ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ ಪ್ರತಿಭೆಗೆ ಒಲಿದು ಬಂದ ಅವಕಾಶ

ನಾಗಪುರದಲ್ಲಿ ನಾಳೆಯಿಂದ ಕ್ರಿಕೆಟ್ ಅಂಪೈರ್‌ಗಳ ಕಾರ್ಯಾಗಾರ
Last Updated 16 ಜುಲೈ 2013, 7:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಪೈರ್‌ಗಳ ಸಾಮರ್ಥ್ಯಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಾಗಪುರದ ಅಂಪೈರ್ ಅಕಾಡೆಮಿಯಲ್ಲಿ ನಡೆಸಲಿರುವ ಕಾರ್ಯಾಗಾರದಲ್ಲಿ ಕರ್ನಾಟಕದ ವಿನಾಯಕ ಎನ್. ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಾಗಾರ ಇದೇ 17ರಿಂದ 21ರ ವರೆಗೆ ನಡೆಯಲಿದೆ. 

ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿರುವ ಕುಲಕರ್ಣಿ ಬೆಳಗಾವಿ ಜಿಲ್ಲೆ ಅಥಣಿ ಮೂಲದವರು. ಟೆಸ್ಟ್ ಆಡುವ ಒಟ್ಟು ಹತ್ತು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಕಾರ್ಯಾಗಾರದಲ್ಲಿ ಪ್ರತಿ ದೇಶದಿಂದ ತಲಾ ಒಬ್ಬರು ನಿವೃತ್ತ ಅಂಪೈರ್ ಪಾಲ್ಗೊಳ್ಳುತ್ತಿದ್ದು ಭಾರತದ ಪ್ರತಿನಿಧಿಗಳಲ್ಲಿ ಒಬ್ಬರು ಉತ್ತರ ಕರ್ನಾಟಕದ ಕುಲಕರ್ಣಿ.

ಅಥಣಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎಸ್‌ಸಿ ಓದಿದವರು. ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ಎಂ.ಬಿ.ಕುಲಕರ್ಣಿ (ದಿವಂಗತ) ಅವರ ಜೊತೆ ಬಳ್ಳಾರಿ, ಮೈಸೂರು, ಮಂಡ್ಯ, ಹುಬ್ಬಳ್ಳಿ ಮತ್ತಿತರ ಕಡೆಗಳಲ್ಲಿ ಓಡಾಡಿದವರು. ಕಾಲೇಜು ದಿನಗಳಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಆಫ್‌ಸ್ಪಿನ್ನರ್ ಆಗಿ ಮಿಂಚಿದವರು. ನಂತರ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಸಾತಾರ್ ಜಿಲ್ಲಾ ತಂಡಕ್ಕಾಗಿ ಆಡಿದವರು.

ಆದರೆ ಅಲ್ಲಿ ರಾಷ್ಟ್ರೀಯ ಅಂಪೈರ್‌ಆಗಿದ್ದ ಎಂ.ಜಿ.ದೇಶಪಾಂಡೆ ಅವರ ಕಣ್ಣಿಗೆ ಬಿದ್ದ ನಂತರ ಬದುಕಿನ ದಿಶೆ ಬದಲಾಯಿತು. `ನೀನು ಬುದ್ಧಿವಂತ ಕ್ರಿಕೆಟರ್. ಹೀಗಾಗಿ ಅಂಪೈರಿಂಗ್‌ನತ್ತ ಗಮನ ಹರಿಸು' ಎಂದು ಹೇಳಿದ ದೇಶಪಾಂಡೆ ಅವರ ಮಾತಿನಿಂದ ಪ್ರೇರೇಪಿತರಾಗಿ 1978ರಲ್ಲಿ ಮಹಾರಾಷ್ಟ್ರದಲ್ಲಿ ರಾಜ್ಯ ಮಟ್ಟದ ಅಂಪೈರಿಂಗ್ ಪರೀಕ್ಷೆ ಕಟ್ಟಿ ಪಾಸಾದರು.

1996ರಲ್ಲಿ ರಾಷ್ಟ್ರಮಟ್ಟದ ಅಂಪೈರಿಂಗ್ ಪರೀಕ್ಷೆ ಪಾಸಾದರು. 1999ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯದ ಅಂಪೈರಿಂಗ್ ಮಾಡಿದ ಸಂಭ್ರಮ. ಭಾರತ, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಸರಣಿಯಲ್ಲಿ ಪುಣೆಯಲ್ಲಿ ನಡೆದ ಭಾರತ-ಶ್ರೀಲಂಕಾ ಪಂದ್ಯವನ್ನು ಅವರು ನಿಯಂತ್ರಿಸಿದರು. ಇದಾದ ನಂತರ ಒಂದು ದಿನದ ಎರಡು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದರು.

ಬೆಂಗಳೂರಿನಲ್ಲಿ ನಡೆದ ಭಾರತ-ಇಂಗ್ಲೆಂಡ್ 19 ವರ್ಷದೊಳಗಿವನರ ಟೆಸ್ಟ್ ಪಂದ್ಯ, ಮುಂಬೈಯಲ್ಲಿ ನಡೆದ ಭಾರತ-ಶ್ರೀಲಂಕಾ `ಎ' ತಂಡಗಳ ನಡುವಣ ಟೆಸ್ಟ್ ಪಂದ್ಯ, ಅಧ್ಯಕ್ಷರ ಮಂಡಳಿ ಇಲೆವೆನ್ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಪಂದ್ಯ, ಏಷ್ಯಾ ತಂಡಗಳು ಪಾಲ್ಗೊಳ್ಳುವ ಐಸಿಸಿ ಫಾಸ್ಟ್ ಟ್ರ್ಯಾಕ್ ಟೂರ್ನಿ, ಆಫ್ರೋ-ಏಷ್ಯನ್ ಟೂರ್ನಿ ಇತ್ಯಾದಿಗಳಲ್ಲಿ ಅಂಪೈರಿಂಗ್ ಮಾಡಿದ ಅವರು ಭಾರತ-ಆಸ್ಟ್ರೇಲಿಯಾ, ಭಾರತ-ಪಾಕಿಸ್ತಾನ, ಭಾರತ-ವೆಸ್ಟ್ ಇಂಡೀಸ್ ಮತ್ತು ಭಾರತ-ಜಿಂಬಾಬ್ವೆ ಒಂದು ದಿನದ ಪಂದ್ಯಗಳಲ್ಲಿ ಮೂರನೇ ಅಂಪೈರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.

2009ರಿಂದ ಅಂಪೈರ್‌ಗಳಿಗೆ ತರಬೇತಿ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕುಲಕರ್ಣಿ 2010ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಾಗಪುರದಲ್ಲಿ ಸ್ಥಾಪಿಸಿದ ಅಂಪೈರ್ ಅಕಾಡೆಮಿಯ ಮೊದಲ ಶಿಕ್ಷಕರೂ ಹೌದು. 2012ರಿಂದ ಈ ಸಂಸ್ಥೆಯ ಸಂದರ್ಶಕ ಶಿಕ್ಷಕ. ನಾಗಪುರಕ್ಕೆ ಹೊರಡುವ ಸಿದ್ಧತೆಯ ನಡುವೆ `ಪ್ರಜಾವಾಣಿ' ಜೊತೆ ಮಾತನಾಡಿದ 58 ವರ್ಷ ವಯಸ್ಸಿನ ಕುಲಕರ್ಣಿ, ಕ್ರಿಕೆಟ್ ತಮಗೆ ಇಡೀ ಜಗತ್ತನ್ನು ತೋರಿಸಿದ್ದು ಈಗ ಈ ಕಾರ್ಯಾಗಾರಕ್ಕೆ ಪರಿಗಣಿಸಿದ್ದು ಸಂತೋಷ ತಂದಿದೆ ಎಂದರು.

`ಅಂಪೈರಿಂಗ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಟಿವಿ ಇಲ್ಲದಿದ್ದ ಕಾಲದಲ್ಲಿ ನಾವು ನೀಡಿದ ತೀರ್ಪುಗಳ ಬಗ್ಗೆ ತಿಳಿದುಕೊಳ್ಳಲು ಗೆಳೆಯರನ್ನು ಆಶ್ರಯಿಸಬೇಕಾಗಿತ್ತು. ಈಗ ನಮ್ಮ ಸಾಮರ್ಥ್ಯವನ್ನು ನಾವೇ ಅಳೆಯಬಹುದಾಗಿದೆ. ಡಿಆರ್‌ಎಸ್ (ತೀರ್ಪು ಪರಿಶೀಲನಾ ಪದ್ಧತಿ) ಬಂದ ಮೇಲೆ ಅಂಪೈರಿಂಗ್‌ನಲ್ಲಿ ಭಾರಿ ಸುಧಾರಣೆಯಾಗಿದೆ. ಈ ಪದ್ಧತಿ ಮೇಲೆ ಬೆಳಕು ಚೆಲ್ಲುವುದು ಕಾರ್ಯಾಗಾರದ ಪ್ರಮುಖ ಭಾಗ' ಎಂದು ಅವರು ಹೇಳಿದರು.

`ಅಂಪೈರಿಂಗ್ ಎಂದರೆ ರೋಮಾಂಚನ. ಪಂದ್ಯವನ್ನು ಅತ್ಯಂತ ಹತ್ತಿರದಿಂದ ನೋಡುವವರು ನಾವೇ. ಆದರೆ ಪಂದ್ಯದಲ್ಲಿ ಆಟದ ಮೇಲಷ್ಟೇ ನಮ್ಮ ಗಮನ ಇರುತ್ತದೆ. ಪೂರ್ವಗ್ರಹ ಪೀಡಿತ ತೀರ್ಪು ನೀಡದಿರಬೇಕಾದರೆ ಆಟಗಾರ ಯಾರು ಎಂಬುದನ್ನು ಮರೆತು ಪಂದ್ಯವನ್ನು ನೋಡಬೇಕಾಗುತ್ತದೆ. ನಾನು ಅಂಪೈರಿಂಗ್ ಮಾಡಿದ ಪಂದ್ಯಗಳೆಲ್ಲವನ್ನೂ ಇದೇ ದೃಷ್ಟಿಯಿಂದ ನೋಡಿದ್ದೇನೆ, ಆನಂದಿಸಿದ್ದೇನೆ' ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT