ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಅಕ್ರಮ: ಸಿಬಿಐ ತನಿಖೆ

ಬೇಲೆಕೇರಿ ಬಂದರಿನ ಮೂಲಕ ಕಳ್ಳಸಾಗಣೆ ಆರೋಪ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ 50 ಸಾವಿರ ಟನ್‌ಗಿಂತಲೂ ಹೆಚ್ಚು ಪ್ರಮಾಣದ ಕಬ್ಬಿಣ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಅನಿಲ್‌ ಲಾಡ್‌ ಒಡೆತನದ ವಿ.ಎಸ್‌.ಎಲ್‌. ಮೈನಿಂಗ್‌ ಕಂಪೆನಿ, ಬಲ್ಡೋಟಾ ಸಮೂಹದ ಎಂಎಸ್‌ಪಿಎಲ್‌, ಗುಜರಾತ್‌ ಮೂಲದ ಅದಾನಿ ಎಂಟರ್‌ಪ್ರೈಸಸ್‌ ಸೇರಿದಂತೆ 22 ಕಂಪೆನಿಗಳ ವಿರುದ್ಧ ಸಿಬಿಐ ತನಿಖೆಗೆ  ಸುಪ್ರೀಂಕೋರ್ಟ್‌ ಸೋಮವಾರ ಹಸಿರು ನಿಶಾನೆ ತೋರಿದೆ.

ಪ್ರಕರಣ ಕುರಿತು ನಡೆಸಿದ ಪ್ರಾಥಮಿಕ ತನಿಖೆ ವರದಿಯನ್ನು ಸಿಬಿಐ, ಮುಚ್ಚಿದ ಲಕೋಟೆಯಲ್ಲಿ  ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್‌, ಎಸ್‌.ಎಸ್‌.ನಿಜ್ಜರ್‌ ಮತ್ತು ರಂಜನ್‌ ಗೋಗೊಯ್‌ ಅವರನ್ನು ಒಳಗೊಂಡ ನ್ಯಾಯಪೀಠ ಇದರ ವಿಚಾರಣೆ ನಡೆಸಿತು. 50 ಸಾವಿರ ಟನ್‌ ಗಿಂತಲೂ ಹೆಚ್ಚು ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ರುವ ಎಲ್ಲಾ ಕಂಪೆನಿಗಳ ವಿರುದ್ಧ ತನಿಖೆ ನಡೆಸಲು ಅವಕಾಶ ನೀಡಬೇಕೆಂಬ ಸಿಬಿಐ ಕೋರಿಕೆಯನ್ನು ಮಾನ್ಯ ಮಾಡಿತು.

22 ಕಂಪೆನಿಗಳ ವಿರುದ್ಧ ತನಿಖೆಗೆ ಕೋರ್ಟ್‌ ಅಸ್ತು  ಎಂದಿರುವುದರಿಂದ, ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕ ತನಿಖೆಗೆ ಸಿದ್ಧತೆ ಆರಂಭಿಸಿದೆ. ನ್ಯಾಯಾಲಯದ ಆದೇಶದ ಪ್ರತಿ ತಲುಪಿದ ತಕ್ಷಣವೇ 22 ಕಂಪೆನಿಗಳ ವಿರುದ್ಧವೂ ‘ಪ್ರಾಥಮಿಕ ಮಾಹಿತಿ ವರದಿ’ ದಾಖಲಿಸಿ ತನಿಖೆ ಆರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

2006ರಿಂದ 2010ರವರೆಗಿನ ಅವಧಿಯಲ್ಲಿ ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅಕ್ರಮ ಅದಿರು ರಫ್ತು ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಐದು ಲಕ್ಷ ಟನ್‌ಗಿಂತ ಹೆಚ್ಚು ಪ್ರಮಾಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದ ಐದು ಕಂಪೆನಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ಆದೇಶಿಸಿತ್ತು. ಐದು ಲಕ್ಷಕ್ಕಿಂತ ಕಡಿಮೆ ಪ್ರಮಾಣದ ಅದಿರು ರಫ್ತು ಮಾಡಿದ್ದ ಕಂಪೆನಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. 38 ಕಂಪೆನಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿದ್ದ ಸಿಬಿಐ, 22 ಕಂಪೆನಿಗಳ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿತ್ತು.

ತನಿಖೆ ವ್ಯಾಪ್ತಿಗೆ ಒಳಪಡುವ ಅವಧಿಯಲ್ಲಿ ಬೇಲೆಕೇರಿ ಬಂದರಿನ ಮೂಲಕ 5 ಲಕ್ಷ ಟನ್‌ಗಿಂತ ಕಡಿಮೆ ಪ್ರಮಾಣದ ಅದಿರು ರಫ್ತು ಮಾಡಿರುವ 38 ಕಂಪೆನಿಗಳನ್ನು ಸಿಬಿಐ ಅಧಿಕಾರಿಗಳು ಪ್ರಾಥಮಿಕ ತನಿಖೆ ವೇಳೆ ಗುರುತಿಸಿದ್ದರು.

ಸಿಬಿಐ ತನಿಖೆ
ಈ ಕಂಪೆನಿಗಳು ಒಟ್ಟು 45,82,231 ಟನ್‌ ಅದಿರನ್ನು ಬೇಲೆ ಕೇರಿ ಬಂದರಿನ ಮೂಲಕ ರಫ್ತು ಮಾಡಿದ್ದವು.
ಈ ಪೈಕಿ 23,25,268 ಟನ್‌ ಅದಿರು ಕಳ್ಳಸಾಗಣೆ ಮಾಡಿ ದ್ದಾಗಿತ್ತು ಎಂದು ಸಿಬಿಐ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದರು.

50 ಸಾವಿರ ಟನ್‌ಗಿಂತಲೂ ಹೆಚ್ಚು ಪ್ರಮಾಣದ ಅದಿರನ್ನು ಕಳ್ಳಸಾಗಣೆ ಮಾಡಿ ರಫ್ತು ಮಾಡಿದ್ದ 22 ಕಂಪೆನಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖ ಲಿಸಿ ತನಿಖೆ ಆರಂಭಿಸಲು ಅನುಮತಿ ನೀಡುವಂತೆ ತನಿಖಾ ಸಂಸ್ಥೆ ಮನವಿ ಮಾಡಿತ್ತು. 50 ಸಾವಿರ ಟನ್‌ಗಿಂತಲೂ ಕಡಿಮೆ ಪ್ರಮಾಣದ ಅಕ್ರಮ ಅದಿರನ್ನು ರಫ್ತು ಮಾಡಿರುವ 12 ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಷಯ ವನ್ನು ನ್ಯಾಯಾಲಯವೇ ನಿರ್ಧರಿಸ ಬೇಕು ಎಂದು ಸಿಬಿಐ ಕೋರಿತ್ತು.ನಾಲ್ಕು ಕಂಪೆನಿಗಳು ಅಕ್ರಮ ಅದಿರು ರಫ್ತಿನಲ್ಲಿ ಶಾಮೀಲಾಗಿರಲಿಲ್ಲ ಎಂಬುದು ತನಿಖೆಯಲ್ಲಿ ಖಚಿತಪಟ್ಟಿತ್ತು.

ಮತ್ತಷ್ಟು ಮಂದಿಗೆ ನಡುಕ: ಸುಪ್ರೀಂ ಕೋರ್ಟ್‌ ಸೋಮವಾರ ನೀಡಿರುವ ಆದೇಶ ಅಕ್ರಮ ಗಣಿಗಾರಿಕೆಯಲ್ಲಿ ತೊಡ ಗಿದ್ದ ಮತ್ತಷ್ಟು ಮಂದಿಯಲ್ಲಿ ನಡುಕ ಹುಟ್ಟಿಸಿದೆ. ಈ ಆದೇಶದ ಪ್ರಕಾರ, ಶಾಸಕ ಅನಿಲ್‌ ಲಾಡ್‌ ಅವರ ವಿಎಸ್‌ ಎಲ್‌ ಮೈನಿಂಗ್‌ ಕಂಪೆನಿ, ಬಲ್ಡೋಟಾ ಕುಟುಂಬದ ಒಡೆತನದ ಎಂಎಸ್‌ಪಿಎಲ್‌ ಲಿಮಿಟೆಡ್‌, ಗುಜರಾತ್‌ ಮೂಲದ ಅದಾನಿ ಎಂಟರ್‌ಪ್ರೈಸಸ್‌, ಬೆಂಗಳೂರಿನ ರಾಜಮಹಲ್‌ ಸಿಲ್ಕ್ಸ್‌, ವಿನೋದ್‌ ಗೋಯಲ್‌  ಒಡೆತನದ ಟ್ವೆಂಟಿ ಫಸ್ಟ್‌ ಸೆಂಚುರಿ ವೈರ್‌ ರಾಡ್ಸ್‌ ಸೇರಿದಂತೆ ಹಲವು ಪ್ರಮುಖ ಗಣಿ ಉದ್ಯಮಗಳ ವಿರುದ್ಧ ಸಿಬಿಐ ತನಿಖೆ ಆರಂಭ ವಾಗಲಿದೆ.

ಹೊರರಾಜ್ಯಗಳಿಂದ ಬಂದು ಬಳ್ಳಾರಿಯಿಂದ ಅದಿರು ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ಹಲವು ಪ್ರಮುಖ ಕಂಪೆನಿಗಳೂ ಸಿಬಿಐ ತನಿಖೆಯ ಬಿಸಿ ಎದುರಿಸುತ್ತಿವೆ. ತಿರುವ ನಂತಪುರದ ಎಚ್‌ಎಲ್‌ಎಲ್‌ ಲೈಫ್‌ ಕೋರ್‌ಲಿ., ಪಣಜಿಯ ಎಸ್ಮೆರಾಲ್ಡಾ ಇಂಟರ್‌ನ್ಯಾಷನಲ್‌ (ಎಕ್ಸ್‌ಪೋರ್ಟ್ಸ್‌), ಗುಡಗಾಂವ್‌ನ ಅಲ್ಪೈನ್‌ ಇಂಟರ್‌ ನ್ಯಾಷನಲ್‌, ಮುಂಬೈನ ದಕ್ಷ್‌ ಮಿನ ರಲ್ಸ್‌ ಅಂಡ್‌ ಮರೀನ್‌ ಪ್ರೈ ಲಿ., ಕೋಲ್ಕತ್ತಾದ ಸ್ಟೀರ್‌ ಓವರ್‌ಸೀಸ್‌ ಪ್ರೈ ಲಿ. ವಿರುದ್ಧ ತನಿಖೆ ನಡೆಯಲಿದೆ.

ತನಿಖೆ ಎದುರಿಸಲಿರುವ 22 ಕಂಪೆನಿ ಗಳ ಪೈಕಿ ರಾಜಮಹಲ್‌ ಸಿಲ್ಕ್ಸ್‌ 2.82 ಲಕ್ಷ ಟನ್‌ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದೆ.
ಎಂಎಸ್‌ಪಿಎಲ್‌, ಬೆಂಗಳೂರಿನ ಗ್ರೀನ್‌ಟೆಕ್ಸ್‌ ಮೈನಿಂಗ್‌ ಇಂಡಸ್ಟ್ರೀಸ್‌, ಯಲ್ಲಾಪುರದ ಪ್ರಿಂಟೆಕ್ಸ್‌ ಎಕ್ಸ್‌ ಪೋರ್ಟ್ಸ್‌, ಹೊಸಪೇಟೆಯ ಶ್ರೀನಿವಾಸ ಮಿನರಲ್ಸ್‌, ವೆಂಕಟೇಶ್ವರ ಟ್ರಾನ್ಸ್‌ ಪೋರ್ಟ್ಸ್, ಅರ್ಷದ್‌ ಎಕ್ಸ್‌ಪೋರ್ಟ್ಸ್‌ ಹಾಗೂ ತಿರುವನಂತಪುರದ ಎಚ್‌ಎಲ್‌ ಎಲ್‌ ಲೈಫ್‌ ಕೋರ್‌ ಕಂಪೆನಿಗಳು ಒಂದು ಲಕ್ಷ ಟನ್‌ಗಿಂತಲೂ ಹೆಚ್ಚಿನ ಅದಿ ರನ್ನು ಅಕ್ರಮವಾಗಿ ರಫ್ತು ಮಾಡಿದ್ದವು ಎಂಬ ಅಂಶ ಸಿಬಿಐ ಪ್ರಾಥಮಿಕ ತನಿಖಾ ವರದಿಯಲ್ಲಿದೆ.

2ನೇ ಪ್ರಕರಣ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜೊತೆ ಸೇರಿ ಬೇಲೆಕೇರಿ ಬಂದರಿನ ಮೂಲಕ ಅಕ್ರಮ ವಾಗಿ ಅದಿರು ರಫ್ತು ಮಾಡಿರುವ ಆರೋಪದ ಮೇಲೆ ನ್ಯಾಯಾಂಗ ಬಂಧ ನದಲ್ಲಿರುವ ಹೊಸಪೇಟೆಯ ಸ್ವಸ್ತಿಕ್‌ ನಾಗರಾಜ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗುವುದು ಖಚಿತ ವಾಗಿದೆ. ನಾಗರಾಜ್‌ ಒಡೆತನದ ಸ್ವಸ್ತಿಕ್‌ ಸ್ಟೀಲ್‌ ಪ್ರೈ ಲಿ. 59,352 ಟನ್‌ ಅದಿ ರನ್ನು ಅಕ್ರಮವಾಗಿ ರಫ್ತು ಮಾಡಿತ್ತು. ಈ ಕಂಪೆನಿಯ ವಿರುದ್ಧವೂ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್‌ ಸಮ್ಮತಿಸಿದೆ.

ರಾಜ್ಯ ಸರ್ಕಾರಕ್ಕೆ ತಾಕೀತು
50 ಸಾವಿರ ಟನ್‌ಗಿಂತ ಕಡಿಮೆ ಪ್ರಮಾಣದ ಅಕ್ರಮ ಅದಿರನ್ನು ರಫ್ತು ಮಾಡಿರುವ ಆರೋಪ ಎದುರಿಸುತ್ತಿರುವ 12 ಕಂಪೆನಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ನಾಲ್ಕು ತಿಂಗಳ ಒಳಗೆ ಕ್ರಮ ಜರುಗಿಸಿ, ವರದಿ ಸಲ್ಲಿಸಬೇಕೆಂಬ ಗಡುವನ್ನೂ ವಿಧಿಸಿದೆ.

‘ಸಿ’ ಗಣಿ: ಶೀಘ್ರ ಹರಾಜು
ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗುರುತಿಸಿರುವ 51 ’ಸಿ’ ವರ್ಗದ ಗಣಿಗಳನ್ನು ಆದಷ್ಟು ಬೇಗ ಹರಾಜು ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಚೀನಾ ಪ್ರವಾಸ ವೇಳೆ ಗಣಿ ಕ್ಷೇತ್ರದ ಹೂಡಿಕೆ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ವಿವಿಧ ಹಂತಗಳಲ್ಲಿ ತನಿಖೆ ನಡೆಯುತ್ತಿರುವ ಕಾರಣ ನಾವು ಕೂಡ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಸಿ.ಇ.ಸಿ ಅನುಮತಿ ಕೊಟ್ಟಿರುವ ಗಣಿಗಳನ್ನು ಹರಾಜು ಹಾಕಲಾಗುವುದು’ ಎಂದು ವಿವರಿಸಿದರು.

ನ್ಯಾಯಾಂಗ ವಶಕ್ಕೆ ಸೋಮಶೇಖರ್‌
ಬೆಂಗಳೂರು
: ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹೊಸ ಪೇಟೆಯ ಕೋವೂರು ಸೋಮ ಶೇಖರ್‌ನನ್ನು ಸೆ. 30ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇದೇ ನ್ಯಾಯಾಲಯ ಆದೇಶ ಹೊರಡಿ ಸಿದೆ

ಪೊಲೀಸ್‌ ಬಂಧನದ ಅವಧಿ ಅಂತ್ಯಗೊಂಡಿದ್ದರಿಂದ ಸಿಬಿಐ ಅಧಿ ಕಾರಿಗಳು ಸೋಮವಾರ ಸೋಮ ಶೇಖರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ತಮ್ಮ ಕಕ್ಷಿ ದಾರನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಆಧರಿಸಿ ಜಾಮೀನು ಮಂಜೂರು ಮಾಡಬೇಕೆಂಬ ಆರೋಪಿ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಧೀಶರು ತಳ್ಳಿಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT