ ಜತೆಗೆ ಆತನ ಸಹೋದರ ಮುಖೇಶ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾನನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಮೂವರನ್ನೂ ಬುಧವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು. ಘಟನೆಗೆ ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಕೋರುವುದಾಗಿಯೂ ನೀರಜ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸದರ ಆಕ್ರೋಶ: ಸಂಸತ್ತಿನ ಉಭಯ ಸದನಗಳಲ್ಲೂ ಈ ಘಟನೆ ಕೋಲಾಹಲಕ್ಕೆ ಕಾರಣವಾಗಿದ್ದು, ಸಂಸದೆಯರು ಪಕ್ಷ ಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಲೋಕಸಭೆ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಒತ್ತಾಯಿಸಿದ್ದಾರೆ.

ಈ ಮಧ್ಯೆ, `ಮಹಿಳೆಯರು ರಾತ್ರಿ ವೇಳೆ ಒಂಟಿಯಾಗಿ ಓಡಾಡಬಾರದು' ಎಂಬ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಆರೋಗ್ಯ ಕ್ಷೀಣ: ಅತ್ಯಾಚಾರಕ್ಕೊಳಗಾದ ಯುವತಿಗೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಕ್ಷೀಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಸ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಾಗೂ ಯುವತಿಯ ಗೆಳೆಯ ನೀಡಿದ ಹೇಳಿಕೆಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.  ಅತ್ಯಾಚಾರವೆಸಗಿದ ಆರೋಪಿಗಳ ಮಾಹಿತಿ ದೊರಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಮೇಲ್ಮನೆಯಲ್ಲಿ ಗೃಹಸಚಿವ ಶಿಂಧೆ, ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯಕ್ಕೆ ವಹಿಸಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT